ವೀಕೆಂಡ್ ಕರ್ಫ್ಯೂ ಹಾಗೂ ನೈಟ್ ಕರ್ಫ್ಯೂ ಗೆ ಈಗ ಸಾರ್ವಜನಿಕ ವಲಯದಲ್ಲಿ ಭಾರೀ ವಿರೋಧ ವ್ಯಕ್ತವಾಗುತ್ತಿದೆ. ಉದ್ಯಮಿಗಳು ಒಂದ್ಕಡೆ ಕರ್ಫ್ಯೂ ಬಗ್ಗೆ ಕೆಂಡಕಾರಿದರೆ ತಜ್ಞರು ಕರ್ಫ್ಯೂ ಮತ್ತಷ್ಟು ಮುಂದುವರೆಸಿ ಅಂತ ಹೇಳಿದೆ. ಈಗ ಸರ್ಕಾರ ಇಕ್ಕಟ್ಟಿಗೆ ಸಿಲುಕಿದಂತಾಗಿದೆ. ಈ ಇಷ್ಟೂ ಬೆಳವಣಿಗೆಗಳ ನಡುವೆ ಶುಕ್ರವಾರ ಸಿಎಂ ಬಸವರಾಜ ಬೊಮ್ಮಾಯಿ ಕೋವಿಡ್ ಸಭೆ ಕರೆದಿದ್ದು, ಮುಂದೇನಾಗುತ್ತೆ ಎಂಬ ಪ್ರಶ್ನೆ ಮೂಡಿದೆ.
೨ ವಾರಗಳ ಕಾಲ ಕರ್ಫ್ಯೂ ಜಾರಿಯಲ್ಲಿಡುವಂತೆ ತಜ್ಞರ ಸಲಹೆ
ಕೊರೋನಾ ಸೋಂಕು ಹಿಡಿತಕ್ಕೂ ಮೀರಿ ದಾಖಲಾಗುವ ಸಾಧ್ಯತೆ ದಟ್ಟವಾಗಿದೆ. ಸ್ವತಃ ಆರೋಗ್ಯ ಸಚಿವರೇ ಸೋಂಕು ಹೆಚ್ಚಳವಾಗಿದೆ ಎಂಬುವುದನ್ನು ಒಪ್ಪಿಕೊಂಡಿದ್ದಾರೆ. ಮುಂದೆ ಮತ್ತಷ್ಟು ಹೆಚ್ಚಾಗುತ್ತೆ ಎಂದು ಹೇಳಿದ್ದಾರೆ. ತಾಂತ್ರಿಕ ಸಲಹಾ ಸಮಿತಿ ಕೂಡ ದಿನದಿಂದ ದಿನಕ್ಕೆ ಕಠಿಣ ಕ್ರಮಗಳ ಬಗ್ಗೆ ಸಲಹೆ ಕೊಡುತ್ತಿದೆ. ಇದು ಈಗ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಒಂದು ಕಡೆಯಿಂದ ಸರ್ಕಾರದ ರಚನೆ ಮಾಡಿರುವ ತಾಂತ್ರಿಕ ಸಲಹಾ ಸಮಿತಿ ಮುಂದಿನ ಎರಡು ವಾರಗಳ ಕಾಲ ಎಲ್ಲಾ ನಿರ್ಬಂಧಗಳನ್ನು ತೆರವು ಮಾಡುವುದು ಬೇಡ. ಹೀಗೆಯೇ ಮುಂದುವರೆಯಲಿ ಎಂದು ಹೇಳಿದೆ.
ಇದೇ ಕಾರಣಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಕೂಡ ಎರಡು ವಾರಗಳ ಕಾಲ ನಿರ್ಬಂಧ ಜಾರಿಯಲ್ಲಿ ಇಡುವಂತೆ ಸಲಹೆ ಬಂದಿದೆ ಅಂತ ಹೇಳಿದ್ದಾರೆ. ಹೀಗಾಗಿ ಜನರು ಕರ್ಫ್ಯೂ ಜೊತೆಗೆ ಒಂದಿಷ್ಟು ದಿನಗಳ ಕಾಲ ಬದುಕುವಂತಾಗಿದೆ. ತಾಂತ್ರಿಕ ಸಲಹಾ ಸಮಿತಿಯ ಈ ನಿರ್ಧಾರ ಹೋಟೆಲ್, ರೆಸ್ಟೋರೆಂಟ್, ಬಾರ್, ಪಬ್, ಟ್ರಾವೆಲ್ಸ್ ನಡೆಸುವ ಮಾಲೀಕರ ಕೆಂಗಣ್ಣಿಗೆ ಗುರಿಯಾಗಿದೆ. ಇದರ ಜೊತೆಗೆ ಕೆಲ ವೈದ್ಯರು ಕೂಡ ನೈಟ್ ಕರ್ಫ್ಯೂ ಹಾಗೂ ವೀಕೆಂಡ್ ಲಾಕ್ ಬಗ್ಗೆ ಅಸಮಾಧಾನ ಹೊರ ಹಾಕಿದ್ದು, ಇವೆಲ್ಲವೂ ಅವೈಜ್ಞಾನಿಕ ಹಾಗೂ ಕೊರೋನಾ ಎಂಬುವುದೇ ಒಂದು ಮಾಫಿಯಾ ಎಂದು ಸರ್ಕಾರಕ್ಕೆ ಚಾಟಿ ಬೀಸಿದೆ.

ಕೊರೋನಾದಿಂದ ಹೆಚ್ಚು ಮಾಗಿ ಹೋಗಿದ್ದು ಬೆಂಗಳೂರು ನಗರದ ಹೋಟೆಲ್ ಉದ್ಯಮಿಗಳು. ಕೊರೋನಾ ಹೆಚ್ಚಳವಾಗುತ್ತಿದ್ದಂತೆ ಸರ್ಕಾರ ಮೊದಲಾಗಿ ಬಂದ್ ಮಾಡಿಸುವುದು ಅಥವಾ ನಿರ್ಬಂಧ ಹೇರುವುದು ನಗರದಲ್ಲಿರುವ ಹೋಟೆಲ್, ಬಾರ್ ಮತ್ತು ಪಬ್ ಗಳನ್ನು. ಹೀಗಾಗಿ ಕೊರೋನಾದ ಕಳೆದ ಎರಡೂವರೆ ಕಾಲಾವಧಿಯಲ್ಲಿ ಹೋಟೆಲ್ ಮಾಲೀಕರ ಬೊಕ್ಕಸಕ್ಕೆ ಬಿದ್ದ ಪೆಟ್ಟು ಸಣ್ಣದೇನಲ್ಲ. ಮೊದಲ ಮತ್ತು ಎರಡನೇ ಅಲೆಯಲ್ಲಿ ಹೆಚ್ಚು ಕಮ್ಮಿ ನಗರದ ಹತ್ತು ಸಾವಿರಕ್ಕೂ ಅಧಿಕ ಹೋಟೆಲ್ ಗಳು ಬಾಗಿಲು ಮುಚ್ಚಿ ಮರೆಯಾಗಿದೆ. ಎರಡನೇ ಅಲೆ ಮುಗಿಯುತ್ತಿದ್ದಂತೆ ಎಲ್ಲವೂ ಮುಗಿಯಿತು ಇನ್ನಾದರೂ ಆದ ನಷ್ಟವನ್ನಾದರೂ ಸರಿದೂಗಿಸಿಕೊಳ್ಳುವ ಯೋಚನೆಯಲ್ಲಿದ್ದ ಆಹಾರ ಉದ್ದಿಮೆದಾದದರಿಗೆ ಮೂರನೇ ಅಲೆ ಪೆಡಂಭೂತ ಮತ್ತೆ ಆದಾಯಕ್ಕೆ ಕೀಲಿ ಹಾಕಿತು.
ಇದೀಗ ಮೂರನೇ ಅಲೆ ಆರಂಭದ ಕಾಲಘಟ್ಟದಲ್ಲಿದ್ದು ಮೊದಲಿನಂತೆ ಮತ್ತೆ ಹೋಟೆಲ್ ಉದ್ಯಮಗಳನ್ನು ಮುಚ್ಚಿ, ನಿರ್ಬಂಧ ಹೇರಿ ಸರ್ಕಾರ ಕಠಿಣ ಕ್ರಮ ಎಂದು ಬೀಗುತ್ತಿರುವುದು ಉದ್ಯಮಿಗಳ ಅಸಮಾಧಾನ ಸ್ಫೋಟಿಸುವಂತೆ ಮಾಡಿದೆ. ಇದೇ ಕಾರಣಕ್ಕೆ ಇತ್ತೀಚೆಗೆ ನಗರದ ಅರಮನೆ ಮೈದಾನದ ನಾಲ್ಕನೇ ಗೇಟ್ ನಲ್ಲಿ ಹೋಟೆಲ್ ಉದ್ಯಮಿಗಳು ಸರ್ವಸಂಘ ಸಭೆ ಕರೆದು ಒಗ್ಗಟ್ಟಿನ ಮಂತ್ರ ಜಪಿಸಿ ಸರ್ಕಾರಕ್ಕೆ ತಮ್ಮ ಮೇಲಿನ ಕ್ರಮ ಸಡಿಲಗೊಳಿಸದಿದ್ದರೆ ಮುಂದೆ ಅನುಭವಿಸ ಬೇಕಾಗಬಹುದು ಎಂಬ ಸಂದೇಶ ರವಾನಿಸಲಾಯಿತು. ಆದರೂ ಇದಕ್ಕೆ ಸೊಪ್ಪು ಹಾಕದ ಸರ್ಕಾರ ತಜ್ಞರು ಕೊಟ್ಟಿದ್ದಾರೆ ಎನ್ನಲಾದ ವೀಕೆಂಡ್ ಕರ್ಫ್ಯೂ ಹಾಗೂ ನೈಟ್ ಕರ್ಫ್ಯೂ ಮತ್ತು ಇತರೆ ನಿರ್ಬಂಧಗಳನ್ನು ಮುಂದುವರೆಸುವ ಘೋಷಣೆ ಮಾಡಿದೆ.
ಕರ್ಫ್ಯೂ ಕೈ ಬಿಟ್ಟು ಮುಕ್ತ ಅವಕಾಶ ಕೊಡುವಂತೆ ಉದ್ಯಮಿಗಳಿಂದ ಪಟ್ಟು
ಅತ್ತ ಸರ್ಕಾರ ಮುಂದಿನ ಎರಡು ವಾರಗಳ ಕಾಲ ಯಾವುದೇ ಬದಲಾವಣೆ ಇಲ್ಲ ಎಂದು ಒತ್ತಿ ಹೇಳಿದರೆ ಇತ್ತ ಉದ್ಯಮಿಗಳು ಮತ್ತೆ ಕೆಂಡವಾಗಿದ್ದಾರೆ. ಈಗಾಗಲೇ ರಾಜಧಾನಿ ಬೆಂಗಳೂರಿನಲ್ಲಿ ಕೊರೋನಾ ಹೊಡೆತಕ್ಕೆ 10 ಸಾವಿರಕ್ಕೂ ಅಧಿಕ ಹೋಟೆಲ್ ಗಳು ಮುಚ್ಚಿಹೋಗಿದೆ. ಇದರ ನಡುವೆ ಎರಡನೇ ಅಲೆಯ ಬಳಿಕ ಈಗೀಗ ಹೋಟೆಲ್, ರೆಸ್ಟಾರೆಂಟ್, ಕ್ಯಾಟ್ರಿಂಗ್, ಮದುವೆ ಮಂಟಪದ ಮಾಲೀಕರು ಎಲ್ಲಾ ಚೇತರಿಸಿಕೊಳ್ಳುತ್ತಿದ್ದಾರೆ. ಜೊತೆಗೆ, ಟ್ರಾವೆಲ್ಸ್ ಉದ್ದಿಮೆದಾರರು ಸಾಲದ ಮೇಲೆ ಸಾಲ ಮಾಡಿಕೊಂಡ ಸುಳಿಯಲ್ಲಿ ಸಿಲುಕಿ ಒದ್ದಾಡುತ್ತಿದ್ದಾರೆ. ಈಗ ಮತ್ತೆ ಕರ್ಫ್ಯೂ ಜಾರಿ ಮಾಡಿ ನಮ್ಮ ಮೇಲೆ ಮತ್ತಷ್ಟು ಬರೆ ಎಳೆಯುತ್ತಿರುವುದು ಸರಿಯಲ್ಲ ಎಂದು ಕರ್ನಾಟಕ ಟ್ರಾವೆಲ್ಸ್ ಮಾಲೀಕರ ಅಸೋಸಿಯೇಷನ್ ಅಧ್ಯಕ್ಷ ರಾಧಾಕೃಷ್ಣ ಹೊಳ್ಳ ಕಿಡಿ ಕಾರಿದ್ದಾರೆ. ಇದರ ಜೊತೆಗೆ ಬೆಂಗಳೂರು ಕ್ಯಾಟ್ರಿಂಗ್ ಅಸೋಸಿಯೇಷನ್ ಅಧ್ಯಕ್ಷ ಗೋಪಾಲ ಶೆಟ್ಟಿ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿ, ಈ ವಾರ ಕೊನೆಯದಾಗಿ ನಾವು ನೋಡುತ್ತೇವೆ. ಮುಂದಿನ ವಾರದಿಂದ ನಮ್ಮ ಬಗ್ಗೆ ಸರ್ಕಾರದ ಯೋಚಿಸದಿದ್ದರೆ ತೀವ್ರ ಹೋರಾಟಕ್ಕಿಳಿದು ಬದುಕುವ ನಮ್ಮ ಹಕ್ಕನ್ನು ಧಕ್ಕಿಸಿಕೊಳ್ಳುತ್ತೇವೆ ಎಂದರು.
ಹೀಗೆ ಇದೀಗ ಕರ್ಫ್ಯೂ ಬಗ್ಗೆ ಅಪಸ್ವರ ಕೇಳಿ ಬರುತ್ತಿದೆ. ಅತ್ತ ಕೊರೋನಾ ಹಿಡಿತದಲ್ಲಿ ಇಟ್ಟುಕೊಳ್ಳಬೇಕು ಎಂದರೆ ಕರ್ಫ್ಯೂ ಹಾದಿಯಲ್ಲಿಡುವುದು ಅಗತ್ಯ ಅಂತ ತಾಂತ್ರಿಕ ಸಲಹಾ ಸಮಿತಿ ಹೇಳಿದರೆ, ಇದೊಂದು ಅವೈಜ್ಞಾನಿಕ ಕರ್ಫ್ಯೂ ಇದರಿಂದ ಕೊರೋನಾ ಕಂಟ್ರೋಲ್ ಸಾಧ್ಯವಿಲ್ಲ, ಈ ಕೂಡಲೇ ನಿರ್ಬಂಧ ತೆರವು ಮಾಡಬೇಕು ಎಂದು ಉದ್ಯಮಿಗಳು ಒತ್ತಾಯ ಮಾಡುತ್ತಿದ್ದಾರೆ. ಈ ಇಬ್ಬರ ನಡುವೆ ಸದ್ಯಕ್ಕೆ ಸರ್ಕಾರ ಸಿಲುಕಿ ಒದ್ದಾಡುತ್ತಿರುವಂತೆ ಭಾಸವಾಗುತ್ತಿದೆ. ಆದರೆ ಸರ್ಕಾರದ ಅಂತಿಮ ನಿರ್ಧಾರವೇನು..? ಶುಕ್ರವಾರ ಸಿಎಂ ಬೊಮ್ಮಾಯಿ ಕರೆದಿರುವ ಸಭೆಯ ಬಳಿಕ ಇದರ ಸ್ಪಷ್ಟ ಚಿತ್ರಣ ಸಿಗಲಿದೆ ಎಂಬ ಆಶಾಭಾವನೆ ಇದೆ.