ಓದುಗ ದೊರೆ ಎಂಬ ಮಾತಿತ್ತು ಆದರೆ ಈಗ ಮಾಧ್ಯಮಗಳು ಟ್ರಾಪ್ ಗೆ ಒಳಗಾಗಿ ನಲುಗುತ್ತಿವೆ ಎಂದು ಹಿರಿಯ ಪತ್ರಕರ್ತ ದಿನೇಶ್ ಅಮಿನ್ ಮಟ್ಟು ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರಿನಲ್ಲಿ ಶನಿವಾರ ಹಿರಿಯ ಪತ್ರಕರ್ತ ದಿನೇಶ್ ಅಮಿನ್ ಮಟ್ಟು ಅವರ ಸಂಪಾದಕತ್ವದ “ಬೇರೆಯೇ ಮಾತು” ಪುಸ್ತಕ ಬಿಡುಗಡೆ ಕಾರ್ಯಕ್ರಮ ಮಾತನಾಡಿದ ಅವರು, ಈ ಮೊದಲು ಲಂಕೇಶರ ಪತ್ರಿಕೆಯಲ್ಲಿ ಇಂತಹವುಗಳ ಬೆಲೆ ಜಾಸ್ತಿಯಾಗಿದೆ. ಹಾಗಾಗಿ ನಾವು 50 ಪೈಸೆ ಜಾಸ್ತಿ ಮಾಡುತ್ತಿದ್ದೇವೆ ಎಂದು ಹೇಳಿದರೆ ಅದಕ್ಕೆ ಓದುಗರು ಪ್ರತಿಕ್ರಿಯಿಸುತ್ತಿದ್ದರು. ಆದರೆ ಇತ್ತೀಚೆಗೆ ಓದುಗ ಮತ್ತು ಸಂಪಾದಕ, ಓದುಗ ಮತ್ತು ಪತ್ರಿಕೆಗಳ ಸಂಬಂಧ ಮುರಿದುಬಿದ್ದಿದೆ ಎಂದರು.
ಈಗ ಯಾರೋ ಮಾಧ್ಯಮಕ್ಕೆ ಫಂಡ್ ಮಾಡುತ್ತಾರೆ. ಆ ಆಧಾರದ ಮೇಲೆ ಮಾಧ್ಯಮ ನಡೆಯುತ್ತದೆ. ನಂತರ ಜಾಹಿರಾತು ಮೂಲಕ ಮಾಧ್ಯಮಗಳು ನಡೆಯುತ್ತದೆ. ಇವರೆಲ್ಲರೂ ಬಂಡವಾಳ ಹೂಡಿಕೆದಾರರ ಹಿಡಿತದಲ್ಲಿದ್ದಾರೆ. ಹಾಗಾಗಿ ಜನರ ಸಮಸ್ಯೆಗಳ ಬಗ್ಗೆ ಮಾತಾಡದೇ ಬಂಡವಾಳಶಾಹಿಗಳ ಪರ ಮಾತಾಡುತ್ತಾರೆ ಎಂದು ಅವರು ವಿಶ್ಲೇಷಿಸಿದರು.
ಭಾರತವನ್ನು ಅಂದಾನಿ, ಅಂಬಾನಿ ಟಿವಿ ಕೇಬಲ್ ಮೂಲಕ ನಿರ್ವಹಣೆ ಮಾಡುತ್ತಾರೆ ಎಂಬ ಮಾತು ಕೇಳಿಬರುತ್ತಿದೆ. ಆಗ ಸಣ್ಣ ಪುಟ್ಟ ಕೇಬಲ್ ಆಪರೇಟರ್ ಗಳು ಕೂಡ ಬಾಗಿಲು ಮುಚ್ಚಿಕೊಳ್ಳುತ್ತಾರೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.
ಇತ್ತೀಚೆಗೆ ವೆಬ್ ಸೈಟ್ ಗಳು ತುಂಬಾ ಚೆನ್ನಾಗಿ ಕಾರ್ಯನಿರ್ವಹಿಸುತ್ತಿವೆ. ಓದುಗರೇ ಪತ್ರಕರ್ತರಾಗುವ, ಓದುಗರು ಅಭಿಪ್ರಾಯ ಹೇಳುವ ವೇದಿಕೆಯಾಗಿ ಸೃಷ್ಟಿಯಾಗಿದೆ. ಜನರೇ ಆ ಶಕ್ತಿ ಇರುವ ಜಾಲತಾಣಕ್ಕೆ ಹೋಗಿ ಪೇ ಮಾಡಿ ಓದುತ್ತಿದ್ದಾರೆ. ಈ ತರಹ ಪೇ ಮಾಡಿದ ಹಣ ಸಂಪಾದಕರಿಗೆ ನೇರವಾಗಿ ಹೋಗುತ್ತದೆ. ಇದು ನಿಜಕ್ಕೂ ಖುಷಿ ಕೊಡುವ ವಿಷಯ ಎಂದು ಅವರು ಹೇಳಿದರು.