ಪತಿ ತನ್ನ ಪತ್ನಿಯೊಂದಿಗಿನ ಬಲವಂತವಾಗಿ ಲೈಂಗಿಕ ಸಂಪರ್ಕ ಹೊಂದುವುದನ್ನು ಅತ್ಯಾಚಾರ ಎಂದು ಪರಿಗಣಿಸದ ಭಾರತೀಯ ದಂಡ ಸಂಹಿತೆಯ 375ನೇ ಸೆಕ್ಷನ್‌ನ ಔಚಿತ್ಯವನ್ನು ಪ್ರಶ್ನಿಸಿದ ದೆಹಲಿ ಹೈಕೋರ್ಟ್ ವೈವಾಹಿಕ ಸ್ಥಿತಿ ಪರಿಗಣನೆಯಿಲ್ಲದೆ ಲೈಂಗಿಕ ಕ್ರಿಯೆಗೆ ‘ಇಲ್ಲ’ ಎನ್ನುವ ಅಧಿಕಾರ ಪ್ರತಿ ಮಹಿಳೆಗೂ ಇದೆ ಎಂದಿದೆ.
ಅತ್ಯಾಚಾರವನ್ನು ವ್ಯಾಖ್ಯಾನಿಸುವ ಐಪಿಸಿಯ ಸೆಕ್ಷನ್ 375 ಪತ್ನಿ 15 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿರದ ಹೊರತು ಪುರುಷನು ತನ್ನ ಹೆಂಡತಿಯೊಂದಿಗೆ ನಡೆಸುವ ಲೈಂಗಿಕ ಕ್ರಿಯೆಯು ಅತ್ಯಾಚಾರವಲ್ಲ ಎಂದು ಹೇಳುತ್ತದೆ.
“ವೈವಾಹಿಕ ಅತ್ಯಾಚಾರವನ್ನು ಅಪರಾಧವನ್ನಾಗಿ ಮಾಡಿದ 50 ದೇಶಗಳು ಇದನ್ನು ತಪ್ಪಾಗಿ ಗ್ರಹಿಸಿವೆಯೇ?” ಎಂದೂ ನ್ಯಾಯಾಲಯ ಕೇಳಿದೆ.
ಈ ಬಗ್ಗೆ ಅಫಿಡವಿಟ್ ಸಲ್ಲಿಸಿರುವ, ಕೇಂದ್ರ ಸರ್ಕಾರವು ಈ ಸೆಕ್ಷನ್‌ಅನ್ನು ಸಮರ್ಥಿಸಿಕೊಂಡಿದ್ದು ಪತಿ ತನ್ನ ಪತ್ನಿಯೊಂದಿಗೆ ಬವಂತದ ಲೈಂಗಿಕ ಕ್ರಿಯೆ ನಡೆಸುವುದನ್ನು ‘ಅಪರಾಧ’ ಎಂದು ಪರಿಗಣಿಸಲಾಗುವುದಿಲ್ಲ. ಏಕೆಂದರೆ ಇದು ‘ವಿವಾಹ ವ್ಯವಸ್ಥೆ’ ಮತ್ತು ‘ಗಂಡಂದಿರಿಗೆ ಕಿರುಕುಳ ನೀಡುವ’ ಸುಲಭ ಸಾಧನವಾಗಿ ಮಾರ್ಪಾಡಾಗಬಹುದು ಎಂದಿದೆ.
ಭಾರತೀಯ ಸಮಾಜದಲ್ಲಿ ಮದುವೆಯ ನಂತರ ಹೆಚ್ಚಾಗಿ ಹೆಣ್ಣು ಗಂಡನ ಆಸ್ತಿ ಎಂದೇ ಪರಿಗಣಿಸಲ್ಪಡುತ್ತಾಳೆ ಮತ್ತು ಮದುವೆಯ ಉದ್ದೇಶವೇ ಸಂತಾನಾಭಿವೃದ್ಧಿ ಆಗಿರುವುದರಿಂದ ಲೈಂಗಿಕ ಜವಾಬ್ದಾರಿಗಳನ್ನು ಪೂರೈಸುವುದು ಹೆಂಡತಿಯ ಕರ್ತವ್ಯ ಎಂಬ ನಂಬಿಕೆಗಳಿವೆ. ಸರ್ಕಾರದ ಹೇಳಿಕೆಯ ಹಿಂದಿರುವುದೂ ಇದೇ ಮನಸ್ಥಿತಿ.
ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿರುವ ಅರ್ಜಿದಾರರು ಲೈಂಗಿಕ ಕ್ರಿಯೆಯ ಮಧ್ಯದಲ್ಲಿ ಸಹ ಮಹಿಳೆ ನಿರಾಕರಿಸಬಹುದು ಆದ್ದರಿಂದ ಮದುವೆ ಎಂದರೆ ‘ಶಾಶ್ವತ ಒಪ್ಪಿಗೆ’ ಎಂಬುವುದು ಕಾನೂನುಬದ್ಧವಾಗಿ ಮಾನ್ಯವಾಗುವುದಿಲ್ಲ ಎಂದಿದ್ದಾರೆ. ಅಲ್ಲದೆ ನ್ಯಾಯಾಂಗವು ಮಹಿಳೆಯ ಮೂಲಭೂತ ಹಕ್ಕನ್ನು ರಕ್ಷಿಸುವ ಹೊಣೆ ಹೊರಬೇಕೇ ಹೊರತು ‘ಮದುವೆಯ ವ್ಯವಸ್ಥೆ’ ಮತ್ತು ಸಂತಾನಾಭಿವೃದ್ಧಿಯನ್ನು ರಕ್ಷಿಸುವ ಹೊಣೆ ಹೊರಬಾರದು ಎಂದು ಹೇಳಿದ್ದಾರೆ.
ಈ ಬಗ್ಗೆ ನ್ಯಾಯಾಲಯಕ್ಕೆ ಜನವರಿ 19ರಂದು ಉತ್ತರಿಸಿರುವ ಸರ್ಕಾರ ವೈವಾಹಿಕ ಅತ್ಯಾಚಾರವನ್ನು ಅಪರಾಧೀಕರಿಸುವ ವಿಷಯವನ್ನು ಪರಿಶೀಲಿಸಲು ‘ಸಮಾಲೋಚನಾ ಪ್ರಕ್ರಿಯೆ’ಯನ್ನು ‘ವೇಗವಾಗಿ ಟ್ರ್ಯಾಕ್ ಮಾಡಲಾಗಿದೆ’ ಎಂದು ತಿಳಿಸಿದೆ.
ಅದಾಗಿ ಒಂದು ದಿನದ ನಂತರ ಟ್ವಿಟರ್ ನಲ್ಲಿ #MarriageStrike ಟ್ರೆಂಡ್ ಆಗಿದೆ. ಇಂಥದ್ದೊಂದು ಕಾನೂನು ಜಾರಿಗೆ ಬಂದರೆ ತಾವು ಎಂದಿಗೂ ಮದುವೆಯಾಗುವುದಿಲ್ಲ ಎಂದು ಪುರುಷರ ಒಂದು ವಿಭಾಗ ಹೇಳಿಕೊಳ್ಳುತ್ತಿದೆ. ಈ ಬಗ್ಗೆ ಅನೇಕ ಟ್ವೀಟ್‌ಗಳು ಮಾತಾಡಿದ್ದು ಮಹಿಳೆಯರನ್ನು ಅವಕಾಶವಾದಿಗಳು ಮತ್ತು ಗೋಲ್ಡ್ ಡಿಗ್ಗರ್ಸ್ ಎಂದು ಕರೆದಿದೆ.
MarriageStrike ಟ್ರೆಂಡ್‌ಗೆ ಪ್ರತ್ಯುತ್ತರ ನೀಡಿರುವ ಅಖಿಲ ಭಾರತ ಪ್ರಗತಿಪರ ಮಹಿಳಾ ಸಂಘದ ಕಾರ್ಯದರ್ಶಿ ಕವಿತಾ ಕೃಷ್ಣನ್ ಅವರು ಟ್ವೀಟ್ ಮಾಡಿ “#MarriageStrike ನಡೆಸುತ್ತಿರುವ ಪುರುಷರು ಎಂದೆಂದಿಗೂ ಇದೇ ರೀತಿ ಇರಬೇಕೆಂದು ನಾನು ಬಲವಾಗಿ ಬಯಸುತ್ತೇನೆ. ಮದುವೆಯಲ್ಲಿ ಪರಸ್ಪರ ಒಪ್ಪಿಗೆಗೆ ಸ್ಥಾನವಿಲ್ಲ ಎಂದು ಭಾವಿಸುವ ಯಾರೂ ಮದುವೆಯಾಗಬಾರದು” ಎಂದಿದ್ದಾರೆ.
ಇನ್ನೊಬ್ಬ ಟ್ವಿಟ್ಟರ್ ಬಳಕೆದಾರರು, “#MarriageStrike ಎನ್ನುವುದು ಟ್ವಿಟರ್ ಟ್ರೆಂಡ್‌ಗಳಲ್ಲಿ ಅತ್ಯಂತ ಹಾಸ್ಯಾಸ್ಪದ ಟ್ರೆಂಡ್ ಆಗಿದ್ದು ಮಹಿಳೆಯರು ತಮ್ಮನ್ನು ಮದುವೆಯಾಗಲು ಕಾಯುತ್ತಿದ್ದಾರೆ ಎಂದು ಅವರು ಭಾವಿಸಿದ್ದಾರೆ” ಎನ್ನುವುದಾಗಿ ಟ್ವೀಟ್ ಮಾಡಿದ್ದಾರೆ.
“ನಾನು ಈ ಪ್ರವೃತ್ತಿಯನ್ನು ಬೆಂಬಲಿಸುತ್ತೇನೆ. ಒಂದಿಡೀ ಪೀಳಿಗೆಯು ಮದುವೆ ಮತ್ತು ಸಂತಾನದ ಅಸಂಬದ್ಧತೆಯನ್ನು ಬಿಟ್ಟುಬಿಡಬೇಕು ಮತ್ತು ಕೆಲವು ಪುಸ್ತಕಗಳನ್ನು ಓದಬೇಕು, ಪ್ರಯಾಣ ಮಾಡಬೇಕು. ಇದು ಮಹಿಳೆಯರನ್ನು ಮುಕ್ತ, ಸಂತೋಷಮಯವನ್ನಾಗಿಸುವುದೇ ಅಲ್ಲದೆ ಸಾಹಸ ಪ್ರಿಯರೂ ಕನಸುಗಾರರನ್ನಾಗಿಯೂ ಮಾಡುತ್ತದೆ. ಕಡಿಮೆ ಮದುವೆ ಎಂದರೆ ಕಡಿಮೆ ಜವಾಬ್ದಾರಿಗಳು ಮತ್ತು ಹೆಚ್ಚು ಮೋಜು” ಎಂದು ಇನ್ನೊಬ್ಬ ಬಳಕೆದಾರರು ಬರೆದಿದ್ದಾರೆ.