ಕೊರೋನಾ ಸೋಂಕು ಬಾಧಿಸುವ ಜನರು ಖಾಸಗಿ ಆಸ್ಪತ್ರೆಯಲ್ಲಿ ಕೇವಲ ಎರಡ್ಮೂರು ದಿನಗಳಿಗೆ ಗುಣಮುಖರಾಗಿ ಹೊರ ಬರುತ್ತಿದ್ದಾರೆ. ಆದರೆ ಇದೇ ವೇಳೆ ಸರ್ಕಾರಿ ಆಸ್ಪತ್ರೆಯಲ್ಲಿ 7 ದಿನಗಳವರೆಗೆ ಸೋಂಕಿತರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಆ ಬಳಿಕವಷ್ಟೇ ಸರ್ಕಾರಿ ಆಸ್ಪತ್ರೆಯಲ್ಲಿರುವ ಸೋಂಕಿತರು ಗುಣಮುಖರಾಗುತ್ತಿದ್ದಾರೆ. ಇದು ಈಗ ಬಹಳ ಗೊಂದಲ ಸೃಷ್ಟಿಸಿದ್ದು, ಕೆಲವರಲ್ಲಂತೂ ಬಹಳ ಗೊಂದಲ ಸೃಷ್ಟಿಸಿದೆ. ಅಷ್ಟಕ್ಕೂ ಏನಿದರ ಹಿಂದಿನ ಅಸಲಿಯತ್ತು..? ಎಂಬುವುದನ್ನು ಪ್ರತಿಧ್ವನಿ ಪತ್ತೆ ಮಾಡಿ, ಓದುಗರಿಗೆ ವಿವರಿಸುವ ಪ್ರಯತ್ನ ಮಾಡುತ್ತಿದೆ.
ಸರ್ಕಾರಿ ಆಸ್ಪತ್ರೆಗಳಿಗಿಂತ ಹೆಚ್ಚು ಸೋಂಕಿತರು ಖಾಸಗಿ ಆಸ್ಪತ್ರೆಗಳಿಗೆ ದಾಖಲಾಗುತ್ತಿದ್ದಾರೆ. ಸದ್ಯ ಹೆಚ್ಚು ಕಮ್ಮಿ ಬೆಂಗಳೂರಿನಲ್ಲಿ 700 ಮಂದಿಯಷ್ಟು ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಪೈಕಿ 75% ಮಂದಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಮನಸ್ಸು ಮಾಡಿದ್ದಾರೆ. ಏಕೆಂದರೆ, ಬಹು ಬೇಗನೆ ಖಾಸಗಿ ಆಸ್ಪತ್ರೆಯಲ್ಲಿ ಕೊರೋನಾ ಸೋಂಕಿತರು ಗುಣಮುಖರಾಗುತ್ತಿದ್ದಾರೆ. ಗುಣ ಲಕ್ಷಣಗಳೊಂದಿಗೆ ದಾಖಲಾದರೆ ಎರಡ್ಮೂರು ದಿನದಲ್ಲೇ ಸೋಂಕಿತರಿಗೆ ಕೊರೋನಾದಿಂದ ಮುಕ್ತಿ ಪಡೆಯುತ್ತಿದ್ದಾರೆ. ಆದರೆ ಸರ್ಕಾರಿ ಆಸ್ಪತ್ರೆಯಲ್ಲಿ ಗುಣಮುಖರಾಗಲು ಏಳು ದಿನಗಳು ತಗುಲುತ್ತಿದೆ. ಸರ್ಕಾರಿ ಆಸ್ಪತ್ರೆಯಲ್ಲೊಂದು ರೀತಿ, ಖಾಸಗಿ ಆಸ್ಪತ್ರೆಯಲ್ಲಿ ಮತ್ತೊಂದು ರೀತಿಯಿಂದಾಗಿ ಜನರೀಗ ಗುಮಾನಿಯಿಂದ ನೋಡುವಂತಾಗಿದೆ. ಅಷ್ಟಕ್ಕೂ ಇದಕ್ಕೇನು ಕಾರಣ..?
ಈ ಬಗ್ಗೆ ಪ್ರತಿಧ್ವನಿ ತಂಡ ಖಾಸಗಿ ಆಸ್ಪತ್ರೆಗಳ ವೈದ್ಯರ ಬಳಿ ಗೌಪ್ಯವಾಗಿ ವಿಚಾರ ತಿಳಿದುಕೊಳ್ಳುವಂತ ಪ್ರಯತ್ನ ಮೊದಲು ಮಾಡಿತು. ಈ ವೇಳೆ ಅಸ್ಪಷ್ಟವಾದ ಮಾಹಿತಿ ಸಿಕ್ಕಿತ್ತಾದರೂ ಎರಡ್ಮೂರು ದಿನಗಳಲ್ಲೇ ಸೋಂಕಿತರು ಗುಣಮುಖರಾಗುತ್ತಿರುವುದರ ಹಿಂದಿನ ರಹಸ್ಯ ಗೊತ್ತಾಗಿರಲಿಲ್ಲ. ಆದರೆ ನಿರಂತರವಾದ ಪ್ರಯತ್ನ ಹಾಗೂ ತನಿಖೆಯಿಂದಾಗಿ ಕೊನೆಗೂ ಇದೀಗ ಪ್ರತಿಧ್ವನಿ ಇದರ ಹಿಂದಿನ ಅಸಲಿಯತ್ತನ್ನು ಪತ್ತೆ ಮಾಡಿ ಜನರ ಮುಂದಿಡುತ್ತಿದೆ.

ಖಾಸಗಿ ಆಸ್ಪತ್ರೆ ಸೇರುತ್ತಿರುವ ಕೊರೋನಾ ಸೋಂಕಿತರು ಬಹುಬೇಗನೆ ಗುಣಮುಖರಾಗಲು ಪ್ರಮುಖ ಕಾರಣ ಮೊಲ್ನಾಪಿರಾವಿರ್ ಎಂಬ ಮಾತ್ರೆಯನ್ನು ಸೋಂಕಿತರಿಗೆ ನೀಡುತ್ತಿರುವುದರಿಂದ. ಈ ಮೊಲ್ನಾಪಿರಾವಿರ್ ಔಷಧಿ ಒಂದು ಬಗೆಯ Anti Viral Capsule. ಕೊರೋನಾ ಪಾಸಿಟಿವ್ ಆಗಿ ದಾಖಲಾಗುತ್ತಿರುವ ಸೋಂಕಿತರಿಗೆ ಖಾಸಗಿ ಆಸ್ಪತ್ರೆಯಲ್ಲಿ ಈ ಮಾತ್ರೆಯನ್ನು ನೀಡಲಾಗುತ್ತಿದೆ. ಎರಡನೇ ಅಲೆಯಲ್ಲಿ ಸ್ಟಿರಾಯ್ಡ್ ಮಾದರಿಯ ಮಾತ್ರೆಗಳನ್ನು ಕೊಟ್ಟ ಪರಿಣಾಮ ಬ್ಲ್ಯಾಕ್ ಫಂಗಸ್ ಕಾಣಿಸಿಕೊಂಡು ಆತಂಕ ಮತ್ತಷ್ಟು ಹೆಚ್ಚಿಸಿತ್ತು. ಇದೀಗ ಮೂರನೇ ಅಲೆಯಲ್ಲೂ ಖಾಸಗಿ ಆಸ್ಪತ್ರೆಗಳು ಅದೇ ಮಾದರಿಯ ಔಷಧಿಯನ್ನು ಸೋಂಕಿತರಿಗೆ ಕೊಡಮಾಡುತ್ತಿದೆ. ಇದು ಈಗ ಆತಂಕ ಇಮ್ಮಡಿಯಾಗಿಸಿದೆ. ಏಕೆಂದರೆ ಕೊರೋನಾ ತಡೆಯುವಲ್ಲಿ ಈ ಔಷಧಿ ಶಕ್ತಿಶಾಲಿಯಾಗಿದ್ದರೆ ಸರ್ಕಾರಿ ಆಸ್ಪತ್ರೆಯಲ್ಲೇಕೆ ಇದನ್ನು ನೀಡುತ್ತಿಲ್ಲಾ ಎಂಬ ಪ್ರಶ್ನೆ ಸದ್ಯದ್ದು.
ಹೇಳಿ ಕೇಳಿ, ಈ ಮೊಲ್ನಾಪಿರಾವಿರ್ ಮಾತ್ರೆಯನ್ನು ICMR ಕೊರೋನಾ ಸೊಂಕಿತರಿಗೆ ನೀಡಲಾಗಿತ್ತುರುವ ಔಷಧಿಗಳ ಪಟ್ಟಿಯಿಂದ ಹಲವು ಕಾರಣಳಿಂದ ಕೈ ಬಿಟ್ಟಿದೆ. ಮೂರನೇ ಅಲೆಯಲ್ಲಿ ಸೋಂಕು ಹೆಚ್ಚಳವಾದರೂ ಅದರ ತೀವ್ರತೆ ಕಡಿಮೆಯಿದೆ. ಹೀಗಾಗಿ ದೇಹದ ಮೇಲೆ ಭಾರೀ ಪ್ರಮಾಣದಲ್ಲಿ ಪ್ರಭಾವ ಬೀರುವ ಔಷಧಿಗಳನ್ನೆಲ್ಲಾ ಸರ್ಕಾರ ICMR ಸಲಹೆಯ ಮೇರೆಗೆ ಕೈ ಬಿಟ್ಟಿದೆ. ಹೀಗಿದ್ದರೂ ಖಾಸಗಿ ಆಸ್ಪತ್ರೆಗಳು ಸರ್ಕಾರದ ಕೊರೋನಾ ನಿಯಮಾವಳಿಗಳನ್ನು ಗಾಳಿಗೆ ತೂರಿ ಕಾನೂನು ಬಾಹಿರವಾಗಿ ಈ ಮೊಲ್ನಾಪಿರಾವಿರ್ ಮಾತ್ರೆಯನ್ನು ಸೋಂಕಿತರಿಗೆ ನೀಡಲಾಗುತ್ತಿದೆ. ಈ ಬಗ್ಗೆ ಪ್ರತಿಧ್ವನಿಯೊಂದಿಗೆ ಮಾತನಾಡಿದ ಖಾಸಗಿ ಆಸ್ಪತ್ರೆಗಳ ಒಕ್ಕೂಟದ ಅಧ್ಯಕ್ಷ ಡಾ. ಪ್ರಸನ್ನ, ವಿದೇಶಗಳಲ್ಲಿ ಈ ಮೊಲ್ನಾಪಿರಾವಿರ್ ಔಷಧಿ ಬಹಳ ಪರಿಣಾಮಕಾರಿಯಾಗಿ ಕೆಲಸ ಮಾಡಿದೆ. ಆದರೆ ICMR ಯಾಕೆ ಕೊರೋನಾ ಚಿಕಿತ್ಸೆಯಿಂದ ಕೈ ಬಿಟ್ಟಿದೆ ಎಂಬುವುದು ಗೊತ್ತಿಲ್ಲ. ಆದರೆ ಅವರು ಕೈ ಬಿಟ್ಟಿದ್ದಾರೆ ಎಂಬ ಮಾತ್ರಕ್ಕೆ ನಾವು ಔಷಧಿಯನ್ನು ಕೊಡಬಾರದು ಎಂಬ ನಿಯಮವೇನಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಇನ್ನು ಈ ಮೊಲ್ನಾಪಿರಾವಿರ್ ಮಾತ್ರೆಯ ಬೆಲೆ ಬಹಳ ಅಗ್ಗವಾಗಿದ್ದು ಒಂದು ಸ್ಟ್ರಿಪ್ ಮಾತ್ರೆಗೆ 600 ರೂಪಾಯಿ ಇದೆ. ಓರ್ವ ಕೊರೋನಾ ಸೋಂಕಿತನಿಗೆ ಐದು ಕೋರ್ಸ್ ಮಾದರಿಯಲ್ಲಿ 800 mg ಯಷ್ಟು ಪ್ರಮಾಣದಲ್ಲಿ ನೀಡಿದರೆ ಎರಡ್ಮೂರು ದಿನದಲ್ಲೇ ಸೋಂಕಿತರು ಸೋಂಕು ಮುಕ್ತರಾಗುತ್ತಿದ್ದಾರೆ. ಇದೇ ಕಾರಣಕ್ಕೆ ಖಾಸಗಿ ಆಸ್ಪತ್ರೆಗೆ ಹೆಚ್ಚೆಚ್ಚು ಜನ ಮುಖ ಮಾಡಿದ್ದು ಕೆಲವೇ ಕೆಲವು ದಿನಗಳಲ್ಲಿ ಸೋಂಕು ಮುಕ್ತರಾಗುತ್ತಿದ್ದಾರೆ.