ಭಾರತೀಯ ಮಾಧ್ಯಮವನ್ನು ಪುರುಷ ಪ್ರಾಧಾನ್ಯತೆ ಹಾಗೂ ಆಕ್ರಮಣಕಾರಿ ಆ್ಯಂಕರಿಂಗ್ ಆಳುತ್ತಿದೆ ಎನ್ನುವ ದೂರುಗಳು ನಿನ್ನೆ ಮೊನ್ನೆಯದಲ್ಲ. ಬಹುಶಃ ಟಿವಿ ನ್ಯೂಸ್‌ಗಳನ್ನು ಪ್ರಸ್ತುತಪಡಿಸುವ ಅವಕಾಶ ಖಾಸಗಿಯವರಿಗೆ ಸಿಕ್ಕಿದ ನಂತರ ಪದೇ ಪದೇ ಈ ದೂರು ಕೇಳಿ ಬರುತ್ತಲೇ ಇದೆ. ಚಂದನ ಅಥವಾ ದೂರದರ್ಶನ ಮಾತ್ರ ಇದ್ದಾಗ ನ್ಯೂಸ್ ಓದುವವರಲ್ಲಿದ್ದ ಸಭ್ಯತೆ, ಸಂಯಮ ಖಾಸಗಿ ನ್ಯೂಸ್ ಆ್ಯಂಕರ್‌ಗಳಲ್ಲಿ ಇಲ್ಲ ಎನ್ನುವುದು ಅರಿವಾಗಲು ವಿಶೇಷ ಕನ್ನಡಕವೇನೂ ಬೇಕಾಗಿಲ್ಲ. ಇದೀಗ ಮಾಧ್ಯಮ ವೃತ್ತಿಯಲ್ಲಿರುವ ಮಹಿಳೆಯರ ವೇದಿಕೆಯಾಗಿರುವ ನೆಟ್‌ವರ್ಕ್ ಆಫ್ ವುಮೆನ್ ಇನ್ ಮೀಡಿಯಾ, ಇಂಡಿಯಾ (NWMI) ಅಧ್ಯಯನವೊಂದನ್ನು ಕೈಗೊಂಡಿದ್ದು, ಭಾರತದ ಟಿವಿ ಸುದ್ದಿಗಳನ್ನು ಪುರುಷ ಪ್ರಾಧಾನ್ಯತೆ ಹೇಗೆ ನಿಯಂತ್ರಿಸುತ್ತದೆ ಎಂಬುವುದರ ಬಗ್ಗೆ ವರದಿ ಬಿಡುಗಡೆ ಮಾಡಿದೆ. NWMI ನ ಕೆಲ ಸದಸ್ಯೆಯರು ಸೆಪ್ಟೆಂಬರ್ 2021 ರಲ್ಲಿ ಒಂದು ವಾರ 12 ಭಾಷೆಗಳಲ್ಲಿ 31 ಟಿವಿ ಚಾನೆಲ್‌ಗಳ 185 ಸುದ್ದಿ ಮತ್ತು ಟಾಕ್ ಶೋಗಳನ್ನು ಅಧ್ಯಯನ ಮಾಡಿ ಈ ವರದಿ ಬಿಡುಹಡೆ ಮಾಡಿದೆ.
ವರದಿಯ ಪ್ರಕಾರ ಸುದ್ದಿ ನಿರೂಪಕರ ವರ್ತನೆಯು ಅವರು ಸುದ್ದಿ ಬುಲೆಟಿನ್ ಅನ್ನು ಓದುತ್ತಿದ್ದಾರೆಯೇ ಅಥವಾ ಟಾಕ್ ಶೋ ಅನ್ನು ಆಂಕರ್ ಮಾಡುತ್ತಿದ್ದಾರೆಯೇ ಎಂಬುದರ ಆಧಾರದ ಮೇಲೆ ವಿಭಿನ್ನವಾಗಿರುತ್ತದೆ. “ಅಧ್ಯಯನಕ್ಕೆ ಒಳಪಡಿಸಿದ ನ್ಯೂಸ್ ಬುಲೆಟಿನ್‌ಗಳಲ್ಲಿ 50% ಕ್ಕಿಂತ ಹೆಚ್ಚು ಸುದ್ದಿಗಳಲ್ಲಿ ಆಕ್ರಮಣಶೀಲತೆಯನ್ನು ಗಮನಿಸಿದರೆ, ಟಾಕ್ ಶೋಗಳಲ್ಲಿ ಈ ಪ್ರಮಾಣ 85%” ಎಂದು ಅಧ್ಯಯನ ಹೇಳುತ್ತದೆ.
“ಸುದ್ದಿಗಳನ್ನು ಸಾಮಾನ್ಯವಾಗಿ ನೇರವಾದ ರೀತಿಯಲ್ಲಿ ಓದುವುದರಿಂದ ಆಕ್ರಮಣಶೀಲತೆ ಕಡಿಮೆ. ಆದರೆ ಚರ್ಚಾ ಪ್ಯಾನೆಲ್‌ಗಳು ಮತ್ತು ಟಾಕ್ ಶೋಗಳಲ್ಲಿ, ಆಂಕರ್‌ಗಳು, ಹೋಸ್ಟ್‌ಗಳು ಮತ್ತು ಅತಿಥಿಗಳು ಆಕ್ರಮಣಕಾರಿಯಾಗಿ ನಡೆದುಕೊಳ್ಳುತ್ತಾರೆ” ಎಂದಿದೆ ಅಧ್ಯಯನ. ಬಹು ಅತಿಥಿಗಳನ್ನು ಹೊಂದಿರುವ ಪ್ಯಾನೆಲ್‌ಗಳು ಇನ್ನಷ್ಟು masculine ವರ್ತನೆಯನ್ನು ಪ್ರದರ್ಶಿಸುತ್ತವೆ ಎಂದು ಅಧ್ಯಯನ ಹೇಳುತ್ತದೆ.
ಈ masculine ಆಕ್ರಮಣಶೀಲತೆಯನ್ನು ಪುರುಷ ಆಂಕರ್‌ಗಳು ಮಾತ್ರ ಪ್ರದರ್ಶಿಸುವುದಲ್ಲ ಬದಲಾಗಿ ಮಹಿಳಾ ಆಂಕರ್‌ಗಳು ಕಡಿಮೆ ಪ್ರಮಾಣದಲ್ಲಿ ಅದೇ ನಡವಳಿಕೆಯನ್ನು ಪ್ರದರ್ಶಿಸುತ್ತಾರೆ ಎಂದು ವರದಿ ಸ್ಪಷ್ಟಪಡಿಸಿದೆ. “ಪುರುಷ ಆಂಕರ್‌ಗಳಿಂದ ಮಾಡರೇಟ್ ಮಾಡಲಾದ ಪ್ಯಾನೆಲ್‌ಗಳು ಮಹಿಳಾ ಆಂಕರ್‌ಗಳು ಮಾಡರೇಟ್ ಮಾಡುವ ಪ್ಯಾನೆಲ್‌ಗಳಿಗಿಂತ ಹೆಚ್ಚು ಆಕ್ರಮಣಕಾರಿ ಪುರುಷವಾದಿ ನಡವಳಿಕೆಯನ್ನು ಬಹಿರಂಗಪಡಿಸಿದೆ. ಪುರುಷರು ಮಾಡರೇಟರ್ ಆಗಿರುವ ಪ್ಯಾನೆಲ್‌ಗಳ ಸದಸ್ಯರು 54.55% ನಷ್ಟು ಬಾರಿ ಪರಸ್ಪರ ಸವಾಲು ಹಾಕಿದ್ದರೆ ಮಹಿಳೆಯರು ಮಾಡರೇಟರ್ ಆಗಿರುವಲ್ಲಿ ಕೇವಲ 12.07% ರಷ್ಟು ಬಾರಿ ಮಾತ್ರ ಪರಸ್ಪರ ಸವಾಲು ಹಾಕಿದ್ದಾರೆ. ಪುರುಷ-ಮಾಡರೇಟೆಡ್ ಪ್ಯಾನೆಲ್‌ಗಳಲ್ಲಿ (48.75%) ಸ್ಪೀಕರ್‌ಗಳು ಒಬ್ಬರ ಮೇಲೊಬ್ಬರು ಹೆಚ್ಚು ಕಿರುಚಾಡಿದ್ದರೆ ಸ್ತ್ರೀ ಮಾಡರೇಟೆಡ್ ಪ್ಯಾನೆಲ್‌ಗಳಲ್ಲಿ ಕಡಿಮೆ (15.52%) ಕಿರುಚಾಟ ನಡೆಯುತ್ತದೆ ಎಂಬುವುದನ್ನೂ ಅಧ್ಯಯನದಲ್ಲಿ ಗಮನಿಸಲಾಗಿದೆ.

“ಏರಿದ ಧ್ವನಿಯು ಆಕ್ರಮಣಶೀಲತೆಯ ಸಾಮಾನ್ಯ ಅಭಿವ್ಯಕ್ತಿಯಾಗಿದೆ (76.76%), ಆದರೆ ಆಕ್ರಮಣಶೀಲತೆಯನ್ನು ಸೂಚಿಸುವ ಧ್ವನಿ ಮತ್ತು ದೃಶ್ಯ ಪರಿಣಾಮಗಳಂತಹ (visual effect) ಪೋಷಕ ಅಂಶಗಳು ಸಹ (60%) ಆಕ್ರಮಣ ಶೀಲತೆಯನ್ನು ಹೆಚ್ಚಿಸುತ್ತವೆ ” ಎಂದು ವರದಿ ಹೇಳುತ್ತದೆ. ಅಧ್ಯಯನವನ್ನು ನಡೆಸುವಾಗ, ಮೌಖಿಕ ಆಕ್ರಮಣಶೀಲತೆ, ಕೋಪ, ಡಾಮಿನೆನ್ಸ್, ಸೆಕ್ಸಿಮಂ ಮತ್ತು ನಡವಳಿಕೆಯ ಇತರ ಚಿಹ್ನೆಗಳನ್ನು ಗಮನಿಸುವಂತೆ ಕೋಡರ್‌ಗಳನ್ನು ಕೇಳಿಕೊಳ್ಳಲಾಗಿತ್ತು.
ದೇಶದ ಇಂಗ್ಲಿಷ್ ಮಾಧ್ಯಮಗಳನ್ನು ಈ ಅಧ್ಯಯನಕ್ಕೆ ಹೆಚ್ಚು ಬಳಸಿಕೊಳ್ಳಲಾಗಿದ್ದು ಒಟ್ಟು ಚಾನೆಲ್‌ಗಳಲ್ಲಿ ಶೇಕಡ19ರಷ್ಟು ಆಂಗ್ಲ ಮಾಧ್ಯಮಗಳನ್ನು ಅಧ್ಯಯನಕ್ಜೆ ಒಳಪಡಿಸಲಾಗಿದೆ. ಅತಿ ಹೆಚ್ಚು ಆಕ್ರಮಣಶೀಲತೆಯೂ ಇಂಗ್ಲಿಷ್ ಚಾನೆಲ್‌ಗಳಲ್ಲೇ ಕಂಡುಬಂದಿದ್ದು 24.72% ಚಾನೆಲ್‌ಗಳು ಆಕ್ರಮಣಶೀಲವಾಗಿವೆ. ನಂತರದ ಸ್ಥಾನದಲ್ಲಿ ಗುಜರಾತಿ ಭಾಷೆಯ ಚಾನೆಲ್‌ಗಳಿದ್ದು ಅವುಗಳ ಆಕ್ರಮಣಶೀಲತೆ 15.93%ರಷ್ಟಿದೆ. ಹಿಂದಿ ಭಾಷೆಯ ಮಾಧ್ಯಮಗಳು ‘ಡಾಮಿನೆನ್ಸ್’ ವಿಭಾಗದಲ್ಲಿ ಮೊದಲ ಸ್ಥಾನ (34.86%) ಹೊಂದಿದ್ದರೆ ಇಂಗ್ಲಿಷ್ ಎರಡನೇ ಸ್ಥಾನ (22.93%) ಹೊಂದಿದೆ. ಈ ವಿಭಾಗದಲ್ಲಿ ಬಂಗಾಳಿ ಭಾಷೆಯು ಕೊನೆಯ ಸ್ಥಾನ ಹೊಂದಿದ್ದು ಕೇವಲ 14% ಡಾಮಿನೇಟ್ ಆಗಿದೆ ಎಂದು ವರದಿ ಹೇಳುತ್ತದೆ. ತಮಿಳು ಭಾಷೆಯ ಚಾನೆಲ್‌ಗಳು ಹೆಚ್ಚು ಸೆಕ್ಸಿಸ್ಟ್ ಆಗಿದೆ ಎಂದೂ ವರದಿ ಹೇಳುತ್ತದೆ.
ಈ ವರದಿಯನ್ನು ಗನಿಸಿದರೆ ಟಿವಿ ಚಾನೆಲ್‌ಗಳ ಭಾಷೆ, ಆ್ಯಂಕರ್‌ಗಳ ನಡವಳಿಕೆಯಲ್ಲಿ ಬದಲಾವಣೆಯಾಗಬೇಕಾದುದು ಸ್ಪಷ್ಟವಾಗಿ ಅರಿವಾಗುತ್ತದೆ. ಟಿವಿ ಚಾನೆಲ್‌ಗಳಲ್ಲಿ ವೃತ್ತಿಪರ ವಾತಾವರಣವನ್ನು ಹೆಚ್ಚಿಸುಸುವುದು, ಟಾಕ್ ಶೋಗಳನ್ನು ಫಾರ್ಮ್ಯಾಟಿಂಗ್ ಮಾಡುವುದು, ಆಂಕರ್, ಧ್ವನಿ ಪರಿಣಾಮಗಳು, ಗ್ರಾಫಿಕ್ಸ್ ಇತ್ಯಾದಿಗಳು ಹೆಚ್ಚು ಆಕ್ರಮಣಕಾರಿಯಾಗದಿರುವಂತೆ ನೋಡಿಕೊಳ್ಳುವುದು, ವರದಿಗಾರರು ಮತ್ತು ಆಂಕರ್‌ಗಳಿಗೆ ಸಂವೇದನೆಯ ಬಗ್ಗೆ ತರಬೇತಿ ನೀಡುವುದು ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಮಧ್ಯಸ್ಥಗಾರರನ್ನು ಹೊಣೆಗಾರರನ್ನಾಗಿ ಮಾಡುವುದು ಮುಂತಾದ ಕ್ರಮಗಳನ್ನು ತೆಗೆದುಕೊಂಡರೆ ಸುದ್ದಿಯನ್ನು ಅತಿರಂಜಿತವಾಗಿ ವರದಿ ಮಾಡುವ, ಪ್ರಸ್ತುತ ಪಡಿಸುವ ಪ್ರವೃತ್ತಿ ನಿಲ್ಲಬಹುದು.