ಜೀವನಾಂಶ ಕೋರಿ ಕೋರ್ಟ್ ಮೊರೆ ಹೋಗಿದ್ದಕ್ಕಾಗಿ ಪತ್ನಿಗೆ ಕೋರ್ಟ್ ಆವರಣದಲ್ಲೇ ಪತಿ ಚಾಕುವಿನಿಂದ ಕುತ್ತಿಗೆ ಇರಿದು ಕೊಂದ ಘಟನೆ ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ ನಡೆದಿದೆ.
ಹೊಳೆನರಸೀಪುರ ತಟ್ಟೆಕೆರೆ ನಿವಾಸಿ ಚೈತ್ರಾ ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡಿದ್ದು, ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಪತಿ ಶಿವಕುಮಾರ್ ಈ ಕೃತ್ಯ ಎಸಗಿದ್ದಾನೆ.
ಪತಿಯಿಂದ ವಿಚ್ಛೇದನ ಪಡೆದಿದ್ದ ಚೈತ್ರಾ ಜೀವನಾಂಶ ಕೋರಿ ನ್ಯಾಯಾಲಯಕ್ಕೆ ಮೊರೆ ಹೋಗಿದ್ದರು. ಇದರಿಂದ ಅಸಮಾಧಾನಗೊಂಡಿದ್ದ ಹತ್ಯೆಗೈಯ್ಯಲು ಹೊಂಚು ಹಾಕುತ್ತಿದ್ದ.
ಹೊಳೆನರಸೀಪುರದ ಸೆಷನ್ಸ್ ನ್ಯಾಯಾಲಯಕ್ಕೆ ಚೈತ್ರಾ ಶನಿವಾರ ಆಗಮಿಸಿದ್ದು, ಕೋರ್ಟ್ ಆವರಣದಲ್ಲಿರುವ ಶೌಚಾಯಲಕ್ಕೆ ಹೋದಾಗ ಹೊಂಚು ಹಾಕಿದ್ದ ಶಿವಕುಮಾರ್ ಚಾಕುವಿನಿಂದ ಇರಿದಿದ್ದಾನೆ.
ಹೊಳೆನರಸೀಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿ ಶಿವಕುಮಾರ್ ನನ್ನು ವಶಕ್ಕೆ ಪಡೆದಿದ್ದಾರೆ.
ಚೈತ್ರಾ ಹಾಗೂ ಶಿವಕುಮಾರ್ 7 ವರ್ಷದ ಹಿಂದೆ ಮದುವೆ ಆಗಿದ್ದು, ಹೊಂದಾಣಿಕೆ ಆಗದ ಹಿನ್ನೆಲೆಯಲ್ಲಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಈ ವೇಳೆ ಜೀವನಾಂಶಕ್ಕಾಗಿ ಪತ್ನಿ ಬೇಡಿಕೆ ಇಟ್ಟಿದ್ದಳು.
ಇದಕ್ಕೂ ಮುನ್ನ ಕೌನ್ಸಿಲಿಂಗ್ ನಲ್ಲಿ ನಡೆದ ರಾಜೀ ಸಂಧಾನದ ವೇಳೆ ವೇಳೆ ಪತ್ನಿಗೆ ಕಿರುಕುಳ ನೀಡುವುದಿಲ್ಲ ಎಂದು ಒಪ್ಪಿಕೊಂಡಿದ್ದ ಅಲ್ಲದೇ. ಶನಿವಾರ ಹಿರಿಯ ಸಿಟಿ ಸಿವಿಲ್ ಕೋರ್ಟ್ ನಲ್ಲಿ ನ್ಯಾಯಾಧೀಶೆಯ ಮುಂದೆ ಪತ್ನಿಗೆ ಕಿರುಕುಳ ನೀಡುವುದಿಲ್ಲ ಎಂದು ಒಪ್ಪಿಕೊಂಡು ಹೊರಗೆ ಬಂದಿದ್ದ.
ವಿಚಾರಣೆ ಮುಗಿದ ನಂತರ ಹಿರಿಯ ಸಿಟಿ ಸಿವಿಲ್ ಕೋರ್ಟ್ ನಲ್ಲಿ ಪತ್ನಿ ಶೌಚಾಯಲಕ್ಕೆ ಹೋದಾಗ ಆಕೆಯನ್ನು ಹಿಂಬಾಸಿ ಚಾಕುವಿನಿಂದ ಕತ್ತು ಇರಿದು ಹತ್ಯೆ ಮಾಡಿದ್ದು, ನಂತರ ಮಗನನ್ನು ಕೊಲ್ಲಲು ಮುಂದಾಗಿದ್ದು, ಸ್ಥಳೀಯರು ಮಧ್ಯಪ್ರವೇಶಿಸಿ ಮಗುವನ್ನು ರಕ್ಷಿಸಿದ್ದಾರೆ.






