ತನ್ನ ತಂಗಿ ಅನ್ಯ ಜಾತಿಯ ಯುವಕನ್ನು ಪ್ರೀತಿಸಿ ಮದುವೆಯಾಗಿದ್ದಾಳೆ ಎಂದು ಕುಪಿತಗೊಂಡ ಅಣ್ಣ ನವದಂಪತಿಗಳನ್ನು ಹತ್ಯೆ ಮಾಡಿರುವ ಘಟನೆ ತಮಿಳುನಾಡಿನ ಕುಂಭಕೋಣಂನಲ್ಲಿ ನಡೆದಿದೆ.
ಮೋಹನ್(31) ಹಾಗು ಶರಣ್ಯ(24) ಮೃತ ದುರ್ದೈವಿಗಳು ಎಂದು ತಿಳಿದು ಬಂದಿದೆ. ಐದು ದಿನಗಳ ಹಿಂದಷ್ಟೇ ಮದುವೆಯಾಗಿದ್ದ ಜೋಡಿಯ ಕತ್ತು ಸೀಳಿ ಕೊಲೆ ಮಾಡಲಾಗಿದೆ ಎಂದು ವರದಿಯಾಗಿದೆ.
ಶರಣ್ಯಾ ಕುಂಭಕೋಣಂ ಬಳಿಯ ತುಳುಕ್ಕವೇಲಿ ಗ್ರಾಮದ ನಿವಾಸಿಯಾಗಿದ್ದು ನರ್ಸಿಂಗ್ ಪದವಿಧರೆಯಾಗಿದ್ದರು. ಚೆನೈನ ಖಾಸಗಿ ಅಸ್ಪತ್ರೆಯಲ್ಲಿ ನರ್ಸ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಯುವತಿಯನ್ನು ತಿರುವಣ್ಣಾಮಲೈ ಸಮೀಪದ ಪೊನ್ನೂರಿನ ನಿವಾಸಿಯಾದ ಮೋಹನ್ ಜೊತೆ ಆರು ತಿಂಗಳ ಹಿಂದೆ ಪ್ರೇಮಾಂಕುರವಾಗಿದೆ.
ಶರಣ್ಯ ಪ್ರೀತಿಸಿರುವ ವಿಚಾರ ಅವರ ಮನೆಗೆ ತಿಳಿದಿದ್ದು ಕುಟುಂಬಸ್ಥರು ಬುದ್ದಿವಾದ ಹೇಳಿ ಸೋದರ ಮಾವನನ್ನು ವರಿಸುವಂತೆ ಹೇಳಿದ್ದಾರೆ. ಇದಕ್ಕೆ ಗಾಬರಿಗೊಂಡ ಯುವತಿ ಚೆನೈನ ದೇವಸ್ಥಾನದಲ್ಲಿ ತಾನು ಪ್ರೀತಿಸಿದ ಯುವಕನೊಂದಿಗೆ ಐದು ದಿನಗಳ ಹಿಂದೆ ವಿವಾಹವಾಗಿದ್ದರು. ಈ ವಿಚಾರವನ್ನ ಪೋಷಕರಿಗೆ ದೂರವಾಣಿ ಮೂಲಕ ನವಜೋಡಿಗಳು ತಿಳಿಸಿದ್ದರು.
ಮದುವೆಯಾದ 5 ದಿನಗಳ ಬಳಿಕ ತಂಗಿಗೆ ಕರೆ ಮಾಡಿದ್ದ ಶರಣ್ಯ ಸಹೋದರ, ಪ್ರೇಮ ವಿವಾಹಕ್ಕೆ ಒಪ್ಪಿಕೊಂಡಿರುವುದಾಗಿ ಹೇಳಿ ನವದಂಪತಿಗಳು ಉಟಕ್ಕೆ ಬರುವಂತೆ ಪುಸಲಾಯಿಸಿ ಕರೆಸಿಕೊಂಡಿದ್ದಾನೆ. ಅಣ್ಣನ ಮಾತಿಗೆ ಒಪ್ಪಿಕೊಂಡ ಶರಣ್ಯ ತವರು ಮನೆಯ ಆತಿಥ್ಯವನ್ನ ಮುಗಿಸಿ ಚೆನೈಗೆ ವಾಪಸ್ ಹೊರಡಲು ತಯಾರಿ ನಡೆಸುತ್ತಿದ್ದ ಸಮಯದಲ್ಲಿ ಯುವತಿಯ ಅಣ್ಣ ಶಕ್ತಿವೇಲು ಚೂಪಾದ ಆಯುಧದಿಂದ ದಂಪತಿಗಳ ಕತ್ತು ಸೀಳಿ ಕೊಲೆ ಮಾಡಿದ್ದಾನೆ.
ತೀವ್ರ ರಕ್ತಸ್ತಾವದಿಂದ ಬಳಲುತ್ತಿದ್ದ ಇಬ್ಬರು ಸ್ಥಳದಲ್ಲೇ ಸಾವನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ಯುವತಿಯ ಅಣ್ಣ ಪೊಲೀಸರಿಗೆ ಶರಣಾಗಿದ್ದಾನೆ. ತಂಗಿ ಪ್ರೇಮ ವಿವಾಹವಾದ ಕಾರಣ ಸಂಬಂಧಿಕರ ಮುಂದೆ ತೀವ್ರ ಮುಜುಗರ ಅನುಭವಿಸಿದ್ದ ಕಾರಣ ಇಬ್ಬರನ್ನು ಹತ್ಯೆ ಮಾಡುವ ಸಲುವಾಗಿ ಸಂಚು ರೂಪಿಸಿ ಮನೆಗೆ ಕರೆಸಿ ಹತ್ಯೆ ಮಾಡಲಾಯಿತ್ತು ಎಂದು ಆರೋಪಿ ಶಕ್ತಿವೇಲು ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಕುರಿತು ಪ್ರತಿಕ್ರಿಯಿಸಿರುವ ತಂಜಾವೂರು ಪೊಲೀಸ್ ವರಿಷ್ಠಾಧಿಕಾರಿ ಜಿ.ರವಳಿ ಯುವತಿ ಶರಣ್ಯ ಎಸ್ಸಿ ಸಮುದಾಯಕ್ಕೆ ಸೇರಿದ್ದರೆ ಯುವಕ ಮೋಹನ್ ಮೊದಲಿಯಾರ್ ಸಮುದಾಯಕ್ಕೆ ಸೇರಿದವರು ಎಂದು ವರದಿಯಾಗಿದೆ. ಇವರ ಮದುವೆಯಿಂದ ಸಮುದಾಯ ಹಾಗು ಸಮಾಜದಲ್ಲಿ ಕುಟುಂಬಕ್ಕೆ ತೀವ್ರ ಅವಮಾನವಾದ ಕಾರಣ ನವದಂಪತಿಗಳ ಹತ್ಯೆ ಮಾಡಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಆರೋಪಿಯ ಅಣ್ಣನ ಜೊತೆ ಕೊಲೆಗೆ ಸಹಕರಿಸಿದ ಇನ್ನಿಬ್ಬರನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ