ಮಸ್ಕಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿರುವ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ದ ಅಭ್ಯರ್ಥಿಯಾದ ಬಿಟಿ ಓಬಳೇಶಪ್ಪ ನಾಯಕ ಅವರ ‘ಒಂದು ಓಟು ಒಂದು ನೋಟು’ ಅಭಿಯಾನಕ್ಕೆ ಬೆಂಬಲವಾಗಿ ಇಂದು ಮಸ್ಕಿ ಪಟ್ಟಣದಲ್ಲಿ ಮಾಜಿ ಶಾಸಕರು ಮತ್ತು ಜೆಡಿಯು ರಾಜ್ಯಾಧ್ಯಕ್ಷರಾದ ಮಹಿಮಾ ಪಟೇಲ್ ಅವರು ಪ್ರಚಾರ ನಡೆಸಿ ಜನರಿಂದ ದೇಣಿಗೆ ಸಂಗ್ರಹಿಸಿದ್ದಾರೆ.
ಸ್ವತಃ ಮಹಿಮಾ ಪಟೇಲ್ ಅವರೇ ಐದು ಸಾವಿರ ದೇಣಿಗೆ ನೀಡಿ, ಇಂತಹ ಮಾದರಿಗಳನ್ನು ಪ್ರೋತ್ಸಾಹಿಸಿ ಬೆಳಸುವ ಪರಿಪಾಠವನ್ನು ಜನರು ಬೆಳೆಸಿಕೊಳ್ಳಬೇಕು. ಈ ಅಬ್ಯಾಸಕ್ಕೆ ಮಸ್ಕಿ ಉಪಚುನಾವಣೆಯು ಮುನ್ನುಡಿ ಬರೆಯಬೇಕು ಎಂದು ಕರೆ ನೀಡಿದ್ದಾರೆ.
ಈ ಸಂಧರ್ಭದಲ್ಲಿ ಮಾತನಾಡಿದ ಕೆ ಆರ್ ಎಸ್ ಪಕ್ಷದ ರಾಜ್ಯಾಧ್ಯಕ್ಷರಾದ ರವಿ ಕೃಷ್ಣಾರೆಡ್ಡಿ, ʼ ಅಪಾರ ಹಣ ಇರುವವರು, ಅಕ್ರಮವಾಗಿ ಹಣ ಹಂಚುವ ವ್ಯವಸ್ಥಿತ ಜಾಲ ಸೃಷ್ಠಿಸುವವರು ಮಾತ್ರ ಚುನಾವಣೆ ಗೆಲ್ಲುವ ಸಂದರ್ಭವಿದು. ಇದು ಬದಲಾಗಬೇಕು, ಇಲ್ಲವಾದಲ್ಲಿ ಜನರು ದುರ್ಭರ ದಿನಗಳನ್ನು ಎದುರಿಸುವ ದಿನಗಳು ದೂರವಿಲ್ಲ. ಜನರು ತಮಗಾಗಿ ಬದಲಾಗಬೇಕು. ಹಿಂದುಳಿದ ಪ್ರದೇಶ ಎಂದು ಎಷ್ಟು ದಶಕಗಳವರೆಗೆ ಹಣೆಪಟ್ಟಿ ಹೊತ್ತುಕೊಳ್ಳುತ್ತೀರ? ರಾಜ್ಯದ ಮೂರೂ ಪ್ರಮುಖ ಪಕ್ಷಗಳು ಅಭಿವೃದ್ಧಿ ಹೆಸರಿನಲ್ಲಿ ಸ್ವಯಂ ಅಭಿವೃದ್ಧಿ ಮಾಡಿಕೊಳ್ಳುತ್ತಿವೆ. ಜನರ ಮತ್ತು ಕ್ಷೇತ್ರದ ದುಸ್ಥಿತಿಯ ಬಗ್ಗೆ ಗಮನ ಹರಿಸದೆ ಕೇವಲ ಅಭಿವೃದ್ಧಿ ಹೆಸರಿನಲ್ಲಿ ಪಕ್ಷಾಂತರ ಮಾಡುವುದೇ ರಾಜಕೀಯ ಎಂದು ಭಾವಿಸಿದ್ದಾರೆ. ಆದ್ದರಿಂದ ಜೆಸಿಬಿ ಪಕ್ಷಗಳಿಗೆ ತಿಲಾಂಜಲಿ ಇಟ್ಟು, ಉತ್ತಮ ವಿಚಾರಗಳನ್ನು ಹೊಂದಿರುವ, ಜನಪರ ಕಾಳಜಿ ಇರುವ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷಕ್ಕೆ ಮಸ್ಕಿ ಜನರು ಮತ ನೀಡಬೇಕು ಎಂದು ಮನವಿ ಮಾಡಿದ್ದಾರೆ.





