“ ಅಲ್ಲೇನು ಸಾವಿರಾರು ವಿದಾರ್ಥಿಗಳು ವ್ಯಾಸಂಗ ಮಾಡುತ್ತಿದ್ದರೆ ಅಲ್ಲಿಯೇ ಶಾಲೆ ಹಾಗೂ ಸ್ಮಾರಕ ನಿರ್ಮಿಸಲು ಒಪ್ಪಬಹುದಿತ್ತು ” (ಆಂದೋಲನ 29-6-21) ಎಂದು ಹೇಳುವ ಮೂಲಕ ತಮ್ಮ ವಿವೇಕ ಸ್ಮಾರಕದ ಯೋಜನೆಯನ್ನು ಸಮರ್ಥಿಸಿಕೊಳ್ಳುವ ಮುನ್ನ, ಮೈಸೂರು ರಾಮಕೃಷ್ಣ ಆಶ್ರಮದ ಅಧ್ಯಕ್ಷರಾದ ಸ್ವಾಮಿ ಮುಕ್ತಿದಾನಂದರು “ ಶಾಲೆ ”ಎನ್ನುವುದು ಅಂಕಿಸಂಖ್ಯೆಗಳನ್ನೊಳಗೊಂಡ ಮಣ್ಣು ಗಾರೆಗಳ ಕಟ್ಟಡ ಮಾತ್ರವೇ ಅಲ್ಲ ಎನ್ನುವುದನ್ನೂ ಅರ್ಥಮಾಡಿಕೊಳ್ಳಬೇಕಿತ್ತು. ಮಹಾರಾಣಿ ಎನ್‍ಟಿಎಂಎಸ್ ಶಾಲೆಯ ಹಲವು ವೈಶಿಷ್ಟ್ಯಗಳನ್ನೂ ಗಮನಿಸಬೇಕಿತ್ತು. ಹೆಣ್ಣು ಮಕ್ಕಳಿಗೆ ಶಿಕ್ಷಣದ ಅವಕಾಶವೇ ಇಲ್ಲದಿದ್ದ ಕಾಲದಲ್ಲಿ ರಾಜಪ್ರಭುತ್ವವೊಂದು ಹೆಣ್ಣು ಮಕ್ಕಳಿಗಾಗಿಯೇ ಸ್ಥಾಪಿಸಿದ ಒಂದು ಸಂಸ್ಥೆ ಇದು.

ಮತಧಾರ್ಮಿಕ-ಆಧ್ಯಾತ್ಮಿಕ- ಸಾಂಸ್ಕೃತಿಕ ನೆಲೆಯಲ್ಲಿ ಇದು ಒಂದು ಸ್ಮಾರಕ ಎನಿಸದಿರಬಹುದು ಆದರೆ, ಜನಸಂಸ್ಕೃತಿ ಎನ್ನುವುದೊಂದಿದೆಯಲ್ಲವೇ ? ಆ ಜನಸಂಸ್ಕೃತಿಯ ನೆಲೆಯಲ್ಲಿ ಇದು ಐತಿಹಾಸಿಕ ಸ್ಮಾರಕ ಎನಿಸಿಕೊಳ್ಳುತ್ತದೆ. ವಾಣಿಜ್ಯೀಕರಣಗೊಂಡ ಶೈಕ್ಷಣಿಕ ವ್ಯವಸ್ಥೆಯಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳ ಸಂಖ್ಯೆಯೇ ಒಂದು ಶಿಕ್ಷಣ ಸಂಸ್ಥೆಯ ಔನ್ನತ್ಯವನ್ನು ನಿರ್ಧರಿಸುತ್ತದೆ. ಆದರೆ ಅದು ಇಂತಹ ಒಂದು ಉನ್ನತ ಆದರ್ಶ ಶಾಲೆಗೆ ಅನ್ವಯಿಸುವುದಿಲ್ಲ. ಶಾಲೆ ಎನ್ನುವುದು ಒಂದು ಸಂಸ್ಕೃತಿಯ ನೆಲೆ, ಒಂದು ಸಮಾಜವನ್ನು ಬೌದ್ಧಿಕವಾಗಿ ಉನ್ನತ ಮಟ್ಟಕ್ಕೆ ಕೊಂಡೊಯ್ಯುವ ಒಂದು ಸಾಧನ. ಕಿಟಕಿ, ಬಾಗಿಲು, ಗಾಜು , ನೆಲಹಾಸು ಇವೆಲ್ಲವೂ ಅಲಂಕಾರಿಕ ಪರಿಕರಗಳು. ‘ ಶಾಲೆ ’ಯಲ್ಲಿ ಅಡಗಿರುವುದು ಸಮಾಜದ ಒಂದು ವರ್ಗದ ಆಶಯಗಳು ಮತ್ತು ಭವಿಷ್ಯ.

ಎನ್‍ಟಿಎಮ್‍ಎಸ್ ಶಾಲೆಯ ಉಳಿವಿಗಾಗಿ ಹೋರಾಡುತ್ತಿರುವವರು ಯಾವುದೋ ಒಂದು ನಿರ್ದಿಷ್ಟ ಸಂಘಟನೆ ಅಥವಾ ಸಿದ್ಧಾಂತಕ್ಕೆ ಜೋತುಬಿದ್ದವರಲ್ಲ. ಈ ಹೋರಾಟದ ಆಶಯ ವಿವೇಕ ಸ್ಮಾರಕವನ್ನು ವಿರೋಧಿಸುವುದೂ ಅಲ್ಲ, ಶಾಲೆಯನ್ನು ಉಳಿಸುವುದಷ್ಟೇ ಅಲ್ಲವೇ ? “ ನಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ಮಾಡುತ್ತೇವೆ, ವಿರೋಧಾಭಾಸದಲ್ಲಿಯೇ ಕೆಲವರು ಬಳಲುತ್ತಿದ್ದರೆ ನಾವೇನು ಮಾಡಲಾದೀತು ? ನಾವೇನು ಪಾಕಿಸ್ತಾನದವರಂತೆ ವಿರೋಧದ ವ್ಯಕ್ತಿಗಳಾ ಗೊತ್ತಾಗುತ್ತಿಲ್ಲ ” (ಆಂದೋಲನ 29-6-21) ಎಂದು ಮುಕ್ತಿದಾನಂದರು ಅಲವತ್ತುಕೊಂಡಿದ್ದಾರೆ. ಇಲ್ಲಿ ಪಾಕಿಸ್ತಾನದ ಪ್ರಸ್ತಾಪ ಏಕೆ ಬಂದಿದೆ ? ಕೆಲವು ದಿನಗಳ ಹಿಂದೆ ಕನ್ನಡದ ಹಿರಿಯ ಸಾಹಿತಿಗಳು ಸ್ಮಾರಕದ ಪರ ವಹಿಸಿ ಮಾತನಾಡಿದಾಗಲೂ ಇದೇ ಧ್ವನಿ ಕೇಳಿಬಂದಿತ್ತು. ಪ್ರತಿಭಟನಕಾರರು “ ಯಾವುದೇ ಘನ ಉದ್ದೇಶ ಇದ್ದರೆ ವಿರೋಧಿಸಲಿ ” ಎಂದು ಮುಕ್ತಿದಾನಂದರು ಹೇಳಿದ್ದಾರೆ. ರಾಜಪ್ರಭುತ್ವದಲ್ಲಿ ಆರಂಭಿಸಲಾದ ಪ್ರಪ್ರಥಮ ಬಾಲಕಿಯರ ಕನ್ನಡ ಶಾಲೆಯನ್ನು ಉಳಿಸಿ ಎನ್ನುವುದು ಘನ ಉದ್ದೇಶ ಅಲ್ಲವೇ ? ಇಲ್ಲಿ ರಾಮಕೃಷ್ಣ ಆಶ್ರಮದ ಆಶಯಗಳನ್ನಾಗಲೀ, ವಿವೇಕಾನಂದರ ಆಶಯಗಳನ್ನಾಗಲೀ ಯಾರೂ ವಿರೋಧಿಸುತ್ತಿಲ್ಲ.
ಹಾಗೊಂದು ವೇಳೆ ವಿವೇಕಾನಂದರ ಆಶಯಗಳನ್ನು ಸಾಕಾರಗೊಳಿಸುವುದೇ ರಾಮಕೃಷ್ಣ ಆಶ್ರಮದ ಧ್ಯೇಯ ಆಗಿದ್ದರೆ, ಶಾಲೆಯನ್ನು ಕೆಡವಿ ಸ್ಮಾರಕ ಕಟ್ಟಿಸುತ್ತಿರಲಿಲ್ಲ. ವಿವೇಕಾನಂದರು ಓರ್ವ ಜಂಗಮ ಪರಿವ್ರಾಜಕರು, ಸ್ಥಾವರ ಪ್ರತಿಪಾದಕರಲ್ಲ ಎನ್ನುವುದು ಅವರ ಬರಹಗಳಲ್ಲೇ ವ್ಯಕ್ತವಾಗುವುದಲ್ಲವೇ ? “ ಯಾವುದೇ ಕುಲ, ಗೋತ್ರ ತಾರತಮ್ಯವಿಲ್ಲದೆ ಕೆಲಸ ಮಾಡಿ ” (ಆಂದೋಲನ 29-6-21) ಎನ್ನುವ ಬಸವಣ್ಣನವರ ಆದರ್ಶವನ್ನೂ ಮಾನ್ಯರು ಉದ್ಧರಿಸಿದ್ದಾರೆ. ಬಸವಣ್ಣನವರ ಆಶಯದಂತೆಯೇ ವಿವೇಕಾನಂದರೂ ಸ್ಥಾವರ ವಿರೋಧಿ ಆಗಿದ್ದರಲ್ಲವೇ ? ಶಿಕ್ಷಣ ಮತ್ತು ಸಂಸ್ಕೃತಿಯ ಮುನ್ನಡೆಗೆ ನಾಲ್ಕು ಗೋಡೆಗಳ ಕಟ್ಟಡ ಕೇವಲ ಸಾಂಕೇತಿಕ ಪ್ರತಿಷ್ಠೆಯಷ್ಟೇ ಅಲ್ಲವೇ ? ವಿವೇಕಾನಂದರ ವಿಚಾರಗಳನ್ನು ಮುಂದಿನ ಪೀಳಿಗೆಗೆ ಪರಿಚಯಿಸಲು ಅಡ್ಡಿ ಮಾಡುತ್ತಿರುವವರಾರು ? ಆದರೆ ಈ ಸದುದ್ದೇಶಕ್ಕಾಗಿ ಐತಿಹಾಸಿಕ ಹೆಣ್ಣುಮಕ್ಕಳ ಜ್ಞಾನದೇಗುಲವನ್ನು ಸಮಾಧಿ ಮಾಡುವುದು ವಿವೇಕರ ಆದರ್ಶಕ್ಕೆ ನಿಲುಕಲು ಸಾಧ್ಯವೇ ?

ಅರ್ಧಸತ್ಯಗಳು ತಾತ್ಕಾಲಿಕವಾಗಿ ಫಲಪ್ರದವಾಗಬಹುದು ಆದರೆ ಶಾಶ್ವತವಾದ ಗೋರಿಗಳನ್ನು ನಿರ್ಮಿಸಿಬಿಡುತ್ತವೆ ಎನ್ನುವುದನ್ನೂ ಸ್ವಾಮಿ ಮುಕ್ತಿದಾನಂದರು ಅರ್ಥಮಾಡಿಕೊಳ್ಳಬೇಕಿದೆ. ವಿವೇಕಾನಂದರು ಈಗ ಶಾಲೆ ಇರುವ ಸ್ಥಳದಲ್ಲೇ ತಂಗಿದ್ದರು ಎನ್ನಲು ಚಾರಿತ್ರಿಕ ದಾಖಲೆಗಳಿಲ್ಲ. ಪಕ್ಕದ ನಿರಂಜನ ಮಠದಲ್ಲಿ ತಂಗಿದ್ದರು ಎನ್ನಲಾಗಿದೆ. ದಾಖಲೆಗಳ ಪ್ರಕಾರ ಅದೂ ಸಹ ಅರ್ಧಸತ್ಯವೇ ಆಗಿದ್ದು, ಈಗಿನ ಸದ್ವಿದ್ಯಾ ಶಾಲೆ ಇರುವ ಸ್ಥಳದಲ್ಲಿ ತಂಗಿದ್ದರು ಎಂಬ ಮಾಹಿತಿಯೂ ದೊರೆತಿದೆ. ಇದು ರಾಮಕೃಷ್ಣ ಆಶ್ರಮದವರಿಗೆ ತಿಳಿಯದ ವಿಷಯವೇನಲ್ಲ ಅಲ್ಲವೇ ? ಹೀಗಿದ್ದರೂ ಶಾಲೆಯನ್ನು ಕೆಡವುವ ದುಸ್ಸಾಹಸವೇಕೆ ? ಕೆಲವೇ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದರೆ ವಿವೇಕಾನಂದರ ಆಶಯದಂತೆಯೇ ಆ ಶಾಲೆಯಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ವ್ಯಾಸಂಗ ಮಾಡುವಂತಹ ಸತ್ಕಾರ್ಯವನ್ನೂ ಮಾಡಬಹುದಲ್ಲವೇ ?
ಎನ್‍ಟಿಎಂಎಸ್ ಶಾಲಾ ಕಟ್ಟಡಕ್ಕೆ ಹೊಂದಿಕೊಂಡಂತೆ ಇರುವ ಸ್ಥಳದಲ್ಲಿ ವಿವೇಕಾನಂದರು ತಂಗಿದ್ದರು ಎನ್ನುವುದೇ ಆದರೆ ಆ ಸ್ಥಳದಲ್ಲೇ ಸ್ಮಾರಕವನ್ನು ನಿರ್ಮಿಸಬಹುದಲ್ಲವೇ ? ಸ್ಮಾರಕ ನಿರ್ಮಿಸಲು ಇಂತಿಷ್ಟೇ ಅಳತೆಯ ಜಾಗ ಬೇಕೆಂಬ ನಿಯಮವೇನಾದರೂ ಇದೆಯೇ ? ಒಂದು ಪುತ್ಥಳಿಯೇ ಸ್ಮಾರಕವಾಗಿಬಿಡುತ್ತದೆ ಅಲ್ಲವೇ ? ಈ ಸ್ಥಾವರ ರೂಪಿ ಪುತ್ಥಳಿಗೂ ಬಡವರ ಪರವಾಗಿ ಕೆಲಸವ ಮಾಡುವ ಜಂಗಮ ಕಾಯಕಕ್ಕೂ ಇರುವ ಸಂಬಂಧ ಕೇವಲ ಸಾಂಸ್ಥಿಕವಷ್ಟೇ ಅಲ್ಲವೇ ? ನೂರು ವರ್ಷದ ಇತಿಹಾಸ ಇರುವ ರಾಮಕೃಷ್ಣ ಆಶ್ರಮ 140 ವರ್ಷಗಳ ಇತಿಹಾಸ ಇರುವ ಒಂದು ಜ್ಞಾನ ದೇಗುಲವನ್ನು ಕೆಡವಲು “ ವಿವೇಕಾನಂದರ ಆದರ್ಶ ಮತ್ತು ಆಶಯಗಳನ್ನು ” ಗುರಾಣಿಯಾಗಿ ಬಳಸಿಕೊಳ್ಳುವುದು ಉಚಿತವೇ ? ಇದು ಆತ್ಮಾವಲೋಕನದ ವಿಚಾರ.
ಸ್ವಾಮಿ ಮುಕ್ತದಾನಂದ ಅವರೇ ಹೇಳಿರುವಂತೆ, ಸುಸಂಸ್ಕೃತ, ಪ್ರಗತಿಶೀಲ ಸಮಾಜದ ನಿರ್ಮಾಣಕ್ಕೆ ಹೋರಾಡುತ್ತಿರುವ ಮನಸುಗಳೇ ಚಾರಿತ್ರಿಕ ಜ್ಞಾನ ದೇಗುಲವನ್ನು ಉಳಿಸಿಕೊಳ್ಳಲೂ ಹೋರಾಡುತ್ತಿವೆ. ಈ ಸಹೃದಯಿ, ಸಂವೇದನಾಶೀಲ ಮನಸುಗಳು ವಿರೋಧಿಸುತ್ತಿರುವುದು ವಿವೇಕ ಸ್ಮಾರಕವನ್ನಲ್ಲ, ಸ್ಮಾರಕದ ಹೆಸರಿನಲ್ಲಿ ಶಾಲೆಯನ್ನು ಕೆಡವಿ ಸಮಾಧಿ ಮಾಡುವ ಯೋಜನೆಯನ್ನು. ವಿವೇಕಾನಂದರಂತಹ ಜಂಗಮ ಪರಿವ್ರಾಜಕ ಕಾಲಿಟ್ಟ ಅಥವಾ ತಂಗಿದ್ದ ಸ್ಥಳದಲ್ಲೇ ಭವ್ಯ ಸ್ಮಾರಕವನ್ನು ಕಟ್ಟಬೇಕೆಂಬ ಆಶಯವಿದ್ದರೆ, ಪಕ್ಕದಲ್ಲೇ ಇರುವ ಶಾಲಾ ಕಟ್ಟಡದಲ್ಲಿ 140 ವರ್ಷಗಳಲ್ಲಿ ಲಕ್ಷಾಂತರ ಜೀವಗಳು ಕಾಲಿಟ್ಟು, ತಂಗಿದ್ದು ತಮ್ಮ ವಿದ್ಯಾರ್ಜನೆಯ ಮೂಲಕ ಜಗತ್ತನ್ನು ಬೆಳಗಿವೆ ಅಲ್ಲವೇ ? ವಿವೇಕಾನಂದರು ಪ್ರತಿನಿಧಿಸಿದ್ದು ಈ ಜೀವಗಳನ್ನೇ ಹೊರತು ನಾಲ್ಕು ಗೋಡೆಗಳ ನಡುವೆ ಕುಳಿತು ಧ್ಯಾನಸ್ಥರಾಗುವವರನ್ನಲ್ಲ. ಇದು ಪೂರ್ಣ ಸತ್ಯ.

ಈ ಪೂರ್ಣಸತ್ಯವನ್ನು ಜನರಿಗೆ ತಿಳಿಸುವುದು ವಿವೇಕಾನಂದರ ಆಶಯಗಳನ್ನು ಸಾಕಾರಗೊಳಿಸಲು ಇಚ್ಚಿಸುವ ಸಂಸ್ಥೆಗಳ ಕಾಯಕವಾಗಬೇಕಲ್ಲವೇ ? ಇಲ್ಲಿ ಸಾಕಾರಗೊಳ್ಳಬೇಕಿರುವುದು ವಿವೇಕಾನಂದರ ಆಶಯಗಳೇ ಹೊರತು, ರಾಮಕೃಷ್ಣ ಆಶ್ರಮದ ಆಶಯಗಳಲ್ಲ ಅಲ್ಲವೇ ? ಆಶ್ರಮದ ಆಶಯಗಳಿಗೆ ಸಾಂಸ್ಥಿಕ ನೆಲೆಗಳಿರುತ್ತವೆ. ವಿವೇಕರ ಆಶಯಗಳಿಗೆ ಸಾಂಸ್ಕೃತಿಕ ನೆಲೆಗಳಿರುತ್ತವೆ. ಸಾಂಸ್ಥಿಕ ನೆಲೆಗಳು ಸ್ಥಾವರಗಳಲ್ಲಿ ಕೊನೆಗೊಳ್ಳುತ್ತವೆ. ಸಾಂಸ್ಕೃತಿಕ ನೆಲೆಗಳು ಜನಸಾಮಾನಸದ ನಡುವೆ ಜಡಗಟ್ಟದೆ ಪ್ರವಹಿಸುತ್ತಲೇ ಇರುತ್ತವೆ. ಇದು ಸುಸಂಸ್ಕೃತ (?) ಮತ್ತು ಸಂವೇದನಾಶೀಲ ಸಮಾಜದ ನಿರ್ಮಾಣಕ್ಕೆ ಪೂರಕವಾಗುತ್ತದೆ. ವಿವೇಕಾನಂದರ ಆದರ್ಶ ಮತ್ತು ಆಶಯಗಳನ್ನು ಆರಾಧಿಸುವವರಿಗೆ ಈ ಪೂರ್ಣ ಸತ್ಯ ಅರಿವಾಗಿದ್ದರೆ ಇಂದು ಮೈಸೂರಿನ ಸಾಂಸ್ಕೃತಿಕ ಮನಸುಗಳು ಬೀದಿಗಿಳಿದು ಹೋರಾಟ ಮಾಡುವ ಅವಶ್ಯಕತೆಯೇ ಇರುತ್ತಿರಲಿಲ್ಲ. ಅಲ್ಲವೇ ಸ್ವಾಮಿ ? ಯೋಚಿಸಿ.