ಉಜ್ವಲ ಜ್ಯೋತಿ ಯೋಜನೆ ಮೂಲಕ ಭಾರತದ ಹಳ್ಳಿ-ಹಳ್ಳಿಗಳಿಗೂ ವಿದ್ಯುತ್ ಸಂಪರ್ಕ ಕಲ್ಪಿಸಿದ್ದೇವೆ ಎಂದು ಕೇಂದ್ರ ಸರ್ಕಾರ ಬೀಗುತ್ತಿರುವ ನಡುವೆಯೇ ದೇಶದ ಪ್ರತಿಷ್ಟಿತ ನಗರವೊಂದರಲ್ಲಿ ವಿದ್ಯುತ್ ಸಂಪರ್ಕವೇ ಇಲ್ಲದೆ, ಕನಿಷ್ಟ ಮೂಲಭೂತ ಸೌಕರ್ಯಗಳೂ ಇಲ್ಲದೆ ದಿನದೂಡುತ್ತಿರುವ 300ಕ್ಕೂ ಹೆಚ್ಚು ಕುಟುಂಬಗಳು ಇಲ್ಲಿವೆ, ಅದೂ ಸರ್ಕಾರ ನಿರ್ಮಿಸಿ ಕೊಟ್ಟ ವಸತಿ ಸಮುಚ್ಛಯದಲ್ಲೇ ಈ ಕುಟುಂಬಗಳು ವಾಸಿಸುತ್ತಿವೆ ಎಂದರೆ ಅಚ್ಚರಿಯಾಗಬಹುದು.
ಹೌದು, ಇದು ನಿಜ. ಭಾರತದ ಆ ಪ್ರತಿಷ್ಟಿತ ನಗರ ಬೇರೆ ಯಾವುದೂ ಅಲ್ಲ, ಕರ್ನಾಟಕದ ರಾಜಧಾನಿ ನಮ್ಮ ಬೆಂಗಳೂರು. ಬೆಂಗಳೂರಿನ ಹೃದಯಭಾಗ ಮೆಜೆಸ್ಟಿಕಿಂದ ಆಸುಪಾಸು 20 ಕಿಮೀ ಅಂತರದಲ್ಲಿರುವ ಸರ್ಜಾಪುರ ಮುಖ್ಯ ರಸ್ತೆಯ ಸುಳಿಕುಂಟೆಯಲ್ಲಿ ಇಂತಹದ್ದೊಂದು ಅವ್ಯವಸ್ಥೆಯ ಆಗರದಂತಿರುವ ವಸತಿ ಸಮುಚ್ಚಯವಿದೆ. ಇಲ್ಲಿಗೆ ಇದುವರೆಗೂ ವಿದ್ಯುತ್ ಸಂಪರ್ಕವನ್ನೇ ಕೊಟ್ಟಿಲ್ಲ ಎನ್ನುವುದೇ ದುರಂತ. ಬಿಬಿಎಂಪಿ ಅಧಿಕಾರಿಗಳ ಮುತುವರ್ಜಿಯ ಕೊರತೆಯಿಂದ ಅತಿ ಹಿಂದುಳಿದ ವರ್ಗಕ್ಕೆ ಸೇರಿದ ಕನಿಷ್ಟ 300 ಕ್ಕೂ ಹೆಚ್ಚು ಕುಟುಂಬಗಳು ಅಭದ್ರತೆಯ ಕತ್ತಲಿನಲ್ಲಿ ಬಾಳು ದೂಡುತ್ತಿದೆ.
ಒಂದು ಕಡೆ ಕೊಳಚೆ ನೀರು ನಿಂತ ಚರಂಡಿ, ನೀರು ಬಾರದ ನಳ್ಳಿ, ಸಾರಿಗೆ ವ್ಯವಸ್ಥೆಯಿಲ್ಲದ ರಸ್ತೆ, ತುಂಬಿ ನಿಂತ ಸೆಪ್ಟಿಕ್ ಟ್ಯಾಂಕುಗಳು, ಅದರಲ್ಲಿ ತತ್ತಿ ಹಾಕಿ ರೋಗ ಹರಡಲು ಸಜ್ಜಾಗಿರುವ ಸೊಳ್ಳೆಗಳು.. ಮನುಷ್ಯ ವಾಸಿಸಲು ಬೇಕಾದ ಮೂಲಭೂತ ಸೌಕರ್ಯ ಹೊರತುಪಡಿಸಿ ಉಳಿದ ಎಲ್ಲವೂ ಇಲ್ಲಿ ಇದೆ.!

ಕರೋನಾದಿಂದಾಗಿ ಮುಚ್ಚಲ್ಪಟ್ಟ ಶಾಲೆ, ನಂತರ ತೆರೆದುಕೊಂಡ ಆನ್‌ಲೈನ್ ಶಿಕ್ಷಣವೆಂಬ ಪದ್ಧತಿ ಬಡವರ ಮಕ್ಕಳನ್ನು ಹೇಗೆ ಶಿಕ್ಷಣ ವಂಚಿತರನ್ನಾಗಿಸಿತು ಎನ್ನುವುದಕ್ಕೆ ಇಲ್ಲಿ ವಾಸಿಸುವ ಮಕ್ಕಳು ತಾಜಾ ಉದಾಹರಣೆ. ಸ್ಮಾರ್ಟ್‌ಫೋನ್ ಹೊಂದಿಸಿಕೊಳ್ಳಲಾಗದ ಈ ಮಕ್ಕಳು, ಹೇಗಾದರೂ ಸ್ಮಾರ್ಟ್‌ಫೋನ್ ಹೊಂದಿಸಿದರೂ ತರಗತಿಗೆ ಹಾಜರಾಗುವಂತಿಲ್ಲ. ಯಾಕೆಂದರೆ, ಮೊಬೈಲ್ ಚಾರ್ಜಿಗಿಡಲೂ ಈ ಮಕ್ಕಳಿಗೆ ವ್ಯವಸ್ಥೆಗಳಿಲ್ಲ. ವಿದ್ಯುತ್ ಸಂಪರ್ಕವೇ ಆಗದ ಮನೆಯಲ್ಲಿರುವ ಮಕ್ಕಳು ಮೊಬೈಲನ್ನಾದರೂ ಹೇಗೆ ಚಾರ್ಜ್ ಮಾಡುತ್ತಾರೆ? ಹಾಗಾಗಿಯೇ ಕೆಲವು ವಿಷಯಗಳಲ್ಲಿ ಅನುತ್ತೀರ್ಣಗೊಳ್ಳಬೇಕಾಯಿತು ಎಂದು ಅವಲತ್ತುಕೊಳ್ಳುತ್ತಾರೆ ಇಲ್ಲಿನ ಕೆಲವು ಮಕ್ಕಳು.
ಇನ್ನು ಶಾಲೆಗೆ ಹೋಗಬೇಕೆಂದಾದರೂ ಇವರಿಗೆ ಸರಿಯಾದ ವ್ಯವಸ್ಥೆಯಿಲ್ಲ. ಶಾಲೆಗೆ ತಲುಪಬೇಕಾದ ಬಸ್ ಹಿಡಿಯಬೇಕಾದರೆ ತಮ್ಮ ಮನೆಗಳಿಂದ ಸುಮಾರು ಎರಡು ಮೈಲಿ ನಡೆಯಬೇಕಿದೆ ಈ ಮಕ್ಕಳು. ಇನ್ನು ಆಸ್ಪತ್ರೆಗೆ ತಲುಪುವುದು ಒಂದು ಸಾಹಸವಾಗಿಯೇ ಉಳಿದಿದೆ.
ಪ್ರತಿಧ್ವನಿಯೊಂದಿಗೆ ಮಾತನಾಡಿದ ಸ್ಥಳೀಯ ನಿವಾಸಿ ಉಷಾ, ನನಗೆ ಬಿಪಿ ಇದೆ, ಶುಗರ್ ಇದೆ. ಡಾಕ್ಟರ್ ಕೊಟ್ಟಿರುವ ಮಾತ್ರೆಗಳನ್ನು ಫ್ರಿಡ್ಜ್‌ನಲ್ಲಿಡಬೇಕು. ನಮ್ಮ ಮನೆಗಳಿಗೆ ಕರೆಂಟ್ ಇನ್ನೂ ಕೊಟ್ಟಿಲ್ಲ, ನಾವು ಹೇಗೆ ಮಾತ್ರೆಗಳನ್ನು ಇಟ್ಟುಕೊಳ್ಳಬೇಕು? ನಮ್ಮ ಬದುಕಿನ ಅರ್ಧ ಆಯುಷ್ಯ ನಮ್ಮ ಮನೆಗಳ ಸಮಸ್ಯೆಯನ್ನು ಬಗೆಹರಿಸಿ ಎಂದು ಅಲೆದಾಡುವುದರಲ್ಲೇ ಮುಗಿದಿದೆ ಎನ್ನುತ್ತಾರೆ.
ಶಾಪಿಂಗ್ ಮಾಲ್ ಕಟ್ಟಲು ನಮ್ಮನ್ನು ಹೊರಹಾಕಲಾಯಿತು
ನಮ್ಮ ಬದುಕು ಹೀಗೆ ಇರಲಿಲ್ಲ. ಒಂದು ಹತ್ತು ಹದಿನೈದು ವರ್ಷಗಳ ಹಿಂದೆ ಕೋರಮಂಗಲದ ಪಾಸ್‌ಪೋರ್ಟ್ ಕಛೇರಿಯ ಬಳಿ ಇದ್ದ ನಮ್ಮನ್ನು ಶಾಪಿಂಗ್ ಮಾಲ್ ಕಟ್ಟಲೆಂದು ಸ್ಥಳಾಂತರಿಸಲಾಯಿತು. ಹಾಗೆ ಸ್ಥಳಾಂತರಿಸಿದ ಮೇಲೆ ನಮ್ಮ ಬದುಕು ನಾಯಿಪಾಡಾಗಿದೆ ಎಂದು ಕಣ್ಣೀರು ಹರಿಸುತ್ತಾರೆ ಅವಲತ್ತುಕೊಂಡರು.
2012ರಲ್ಲಿ 18 ತಿಂಗಳೊಳಗೆ ಹೊಸ ವಸತಿಯನ್ನು ಏರ್ಪಾಡು ಮಾಡುವುದಾಗಿ ನಂಬಿಸಿ ಕೋರಮಂಗಲದ EWS ಕ್ವಾಟ್ರಸ್‌ನಿಂದ ಅಲ್ಲಿನ 1200 ಕ್ಕೂ ಹೆಚ್ಚು ಕುಟುಂಬಗಳನ್ನು ತೆರವುಗೊಳಿಸಿ, ಅವರ ಮನೆಗಳನ್ನು ಒಡೆದು ಹಾಕಲಾಗಿತ್ತು. ಹಾಗೂ ಸರ್ಕಾರದ ವತಿಯಿಂದ ಉಚಿತ ಮನೆ ನಿರ್ಮಿಸಲು ಕಟ್ಟಿಕೊಡಲು ಟೆಂಡರ್ ಕೂಡಾ ಕರೆಯಲಾಗಿತ್ತು. ಟೆಂಡರಿನಲ್ಲಿ ಇರುವಂತೆ 2013ರೊಳಗೆ ಅವರಿಗೆ ಹೊಸ ಮನೆಗಳನ್ನು ನೀಡಬೇಕಾಗಿತ್ತು. ಆದರೆ, ದಶಕವೇ ಕಳೆದರೂ ಅಧಿಕೃತವಾಗಿ ನಿವಾಸಗಳ ಹಂಚಿಕೆ ಇನ್ನೂ ಪೂರ್ಣಗೊಳಿಸಿಲ್ಲ.
ಸೂಕ್ತ ಪುನರ್ವಸತಿ ಕಲ್ಪಿಸದೆ ಏಕಾಏಕಿ ತೆರವುಗೊಳಿಸಿದ ಪರಿಣಾಮ ಬಹುತೇಕ ಕುಟುಂಬಗಳು ಫುಟ್‌ಪಾತನ್ನೇ ನೆಚ್ಚಿಕೊಳ್ಳುವಂತಾಗಿತ್ತು. ಹೀಗೆ ಫುಟ್‌ಪಾತಿಗೆ ಬಿದ್ದ ನೂರಾರು ಕುಟುಂಬಗಳು ತಾತ್ಕಾಲಿಕ ಶೆಡ್, ಗುಡಿಸಲುಗಳನ್ನು ಕಟ್ಟಿ ವಾಸ ಶುರು ಹಚ್ಚಿಕೊಂಡಿದ್ದರು. ಆದರೆ, ನೀರು ಮೊದಲಾದ ಮೂಲಭೂತ ಸೌಕರ್ಯಗಳಿಲ್ಲದ ಕಾರಣ ಇಲ್ಲಿನ ಹಲವಾರು ಮಂದಿ ಖಾಯಿಲೆ ಪೀಡಿತರಾಗಿ ಅಸುನೀಗಿದರು. ಫುಟ್‌ಪಾತಿನಲ್ಲಿದ್ದ ವೇಳೆ ಕನಿಷ್ಟ 20% ನಮ್ಮ ಜನ ಖಾಯಿಲೆಯಿಂದಲೇ ಮೃತಪಟ್ಟರು ಎಂದು ಮೆಲುಕು ಹಾಕುತ್ತಾರೆ ಇಲ್ಲಿನ ನಿವಾಸಿ ಇರ್ಫಾನ್.

ಖಾಯಿಲೆ ಹಿಡಿದು ಜನರು ಹುಳಗಳಂತೆ ಸಾಯುತ್ತಿರುವಾಗ, ನರಕ ಸದೃಶ ಬದುಕು ಬಾಳುತ್ತಿರುವಾಗಲೂ ಇವರಿಗಾಗಿ ನಿರ್ಮಿಸಿರುವ ಮನೆಗಳು ಇನ್ನೂ ಖಾಲಿಯಿದ್ದವು. ಇದನ್ನು ಕಂಡು ಇವರ ಪರ ನ್ಯಾಯಾಲಯದಲ್ಲಿ ದಾವೆ ಹೂಡಿರುವ ಅಡ್ವಕೇಟ್ ಗೋಪಾಲ್ ಹಾಗೂ ಇವರ ಹಂಚಿಕೆಯಾಗದಿದ್ದರೂ ಪರ್ವಾಗಿಲ್ಲ, ಬಿಸಿಲಿಗೆ, ಮಳೆಗೆ ಸೂರಾಗುತ್ತದೆ, ಹೋಗಿ ಸುಲಿಕುಂಟೆಯಲ್ಲಿ ನಿಮಗಾಗಿ ನಿರ್ಮಿಸಲಾಗಿರುವ ನಿವಾಸದಲ್ಲಿ ವಾಸಿಸುವಂತೆ ಸಲಹೆ ನೀಡುತ್ತಾರೆ. ಅಡ್ವಕೇಟ್ ಸಲಹೆಯಂತೆ ಹಾಗೂ ಬಿಆರ್ ಅಂಬೇಡ್ಕರ್ ಯೂತ್ ಸೋಷಿಯಲ್ ವೆಲ್ಫೇರ್ ಅಸೋಶಿಯೇಷನ್ ಅಧ್ಯಕ್ಷ ಲೂಯಿಸ್ ಅವರ ಸಹಾಯದಿಂದ ಕಳೆದ ಐದಾರು ವರ್ಷಗಳಿಂದ ಮುನ್ನೂರಕ್ಕೂ ಹೆಚ್ಚು ಕುಟುಂಬಗಳು ಹೊಸದಾಗಿ ನಿರ್ಮಿಸಿರುವ ಸುಲಿಕುಂಟೆ EWS ಕ್ವಾಟ್ರಸ್‌ನಲ್ಲಿ ಬದುಕು ಕಟ್ಟಿಕೊಳ್ಳುತ್ತಾರೆ.
ಆದರೆ, ಹಾಗೆ ಬದುಕು ಕಟ್ಟಿಕೊಂಡ ಬಳಿಕ ಇವರಿಗೆ ಮತ್ತೊಂದು ಸಮಸ್ಯೆ ಉದ್ಭವವಾಗುತ್ತವೆ. ಸರಿಯಾದ ಒಂದೇ ಒಂದು ಕೆಲಸವೂ ನಿರಂತರವಾಗಿ ದೊರಕದೆ ಹೊಟ್ಟೆ ಬಟ್ಟೆ ಕಟ್ಟಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತದೆ.
ಅಲ್ಲಿಯವರೆಗೂ ನಗರದ ಕೇಂದ್ರ ಭಾಗದಲ್ಲೇ ಇದ್ದ ಇಲ್ಲಿಯ ಮಹಿಳೆಯರು ಸ್ಥಳೀಯ ಅಪಾರ್ಟಮೆಂಟುಗಳಲ್ಲಿ ಮನೆಕೆಲಸಕ್ಕೆ, ಇನ್ನು ಕೆಲವರು ಟೈಲರಿಂಗ್ ಮೊದಲಾದ ವೃತ್ತಿಯಲ್ಲಿ ತೊಡಗಿಸಿಕೊಂಡರೆ, ಪುರುಷರು ಪೈಂಟಿಂಗ್ ಮೊದಲಾದ ಕೂಲಿ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರು. ಇದೀಗ ಇವರಿಗೆ ಮೊದಲಿನಂತೆ ಕೆಲಸ ದೊರಕದೆ ನಾಳೆಯೇನು ಎಂಬ ಚಿಂತೆಯಲ್ಲೇ ದಿನದೂಡುವಂತೆ ಇದ್ದಾರೆ. ಅಷ್ಟಕ್ಕೂ, ಕೆಲಸಕ್ಕೆ ಹೋಗಬೇಕಾದರೂ ಕನಿಷ್ಟ ಎರಡು ಮೈಲಿ ನಡೆದು ಬಸ್ಸು ಹಿಡಿಯಬೇಕು, ಮರಳಿ ಬರುವಾಗಲೂ ಇದೇ ಅವಸ್ಥೆ. ಕರೆಂಟೇ ಇಲ್ಲದ ಇವರ ವಠಾರದ ಸುತ್ತಮುತ್ತ ಹೇಳಿಕೊಳ್ಳಲೂ ಒಂದು ಬೀದಿ ದೀಪವಿಲ್ಲ. ಕೆಲಸ ಮುಗಿಸಿ ಬರುವ ಮಹಿಳೆಯರು, ಪುರುಷರು, ಶಾಲೆ ಮುಗಿಸಿ ಬರುವ ಮಕ್ಕಳು ತಡವಾದರೆ ಪೊದೆಯಂತಿರುವ ರಸ್ತೆಗಳ ಮೂಲಕ ಕಾರ್ಗತ್ತಲಿನಲ್ಲಿ ನಡೆದೇ ಮನೆ ಸೇರಬೇಕು. ಅಲ್ಲಿನ ಕತ್ತಲಿಗೆ ಹಾಗೂ ನಿರ್ವಹನೆ ಮಾಡದ ಪೊದೆಗಳಿಂದಾಗಿ ವಿಷಪೂರಿತ ಹಾವುಗಳು ಮನೆಗಳಿಗೂ ನುಗ್ಗುತ್ತವೆ ಎಂದು ಇವರು ಅಳಲು ತೋಡುತ್ತಾರೆ. ಐದು-ಹತ್ತು ರೂ ಕೊಟ್ಟು ಕ್ಯಾಂಡಲ್ ತರಲೂ ನಮ್ಮಿಂದ ಸಾಧ್ಯವಾಗುತ್ತಿಲ್ಲ. ನಮ್ಮಂತೆಯೇ ನಮ್ಮ ಮಕ್ಕಳ ಭವಿಷ್ಯ ಕೂಡಾ ಕತ್ತಲಿನಲ್ಲೇ ಕಳೆಯಬಹುದು ಎಂಬ ಆತಂಕದಲ್ಲಿದ್ದೀವೆ ಎಂದು ಭಾವುಕರಾಗುತ್ತಾರೆ ಮೂರು ಹೆಣ್ಣು ಮಕ್ಕಳ ತಾಯಿ ರೋಸಿ.
ಅದಾಗ್ಯೂ,ಇವರಿಗೆ ನ್ಯಾಯವಾಗಿ ಸಲ್ಲಬೇಕಾದ ಯಾವುದೇ ಸೌಕರ್ಯಗಳನ್ನು ದೊರಕಿಸಿಕೊಡುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ. ಹೆಸರು ಹೇಳಲಿಚ್ಚಿಸದ ಅಧಿಕಾರಿಯೊಬ್ಬರು, ಸ್ಥಳೀಯ ಶಾಸಕರ ರಾಜಕಾರಣ ಕುತಂತ್ತ್ರದಿಂದಾಗಿ ಅಧಿಕಾರಿಗಳಿಗೂ ಸರಿಯಾಗಿ ಕೆಲಸ ಮಾಡಲಾಗುತ್ತಿಲ್ಲ ಎಂದು ಆರೋಪಿಸುತ್ತಾರೆ.
ಹ್ಯಾರಿಸ್ vs ಲಿಂಬಾವಳಿ ಪ್ರತಿಷ್ಟೆಯ ಸಮರ?
ಸುಲಿಕುಂಟೆಯಲ್ಲಿ ಕಳೆದ ಆರು ವರ್ಷಗಳಿಂದ ಈ ಕುಟುಂಬಗಳು ವಾಸಿಸುತ್ತಿವೆ. ಆದರೆ, ಇದುವರೆಗೂ ಅವರ ವೋಟರ್ ಐಡಿ ಇನ್ನೂ ಬದಲಾಗಿಲ್ಲ. ಕಳೆದ ಎರಡು ವರ್ಷಗಳ ಹಿಂದೆಯೇ ಹೊಸ ಐಡಿಗಾಗಿ ಅರ್ಜಿ ಸಲ್ಲಿಸಲಾಗಿದೆ, ಆದರೆ ಇದುವರೆಗೂ ನಮ್ಮ ಜನರಿಗೆ ನೂತನ ಕಾರ್ಡ್ ಸಿಕ್ಕಿಲ್ಲ, ಹಾಗಾಗಿ ನಾವು ಆರ್‌ಟಿಐ ಹಾಕಲು ತೀರ್ಮಾನಿಸಿದ್ದೇವೆ ಎನ್ನುತ್ತಾರೆ ಅಂಬೇಡ್ಕರ್ ಅಸೋಷಿಯೇಷನ್ ಅಧ್ಯಕ್ಷ ಲೂಯಿಸ್.
ಮೊದಲೇ ಹೇಳಿರುವಂತೆ, ಈ ಮುನ್ನೂರು ಕುಟುಂಬಗಳು ಮೊದಲು ಶಾಂತಿನಗರ ಶಾಸಕ ಹ್ಯಾರಿಸ್ ಕ್ಷೇತ್ರದಲ್ಲಿದ್ದವರು. ಇವರ ಮತಗಳು ಹ್ಯಾರಿಸ್ ಅವರಿಗೆ ಬೀಳುತ್ತಿದ್ದವು. ಈ ಮತಗಳನ್ನು ಭದ್ರಪಡಿಸಲೆಂದೇ ಇವರಿಗೆ ಇನ್ನೂ ನೂತನ ವೋಟರ್ ಐಡಿ ನೀಡಲಾಗಿಲ್ಲವೇನೋ ಎಂಬ ಅನುಮಾನಗಳು ಕೂಡಾ ವ್ಯಕ್ತವಾಗುತ್ತಿದೆ. ಯಾವುದಕ್ಕೂ ಆರ್‌ಟಿಐ ಮಾಹಿತಿ ಬಂದಮೇಲೆಯೇ ಈ ಕುರಿತು ಸ್ಪಷ್ಟ ಚಿತ್ರಣ ಸಿಗಬಹುದು.

ವಿಷಯ ಇರುವುದು ಅದಲ್ಲ. ಕೋರಮಂಗಲದ 1200 ಕ್ಕೂ ಹೆಚ್ಚು ಕುಟುಂಬಗಳನ್ನು ಅಲ್ಲಿಂದ ತೆರವುಗೊಳಿಸಿ ಇದೀಗ ಸೂಲಿಕುಂಟೆಯಲ್ಲಿ ಅಲಾಟ್‌ಮೆಂಟ್ ಮಾಡಿ ಕೊಡಲಾಗುವುದು ಎಂದು ಭರವಸೆ ನೀಡಲಾಗಿದೆ. ಆದರೆ, ಸೂಲಿಕುಂಟೆಯಲ್ಲಿ ನಿರ್ಮಾಣ ಆಗಿರುವುದು 900 ಚಿಲ್ಲರೆ ಮನೆಗಳು ಮಾತ್ರ. ಹಾಗಾದರೆ ಉಳಿದ 300 ಕುಟುಂಬಗಳಿಗೆ ಎಲ್ಲಿ ಪುನರ್ವಸತಿ ಕಲ್ಪಿಸುವುದು ಎನ್ನುವುದಕ್ಕೆ ಉತ್ತರವಿಲ್ಲ.
ಸರಿ, ಆ 900 ಕುಟುಂಬಗಳಿಗಾದರೂ ಸರಿಯಾಗಿ ವಸತಿಯನ್ನು ನೀಡಲಾಗುವುದೇ ಎಂದರೆ ಅದೂ ಇಲ್ಲ. ಹೆಸರು ಬಹಿರಂಗಪಡಿಸದ ನಿವಾಸಿಯೊಬ್ಬರ ಪ್ರಕಾರ, ಸುಲಿಕುಂಟೆಯಲ್ಲಿ EWS ಕ್ವಾಟ್ರಸ್‌ನಲ್ಲಿ ಇದ್ದವರಿಗೆ ಆದ್ಯತೆ ನೀಡುವುದರ ಬದಲಾಗಿ ಹ್ಯಾರಿಸ್ ತಮ್ಮ ಚೇಲಾಗಳಿಗೆ ಮನೆ ನೀಡಲು ಪ್ರಯತ್ನಿಸುತ್ತಿದ್ದಾರೆ. ಆ ಮೂಲಕ ತನ್ನ ಪ್ರಭಾವವನ್ನು ಬಳಸಿ ಹ್ಯಾರಿಸ್ ಅಧಿಕಾರ ದುರುಪಯೋಗ ಮಾಡುತ್ತಿದ್ದಾರೆ, ಹಾಗೂ ತಮ್ಮ ಚೇಲಾಗಳಿಗೆ ಮನೆ ದೊರಕಿಸುವ ಸಲುವಾಗಿ ಸಂತ್ರಸ್ತರಿಗೆ ಈಗಾಗಲೆ ನೆಲೆಸಿರುವ ಮನೆ ಖಾಲಿ ಮಾಡುವಂತೆ ಒತ್ತಾಯ ಪಡಿಸುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಸದ್ಯ, ಸುಲಿಕುಂಟೆ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಕ್ಷೇತ್ರದಡಿಯಲ್ಲಿ ಬರುತ್ತದೆ. ಲಿಂಬಾವಳಿ ಕೂಡಾ ನನ್ನ ಕ್ಷೇತ್ರದಲ್ಲಿ ನಿರ್ಮಾಣವಾಗಿರುವ ಮನೆಗಳನ್ನು ನಮ್ಮ ಕ್ಷೇತ್ರದವರಿಗೆ ನೀಡಬೇಕೆಂದು ಪಟ್ಟು ಹಿಡಿದು ಕೂತಿದ್ದಾರೆ ಎಂಬ ಆರೋಪವೂ ಕೇಳಿ ಬಂದಿದೆ. ಕಳೆದ ಕೆಲವು ದಿನಗಳಿಂದ ಈ ನಿವಾಸಿಗಳಿಗೆ ಸ್ಥಳೀಯ ಗೂಂಡಾಗಳು ಅವರು ವಾಸಿಸುತ್ತಿರುವ ಮನೆಗಳನ್ನು ತೊರೆಯುವಂತೆ ಧಮ್ಕಿ ಹಾಕುತ್ತಿರುವುದಾಗಿ ಇಲ್ಲಿನ ನಿವಾಸಿಗಳು ಆರೋಪಿಸುತ್ತಿದ್ದಾರೆ. ಈ ಸ್ಥಳೀಯ ಗೂಂಡಾಗಳಿಗೆ ಅರವಿಂದ ಲಿಂಬಾವಳಿ ಅವರದ್ದೇ ಕುಮ್ಮಕ್ಕು ಇದೆ ಎಂಬ ಆರೋಪವೂ ಇದೆ. ಆದರೆ, ಶಾಸಕರನ್ನು ಎದುರಿಸಿ ಹೇಳಿಕೆ ಕೊಡಲು ಭಯ ಪಡುವುದರಿಂದ ಯಾವುದೇ ನಿವಾಸಿಗಳು ಬಹಿರಂಗ ಹೇಳಿಕೆ ನೀಡಲು ಹಿಂಜರಿಯುತ್ತಿದ್ದಾರೆ.

ಒಟ್ಟಾರೆ ಜನಪ್ರತಿನಿಧಿಗಳ ಸ್ವಾರ್ಥ ಹಾಗೂ ಅಧಿಕಾರಿಗಳ ಬೇಜವಾಬ್ದಾರಿಯಿಂದ ನೂರಾರು ಕುಟುಂಬಗಳು ತಮಗೆ ನ್ಯಾಯವಾಗಿ ಬರಬೇಕಾದ ಮನೆಯನ್ನು ಪಡೆದುಕೊಳ್ಳಲಾಗದೆ, ಒಂದು ವೇಳೆ ಪಡೆದುಕೊಂಡರೂ ಅದಕ್ಕೆ ಮೂಲಭೂತ ಸೌಕರ್ಯಗಳಿಲ್ಲದೆ ನರಕ ಸದೃಶ ಬಾಳು ಬಾಳುತ್ತಿದ್ದಾರೆ. ಸದ್ಯ, ತಮ್ಮ ಹಕ್ಕುಗಳಿಗಾಗಿ ನ್ಯಾಯಾಲಯದ ಮೊರೆ ಹೋಗಿರುವ ಇಲ್ಲಿನ ನಿವಾಸಿಗಳು ಕೋರ್ಟ್ ನೀಡುವ ಆದೇಶದ ಕಡೆಗೆ ಬಕ ಪಕ್ಷಿಗಳಂತೆ ಕಾದು ಕುಳಿತಿದ್ದಾರೆ.
(ಶಾಸಕರ ಕಡೆಯವರು ತೊಂದರೆ ನೀಡಬಹುದು ಎಂಬ ಭಯದಲ್ಲಿ ಇಲ್ಲಿನ ಹೆಚ್ಚಿನ ನಿವಾಸಿಗಳು ಸಂಪೂರ್ಣ ವಿವರಗಳನ್ನು ಬಹಿರಂಗಪಡಿಸಿಲ್ಲ, ಇನ್ನೂ ಕೆಲವರು ತಮ್ಮ ವೈಯಕ್ತಿಕ ಗುರುತನ್ನು ಮರೆಮಾಚುವಂತೆ ಕೋರಿಕೊಂಡಿದ್ದರಿಂದ ಅವರ ಹೆಸರುಗಳನ್ನು ಇಲ್ಲಿ ಉಲ್ಲೇಖಿಸಿಲ್ಲ)






