ರಾಜ್ಯದಲ್ಲಿ ಉದ್ಭವಿಸಿರುವ ಆಜಾನ್ ಮತ್ತು ಸುಪ್ರಭಾತ ವಿವಾದದ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಧ್ವನಿವರ್ಧಕ ಮಾರ್ಗಸೂಚಿ ಪ್ರಕಟಿಸಿದೆ.
ಮಂಗಳವಾರ ಯಾವ ಪ್ರದೇಶಗಳಲ್ಲಿ ಎಷ್ಟು ಡಿಸೆಬಲ್ ನಲ್ಲಿ ಧ್ವನಿವರ್ಧಕ ಬಳಸಬೇಕು ಎಂಬ ಬಗ್ಗೆ ರಾಜ್ಯ ಸರಕಾರ ಸುತ್ತೂಲೆ ಹೊರಡಿಸಿದೆ.
15 ದಿನದೊಳಗೆ ಧ್ವನಿ ವರ್ಧಕಗಳಿಗೆ ಅನುಮತಿ ಪಡೆಯಬೇಕು ಹಾಗೂ ಮಂದಿರ, ಮಸೀದಿ ಸೇರಿದಂತೆ ಎಲ್ಲಾ ಧಾರ್ಮಿಕ ಕೇಂದ್ರಗಳಿಗೂ ಈ ಮಾರ್ಗಸೂಚಿ ಅನ್ವಯವಾಗಲಿದೆ.
ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಡಿಸೆಬಲ್ ಮಿತಿ ಇರಬೇಕು ಎಂಬ ನಿಯಮ ಆಧರಿಸಿ ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 10 ಗಂಟೆವರೆಗೆ ಹಾಗೂ ರಾತ್ರಿ 10 ಯಿಂದ ಬೆಳಗಿನ ಜಾವ 6 ಗಂಟೆವರೆಗೆ ನಿರ್ದಿಷ್ಟ ಡೆಸಿಬಲ್ ನಿಗದಿಪಡಿಸಲಾಗಿದೆ.

ಡಿಎಸ್ಪಿ ದರ್ಜೆಯಿಂದ ಮೇಲ್ಪಟ್ಟ ರಾಜ್ಯ ಪೊಲೀಸ್ ಮಹಾನಿರ್ದೇಶಕರ ದರ್ಜೆವರೆಗೂ ಎಲ್ಲ ಹಿರಿಯ ಪೊಲೀಸ್ ಅಧಿಕಾರಿಗಳು ಕ್ರಮ ಕೈಗೊಳ್ಳುವ ಅಧಿಕಾರ ಹೊಂದಿರುತ್ತಾರೆ. ಧ್ವನಿ ವರ್ಧಕ ಬಳಕೆಯಲ್ಲಿ ನಿಯಮ ಉಲ್ಲಂಘನೆ ಆದರೆ ಕ್ರಮ ಕೈಗೊಳ್ಳುವ ಅಧಿಕಾರ ನೀಡಲಾಗಿದೆ. ಸಾರ್ವಜನಿಕ ಸಮಾರಂಭ ಕಾರ್ಯಕ್ರಮ ನಡೆಸುವರೆಗೂ ಅನುಮತಿ ಕಡ್ಡಾಯಪಡಿಸಲಾಗಿದೆ.
ರಾತ್ರಿ 10ರಿಂದ ಬೆಳಗ್ಗೆ 6ರ ವರೆಗೆ ಎಲ್ಲಾ ರೀತಿಯ ಧ್ವನಿವರ್ಧಕ, ತಮಟೆ, ಬ್ಯಾಂಡ್, ಡಿಜೆ ಎಲ್ಲದಕ್ಕೂ ನಿರ್ಬಂಧಿಸಲಾಗಿದೆ. ಆದರೆ ಅಗತ್ಯ ಸಮಯದಲ್ಲಿ ಸಂಬಂಧಪಟ್ಟ ಅಧಿಕಾರಿಗಳ ಅನುಮತಿ ಮೇರೆಗೆ ಧ್ವನಿವರ್ಧಕ ಬಳಸಬಹುದಾಗಿದೆ.
ವಸತಿ ಪ್ರದೇಶಗಳಲ್ಲಿ ವಾಹನಗಳು ಹಾರ್ನ್ ಮೂಲಕ ಕಿರಿಕಿರಿ ಮಾಡುವಂತಿಲ್ಲ, ಸಾರ್ವಜನಿಕರಿಂದ ದೂರು ಬಂದರೆ ಕ್ರಮ ಕೈಗೊಳ್ಳಲಾಗುವುದು. ಮನೆಯಲ್ಲಿ ನಡೆಸುವ ಕಾರ್ಯಕ್ರಮ ಹಾಗೂ ಇತರೆ ಖಾಸಗಿ ಕಾರ್ಯಕ್ರಮ ಶಬ್ಧ 5 ಡಿಸೆಬಲ್ ಮೀರದಂತೆ ಶಬ್ಧ ಬಳಸಬಹುದಾಗಿದೆ.
(ವಲಯವಾರು ಹಗಲು-ರಾತ್ರಿ)
ಕೈಗಾರಿಕಾ ವಲಯ – 75 ಡಿಸೆಬಲ್ – 70 ಡಿಸೆಬಲ್
ವಾಣಿಜ್ಯ ವಲಯ – 65 ಡಿಸೆಬಲ್ – 55 ಡಿಸೆಬಲ್
ವಸತಿ ವಲಯ- 55 ಡಿಸೆಬಲ್ – 45 ಡಿಸೆಬಲ್
ಸೈಲೆಂಟ್ ವಲಯ – 50 ಡಿಸೆಬಲ್ – 40 ಡಿಸೆಬಲ್