ಚಂದ್ರಮಾನ ಪುಷ್ಯಮಾಸದ ಶುಕ್ಲಪಕ್ಷದಂದು ಬರೋ ಏಕಾದಶಿಯೇ ಈ ವೈಕುಂಠ ಏಕಾದಶಿ. ಇದನ್ನ ಮೋಕ್ಷದ ಏಕಾದಶಿ ಅಂತಾನೂ ಕರೀತಾರೆ. ಈ ದಿನದಂದು ದೇವರದೇವ ಶ್ರೀಮನ್ನಾರಾಯಣನ ವೈಕುಂಠದ ಬಾಗಿಲು ತೆರೆದಿರುತ್ತದೆ ಅನ್ನೋದು ಭಕ್ತರ ನಂಬಿಕೆ. ಇದೇ ಕಾರಣಕ್ಕೆ ತಿರುಪತಿಯ ವೆಂಕಟೇಶ್ವರನನ್ನ ದರ್ಶನ ಪಡೆಯೋದಕ್ಕೆ ಭಕ್ತ ಸಾಗರವೇ ಹರಿದು ಬರುತ್ತದೆ.. ಭಗವಂತನ ನಾಮಸ್ಮರಣೆಯಲ್ಲಿ ಮುಳುಗುವ ಭಕ್ತರು, ಮೋಕ್ಷ ಪಡೆಯುವ ಉದ್ದೇಶದಿಂದ ಭಗವಂತನ ಧ್ಯಾನ ಮಾಡುತ್ತಾರೆ. ತಿರುಪತಿಯಿಂದ ಹಿಡಿದು ಹಳ್ಳಿ ಹಳ್ಳಿಗಳ ವೆಂಕಟೇಶ್ವರ ದೇಗುಲದಲ್ಲಿ ವೈಕುಂಠ ಏಕಾದಶಿಯನ್ನು ಸಂಭ್ರಮದಿಂದ ಆಚರಣೆ ಮಾಡುತ್ತಾರೆ. ಆದರೆ ತಿರುಪತಿಯಲ್ಲಿ ವೈಕುಂಠ ಏಕಾದಶಿ ಶ್ರೀಮಂತರಿಗೆ ಮಾತ್ರ ಎನ್ನುವಂತಾಗಿದೆ.
ಸಪ್ತ ದ್ವಾರಗಳ ಒಡೆಯ, ಏಳುಕುಂಡಲವಾಡ, ಶೇಷಾದ್ರಿ ವಾಸ ಎಂದೆಲ್ಲಾ ಕರೆಸಿಕೊಳ್ಳುವ ತಿರುಮಲೇಶ ಸಂಕಷ್ಟಗಳ ನಿವಾರಕ ಅಂತಾನೇ ಫೇಮಸ್. ಆದರೆ ವೈಕುಂಠ ಬಾಗಿಲು ಮೂಲಕ ದರ್ಶನ ಪಡೆಯುವ ಟಿಕೆಟ್‌ಗಾಗಿ ಸಾಲುಗಟ್ಟಿ ನಿಂತಿದ್ದ 6 ಮಂದಿ ಭಕ್ತರು ಕಾಲ್ತುಳಿತಕ್ಕೆ ಜೀವ ಕಳೆದುಕೊಂಡಿದ್ದರು. ಆಂಧ್ರ ಸರ್ಕಾರ 25 ಲಕ್ಷ ಪರಿಹಾರವನ್ನೂ ಘೋಷಣೆ ಮಾಡಿತ್ತು. ಆ ಬಳಿಕ ಗಾಯಗೊಂಡಿದ್ದ 30 ಜನರೂ ಸೇರಿದಂತೆ ಒಟ್ಟು 57 ಜನರಿಗೆ ವಿಶೇಷ ದರ್ಶನ ವ್ಯವಸ್ಥೆ ಮಾಡಲಾಗಿತ್ತು. ತಿಮ್ಮಪ್ಪನ ಸನ್ನಿಧಿಯಲ್ಲಿ ಭಕ್ತ ಸಾಗರವೇ ಸೇರಿತ್ತು. ಪ್ರತಿವರ್ಷಕ್ಕಿಂತ ಈ ಬಾರಿ ಭಕ್ತರ ಸಂಖ್ಯೆ ಡಬಲ್ ಆಗಿತ್ತು. ಹೆಜ್ಜೆ ಇಡೋದಕ್ಕೂ ಜಾಗ ಇಲ್ಲದಷ್ಟು ಜನ ಕಿಕ್ಕಿರಿದು ಸೇರಿದ್ರು.. ಸ್ವರ್ಣಾಲಂಕೃತ ರಥದಲ್ಲಿ ತಿಮ್ಮಪ್ಪನ ತೇರು ಬರ್ತಿದ್ರೆ, ನೋಡೋದಕ್ಕೆ ಎರಡು ಕಣ್ಣೆರೆಡು ಸಾಲುದು ಎನ್ನುವಂತಿತ್ತು.
ಆದರೆ, ಮೊದಲೇ ಕಾಲ್ತುಳಿತದಿಂದ ಕಂಗಾಲಾಗಿರುವ ಟಿಟಿಡಿ ಆಡಳಿತ ಮಂಡಳಿ, ವೈಕುಂಠ ಏಕಾದಶಿ ದಿನ ಹೆಚ್ಚಿನ ಸಂಕಷ್ಟ ತಂದುಕೊಳ್ಳಲು ಹೋಗಲಿಲ್ಲ. ಎಲ್ಲವನ್ನು ಅಚ್ಚುಕಟ್ಟಾಗಿ ನಿರ್ವಹಣೆ ಮಾಡುವ ಗುಂಗಿಗೆ ಬಿದ್ದ ಅಧಿಕಾರಿಗಳು ಜನಸಾಮಾನ್ಯೆರಿಗಿಂತ ವಿಐಪಿ, ವಿವಿಐಪಿಗಳನ್ನು ನಿರ್ವಹಣೆ ಮಾಡುವ ಕೆಲಸಕ್ಕೆ ನಿಯೋಜನೆ ಆಗಿದ್ದರು. ತಿರುಪತಿ ತಿರುಮಲಕ್ಕೆ ಬರುತ್ತಿದ್ದ ಗಣ್ಯರನ್ನು ನೆಮ್ಮದಿಯಿಂದ ದರ್ಶನ ಮಾಡಿಸಿ ಸಾಗ ಹಾಕುವುದೇ ದೊಡ್ಡ ಸವಾಲು ಎನ್ನುವಂತಾಗಿತ್ತು. ಈ ಬಾರಿ ಜುನಸಾಮಾನ್ಯರಿಗಿಂದ ಶ್ರೀಮಂತರೇ ತಿಮ್ಮ ಪ್ಪನ ದರ್ಶನ ಪಡೆದರು ಅನ್ನೋ ಬಗ್ಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗ್ತಿವೆ.