ರಾಜ್ಯದ ನೂತನ ಲೋಕಾಯುಕ್ತರಾಗಿ ನ್ಯಾ. ಬಸವನಗೌಡ ಸಂಗನಗೌಡ ಪಾಟೀಲ ಅವರು ಅಧಿಕಾರ ಸ್ವೀಕಾರ ಮಾಡಿದ್ದಾರೆ. ಬುಧವಾರ ರಾಜಭವನದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ನೂತನ ಲೋಕಾಯುಕ್ತ ನ್ಯಾ. ಬಿ. ಎಸ್ ಪಾಟೀಲ ಅವರಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.
ಬಿಎಸ್. ಪಾಟೀಲ್ ಅವರು ಮೂಲತಃ ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಪಡೇಕನೂರು ಗ್ರಾಮದವರು. ಈ ಹಿಂದೆ ಲೋಕಾಯುಕ್ತರಾಗಿದ್ದ ನ್ಯಾ. ಪಿ ವಿಶ್ವನಾಥ್ ಶೆಟ್ಟಿ ಅವರು, ಜನವರಿ 27, 2022 ರಲ್ಲಿ ನಿವೃತ್ತಿಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ಹುದ್ದೆ ಖಾಲಿ ಇತ್ತು. ಈ ಹಿನ್ನೆಲೆಯಲ್ಲಿ ಎರಡುವರೆ ವರ್ಷಗಳಿಂದ ಉಪ ಲೋಕಾಯುಕ್ತರಾಗಿದ್ದ ನ್ಯಾ. ಬಿ. ಎಸ್ ಪಾಟೀಲ ಅವರನ್ನು ಇದೀಗ ಲೋಕಾಯುಕ್ತರನ್ನಾಗಿ ನೇಮಕ ಮಾಡಲಾಗಿದೆ.
1956ಜೂನ್ 1ರಂದು ಪಡೇಕನೂರು ಗ್ರಾಮದಲ್ಲಿ ಜನಸಿದ ಬಿ ಎಸ್ ಪಾಟೀಲ್. ಪ್ರಾಥಮಿಕ, ಪ್ರೌಢಶಾಲೆ ಶಿಕ್ಷಣ ಸ್ವಗ್ರಾಮದಲ್ಲೇ ಕಲಿತರು. ನಂತರ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಕಲಾ ವಿಭಾಗ, ಲಾ ಕಾಲೇಜಿನಲ್ಲಿ ಎಲ್ ಎಲ್ ಬಿ ಪದವಿ ಪೂರೈಸಿ ಎಲ್ ಎಲ್ ಬಿ ಅಂತಿಮ ವರ್ಷದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನದಲ್ಲಿ ಉತ್ತೀರ್ಣರಾಗಿದ್ದರು.
ಬೆಂಗಳೂರಿನಲ್ಲಿ 1980 ಸೆಪ್ಟೆಂಬರ್ 5ರಂದು ವಕೀಲಿ ವೃತ್ತಿ ಆರಂಭ. 2004ರಲ್ಲಿ ರಾಜ್ಯ ಹೈಕೋರ್ಟ್ ನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕರಿಸಿದ ಅವರು 13ವರ್ಷ 7ತಿಂಗಳು ಹೈಕೋರ್ಟ್ ನ್ಯಾಯಮೂರ್ತಿಯಾಗಿ ಉತ್ತಮ ಕಾರ್ಯ ನಿರ್ವಹಿಸಿದ್ದರು.
2019ರಲ್ಲಿ ಉಪಲೋಕಾಯುಕ್ತರಾಗಿ ನೇಮಕವಾಗಿದ ಅವರು ಇದೀಗ ಲೋಕಾಯುಕ್ತ ಹುದ್ದೆಗೆ ನೇಮಕ ಮಾಡಿ ಸರ್ಕಾರ ಆದೇಶ ಬೆನ್ನಲ್ಲೇ ಭೀಮನಗೌಡ ಸಂಗನಗೌಡ ಪಾಟೀಲ್ ಅವರ ಸ್ವಗ್ರಾಮದಲ್ಲಿ ಸಂಭ್ರಮ ಮನೆ ಮಾಡಿದೆ.
ಇದೇ ವೇಳೆ ರಾಜ್ಯದ ನೂತನ ಲೋಕಾಯುಕ್ತರಾಗಿ ಪ್ರಮಾಣ ವಚನ ಸ್ವೀಕರಿಸಿದ ನ್ಯಾ. ಭೀಮನಗೌಡ ಸಂಗನಗೌಡ ಪಾಟೀಲ್ ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೂಗುಚ್ಛ ನೀಡಿ ಅಭಿನಂದಿಸಿದರು. ಜೊತೆಗೆ ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಅಭಿನಂದಿಸಿ ಶುಭ ಹಾರೈಸಿದರು.