ಶಿವಮೊಗ್ಗ ಜಿಲ್ಲೆಯಲ್ಲಿ ಇಂದು ಇಬ್ಬರು ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ನಿವೃತ್ತ ಡಿಸಿಎಫ್ ಐ.ಎಂ. ನಾಗರಾಜ್ ಹಾಗೂ ಹೊಳಲ್ಕೆರೆ ತಹಶೀಲ್ದಾರ್ ಎನ್.ಜೆ.ನಾಗರಾಜ್ ಮನೆ ಹಾಗೂ ಕಚೇರಿ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ತಹಶೀಲ್ದಾರ್ ಎನ್.ಜೆ.ನಾಗರಾಜ್, ನಿವೃತ್ತ ಡಿಸಿಎಫ್ ಐ.ಎಂ.ನಾಗರಾಜ್ ಇಬ್ಬರೂ ಕೂಡ ಶಿವಮೊಗ್ಗದಲ್ಲಿ ಕಾರ್ಯನಿರ್ವಹಿಸಿದ್ದರು.
ಇಂದು ನಿವೃತ್ತ ಡಿಸಿಎಫ್ ಐ.ಎಂ ನಾಗರಾಜ್ ರವರ ಶಿವಮೊಗ್ಗ ಮನೆ, ಕಚೇರಿ, ಫಾರ್ಮ್ ಹೌಸ್ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಶಿವಮೊಗ್ಗದ ಗುಡ್ ಲಕ್ ಸರ್ಕಲ್ ಬಳಿ ಇರುವ ನಿವೃತ್ತ ಡಿಎಸಿಎಫ್ ನಾಗರಾಜ್ ಒಡೆತನದ ಕಾಂಪ್ಲೆಕ್ಸ್, ಶಿವಮೊಗ್ಗ ಹೊರವಲಯದ ಅನುಪಿನಕಟ್ಟೆ ಬಳಿ ಇರುವ ವಿಸ್ಮಯ ಫಾರ್ಮ್ ಹೌಸ್ ಮೇಲೂ ಲೋಕಾಯುಕ್ತರು ದಾಳಿ ನಡೆಸಿದ್ದಾರೆ.
ಜೊತೆಗೆ ದಾವಣಗೆರೆಯ ಹೊನ್ನಾಳಿ ಬಳಿಯ ತೋಟದ ಮನೆ ಮೇಲೆ ಸಹ ದಾಳಿ ನಡೆಸಲಾಗಿದೆ. ಶಿವಮೊಗ್ಗದ ಶಿಕಾರಿಪುರದಲ್ಲಿರುವ ತಹಶಿಲ್ದಾರ್ ನಾಗರಾಜ್ ಮನೆ ಮೇಲೂ ದಾಳಿ ನಡೆದಿದೆ. ಇಬ್ಬರು ಅಧಿಕಾರಿಗಳ ನೇತೃತ್ವದ ತಂಡದಿಂದ ಏಳು ಸ್ಥಳಗಳ ಮೇಲೆ ಇಂದು ಏಕಕಾಲಕ್ಕೆ ದಾಳಿ ನಡೆದಿದ್ದು, ದಾವಣಗೆರೆ ಲೋಕಾಯುಕ್ತ ಎಸ್ಪಿ ಎಂಎಸ್ ಕೌಲಾಪುರೆ ನೇತೃತ್ವದಲ್ಲಿ ದಾವಣಗೆರೆ, ಶಿವಮೊಗ್ಗದ 20ಕ್ಕೂ ಹೆಚ್ಚು ಮಂದಿ ಅಧಿಕಾರಿಗಳಿಂದ ದಾಳಿ ನಡೆದಿದೆ.