ಮಹುವಾ ಮೊಯಿತ್ರಾ ಅವರನ್ನು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಲೋಕಸಭಾ ಸದಸ್ಯ ಸ್ಥಾನದಿಂದ ಉಚ್ಛಾಟನೆ ಮಾಡಿತ್ತು. ಅದಕ್ಕೆ ಕಾರಣ ಸಂಸತ್‌ನಲ್ಲಿ ಪ್ರಶ್ನೆ ಕೇಳಲು ಹಣ ಹಾಗು ಗಿಫ್ಟ್ ಪಡೆದಿದ್ದಾರೆ ಎನ್ನುವುದು. ಜೊತೆಗೆ ಮಹುವಾ ಮೊಯಿತ್ರಾ ಅವರ ಲಾಗಿನ್ ಐಡಿ ದುಬೈ, ಲಂಡನ್ ಸೇರಿದಂತೆ ದೇಶ ಬಿಟ್ಟು ಬೇರೆ ಕಡೆಯಲ್ಲೂ ಬಳಕೆ ಆಗಿದೆ. ಇದು ದೇಶದ ಭದ್ರತೆಗೆ ಧಕ್ಕೆ ಆಗಿದೆ ಎನ್ನುವ ಆರೋಪವನ್ನೂ ನೀತಿ ಸಮಿತಿ ಮಾಡಿತ್ತು. ಇದಿಗ ಮಹುವಾ ಮೊಯಿತ್ರಾ ಅವರು ಕೇಂದ್ರ ಸರ್ಕಾರದ ತೆಗೆದುಕೊಂಡು ನಿರ್ಧಾರವನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನೆ ಮಾಡಿದ್ದಾರೆ. ಲೋಕಸಭೆ ತೆಗೆದುಕೊಂಡಿರುವ ಐತಿಹಾಸಿಕ ನಿರ್ಧಾರ ಸರಿಯೋ ತಪ್ಪೋ ಎನ್ನುವುದನ್ನು ಕೋರ್ಟ್ ನಿರ್ಧಾರ ಮಾಡಲಿದೆ. ಆದರೆ ಇದೀಗ ಆಗಿರುವ ಭದ್ರತಾ ಲೋಪವನ್ನು ಸರಿ ಮಾಡುವುದು ಯಾರು..?
ಲೋಕಸಭಾ ಅಧಿವೇಶನದ ವೇಳೆ ಅವಾಂತರ ಸೃಷ್ಟಿ..!
ಲೋಕಸಭಾ ಅಧಿವೇಶನದ ವೇಳೆ ಮೈಸೂರಿನ ಯುವಕ ಮನೋರಂಜನ್ ಸೇರಿದಂತೆ ನಾಲ್ವರು ಅವಾಂತರ ಸೃಷ್ಟಿ ಮಾಡಿರುವುದು ಭದ್ರತಾ ವೈಫಲ್ಯವೇ ಆಗಿದೆ. ಇದನ್ನು ಬಿಜೆಪಿ ನಾಯಕರೂ ಸೇರಿದಂತೆ ಎಲ್ಲರೂ ಒಪ್ಪಿಕೊಳ್ಳಲೇಬೇಕಾದ ಅನಿವಾರ್ಯತೆ ಇದೆ. ಸಂಸತ್ ಕಲಾಪ ನಡೆಯುವಾಗಲೇ ಓರ್ವ ಯುವಕ ಸಂಸತ್ ಭವನದ ವೀಕ್ಷಕರ ಗ್ಯಾಲರಿಯಿಂದ ನೆಗೆದು ಸಂಸದರು ಕುಳಿತುಕೊಳ್ಳುವ ಸೀಟ್, ಟೇಬಲ್ ಮೇಲೆ ಹತ್ತಿ ಓಡಾಡಿದ್ದಾನೆ. ಜನಪ್ರತಿನಿಗಳು ಅಥವಾ ಅಧಿಕಾರಿ ವರ್ಗವನ್ನು ಬಿಟ್ಟು ಉಳಿದವರಿಗೆ ಪ್ರವೇಶ ಇಲ್ಲದೆ ಇರುವ ಪ್ರದೇಶಕ್ಕೆ ಹೋಗಿ ಬಣ್ಣದ ಬಾಂಬ್ ಸಿಡಿಸಿ ವಿಶ್ವದ ಎದುರು ಭಾರತದ ಭದ್ರತೆ ಎಷ್ಟರ ಮಟ್ಟಿಗೆ ಇದೆ ಎನ್ನುವುದನ್ನು ಅನಾವರಣ ಮಾಡಿದ್ದಾನೆ. ಕೆಲವರನ್ನು ಬಂಧಿಸದಲಾಗಿದೆ. ಆದರೆ ಭದ್ರತಾ ವೈಫಲ್ಯಕ್ಕೆ ಯಾರನ್ನು ಕಾರಣ ಮಾಡಲಾಗುತ್ತದೆ..? ಯಾರ ಸದಸ್ಯತ್ವವನ್ನು ಉಚ್ಛಾಟನೆ ಮಾಡಲಾಗುತ್ತದೆ ಎನ್ನುವ ಪ್ರಶ್ನೆ ಎದುರಾಗಿದೆ.
ತುಟಿ ಬಿಚ್ಚಿಲ್ಲ ಪ್ರಧಾನಿ ಮೋದಿ, ಅಮಿತ್ ಷಾ..?
ಸಂಸತ್ ಭವನ ಅಂದ್ರೆ ಕೇವಲ ಸಂಸದರು ಕುಳಿತುಕೊಳ್ಳುವ ಕಟ್ಟಡ ಮಾತ್ರವಲ್ಲ. ನಮ್ಮ ದೇಶದ ಪ್ರಜಾಪ್ರಭುತ್ವದ ಸಂಕೇತ. ನಮ್ಮ ದೇಶದಲ್ಲಿ ಯಾವುದೇ ಕಾನೂನು ಜಾರಿಯಾಗಬೇಕು ಅಂದರೂ ಅದು ಸಂಸತ್‌ನಲ್ಲೇ ಆಗಬೇಕು. ಸಂಸತ್‌ಗೆ ತನ್ನದೇ ಆದ ಪ್ರಾಮುಖ್ಯತೆ ಇದೆ. ಆದರೆ ಸಂಸತ್ ಅಧಿವೇಶನ ನಡೆಯುವಾಗಲೇ ನಡೆದಿರುವ ಭದ್ರತಾ ವೈಫಲ್ಯದ ಬಗ್ಗೆ ನಮ್ಮ ದೇಶದ ಪ್ರಧಾನಿ ಒಂದೇ ಒಂದು ಮಾತನ್ನೂ ಆಡಿಲ್ಲ. ಪರ ವಿರೋಧ ವಿಚಾರವಲ್ಲ, ಕನಿಷ್ಟ ಘಟನೆಯನ್ನು ಖಂಡಿಸುವ ಕೆಲಸವನ್ನೂ ಮಾಡಿಲ್ಲ. ತನಿಖೆಗೆ ಆದೇಶ ಮಾಡುವ ಮೂಲಕ ನಾವು ದೇಶದ ರಕ್ಷಣೆಗೆ ಬದ್ಧ ಎನ್ನುವ ಧೈರ್ಯವನ್ನೂ ತುಂಬುವ ಕೆಲಸ ಮಾಡಲಿಲ್ಲ. ದೇಶದ ಗೃಹ ಸಚಿವರೂ ಆಗಿರುವ ಅಮಿತ್ ಷಾ, ಈ ಬಗ್ಗೆ ಅಧಿಕೃತವಾಗಿ ಮಾತನಾಡಿ, ದೇಶದ ಭದ್ರತೆ ಬಗ್ಗೆ ಸಂಸದರಿಗೆ ಮಾಹಿತಿ ನೀಡಬೇಕಿತ್ತು. ಆದರೆ ಮೌನಕ್ಕೆ ಶರಣಾಗುವ ಮೂಲಕ ವಿಷಯಾಂತರ ಮಾಡುವ ಪ್ರಯತ್ನ ಮಾಡಿದ್ದಾರೆ ಎನ್ನಬಹುದಾಗಿದೆ.
ಕಾಂಗ್ರೆಸ್ ಆರೋಪ ನೂರಕ್ಕೆ ಸತ್ಯ ಎನಿಸುತ್ತದೆ.. ಅಲ್ಲವೇ..?
ಭಾರತದ ದೇಶದ ಒಳಕ್ಕೆ 300 ಕೆಜಿ RDX ಯಾವುದೇ ಅಡೆತಡೆ ಇಲ್ಲದೆ ಕಾಶ್ಮೀರದೊಳಗೆ ಬರುತ್ತದೆ. ಸ್ಪೋಟಕ ವಸ್ತು ಯಾವುದೇ ಅಡೆತಡೆ ಇಲ್ಲದೆ ಸಂಸತ್ತಿನೊಳಗೆ ಬರುತ್ತದೆ. ಸಂಸತ್ತನ್ನೇ ಕಾಯಲಾಗದ ಚೌಕಿದಾರನಿಗೆ ದೇಶ ಕಾಯಲು ಸಾಧ್ಯವೇ? ಎಂದು ಕಾಂಗ್ರೆಸ್ ಪ್ರಶ್ನೆ ಮಾಡಿದೆ. ಈ ಮಟ್ಟಿಗೆ ಭದ್ರತಾ ಲೋಪವಾಗಿದ್ದು ಹೇಗೆ..? ಮತ್ತು ಯಾಕೆ..? ಎನ್ನವ ಜೊತೆಗೆ ಈ ಸಂಸತ್ ದಾಳಿಯ ಹಿಂದೆ ಪ್ರತಾಪ್ ಸಿಂಹರದ್ದು ಪ್ರಮುಖ ಪಾತ್ರವಿದೆ ಎಂದು ಆರೋಪ ಮಾಡಿದೆ. ಆದರೆ ಕಾಂಗ್ರೆಸ್ ಹೇಳಿದೆ ಎನ್ನುವ ಮಾತ್ರಕ್ಕೆ ಯಾರೂ ಒಪ್ಪಬೇಕಿಲ್ಲ. ಆದರೆ ಈ ರೀತಿಯ ಘಟನೆಗಳು ನಡೆದಾಗ ದೇಶದ ಜನರ ಜೊತೆಗೆ ನಾವಿದ್ದೇವೆ ಎಂದು ಹೇಳುವ ನಾಯಕತ್ವ ಈ ದೇಶಕ್ಕೆ ಸಿಗಲಿಲ್ಲ ಅನ್ನೋದು ಬೇಸರದ ಸಂಗತಿ. ಮಣಿಪುರದಲ್ಲಿ ಯುವತಿಯರನ್ನು ಅತ್ಯಾಚಾರ ಮಾಡಿ ಬೆತ್ತಲೆ ಮೆರವಣಿಗೆ ಮಾಡಿದಾಗಲೂ ಇದೇ ಮೌನ, ಈಗ ಸಂಸತ್ ಭವನದ ಒಳಗೇ ಭದ್ರತಾ ಲೋಪವಾದರು ಅದೇ ಮೌನ..? ಎಷ್ಟು ಸರಿ..?
ಕೃಷ್ಣಮಣಿ