ಹೊಸ ಸಂಸತ್ತಿನ ಕಟ್ಟಡದಲ್ಲಿ ಇವತ್ತು ಗಂಭೀರ ಭದ್ರತಾ ಲೋಪವಾಗಿದೆ. ಲೋಕಸಭೆಯಲ್ಲಿ ಕಲಾಪ ನಡೆಯುತ್ತಿದ್ದಾಗಲೇ ಇಬ್ಬರು ದುಷ್ಕರ್ಮಿಗಳು ಹೊಗೆದಾಳಿ ಮಾಡಿದ್ದಾರೆ. ಸದನದೊಳಗೆ ದಾಳಿ ಮಾಡಿದ ಅವರಿಬ್ಬರೂ ಕರ್ನಾಟಕ ಮೂಲದವರು. ಕೃತ್ಯ ಎಸಗಿರುವ ಸಾಗರ್ ಶರ್ಮಾ ಮತ್ತು ಮನೋರಂಜನ್ ಡಿ ಎಂಬವರಿಗೆ ಲೋಕಸಭೆಯ ವೀಕ್ಷಕರ ಗ್ಯಾಲರಿಯಲ್ಲಿ ಕೂತು ಕಲಾಪ ವೀಕ್ಷಿಸಲು ಪಾಸ್ ಕೊಡಿಸಿದ್ದೇ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ.
ಹಾಗಾದ್ರೆ ವೀಕ್ಷಕರ ಗ್ಯಾಲರಿಯಲ್ಲಿ ಕೂತು ಕಲಾಪ ವೀಕ್ಷಿಸಲು ಇರುವ ನಿಯಮಗಳು ಏನು ಮತ್ತು ಸಂಸದರಿಗೆ ಯಾರಿಗೆ ಮಾತ್ರ ಪಾಸ್ಗಳನ್ನು ನೀಡಬಹುದು..?
ಲೋಕಸಭೆಯ ಕಾರ್ಯಕಲಾಪಗಳ ನಿಯಮ 386 ಮತ್ತು 387 ಸದನದಲ್ಲಿ ಅಪರಿಚಿತರ ಬಗ್ಗೆ ನಿಯಮಗಳನ್ನು ಹೇಳುತ್ತದೆ.
ನಿಯಮ 386: ಸದನದೊಳಗೆ ಅಪರಿಚಿತರನ್ನು (ವೀಕ್ಷಕರು) ಲೋಕಸಭಾ ಸ್ಪೀಕರ್ ಅವರ ಆದೇಶದಂತೆ ನಿಯಂತ್ರಿಸಲಾಗುತ್ತದೆ. ಲೋಕಸಭೆಯ ಸಂಸದರಿಗೆ ಮೀಸಲಾಗಿರುವ ಆಸನಗಳ ಕಡೆಗೆ ಈ ವೀಕ್ಷಕರು ಹೋಗುವಂತಿಲ್ಲ. ವೀಕ್ಷಕರ ಗ್ಯಾಲರಿಗಷ್ಟೇ ಹೋಗಲು ಅವಕಾಶವಿದೆ.
ನಿಯಮ 387: ಒಂದು ವೇಳೆ ಸ್ಪೀಕರ್ ಅವರು ಸೂಚಿಸಿದರೆ ಆಗ ಆ ವೀಕ್ಷಕರು ತಕ್ಷಣವೇ ವೀಕ್ಷಕರ ಗ್ಯಾಲರಿಯಿಂದ ಹೊರಟು ಸದನದಿಂದಲೇ ಹೊರನಡೆಯಬೇಕಾಗುತ್ತದೆ.
ನಿಯಮ 387ಎ: ಒಂದು ವೇಳೆ ನಿಯಮಗಳನ್ನು ಉಲ್ಲಂಘಿಸಿ ಆ ವೀಕ್ಷಕರು ಸದನದೊಳಗೆ ಓಡಾಡಿದ್ದು ಕಂಡುಬಂದರೆ ಅಥವಾ ಅನುಚಿತವಾಗಿ ವರ್ತಿಸಿದರೆ ಆಗ ಲೋಕಸಭಾ ಸ್ಪೀಕರ್ ಸೂಚನೆ ಮೇರೆಗೆ ನೇಮಕವಾದ ಅಧಿಕಾರಿ ಹೊರಹಾಕಬಹುದು.

ಸಾಗರ್ ಶರ್ಮಾಗೆ ಸಂಸದ ಪ್ರತಾಪ್ ಸಿಂಹ ನೀಡಿದ್ದ ವೀಕ್ಷಕರ ಗ್ಯಾಲರಿ ಪಾಸ್
ಸಂಸದರು ಯಾರಿಗೆ ಪಾಸ್ ಕೊಡಬಹುದು..?:
ವೀಕ್ಷಕರರಿಗೆ ಪಾಸ್ಗಾಗಿ ಅರ್ಜಿ ಸಲ್ಲಿಸುವ ವೇಳೆ ಅಂತಹ ಸಂಸದರು ಸ್ವಯಂ ಘೋಷಣೆಯನ್ನು ಮಾಡಿಕೊಳ್ಳಬೇಕಾಗುತ್ತದೆ. ಈ ಮೇಲ್ಕಂಡ ವ್ಯಕ್ತಿಯೂ ನನ್ನ ಸಂಬಂಧಿ/ನನ್ನ ಪರಿಯಚಸ್ಥ/ನನಗೆ ಚೆನ್ನಾಗಿ ಚಿರಪರಿಚಿತ ಮತ್ತು ಆತ ಅಥವಾ ಆಕೆಯ ಸಂಪೂರ್ಣ ಜವಾಬ್ದಾರಿಯನ್ನು ನಾನೇ ವಹಿಸಿಕೊಳ್ಳುತ್ತೇನೆ ಎಂದು ಘೋಷಿಸಿಕೊಳ್ಳಬೇಕಾಗುತ್ತದೆ.
ಜೊತೆಗೆ ಆ ರೀತಿ ಪಾಸ್ ಪಡೆಯುವವರು ತಮ್ಮ ಗಂಡ ಅಥವಾ ತಂದೆಯ ಪೂರ್ಣ ಹೆಸರನ್ನು ನೀಡಬೇಕಾಗುತ್ತದೆ. ಅನುಮತಿಸಲಾದ ಕಲಾಪಕ್ಕೆ ಬರುವುದಕ್ಕೆ ೧೬ ಗಂಟೆ ಮೊದಲು ಸಂಸತ್ತಿನ ಕೇಂದ್ರೀಕೃತ ಪಾಸ್ ವಿತರಣಾ ಘಟಕದಿಂದ ಪಾಸ್ ವಿತರಣೆ ಆಗುತ್ತದೆ.
ವೀಕ್ಷಕರ ಗ್ಯಾಲರಿಗೆ ನಿಗದಿತ ಅವಧಿಗೆ, ನಿಗದಿತ ದಿನಾಂಕಕ್ಕೆ ಮಾತ್ರ ಪಾಸ್ಗಳನ್ನು ನೀಡಲಾಗುತ್ತದೆ.