ಯುವ ಸಮೂಹಕ್ಕೆ ಆರೋಗ್ಯಕರ ಬದುಕುವ ಹಾದಿಯನ್ನು ರೂಪಿಸುವ ಜವಾಬ್ದಾರಿ ಸಮಾಜದ ಮೇಲಿದೆ
ವರ್ತಮಾನದ ಭಾರತ ಎರಡು ರೀತಿಯ ದ್ವಂದ್ವಗಳ ನಡುವೆ ಸಾಗುತ್ತಿದ್ದು 75 ವರ್ಷಗಳ ಸ್ವತಂತ್ರ ಆಳ್ವಿಕೆಯ ನಂತರ ಕವಲೊಡೆದಿರುವ ಹಾದಿಗಳಲ್ಲಿ ಇಡೀ ಸಮಾಜವೇ ಈ ದ್ವಂದ್ವದ ಸುಳಿಯಲ್ಲಿ ಸಿಲುಕಿ ಸ್ಪಷ್ಟ ಗುರಿಯನ್ನು ಕಳೆದುಕೊಂಡಂತೆ ಕಾಣುತ್ತಿದೆ. ಅಮೃತ ಕಾಲದ ಭಾರತ ಇನ್ನು 25 ವರ್ಷಗಳಲ್ಲಿ ಆರ್ಥಿಕವಾಗಿ ವಿಶ್ವದ ಅಗ್ರಮಾನ್ಯ ದೇಶವಾಗಿ ರೂಪುಗೊಳ್ಳುವ ಮಾರುಕಟ್ಟೆಯ ಕನಸುಗಳ ನಡುವೆಯೇ ಭಾರತವನ್ನು ಒಂದು ಭೌತಿಕವಾಗಿ ಬಲಿಷ್ಠವಾದ ದೇಶವನ್ನಾಗಿ ನಿರ್ಮಿಸುವ ನಿಟ್ಟಿನಲ್ಲಿ ರೂಪುರೇಷೆಗಳನ್ನು ನಿರ್ಧರಿಸಲಾಗಿದೆ. ಮಾನವನ ಅಭ್ಯುದಯದ ಚರಿತ್ರೆಯನ್ನು ಗಮನಿಸಿದಾಗ ಇದು ಸಹಜ ಪ್ರಕ್ರಿಯೆ ಎನಿಸುತ್ತದೆ. ಭೌಗೋಳಿಕ ರಾಷ್ಟ್ರಗಳ ಶಕ್ತಿ ಸಾಮರ್ಥ್ಯಗಳನ್ನು ಅಳೆಯುವಾಗ ಸ್ವಯಂ ರಕ್ಷಣೆಯ ಭದ್ರಗೋಡೆಗಳು ಹಾಗೂ ಸಮಾಜವನ್ನು ಸುಸ್ಥಿರವಾಗಿ ಕಾಪಾಡುವಂತಹ ಆರ್ಥಿಕ ತಳಹದಿಯನ್ನೇ ಪ್ರಧಾನವಾಗಿ ಪರಿಗಣಿಸುವ ಒಂದು ಚಾರಿತ್ರಿಕ ಪರಿಕಲ್ಪನೆಗೆ ಪೂರಕವಾಗಿ ಭಾರತವೂ ಸಾಗುತ್ತಿದೆ.
ಈ ನಡುವೆಯೇ ಭಾರತದ ಒಂದು ಹೆಗ್ಗಳಿಕೆಯೂ ವಿಶ್ವ ಸಮುದಾಯದ ಸಾಮಾಜಿಕ-ಆರ್ಥಿಕ-ರಾಜಕೀಯ ಸಂಕಥನಗಳಲ್ಲಿ ಚರ್ಚೆಗೊಳಗಾಗುತ್ತಿದೆ. ವಿಶ್ವದಲ್ಲೇ ಅತಿ ಹೆಚ್ಚಿನ ಸಂಖ್ಯೆಯ ಯುವ ಸಂಕುಲವನ್ನು ಹೊಂದಿರುವ ದೇಶವಾಗಿ ಭಾರತ ಹೊರಹೊಮ್ಮಿದೆ. ದೇಶದ ಜನಸಂಖ್ಯೆಯಲ್ಲಿ 25 ವರ್ಷದ ಕೆಳಗಿನ ಯುವ ಜನತೆಯ ಪ್ರಮಾಣ ಶೇ. 50ರಷ್ಟಿದೆ. ಶೇ. 65ಕ್ಕೂ ಹೆಚ್ಚು 35 ವರ್ಷದ ಕೆಳಗಿನ ಜನಸಂಖ್ಯೆ ದಾಖಲಾಗಿದೆ. ಒಟ್ಟಾರೆ ಶೇ. 66ರಷ್ಟು ಜನಸಂಖ್ಯೆಯ ವಯೋಮಾನ 35ಕ್ಕಿಂತಲೂ ಕಡಿಮೆ ಇದೆ. ಇದು ಆರ್ಥಿಕ ಬೆಳವಣಿಗೆಯ ದೃಷ್ಟಿಯಿಂದ ಸಕಾರಾತ್ಮಕವಾಗಿ ಕಾಣುವಂತೆಯೇ ಈ ಬೃಹತ್ ಜನಸಮೂಹವನ್ನು ಒಂದು ಸಂವೇದನಾಶೀಲ ಸಮಾಜವನ್ನಾಗಿ ರೂಪಿಸುವ ಬಹುದೊಡ್ಡ ಜವಾಬ್ದಾರಿಯೂ ಈ ದೇಶದ ನಾಗರಿಕತೆಯ ಮೇಲಿದೆ ಎನ್ನುವುದನ್ನು ಮರೆಯುವಂತಿಲ್ಲ.
ಯುವ ಸಮೂಹದ ಹತಾಶೆಗಳು
ಈ ಹಿನ್ನೆಲೆಯಲ್ಲೇ ಇತ್ತೀಚೆಗೆ ಸಂಸತ್ ಅಧಿವೇಶನದ ಸಂದರ್ಭದಲ್ಲಿ ನಡೆದ ಕೆಲವು ಘಟನೆಗಳನ್ನೂ ನೋಡಬೇಕಾಗಿದೆ. ಉತ್ತರದ ಹರಿಯಾಣದಿಂದ ದಕ್ಷಿಣದ ಮೈಸೂರುವರೆಗೆ ವಿಸ್ತರಿಸುವ ಯುವ ಸಮೂಹದ ಒಂದು ವಿಭಿನ್ನ ಅಭಿವ್ಯಕ್ತಿಯನ್ನು ಆರು ಯುವಕರು ಸಂಸತ್ ಅಧಿವೇಶನದಲ್ಲಿ ಅಕ್ರಮವಾಗಿ ಪ್ರವೇಶಿಸಿ, ಆತಂಕ ಸೃಷ್ಟಿಸಿರುವುದು, ಹಲವು ಆಯಾಮಗಳಲ್ಲಿ ಯೋಚಿಸಬೇಕಾದ ವಿಚಾರವಾಗಿದೆ. ಈ ಆರು ಆರೋಪಿಗಳನ್ನು ಇಡೀ ದೇಶದ ಯುವ ಸಮೂಹದ ಪ್ರತಿನಿಧಿಗಳಾಗಿ ಕಾಣಲು ಸಾಧ್ಯವಾಗದೆ ಹೋದರೂ, ಭಾರತ ಸಾಗುತ್ತಿರುವ ಮಾರುಕಟ್ಟೆ ಆರ್ಥಿಕ ಪಥ ಹಾಗೂ ಸಾಂಸ್ಕೃತಿಕ ರಾಜಕಾರಣದ ಕವಲು ಹಾದಿಗಳನ್ನು ಸೂಕ್ಷ್ಮವಾಗಿ ಗಮನಿಸದಾಗ, ಈ ಘಟನೆಯಲ್ಲಿ ಯುವ ಸಮೂಹದಲ್ಲಿ ಅಡಕವಾಗಿರಬಹುದಾದ ಹತಾಶೆ, ಆಕ್ರೋಶ, ಭ್ರಮನಿರಸನ ಹಾಗೂ ಅಸಮಾಧಾನದ ಒಂದಂಶವನ್ನಾದರೂ ಕಾಣಲು ಸಾಧ್ಯ.

ಸಂಸತ್ ಘಟನೆಯ ಹಿಂದೆ ಇರಬಹುದಾದ ಸಾಂಘಿಕ ಶಕ್ತಿಗಳನ್ನು ಶೋಧಿಸುವುದಕ್ಕಿಂತಲೂ ಹೆಚ್ಚಾಗಿ ಒಂದು ಪ್ರಜ್ಞಾವಂತ ಸಮಾಜ ನೋಡಬೇಕಿರುವುದು ನವ ಭಾರತ ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಹಾಗೂ ರಾಜಕೀಯವಾಗಿಯೂ ಯುವ ಸಮೂಹಕ್ಕೆ ತೋರುತ್ತಿರುವ ದಿಕ್ಕು ದೆಸೆಯನ್ನು. ಕಳೆದ 75 ವರ್ಷಗಳ ಸ್ವತಂತ್ರ ಆಳ್ವಿಕೆಯಲ್ಲಿ ಬೆರಳೆಣಿಕೆಯಷ್ಟು ಆದರ್ಶ ವ್ಯಕ್ತಿತ್ವಗಳನ್ನೂ ಸೃಷ್ಟಿಸಲಾಗದ ಭಾರತೀಯ ಸಮಾಜ ಇಂದಿಗೂ ಜೀವನಾದರ್ಶಗಳಿಗಾಗಿ, ರಾಜಕೀಯ ಮಾರ್ಗದರ್ಶನಕ್ಕಾಗಿ, ಸಾಂಸ್ಕೃತಿಕ ಅರಿವಿಗಾಗಿ 19-20ನೆಯ ಶತಮಾನದ ಗಾಂಧಿ, ಅಂಬೇಡ್ಕರ್, ವಿವೇಕಾನಂದ, ಠಾಗೂರ್ ಅವರತ್ತಲೇ ನೋಡಬೇಕಾಗಿರುವುದು ನಾವು ಪಡೆದುಕೊಂಡಿರುವ ಆಧುನಿಕ ನಾಗರಿಕತೆಯನ್ನೇ ಅಣಕಿಸುವಂತೆ ಕಾಣುವುದಿಲ್ಲವೇ ? ನೆಹರೂ ಅವರಿಂದ ವಾಜಪೇಯಿವರೆಗಿನ ರಾಜಕೀಯ ಪರ್ವದಲ್ಲಿ ಗುರುತಿಸಬಹುದಾದ ಆದರ್ಶದ ಒಂದಂಶವನ್ನಾದರೂ ವರ್ತಮಾನದ ರಾಜಕಾರಣದಲ್ಲಿ ಕಾಣಲು ಸಾಧ್ಯವಾಗಿದೆಯೇ ? ಈ ಜಟಿಲ ಪ್ರಶ್ನೆಗಳಿಗೆ ನಿರುತ್ತರರಾಗುತ್ತೇವೆ.
ಸಮಾಜ ನಿರ್ಮಾಣದ ಕವಲುಹಾದಿಗಳು
21ನೆಯ ಶತಮಾನದ ಭಾರತೀಯ ಸಮಾಜ ಯುವ ಸಮೂಹವನ್ನು ಎರಡು ನೆಲೆಗಳಲ್ಲಿ ನಿರ್ದೇಶಿಸುತ್ತಿರುವುದನ್ನು ಗಮನಿಸಬೇಕಿದೆ.
ಮೊದಲನೆಯದು ರಾಜಕೀಯವಾಗಿ ಜಾತಿ/ಧರ್ಮ/ಮತ/ಪ್ರಾದೇಶಿಕ ಅಸ್ಮಿತೆಗಳಲ್ಲಿ ಯುವ ಸಮುದಾಯವನ್ನು ವಿಂಗಡಿಸುತ್ತಾ, ರಾಜಕೀಯ ಪಕ್ಷಗಳು (ಎಡಪಕ್ಷಗಳನ್ನು ಹೊರತುಪಡಿಸಿ) ತಮ್ಮ ಮಹತ್ವಾಕಾಂಕ್ಷಿ ಅಧಿಕಾರ ರಾಜಕಾರಣಕ್ಕೆ ಅನುಗುಣವಾಗಿ ಯುವ ಸಮೂಹದಲ್ಲಿ ಇರಬೇಕಾದ ಮನುಜ ಸೂಕ್ಷ್ಮತೆಯನ್ನು ಹಾಳುಗೆಡಹುತ್ತಿವೆ. ತಮ್ಮ ಅಯ್ಕೆ ಅಥವಾ ಅರಿವಿಲ್ಲದೆ ಹುಟ್ಟಿನಿಂದ ಪಡೆದುಕೊಳ್ಳುವ ಜಾತಿ/ಧರ್ಮಗಳ ನೆಲೆಗಳಿಂದ ಯುವ ಸಮೂಹವನ್ನು ಮುಕ್ತಗೊಳಿಸಿ, ಮನುಜ ಸೂಕ್ಷ್ಮತೆಯುಳ್ಳ ಸಂವೇದನಾಶೀಲ ಶಕ್ತಿಯನ್ನಾಗಿ ರೂಪಿಸುವ ಬದಲು, ಬಹುತೇಕ ರಾಜಕೀಯ ಪಕ್ಷಗಳು ಈ ಬೃಹತ್ ಸಮೂಹವನ್ನು ತಮ್ಮ ದಾಳಗಳಾಗಿ ಪರಿವರ್ತಿಸುತ್ತಿವೆ. ಮತೀಯವಾದ, ಮತಾಂಧತೆ ಮತ್ತು ಜಾತಿ ಶ್ರೇಷ್ಠತೆಯ ವಿಷಬೀಜಗಳನ್ನು ಬಿತ್ತುವ ಮೂಲಕ ಯುವ ಸಂಕುಲವನ್ನು ಅಧಿಕಾರ ರಾಜಕಾರಣದ ಅಥವಾ ಅಧಿಕಾರ ಕೇಂದ್ರಗಳ ದಾಳಗಳಾಗಿ ಬಳಸಿಕೊಳ್ಳಲಾಗುತ್ತಿದೆ. ಸಮಕಾಲೀನ ರಾಜಕೀಯ ಆದರ್ಶ ವ್ಯಕ್ತಿತ್ವವೇ ಇಲ್ಲದ ಮಿಲೆನಿಯಂ ಮಕ್ಕಳ ದೃಷ್ಟಿಯಿಂದ ಇಂತಹ ಒಂದು ಸನ್ನಿವೇಶ ಅಪೇಕ್ಷಣೀಯವಂತೂ ಆಗಲಾರದು.
ಈ ಯುವ ಸಮೂಹ ಎದುರಿಸುತ್ತಿರುವ ಜೀವನ ನಿರ್ವಹಣೆಯ ಸಮಸ್ಯೆಗಳಿಗೆ ವಿಶ್ವಾಸಾರ್ಹವಾದ ಒಂದು ಭವಿಷ್ಯದ ಹಾದಿಯನ್ನು ನಿರ್ಮಿಸುವಲ್ಲಿ ಆಳುವ ವರ್ಗಗಳು ಸೋಲುತ್ತಿವೆ. ವಾಣಿಜ್ಯೀಕರಣಗೊಂಡಿರುವ ಶೈಕ್ಷಣಿಕ ಜಗತ್ತಿನಿಂದ ಹೊರಬರುವ ಯುವ ಸಮೂಹಕ್ಕೆ ಒಂದು ಸುಭದ್ರ ಜೀವನ ಕಲ್ಪಿಸುವಂತಹ ಉದ್ಯೋಗಾವಕಾಶಗಳನ್ನು ಒದಗಿಸಲು ನವ ಉದಾರವಾದಿ ಕಾರ್ಪೋರೇಟ್ ಆರ್ಥಿಕ ನೀತಿಗಳು ವಿಫಲವಾಗುತ್ತಿವೆ. ಶಿಕ್ಷಣ ವ್ಯವಸ್ಥೆಯಲ್ಲಿ ಇರಬೇಕಾದ ಜೀವನ ಮೌಲ್ಯಗಳನ್ನು ನೇಪಥ್ಯಕ್ಕೆ ಸರಿಸಿ, ಇತಿಹಾಸವನ್ನು ವಿಕೃತಗೊಳಿಸುವ ಮೂಲಕ ಯುವ ಸಮೂಹದ ಮನಸ್ಸುಗಳನ್ನು ಕಲುಷಿತಗೊಳಿಸಲಾಗುತ್ತಿದೆ. ಭಾರತವು ಶತಮಾನಗಳಿಂದ ಅನುಸರಿಸಿಕೊಂಡು ಬಂದಂತಹ ಜೀವನಾದರ್ಶದ ಮೌಲ್ಯಗಳನ್ನು, ಸಾಂಸ್ಕೃತಿಕ ಬೇರುಗಳನ್ನು ಸಡಿಲಗೊಳಿಸುವ ಮೂಲಕ, ಸಂವಿಧಾನ ಆಶಿಸುವಂತಹ ಸಮನ್ವಯ ಸಮಾಜಕ್ಕೂ ಧಕ್ಕೆ ಉಂಟುಮಾಡಲಾಗುತ್ತಿದೆ. ರಾಜಕೀಯ ಅಸ್ತಿತ್ವಕ್ಕಾಗಿ ಬಿತ್ತಲಾಗುವ ದ್ವೇಷಾಸೂಯೆಯ ಬೀಜಗಳು ಯುವ ಸಮೂಹದಲ್ಲಿ ಹಿಂಸಾತ್ಮಕ ಧೋರಣೆಯನ್ನು ಹೆಚ್ಚಿಸುತ್ತಿರುವುದೇ ಅಲ್ಲದೆ, ಮನುಜ ಸೂಕ್ಷ್ಮತೆ ಮತ್ತು ಸಂವೇದನೆಗಳನ್ನೂ ನಾಶಪಡಿಸುತ್ತಿವೆ.
ನಮ್ಮವರಲ್ಲದವರನ್ನು ಥಳಿಸುವ, ಬಹಿಷ್ಕರಿಸುವ, ಕೊಲ್ಲುವ ಮನೋಭಾವವನ್ನು ಯುವ ಸಮೂಹದಲ್ಲಿ ಸೃಷ್ಟಿಸುವುದಷ್ಟೇ ಅಲ್ಲದೆ ಅವರ ಕೈಗೆ ಒಂದು ಆದರ್ಶ ಸಮಾಜ ನಿರ್ಮಾಣದ ಉಪಕರಣಗಳನ್ನು ನೀಡುವ ಬದಲು ತ್ರಿಶೂಲ, ತಲವಾರು, ಬಾಂಬು, ಮಾದಕ ವಸ್ತುಗಳು ಹಾಗೂ ಸೈದ್ಧಾಂತಿಕವಾದ ದ್ವೇಷಾಸ್ತ್ರಗಳನ್ನು ನೀಡುತ್ತಿದ್ದೇವೆ. ಸಹಬಾಳ್ವೆ ಮತ್ತು ಸೌಹಾರ್ದತೆಗೆ ಅವಶ್ಯವಾದ ಉದಾತ್ತ ಭಾವನೆಗಳನ್ನು ನೀಡುವ ಬದಲು, ಇತಿಹಾಸದಿಂದ ಹೆಕ್ಕಿತೆಗೆದ ಅಸಹಿಷ್ಣುತೆಯ ಚಿಂತನಾವಾಹಿನಿಗಳನ್ನು ಯುವ ಸಮೂಹದ ನಡುವೆ ವ್ಯವಸ್ಥಿತವಾಗಿ ನೆಡುತ್ತಿದ್ದೇವೆ. ಬೌದ್ಧಿಕವಾಗಿ ಆಗಲೀ, ಭೌತಿಕವಾಗಿ ಆಗಲೀ ಹಿಂಸೆಯನ್ನು ಪ್ರಚೋದಿಸುವ ಯಾವುದೇ ಸಾಧನ ಒಮ್ಮೆ ಬಳಸುವವರ ಕೈ ಸೇರಿದರೆ, ಅದನ್ನು ಒದಗಿಸುವವರೂ ಅಂತಹ ಸಾಧನಗಳ ನಿಯಂತ್ರಣವನ್ನು ಕಳೆದುಕೊಳ್ಳುತ್ತಾರೆ. ಯುವ ಸಮೂಹದ ಕೈಗೆ ತಲುಪಿಸಲಾಗುತ್ತಿರುವ ಇಂತಹ ಸಾಧನಗಳೇ ಸಮಾಜದಲ್ಲಿ, ವಿಶೇಷವಾಗಿ ಯುವ ಸಮೂಹದ ನಡುವೆ, ಜಾತಿ ದೌರ್ಜನ್ಯ, ಅತ್ಯಾಚಾರ, ಗುಂಪು ಹಲ್ಲೆ, ಥಳಿತ, ಹತ್ಯೆ, ಮತೀಯ ದಾಳಿ ಇನ್ನಿತರ ಅಪರಾಧಗಳ ಹೆಚ್ಚಳಕ್ಕೆ ಕಾರಣವಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಬೇಕಿದೆ.
ಎರಡನೆಯದಾಗಿ ನಾವು ಗಮನಿಸಬೇಕಾದ ಗಂಭೀರ ವಿಚಾರ ಎಂದರೆ ಯುವ ಸಮೂಹವನ್ನು ದಿಕ್ಕುತಪ್ಪಿಸುತ್ತಿರುವ ಸಾಂಸ್ಕೃತಿಕ-ರಾಜಕೀಯ ನಿರೂಪಣೆಗಳು ಮತ್ತು ಇದರಲ್ಲಿ ಮುದ್ರಣ-ವಿದ್ಯುನ್ಮಾನ ಮಾಧ್ಯಗಳ ಪಾತ್ರ. ದೇಶ, ರಾಷ್ಟ್ರ, ರಾಷ್ಟ್ರೀಯತೆ, ದೇಶಭಕ್ತಿ/ಪ್ರೇಮ ಈ ಉದಾತ್ತ ಲಕ್ಷಣಗಳ ವ್ಯಾಖ್ಯಾನಗಳನ್ನೇ ಬದಲಿಸುವ ಮೂಲಕ ವರ್ತಮಾನದ ಸಮಾಜದಲ್ಲಿ ಇರಲೇಬೇಕಾದ ಪ್ರೀತಿ ವಾತ್ಸಲ್ಯದ ಬೌದ್ಧಿಕ ವಾಹಕಗಳನ್ನು ಕಲುಷಿತಗೊಳಿಸಲಾಗುತ್ತಿದೆ. ಮತ್ತೊಂದೆಡೆ ಇತಿಹಾಸದಲ್ಲಿ ದಾಖಲಾಗಿರುವ ಈ ಮನುಜ ಪ್ರೀತಿಯ ಚಿಂತನಾವಾಹಿನಿಗಳನ್ನೂ ಮಲಿನಗೊಳಿಸಿ, ಇಡೀ ಚರಿತ್ರೆಯನ್ನು ಅಥವಾ ಚಾರಿತ್ರಿಕ ವ್ಯಕ್ತಿಗಳನ್ನು ವರ್ತಮಾನದ ಚೌಕದಲ್ಲಿ ನಿಲ್ಲಿಸಿ ಮರುವ್ಯಾಖ್ಯಾನಕ್ಕೊಳಪಡಿಸುವ ಮೂಲಕ, ಭಾರತದ ಚರಿತ್ರೆಯಲ್ಲಿ ಶಾಶ್ವತ ಹೆಜ್ಜೆಗಳನ್ನು ದಾಖಲಿಸಿರುವ ಮಹನೀಯರನ್ನೂ ಖಳನಾಯಕರಂತೆ ಬಿಂಬಿಸಲಾಗುತ್ತಿದೆ. ಹಾಗಾಗಿಯೇ ತಮ್ಮ ಜೀವತೆತ್ತು ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಗಾಂಧಿಯನ್ನೂ ಸೇರಿದಂತೆ ಶತಮಾನಗಳ ಹಿಂದಿನ ಮಹಾನ್ ವ್ಯಕ್ತಿಗಳೂ ಇಂದು ದ್ವೇಷಿಸಲ್ಪಡುತ್ತಿದ್ದಾರೆ.
ವಾಲ್ಮೀಕಿಯಿಂದ ಹಿಡಿದು ಠಾಗೋರ್-ಕುವೆಂಪುವರೆಗೆ, ಬುದ್ಧನಿಂದ ಗಾಂಧಿ-ಅಂಬೇಡ್ಕರ್‌ವರೆಗೆ, ಸಾಮ್ರಾಟ್ ಅಶೋಕನಿಂದ ನೆಹರೂವರೆಗೆ ಭಾರತದ ಸಾಂಸ್ಕೃತಿಕ ಪರಂಪರೆ, ರಾಜಕೀಯ ಸಂಸ್ಕೃತಿ, ಸಾಮಾಜಿಕ ಭೂಮಿಕೆ ಹಾಗೂ ಆಡಳಿತ ನಿರ್ವಹಣೆಯ ಮಾದರಿಗಳನ್ನು ನಿರ್ಮಿಸಿದ ಎಲ್ಲ ಮಹನೀಯರನ್ನೂ ವರ್ತಮಾನದ ಜಾತಿ ರಾಜಕಾರಣ, ಮತೀಯವಾದ ಹಾಗೂ ಮತಾಂಧತೆಯ ನೆಲೆಯಲ್ಲಿಟ್ಟು ನೋಡುವ ಮೂಲಕ ಇಂದು ಸಮಕಾಲೀನ ಭಾರತವೇ ಸೃಷ್ಟಿಸಿಕೊಂಡಿರುವ ಅಸ್ಮಿತೆಗಳ ಅನುಸಾರ ಅಡ್ಡಡ್ಡಲಾಗಿ ಸೀಳುತ್ತಿದ್ದೇವೆ. ಈ ಅಸ್ಮಿತೆಗಳು ಹಾಗೂ ಅದರ ಸುತ್ತಲಿನ ವರ್ತಮಾನದ ಸಾಮಾಜಿಕ ನೆಲೆಗಳನ್ನೇ ಚರಿತ್ರೆಯ ಪುಟಗಳಿಗೂ ಆರೋಪಿಸುವ ಮೂಲಕ ನೂರಾರು ಚಾರಿತ್ರಿಕ ವ್ಯಕ್ತಿಗಳನ್ನು ನಿರ್ಜೀವ ಪ್ರತಿಮೆಗಳನ್ನಾಗಿ ಮಾಡಿಬಿಟ್ಟಿದ್ದೇವೆ. ಡಿಜಿಟಲ್ ಯುಗದಲ್ಲಿ ಆಧುನಿಕ ಸಮಾಜ ಸೃಷ್ಟಿಸಿಕೊಂಡಿರುವ ಸ್ವಾರ್ಥಪರತೆಯ ಸಂಕುಚಿತ ಮನೋಭಾವಗಳ ಮೂಲವನ್ನು ಈ ಮಹನೀಯರಲ್ಲಿ ಶೋಧಿಸುವ ಮೂಲಕ, ಸಮಕಾಲೀನ ಆಧುನಿಕ ವಿಕೃತ ಗುಣಲಕ್ಷಣಗಳೆಲ್ಲವನ್ನೂ ಆ ಮಹಾನ್ ವ್ಯಕ್ತಿಗಳಿಗೂ ಆರೋಪಿಸುತ್ತಿದ್ದೇವೆ. ಈ ಮರುವಿನ್ಯಾಸಕ್ಕೊಳಗಾದ ಪ್ರತಿಮೆಗಳ ಸುತ್ತಲೂ ಈ ಹೊತ್ತಿನ ಸ್ವಾರ್ಥ ರಾಜಕಾರಣಕ್ಕೆ ಅಗತ್ಯವಾದ ಅಸ್ಮಿತೆಗಳನ್ನು ಸೃಷ್ಟಿಸಿಕೊಂಡು, ಇಡೀ ಯುವ ಸಮೂಹವನ್ನು ಇಂತಹ ಅಸ್ಮಿತೆಗಳ ಕೂಪಕ್ಕೆ ತಳ್ಳುತ್ತಿದ್ದೇವೆ.
ಮುಕ್ತ ಸ್ವಚ್ಚಂದ ಸಮಾಜದಲ್ಲಿ ವಿಕಸನಗೊಳ್ಳುತ್ತಾ ಬೌದ್ಧಿಕ ಸಮೃದ್ಧತೆಯತ್ತ ಸಾಗಬೇಕಾದ ಯುವ ಸಮೂಹವನ್ನು ಅಸ್ಮಿತೆಗಳ ಕೂಪವಾಸಿಗಳನ್ನಾಗಿ ಮಾಡುವುದೇ ಅಲ್ಲದೆ, ಅವರನ್ನು ಶಾಶ್ವತವಾಗಿ ಅಂಧಕಾರಕ್ಕೆ ನೂಕುವಂತಹ ಬೌದ್ಧಿಕ ಸರಕುಗಳನ್ನು ಸಾಹಿತ್ಯಕವಾಗಿಯೂ, ಆಡಳಿತಾತ್ಮಕವಾಗಿಯೂ ಈ ಸಮಾಜ ಒದಗಿಸುತ್ತಾ ಬಂದಿದೆ. ವಸುದೈವ ಕುಟುಂಬಕಂ ಎಂದ ಕೂಡಲೇ ಪುಳಕಿತರಾಗಿ ನಮ್ಮ ಶತಮಾನಗಳ ಸಾಂಸ್ಕೃತಿಕ ಪರಂಪರೆಗಳನ್ನು ಮುನ್ನೆಲೆಗೆ ತರುವ ಒಂದು ಸಮಾಜವೇ ಮತ್ತೊಂದು ಬದಿಯಲ್ಲಿ ಪ್ರತಿಯೊಂದು ಕುಟುಂಬದಲ್ಲೂ ಸೈದ್ಧಾಂತಿಕ ವಿಭಜನೆಯ ಗೆರೆಗಳನ್ನು ಶಾಶ್ವತಗೊಳಿಸುತ್ತಿರುವುದು ವರ್ತಮಾನದ ದುರಂತ. ಹಿರಿಯ ತಲೆಮಾರಿನ ಆದರ್ಶಗಳನ್ನು ಕಡೆಗಣಿಸುವುದೇ ಅಲ್ಲದೆ, ಈ ವಿಭಜಿತ ಗೆರೆಗಳ ಮತ್ತೊಂದು ಬದಿಯಲ್ಲಿ ನಿಲ್ಲುವ ಯುವ ಸಮೂಹ ನವ ಉದಾರವಾದಿ ಆರ್ಥಿಕತೆಗೆ ಭ್ರಮಾಧೀನರಾಗುತ್ತಲೇ ಸಾಂಸ್ಕೃತಿಕವಾಗಿ ದ್ವೇಷ ರಾಜಕಾರಣದ ನಿರೂಪಣೆಗಳ ದಾಸ್ಯಕ್ಕೊಳಗಾಗುತ್ತಿದೆ. ನವ ಉದಾರವಾದ ಸೃಷ್ಟಿಸುತ್ತಿರುವ ಆರ್ಥಿಕ ಅನಿಶ್ಚಿತತೆ ಮತ್ತು ಸಾಮಾಜಿಕ ಅಭದ್ರತೆಗಳು ಯುವ ಸಮೂಹವನ್ನು ದ್ವೇಷಾಸೂಯೆಗಳ ಸಂಕೋಲೆಗಳಲ್ಲಿ ಬಂಧಿಸುತ್ತಿದೆ.
ಸಾಮಾಜಿಕ ಪ್ರಜ್ಞೆಯ ಶೋಧದಲ್ಲಿ
ಈ ಎರಡೂ ನೆಲೆಗಳನ್ನು ಪ್ರತ್ಯೇಕಿಸಿ ಅಥವಾ ಒಂದೇ ಚೌಕಟ್ಟಿನಲ್ಲಿಟ್ಟು ನೋಡಿದರೂ ನಮಗೆ ಕಾಣುವುದು ಯುವ ಸಮೂಹದಲ್ಲಿ ಆಳವಾಗಿ ಬೇರೂರುತ್ತಿರುವ ಸಾಮಾಜಿಕ ನಿಷ್ಕ್ರಿಯತೆ ಹಾಗೂ ಸಾಂಸ್ಕೃತಿಕ ದಾರಿದ್ರ್ಯ . ಅಸ್ಪೃಶ್ಯತೆ-ಸಾಮಾಜಿಕ ಬಹಿಷ್ಕಾರ-ಮರ್ಯಾದೆಗೇಡು ಹತ್ಯೆಯಂತಹ ಹೀನ ನಡವಳಿಕೆಗಳಾಗಲೀ, ಅತ್ಯಾಚಾರ-ಲೈಂಗಿಕ ದೌರ್ಜನ್ಯ-ಹೆಣ್ಣು ಭ್ರೂಣ ಹತ್ಯೆಯಂತಹ ಅಮಾನುಷ ಚಟುವಟಿಕೆಗಳಾಗಲೀ, ಕೋಮು ದ್ವೇಷ-ಮತಾಂಧತೆ-ಜಾತಿ ಶ್ರೇಷ್ಠತೆಯಿಂದ ನಡೆಯುವ ಅಮಾನವೀಯ ಹತ್ಯೆಗಳಾಗಲೀ, ಸುಶಿಕ್ಷಿತ ಯುವ ಸಮೂಹವನ್ನು ಜಾಗೃತಗೊಳಿಸುತ್ತಿಲ್ಲ ಎನ್ನುವುದು ನಮ್ಮನ್ನು ಕಾಡಬೇಕಾದ ವಿಚಾರ. ಇದಕ್ಕೆ ಕಾರಣ ನಮ್ಮ ನಡುವಿನ ರಾಜಕೀಯ ಪಕ್ಷಗಳು, ಕಾರ್ಪೋರೇಟ್ ನಿಯಂತ್ರಿತ ಮಾಧ್ಯಮಗಳು ಅಪರಾಧ-ಅಪರಾಧಿ ಹಾಗೂ ಸಂತ್ರಸ್ತರನ್ನು ಅಸ್ಮಿತೆಗಳ ನೆಲೆಯಲ್ಲೇ ವಿಂಗಡಿಸಿ ಸಾಪೇಕ್ಷ ನೆಲೆಯಲ್ಲಿ ನೋಡುವ ಒಂದು ಪರಂಪರೆಯನ್ನು ಹುಟ್ಟುಹಾಕಿವೆ.

ಅಮಾಯಕ ಮಹಿಳೆಯ ಬೆತ್ತಲೆ ಮೆರವಣಿಗೆಯಾಗಲೀ, ಎಳೆ ಬಾಲೆಯ ಮೇಲಿನ ಅತ್ಯಾಚಾರವಾಗಲೀ ಸಾಮಾಜಿಕ ಸಂಕಥನಗಳಲ್ಲಿ ಆರೋಪಿಯ-ಸಂತ್ರಸ್ತರ ಜಾತಿ/ಧರ್ಮದಅಸ್ಮಿತೆಗಳ ಚೌಕಟ್ಟಿನಲ್ಲೇ ನಿಷ್ಕರ್ಷೆಗೊಳಗಾಗುವ ಸಹಜ ವಿದ್ಯಮಾನಗಳಾಗಿ ಚರ್ಚೆಗೊಳಗಾಗುತ್ತವೆ. ಈ ಸಾಪೇಕ್ಷತೆಯ ಪರಿಣಾಮವಾಗಿ ಅಪರಾಧ ಜಗತ್ತು ಮತ್ತಷ್ಟು ವಿಸ್ತರಿಸುತ್ತಿದ್ದರೆ, ಪಾತಕ ಕೃತ್ಯಗಳು ಅಧಿಕೃತವಾಗಿ ಮಾನ್ಯತೆಯನ್ನೂ ಪಡೆಯುತ್ತಿವೆ. ಮತ್ತೊಂದೆಡೆ ನಿರಂತರವಾಗಿ ಶೋಷಣೆ-ದೌರ್ಜನ್ಯಕ್ಕೊಳಗಾಗುತ್ತಿರುವ ತಳಸಮುದಾಯಗಳು, ಆದಿವಾಸಿಗಳು, ಮಹಿಳಾ ಸಮೂಹ ನಿಸ್ಸಹಾಯಕತೆಯಿಂದ ಮೌನಕ್ಕೆ ಜಾರುವಂತಾಗಿದೆ. ಈ ಸಾಂಸ್ಕೃತಿಕ ವಿಕೃತಿಯ ವಿರುದ್ಧ ಸಿಡಿದೇಳಬೇಕಾದ ಯುವ ಸಮಾಜವನ್ನು ಮೌನ ಪ್ರೇಕ್ಷಕ ಸ್ಥಿತಿಯಿಂದ ಅಥವಾ ವಂದಿಮಾಗಧ ಆರಾಧಕ ಮನಸ್ಥಿತಿಯಿಂದ, ಪ್ರಜಾಸತ್ತಾತ್ಮಕ ಧ್ವನಿಯ ಪರಿಚಾರಕರಾಗಿ ಪರಿವರ್ತಿಸುವ ಜವಾಬ್ದಾರಿಯನ್ನು ಯಾರು ಹೊರಬೇಕು ?
ವರ್ತಮಾನದ ಸಂದರ್ಭದಲ್ಲಿ ಸಾಹಿತ್ಯ, ರಂಗಭೂಮಿ, ಚಿತ್ರಕಲೆ, ದೃಶ್ಯಕಲೆ ಹಾಗೂ ಇನ್ನಿತರ ಸೃಜನಶೀಲ ಅಭಿವ್ಯಕ್ತಿ ಸಾಧನಗಳು ಮಾತ್ರ ಈ ಜವಾಬ್ದಾರಿಯನ್ನು ಹೊರಲು ಸಾಧ್ಯ. ಈ ವಲಯಗಳಲ್ಲಿ ಇರಬೇಕಾದ ಸ್ವಾಯತ್ತತೆಯನ್ನೂ ಕಸಿದುಕೊಳ್ಳುವ ಅಥವಾ ಹೊಸಕಿಹಾಕುವ ರಾಜಕೀಯ ಪ್ರಯತ್ನಗಳ ನಡುವೆಯೇ ಪ್ರಜ್ಞಾವಂತ ಸಮಾಜ ಯುವ ಸಮೂಹಕ್ಕೆ ಒಂದು ಆದರ್ಶಪ್ರಾಯ ಜಗತ್ತಿನ ಪರಿಚಯ ಮಾಡಿಸಬೇಕಿದೆ. ಸಹೃದಯತೆ, ಸೌಹಾರ್ದತೆ, ಸಹಜೀವನ, ಸಮನ್ವಯತೆ ಹಾಗೂ ಇವೆಲ್ಲವನ್ನೂ ನಿರ್ಧರಿಸುವ ಭ್ರಾತೃತ್ವದ ಭಾವನೆಯನ್ನು ಯುವ ಸಮೂಹದಲ್ಲಿ ಮೂಡಿಸಿದ್ದೇ ಆದರೆ, ಆಗ ಯುವ ಜನತೆಯ ಆತ್ಮವಿಶ್ವಾಸವನ್ನೂ ಬಲಪಡಿಸಲು ಸಾಧ್ಯ. ಆಗ ಎಂತಹ ಹತಾಶೆಯಾದರೂ, ಭ್ರಮನಿರಸನವಾದರೂ ಅದು ಸಹಿಷ್ಣುತೆಯ ಲಕ್ಷ್ಮಣರೇಖೆಯನ್ನು ದಾಟಿ ಹೋಗಲು ಪ್ರಚೋದಿಸುವುದಿಲ್ಲ.
ಭವಿಷ್ಯದ ಹಾದಿ !!!
ತಮ್ಮ ಅನಿಶ್ಚಿತ ಭವಿಷ್ಯವನ್ನು ರೂಪಿಸಿಕೊಳ್ಳುವ, ಸಾಮಾಜಿಕ ಅಭದ್ರತೆಯನ್ನು ನೀಗಿಸಿಕೊಳ್ಳುವ ಹಾದಿಯಲ್ಲಿ ಯುವ ಸಮೂಹ ಯಾವುದೇ ರೀತಿಯ ಹಿಂಸಾತ್ಮಕ ಹಾದಿಯನ್ನು ತುಳಿಯದಂತೆ ಕಾಪಾಡಬೇಕಾದರೆ, ಅವರಲ್ಲಿ ಸಹಾನುಭೂತಿ, ಪರಾನುಭೂತಿ ಹಾಗೂ ಸಹಿಷ್ಣುತೆಯನ್ನು ಮೂಡಿಸುವ ಪ್ರಯತ್ನಗಳು ನಡೆಯಬೇಕು. ಭಾರತದ ಇತಿಹಾಸ ಪುಟಗಳಲ್ಲಿ ಈ ಗುರಿಸಾಧನೆಗೆ ಬೇಕಾದ ನಿದರ್ಶನಗಳು ಹೇರಳವಾಗಿವೆ. ಅವುಗಳನ್ನು ಯುವ ಸಮೂಹಕ್ಕೆ ತಲುಪಿಸುವುದಾಗಬೇಕು. ಹಾಗಾಗಬೇಕಾದರೆ, ಈ ನಿದರ್ಶನಪ್ರಾಯರನ್ನೇ ದ್ವೇಷಿಸಲು ಪ್ರಚೋದಿಸುವ ಸಾಂಸ್ಕೃತಿಕ ಪ್ರಯತ್ನಗಳನ್ನು ಕೊನೆಗಾಣಿಸಬೇಕು. ಆಗ ಯುವ ಸಮುದಾಯಕ್ಕೆ ತಾವು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳು ಹಾಗೂ ಜಟಿಲ ಸವಾಲುಗಳಿಗೆ ಪರಿಹಾರೋಪಾಯಗಳನ್ನು ಶೋಧಿಸುವ ವ್ಯವಧಾನ ಬೆಳೆಯುತ್ತದೆ.
ಈ ಮಾನವೀಯ ವ್ಯವಧಾನವೇ ಯುವ ಸಮೂಹದಲ್ಲಿ ಮನುಜ ಸೂಕ್ಷ್ಮತೆಯನ್ನು, ಲಿಂಗ ಸೂಕ್ಷ್ಮತೆಯನ್ನು ಹಾಗೂ ಸಾಮಾಜಿಕ-ಸಾರ್ವಜನಿಕ ಸುಪ್ರಜ್ಞೆಯನ್ನು ಉದ್ಧೀಪನಗೊಳಿಸುತ್ತದೆ. ಸಂಸತ್ ಭವನದಲ್ಲಿ ಅವಾಂತರ ಸೃಷ್ಟಿಸಿದ ಕೆಲವೇ ಯುವಕರು ಈ ಸುಪ್ರಜ್ಞೆಯ ಕೊರತೆಯನ್ನು ಪ್ರತಿನಿಧಿಸುವ ಹಾಗೆಯೇ, ನವ ಉದಾರವಾದ-ದ್ವೇಷ ರಾಜಕಾರಣ ಸೃಷ್ಟಿಸಿರುವ ಹತಾಶೆ ಆಕ್ರೋಶಗಳ ಸಾರ್ವಜನಿಕ ಅಭಿವ್ಯಕ್ತಿಯ ಸಂಕೇತಗಳಾಗಿಯೂ ಕಾಣುತ್ತಾರೆ. ಆಧುನಿಕತೆ ಹಾಗೂ ನಾಗರಿಕತೆಯ ಮುಸುಕು ಹೊದ್ದಿರುವ ಹಿರಿಯ-ಕಿರಿಯ ತಲೆಮಾರಿನ ಒಂದು ಸಮಾಜ ತನ್ನ ಈ ವೈಫಲ್ಯ ಅಥವಾ ನಿರ್ಲಿಪ್ತತೆಯಂತೆ ತೋರುವ ನಿಷ್ಕ್ರಿಯತೆಯನ್ನು ಪ್ರಾಮಾಣಿಕವಾಗಿ ಒಪ್ಪಿಕೊಂಡು ಕಾರ್ಯಪ್ರವೃತ್ತವಾದಲ್ಲಿ, ಕ್ರಿಯಾಶೀಲವಾದಲ್ಲಿ, ಈ ದೇಶದ ಯುವ ಸಂಕುಲವನ್ನು “ಸರ್ವ ಜನಾಂಗದ ಶಾಂತಿಯ ತೋಟದ” ಮಾಲಿಗಳನ್ನಾಗಿ/ಮಾಲಿಕರನ್ನಾಗಿ ರೂಪಿಸಲು ಸಾಧ್ಯ. ರಾಜಕೀಯ ಪಕ್ಷಗಳಿಗೆ/ಶಕ್ತಿಗಳಿಗೆ ಅರ್ಥವಾಗದ ಈ ಪ್ರಮೇಯವನ್ನು ಪ್ರಜ್ಞಾವಂತ ಸಮಾಜವೇ ಬಿಡಿಸುತ್ತಾ ಮುನ್ನಡೆಯಬೇಕಿದೆ.
-೦-೦-೦-