ಲಿವ್ ಇನ್ ಜೋಡಿಗೆ ರಕ್ಷಣೆ ನೀಡಲು ಪಂಜಾಬ್ ಹೈಕೋರ್ಟ್ ನಿರಾಕರಣೆ: ಸಾಮಾಜಿಕ ನೈತಿಕತೆ ಕಾರಣ ನೀಡಿದ ಕೋರ್ಟ್!

ಲಿವ್ಇನ್ ಸಂಬಂಧಗಳು ಸಾಮಾಜಿಕವಾಗಿ ಮತ್ತು ನೈತಿಕವಾಗಿ ಸ್ವೀಕಾರಾರ್ಹವಲ್ಲ ಎಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಇತ್ತೀಚೆಗೆ ತಮ್ಮ ಜೀವ ರಕ್ಷಣೆ ಕೋರಿದ ದಂಪತಿಗಳಿಗೆ ರಕ್ಷಣೆ ನೀಡಲು ನಿರಾಕರಿಸಿ ತೀರ್ಪು ನೀಡಿದೆ.

ಉತ್ತರ ಪ್ರದೇಶದ 19 ವರ್ಷದ ಮಹಿಳೆ ಮತ್ತು ಪಂಜಾಬ್‌ನ 22 ವರ್ಷದ ಪುರುಷ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ಮಹಿಳೆಯ ಕುಟುಂಬದಿಂದ ತಮ್ಮ ಜೀವ ಮತ್ತು ಸ್ವಾತಂತ್ರ್ಯವನ್ನು ರಕ್ಷಿಸಲು ಪಂಜಾಬ್ ಪೊಲೀಸರಿಗೆ ನಿರ್ದೇಶನ ಕೋರಬೇಕೆಂದು ಹೈಕೋರ್ಟ್‌‌ನ ಮೊರೆ ಹೋಗಿದ್ದರು.

ನ್ಯಾಯಮೂರ್ತಿ ಹೆಚ್.ಎಸ್. ಮದನ್ ಅವರ ನೇತೃತ್ವದ ನ್ಯಾಯಪೀಠ, ಈ ವಿಷಯವನ್ನು ಆಲಿಸಿದ ನಂತರ “ ಪ್ರಸ್ತುತ ಅರ್ಜಿ ಸಲ್ಲಿಸಿದ ಅರ್ಜಿದಾರರು ತಮ್ಮ ಲಿವ್ಇನ್ ಸಂಬಂಧದ ಬಗ್ಗೆ ಅನುಮೋದನೆಯ ಮುದ್ರೆಯನ್ನು ಕೋರಿದ್ದಾರೆ, ಆದರೆ ಇದು ನೈತಿಕವಾಗಿ ಮತ್ತು ಸಾಮಾಜಿಕವಾಗಿ ಸ್ವೀಕಾರಾರ್ಹವಲ್ಲ. ಆದ್ದರಿಂದ ಅರ್ಜಿಯಲ್ಲಿ ಯಾವುದೇ ರಕ್ಷಣಾ ಆದೇಶವನ್ನು ರವಾನಿಸದೆ  ಅರ್ಜಿಯನ್ನು ವಜಾಗೊಳಿಸಲಾಗಿದೆ” ಎಂದು ತೀರ್ಪು ನೀಡಿದೆ.

ಆದರೆ ಕೌಟುಂಬಿಕ ಕಾಯ್ದೆ 2005  ‘ ಇಬ್ಬರು ವಯಸ್ಕರು ಯಾವುದೇ ಸಮಯದಲ್ಲಿ ಒಂದು ಮನೆಯಲ್ಲಿ ವಾಸಿಸುತ್ತಿದ್ದರೆ, ಅವರ ಮಧ್ಯೆ ಸಹಭಾಗಿತ್ವ ಇದ್ದರೆ, ಅವರು ಮದುವೆಯಾಗಿದ್ದರೆ, ಅವರ ಮಧ್ಯೆ ಮದುವೆಯಂತಹ ಸಂಬಂಧ ಇದ್ದರೆ, ದತ್ತು ಪಡೆದಿದ್ದರೆ ಅಥವಾ ಅವಿಭಕ್ತ ಕುಟುಂಬದಂತೆ ಬದುಕುತ್ತಿದ್ದರೆ’ ಅದು ‘ಕುಟುಂಬ ಸಂಬಂಧ’ವಾಗಿರುತ್ತದೆ ಎಂದು ವ್ಯಾಖ್ಯಾನಿಸುತ್ತದೆ. ಅಂದಿನಿಂದಲೂ ವೈವಾಹಿಕವಲ್ಲದ ಆದರೆ ವಿವಾಹದ ಸ್ವರೂಪದಲ್ಲಿನ ಸಂಬಂಧಗಳಲ್ಲಿ ಕೌಟುಂಬಿಕ ಹಿಂಸಾಚಾರದ ವಿಚಾರಣೆಗೆ ನ್ಯಾಯಾಲಯಗಳು ಈ ಕಾಯ್ದೆಯನ್ನು ಆಧಾರವಾಗಿ ಇಟ್ಟುಕೊಳ್ಳುತ್ತಿದೆ. ಅಂದರೆ ಸುಪ್ರೀಂ ಕೋರ್ಟೂ ಲಿವ್ ಇನ್ ರಿಲೇಶನ್‌ಶಿಪ್‌ಗಳನ್ನು ಕಾನೂನಾತ್ಮಕ ಎಂದೇ ಪರಿಗಣಿಸುತ್ತದೆ.

2020ರಲ್ಲಿ ಕಾಮಿನಿ ದೇವಿ vs ಉತ್ತರ ಪ್ರದೇಶ ಪ್ರಕರಣದಲ್ಲೂ ಅಲಹಾಬಾದ್ ಹೈಕೋರ್ಟ್ ಲಿವ್‌ಇನ್ ಸಂಬಂಧದಲ್ಲಿರುವ ಜೋಡಿಗೆ ರಕ್ಷಣೆ ನೀಡಿತ್ತು. ಭಾರತೀಯ ಸಂವಿಧಾನದ 21ನೇ ಪರಿಚ್ಛೇದವು ಬದುಕುವ ಹಕ್ಕನ್ನು ಮೂಲಭೂತ ಹಕ್ಕು ಎಂದು‌ ಪರಿಗಣಿಸುವುದರಿಂದ ವಯಸ್ಕರ ನಡುವೆ ಪರಸ್ಪರ ಒಪ್ಪಿಗೆ ಇದ್ದರೆ ಅವರ ಶಾಂತಿಯುತ ಬದುಕಿನಲ್ಲಿ ಹಸ್ತಕ್ಷೇಪ ಮಾಡಲು ಯಾರಿಗೂ ಅನುಮತಿ ನೀಡಲಾಗುವುದಿಲ್ಲ ಎಂದು ಇತ್ಯರ್ಥ ಪಡಿಸಿತ್ತು. “ಮಹಿಳೆ ಮತ್ತು ಪುರುಷರಿಬ್ಬರೂ ವಯಸ್ಕರಾಗಿರುವುದರಿಂದ ಅವರ ಇಚ್ಛೆಯಂತೆ ಒಟ್ಟಿಗೆ ಬದುಕುವುದಕ್ಕೆ ಆಕ್ಷೇಪ ವ್ಯಕ್ತಪಡಿಸಲು ಪೋಷಕರೂ ಸೇರಿದಂತೆ ಯಾರಿಗೂ ಅಧಿಕಾರವಿಲ್ಲ” ಎಂದು ಸ್ಪಷ್ಟವಾಗಿ ತೀರ್ಪು ನೀಡಿತ್ತು.

2006ರ ಲತಾ ಸಿಂಗ್ vs ಉತ್ತರ ಪ್ರದೇಶ ಪ್ರಕರಣದಲ್ಲಿ ಸುಪ್ರೀಂ ಕೋರ್ಟೂ “ಒಬ್ಬ ಮಹಿಳೆ ವಯಸ್ಕಳಾಗಿದ್ದರೆ ತನ್ನ ಇಚ್ಛೆಯಂತೆ ಯಾರನ್ನು ಬೇಕಾದರೂ ಮದುವೆಯಾಗಬಹುದು ಅಥವಾ ಯಾರೊಂದಿಗೆ ಬೇಕಾದರೂ ವಾಸಿಸಬಹುದು” ಎಂದು ತೀರ್ಪು ನೀಡಿತ್ತು.

ವಿಚಿತ್ರ ಅಂದರೆ ಕಳೆದ ವರ್ಷ ಇದೇ ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟೇ ತನ್ನ ಮುಂದೆ ಬಂದಿದ್ದ ಲಿವ್-ಇನ್ ರಿಲೇಶನ್ ಪ್ರಕರಣದ ವಿಚಾರಣೆ ನಡೆಸಿ “ಪೋಷಕರು ತಮ್ಮ ಮಕ್ಕಳು ತಮ್ಮ ಇಚ್ಛೆಯಂತೆಯೇ ಬದುಕಬೇಕು ಎಂದು ಬಯಸುವಂತಿಲ್ಲ” ಎಂದು ತೀರ್ಪು‌ ನೀಡಿತ್ತು.

ಆದರೆ ಈಗ ಅದೇ ಹೈಕೋರ್ಟ್ ಲಿವ್ ಇನ್ ಜೋಡಿಗೆ ರಕ್ಷಣೆ ಒದಗಿಸಲಾಗುವುದಿಲ್ಲ ಎನ್ನುವ  ಮೂಲಕ  ಸಂವಿಧಾನದ 21ನೇ ವಿಧಿಯನ್ನು ಉಲ್ಲಂಘಿಸಿರುವುದಲ್ಲದೆ ಸಾಮಾನ್ಯರಲ್ಲಿ ಅಚ್ಚರಿ ಉಂಟು ಮಾಡಿದೆ. ಈ ಆದೇಶವು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಸೇರಿದಂತೆ ಭಾರತೀಯ ನ್ಯಾಯಾಂಗವು ಇತ್ತೀಚಿಗೆ ನೀಡುತ್ತಿರುವ ಪ್ರಗತಿಪರ ನಿಲುವಿನಿಂದ ಒಂದು ಹೆಜ್ಜೆ ಹಿಂದಕ್ಕೆ ಸರಿದಂತೆ ಭಾಸವಾಗುತ್ತದೆ ಎಂದರೆ ತಪ್ಪಾಗದು‌.

Related posts

Latest posts

ಕುಂಭ ಮೇಳ ಸಂದರ್ಭದಲ್ಲಿ ಮಾಡಿದ 1 ಲಕ್ಷ ಕೋವಿಡ್-19 ಪರೀಕ್ಷೆಗಳು ನಕಲಿ: ತನಿಖಾ ವರದಿ

ಹರಿದ್ವಾರದ ಕುಂಭ ಮೇಳ ಸಂದರ್ಭದಲ್ಲಿ ಮಾಡಲಾಗಿದ ನಾಲ್ಕು ಲಕ್ಷ ಕೋವಿಡ್ ಟೆಸ್ಟ್ ಫಲಿತಾಂಶಗಳಲ್ಲಿ ಹಲವು ನಕಲಿ ಎಂದು ಉತ್ತರಾಖಂಡ ಆರೋಗ್ಯ ಇಲಾಖೆ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಬಯಲಾಗಿದೆ. ವಿವರವಾದ ತನಿಖೆಯ 1,600 ಪುಟಗಳಲ್ಲಿ...

ನನ್ನ ಹೇಳಿಕೆಯಿಂದ ನಾನು ಹಿಂದೆ ಸರಿಯಲ್ಲ : ನಟ ಚೇತನ್ ಸ್ಪಷ್ಟನೆ

ಬ್ರಾಹ್ಮಣ್ಯ ವಿರೋಧಿ ಹೇಳಿಕೆ ಎಂಬ ಆರೋಪದ ಅಡಿ ಇಂದು ಬಸವನಗುಡಿ ಪೊಲೀಸರ ಮುಂದೆ ಹಾಜರಾದ ನಟ ಚೇತನ್ ತನ್ನ ಹೇಳಿಕೆಯ ಬಗ್ಗೆ ಪೊಲೀಸರ ಮುಂದೆ ಸ್ಪಷ್ಟನೆ ದಾಖಲಿಸಿದ್ದಾರೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ...

ಚಿಕ್ಕಬಳ್ಳಾಪುರ: ಅರ್ಹ ಫಲಾನುಭವಿಗಳನ್ನು ಗುರುತಿಸುವಲ್ಲಿ ವಿಫಲ: ರೈತರಿಗೆ ಸಿಗುತ್ತಿಲ್ಲ ಪರಿಹಾರ ಧನ

ಕೊರೋನಾ ಲಾಕ್ಡೌನ್ ಸಮಯದಲ್ಲಿ ಸಂಕಷ್ಟಕ್ಕೊಳಗಾದ ರೈತರಿಗೆ ಸರ್ಕಾರ ಪರಿಹಾರದ ಅಭಯ ಕೊಟ್ಟಿತು. ಆದರೆ ಅರ್ಹ ಫಲಾನುಭವಿಗಳನ್ನ ಗುರುತಿಸುವಲ್ಲಿ ವಿಫಲವಾದ ಪರಿಣಾಮ ನಿಜವಾದ ರೈತರಿಗೆ ಪರಿಹಾರ ಸಿಗದಂತಾಗಿದೆ. ಈ ಕುರಿತು ಚಿಕ್ಕಬಳ್ಳಾಪುರದಲ್ಲಿ ರೈತರು ತಮ್ಮ...