~ಡಾ. ಜೆ ಎಸ್ ಪಾಟೀಲ.
ಲಿಂಗಾಯತರು ಹಿಂದೂಗಳಲ್ಲ ಎನ್ನುವ ಸತ್ಯ ನಿಗಿನಿಗಿಯಾಗಿ ಬೆಳಗುತ್ತಿದೆ. ಹಿಂದೂ ಎಂದು ತಪ್ಪಾಗಿ ಅಥವಾ ರಾಜಕೀಯ ಕಾರಣಗಳಿಗಾಗಿ ಈಗ ಕರೆದುಕೊಳ್ಳುತ್ತಿರುವ ವೈದಿಕ ಅಥವಾ ಮನುಧರ್ಮದಲ್ಲಿರುವ ಶ್ರೇಣೀಕೃತ ಚಾತುರ್ವರ್ಣ ವ್ಯವಸ್ಥೆಯ ವಿರುದ್ಧ ತೊಡೆತಟ್ಟಿ ಹೋರಾಡಿ ಹುಟ್ಟಿದ ಹೊಸ ಕ್ರಾಂತಿಕಾರಿ ಧರ್ಮವೆ ಲಿಂಗಾಯತ ಧರ್ಮ. ಇದು ೧೨ ನೇ ಶತಮಾನದಿಂದ ಇಲ್ಲಿಯವರೆಗಿನ ಭಾರತದ ಅನೇಕ ಸಾಹಿತ್ಯ ಪ್ರಕಾರಗಳು ಮತ್ತು ಬ್ರಿಟೀಷ್ ಆಡಳಿತದ ಅನೇಕ ಸರಕಾರಿ ದಾಖಲೆಗಳು ಸ್ಪಷ್ಟವಾಗಿ ಸಾರಿ ಹೇಳುತ್ತವೆ. ೨೦೧೮ ರಲ್ಲಿ ಸಿದ್ದರಾಮಯ್ಯ ಸರಕಾರ ರಚಿಸಿದ್ದ ನ್ಯಾಯಮೂರ್ತಿ ನಾಗಮೋಹನದಾಸ್ ಅಧ್ಯಕ್ಷತೆಯ ತಜ್ಞರ ಸಮಿತಿಯ ವರದಿ ಕೂಡ ಇದನ್ನೆ ಪುನಃರುಚ್ಛರಿಸಿದೆ.
ಸಮಾಜದಲ್ಲಿ ಮೇಲು-ಕೀಳು ಎಂಬ ತಾರತಮ್ಯವನ್ನು ಹುಟ್ಟುಹಾಕಿˌ ಶ್ರೇಣೀಕೃತ ಚಾತುರ್ವರ್ಣ ವ್ಯವಸ್ಥೆಯನ್ನು ಪರಿಪಾಲಿಸುತ್ತಿದ್ದ ಅನುತ್ಪಾದಕ ವೈದಿಕ/ಬ್ರಾಹ್ಮಣ/ಮನು ಧರ್ಮಕ್ಕೆ ವಿರುದ್ಧವಾಗಿ ಉತ್ಪಾದಕ ವರ್ಗದ ಕಾಯಕಜೀವಿಗಳು ದೊಡ್ಡ ಮಟ್ಟದಲ್ಲಿ ಸಾಂಘಿಕ ಚಳುವಳಿಯೊಂದನ್ನು ಹುಟ್ಟುಹಾಕಿದರು. ಆ ಚಳುವಳಿಯು ಸಮಾಜದ ಎಲ್ಲ ತಳ ಸಮುದಾಯಗಳನ್ನು ಪ್ರತಿನಿಧಿಸುತ್ತಿತ್ತು. ಹಾಗಾಗಿ ಅದನ್ನು ವಚನ ಚಳುವಳಿ ಎಂದು ಪ್ರಾಜ್ಞರು ಗುರುತಿಸಿದ್ದಾರೆ. ಆ ಚಳುವಳಿಯಿಂದ ಹುಟ್ಟಿಕೊಂಡ ವಿಚಾರಧಾರೆಯ ಅನುಯಾಯಿಗಳನ್ನು ಲಿಂಗಾಯತರು/ಲಿಂಗವಂತರು ಎಂದು ಗುರುತಿಸಲಾಗುತ್ತದೆ.
ಲಿಂಗಾಯತ ಧರ್ಮಕ್ಕೆ ತನ್ನದೆಯಾದ ಸ್ಪಷ್ಟ ಇತಿಹಾಸವಿದೆ. ಅದು ಪುರಾಣ ಕಲ್ಪಿತ ಪರಂಪರೆಗೆ ಸೇರಿದ್ದಲ್ಲ. ಹನ್ನೆರಡನೇ ಶತಮಾನಕ್ಕೆ ಮೊದಲು ಸಾಹಿತ್ಯವೆಂದರೆ ಸಂಸ್ಕೃತ ಎನ್ನುವಂತಿದ್ದ ಸ್ಥಾಪಿತ ನಂಬಿಕೆಯನ್ನು ಶರಣರು ಸ್ಪಷ್ಟವಾಗಿ ಹುಡಿಗೊಳಿಸಿದರು. ಅದಕ್ಕೆಂದೆ ಬಸವಣ್ಣನವರು ತಮ್ಮ ವಚನವೊಂದರಲ್ಲಿ ಹೀಗೆ ಹೇಳುತ್ತಾರೆ:
“ಜಂಬೂದ್ವೀಪ ನವಖಂಡ ಪೃಥ್ವಿಯೊಳಗೆ
ಕೇಳಿರಯ್ಯಾ ಎರಡಾಳಿನ ಭಾಷೆಯˌ
ಕೊಲುವೆನೆಂಬ ಭಾಷೆ ದೇವನದುˌ
ಗೆಲುವೆನೆಂಬ ಭಾಷೆ ಭಕ್ತನದು.
ಸತ್ಯವೆಂಬ ಕೂರಲಗನೆ ಹಿಡಿದುಕೊಂಡು
ಸದ್ಭಕ್ತರು ಗೆದ್ದರು ಕಾಣಾ ಕೂಡಲಸಂಗಮದೇವಾ.”
ಇಲ್ಲಿ ದೇವಭಾಷೆ ಎಂದು ಬಿಂಬಿಸಲಾಗಿದ್ದ ಸಂಸ್ಕೃತವು ನೆಲಮೂಲದ ಆಡುಭಾಷೆಗಳನ್ನು ಕೊಲ್ಲುವ ಭಾಷೆ ಎಂದು ಬಸವಣ್ಣನವರು ಗುರುತಿಸಿದ್ದಾರೆ. ಆದರೆ ಕನ್ನಡವು ಕೊಲ್ಲುವ ಭಾಷೆಯಾಗಿರದೆ ಅದು ಜನಸಾಮಾನ್ಯರು ಆಡುವ ಗೆಲುವಿನ ಭಾಷೆ ಎನ್ನುತ್ತಾರೆ. ರಾಜಸತ್ತೆಯ ಆಶ್ರಯದಲ್ಲಿ ರಾಜನ ಹೊಗಳಿಕೆಗೆ ಮೀಸಲಾಗಿದ್ದ ಸಂಸ್ಕೃತ ಸಾಹಿತ್ಯವು ಅಸತ್ಯವಾದದ್ದು ˌ ಜನಹಿತಕ್ಕಾಗಿ ಶರಣರು ಕನ್ನಡದಲ್ಲಿ ಬರೆದ ವಚನ ಸಾಹಿತ್ಯವು ಸತ್ಯದ ಪರವಾದದ್ದು. ಹಾಗಾಗಿ ಸತ್ಯವೆಂಬ ಕನ್ನಡದ ಕೂರಲಗನೆ ಹಿಡಿದು ಸದ್ಭಕ್ತರು ಗೆದ್ದರು ಎನ್ನುತ್ತಾರೆ ಬಸವಣ್ಣ. ಆದ್ದರಿಂದ ಬಸವಣ್ಣನವರು ಈ ನೆಲದ ಮೊಟ್ಟಮೊದಲ ಕನ್ನಡ ಚಳುವಳಿಗಾರ ಎಂದರೆ ಅತಿಶಯೋಕ್ತಿಯಾಗಲಾರದು. ಸಂಸ್ಕೃತ ಭಾಷೆಯ ಉತ್ತುಂಗ ಕಾಲವಾದಲ್ಲಿ ವಚನ ಚಳುವಳಿಯು ಒಂದು ಐತಿಹಾಸಿಕ ಹೋರಾಟವಾಗಿತ್ತು. ಕನ್ನಡ ನೆಲದಲ್ಲಿ ಕನ್ನಡ ಭಾಷೆಯನ್ನು ಧರ್ಮದ ಪರಿಭಾಷೆಯಾಗಿ ಬಳಸಿ, ಬೆಳೆಸಿದ ಅಪೂರ್ವ ಚಳವಳಿ ಇದಾಗಿತ್ತು. ಸಂಸ್ಕೃತಕ್ಕೆ ಪರ್ಯಾಯವಾಗಿ ಇಲ್ಲಿನ ನೆಲದ ಶ್ರಮಸಂಸ್ಕೃತಿಯ ಜನರ ಆಡು ಭಾಷೆಯಲ್ಲಿ ಧಾರ್ಮಿಕ ವಿಧಿವಿಧಾನಗಳನ್ನು ಅರ್ಥೈಸಿದ್ದು ಲಿಂಗಾಯತ ಧರ್ಮದ ಹೆಗ್ಗಳಿಕೆಯಾಗಿದೆ.
ಲಿಂಗಾಯತ ಧರ್ಮಕ್ಕೆ ತನ್ನದೆಯಾದ ತತ್ವ ಸಿದ್ಧಾಂತಗಳಿವೆ. ಲಿಂಗಾಯತವು ಒಂದು ಅವೈದಿಕ ಧರ್ಮ ಎಂಬುದನ್ನು ಪ್ರತಿಪಾದಿಸಲು ಅದಕ್ಕಿರುವ ವೈಶಿಷ್ಟ್ಯಗಳೆ ಸಾಕ್ಷಿ. ವಚನ ಚಳವಳಿಯ ಬಹುದೊಡ್ಡ ಶಕ್ತಿಯೆಂದರೆ ಧರ್ಮವನ್ನು ಪ್ರಜಾಪ್ರಭುತ್ವ ಮಾದರಿಯಲ್ಲಿ ಕಟ್ಟಿರುವುದು. ಶರಣರು ಏಕಾಭಿಪ್ರಾಯಕ್ಕಿಂತ ಬಹುತ್ವದ ಅಭಿಪ್ರಾಯಗಳನ್ನು ಗೌರವಿಸಿದ್ದು ಲಿಂಗಾಯತ ಧರ್ಮದ ವಿಶೇಷತೆ. ‘ನಿನಗೆ ಕೇಡಿಲ್ಲವಾಗಿ ಆನು ಒಲಿದಂತೆ ಹಾಡುವೆ’ ಎಂಬ ಬಸವಣ್ಣನವರ ವಚನವು ಎಲ್ಲರನ್ನೂ ಒಳಗೊಳ್ಳುವ, ಯಾರನ್ನೂ ದ್ವೇಷಿಸದ, ಅಭಿವ್ಯಕ್ತಿ ಸ್ವಾತಂತ್ರ್ಯದ ಧ್ವನಿಯನ್ನು ಪ್ರತಿನಿಧಿಸುತ್ತದೆ. ಬ್ರಾಹ್ಮಣ ಧರ್ಮದ ವೇದˌ ಆಗಮˌ ಶಾಸ್ತ್ರ ˌ ಪುರಾಣˌ ಶೃತಿˌ ಸ್ಮೃತಿಗಳನ್ನು ಶರಣ ಧರ್ಮವು ಸ್ಪಷ್ಟವಾಗಿ ನಿರಾಕರಿಸುವುದಲ್ಲದೆ ಅವುಗಳನ್ನು ತೀಕ್ಷ್ಣವಾಗಿ ವಿಮರ್ಶಿಸಿ ವಿಡಂಬಿಸುತ್ತದೆ. ಶರಣ ಧರ್ಮವು ಪಂಡಿತರು ಅರಮನೆ ಅಥವಾ ಗುರುಮನೆಯಲ್ಲಿ ಕುಳಿತು ರೂಪಿಸಿದ ಧರ್ಮವಾಗಿರದೆ ದುಡಿಯುವ ವರ್ಗದ ಜನರೆಲ್ಲ ಒಟ್ಟಿಗೆ ಸೇರಿ ಕಟ್ಟಿದ ಧರ್ಮವಾಗಿದೆ.
ಪ್ರತಿಯೊಂದು ಧರ್ಮಕ್ಕೂ ಅದರದ್ದೇ ಆದ ತಾತ್ವಿಕ ಆಚಾರ ವಿಚಾರಗಳಿರುತ್ತವೆ. ಅವನ್ನು ತತ್ವಶಾಸ್ತ್ರ ˌ ತತ್ವದರ್ಶನಗಳು ಅಥವಾ ಸರಳವಾಗಿ ಧರ್ಮಗ್ರಂಥಗಳೆಂದು ಕರೆಯುತ್ತಾರೆ. ವೈದಿಕ ಧರ್ಮಕ್ಕೆ ವೇದಾಗಮ, ಶಾಸ್ತ್ರ ಪುರಾಣಗಳು, ಮುಸ್ಲಿಮರಿಗೆ ಕುರಾನ್, ಕ್ರೈಸ್ತರಿಗೆ ಬೈಬಲ್ ಇದ್ದಂತೆ ಲಿಂಗಾಯತರಿಗೆ ವಚನಗಳೇ ಧರ್ಮಶಾಸ್ತ್ರ. ಹಿಂದೂ ಎಂದು ಕರೆದುಕೊಳ್ಳುವ ಬ್ರಾಹ್ಮಣ/ವೈದಿಕ/ಮನು ಧರ್ಮಕ್ಕೆ ಸಂಸ್ಕೃತದ ಮಂತ್ರಗಳೆ ಮುಖ್ಯವಾದರೆ, ಲಿಂಗಾಯತರ ಕೌಟುಂಬಿಕ ಧಾರ್ಮಿಕ ಕಾರ್ಯಗಳು ವಚನಾಧಾರಿತ ಆಗಿರುವುದು ವಿಶೇಷ. ಲಿಂಗಾಯತ ಧರ್ಮಿಯರಿಗೆ ಶರಣರ ವಚನಗಳೇ ಸ್ತುತಿ, ಸ್ಥಿತಿ ಹಾಗೂ ಪರಮಗಂತವ್ಯ. ಇದನ್ನು ಲಿಂಗಾಯತ ಧರ್ಮದ ವಚನ ಸಂವಿಧಾನ ಹಾಗು ಧಾರ್ಮಿಕ ವಿಧಿವಿಧಾನ ಎನ್ನಬಹುದು. ಆಶ್ಚರ್ಯವೆಂದರೆ ಹಿಂದೂ ಎಂದು ತಪ್ಪಾಗಿ ಕರೆಯಲ್ಪಡುವ ಬ್ರಾಹ್ಮಣ ಧರ್ಮಕ್ಕೆ ಯಾವುದೇ ಧರ್ಮಗುರುˌ ನಿರ್ಧಿಷ್ಟ ಧರ್ಮಗ್ರಂಥ ಹಾಗು ಧರ್ಮದ ಉಗಮದ ನಿರ್ಧಿಷ್ಟ ಸ್ಥಳ/ಕಾಲಮಾನಗಳು ಇಲ್ಲ. ಆದರೆˌ ಜಗತ್ತಿನ ಎಲ್ಲಾ ಪ್ರಗತಿಪರ ಏಕದೇವೋಪಾಸಕ ಧರ್ಮಗಳಿಗೆ ಧರ್ಮಗುರು ಇದ್ದಾರೆ. ಹಾಗೆಯೇ ಈ ವಚನ ಚಳವಳಿಯ ನೇತೃತ್ವ ವಹಿಸಿದ್ದ ಬಸವಣ್ಣನವರೆ ಲಿಂಗಾಯತ ಧರ್ಮದ ಧರ್ಮಗುರುಗಳು.
ಬ್ರಾಹ್ಮಣ ಧರ್ಮವು ಆ ಕಾಲದಲ್ಲಿ ಅತ್ಯುಗ್ರ ಶೋಷಕ ಧರ್ಮವಾಗಿತ್ತು. ಬ್ರಾಹ್ಮಣ ಧರ್ಮದ ವರ್ಣ ವ್ಯವಸ್ಥೆಯಲ್ಲಿ ಅಸ್ಪೃಶ್ಯರು, ಪಂಚಮರು, ಚಂಡಾಲರು, ಶ್ವಪಚರು, ಹೊಲೆಯರು, ಮಾದಿಗರೆಂದು ಸಮಾಜವನ್ನು ವಿಘಟಿಸಲಾಗಿತ್ತು. ಶೂದ್ರ ಮತ್ತು ಮೇಲ್ಕಾಣಿಸಿದ ತಳವರ್ಗಗಳನ್ನು ಪ್ರಾಣಿಗಳಿಗಿಂತ ಕೀಳಾಗಿ ಕಾಣಲಾಗುತ್ತಿತ್ತು. ಅಂತಹ ಸಾಮಾಜಿಕ ಶೋಷಣೆಗೊಳಪಟ್ಟ ಜನರ ಜತೆಗೆ ಗುರುತಿಸಿಕೊಂಡ ಬಸವಣ್ಣನವರು ತಮ್ಮನ್ನು ತಾವು ಸ್ವತಃ ಅಪವರ್ಣೀಕರಿಸಿಕೊಂಡು, ವೈದಿಕರ ಪವಿತ್ರೀಕರಣ ಪರಿಕಲ್ಪನೆಗೆ ಲಿಂಗಾಯತ ಧರ್ಮದ ತತ್ವ ಸಿದ್ಧಾಂತಗಳನ್ನು ರೂಪಿಸಿದರು. ಬಸವಣ್ಣನವರದ್ದು ಬ್ರಾಹ್ಮಣ್ಯದ ವಿರೋಧದ ಉಗ್ರಮಾರ್ಗ. ಹೀಗಾಗಿಯೇ ಲಿಂಗಾಯತ ಧರ್ಮವೆನ್ನುವುದು ಹಿಂದೂ ಅಥವಾ ವೈದಿಕ ಧರ್ಮಕ್ಕಿಂತ ವಿಭಿನ್ನವಾಗಿ ನಿಲ್ಲುತ್ತದೆ.
ಬಸವಣ್ಣನವರು ಹಾಗು ಚೆನ್ನಬಸವಣ್ಣನವರು ರೂಪಿಸಿದ ಕಾಯಕ–ದಾಸೋಹ, ಅಷ್ಟಾವರಣ, ಪಂಚಾಚಾರˌ ಷಟಸ್ಥಲಗಳೇ ಲಿಂಗಾಯತ ಧರ್ಮದ ಸಾಂಸ್ಥಿಕ ಸ್ವರೂಪಗಳು. ಇದು ವೈದಿಕ ಧರ್ಮಕ್ಕೆ ಪರ್ಯಾಯವಾಗಿ ಎದ್ದುನಿಂತ ಹೊಸ ಪ್ರಗತಿಪರ ಹಾಗು ವೈಚಾರಿಕ ಜೀವನ ಮಾರ್ಗ. ಲಿಂಗಾಯತ ಧರ್ಮವು ಪಂಡಿತರನ್ನು ಹೊರತುಪಡಿಸಿ ಪಾಮರರು ಕಟ್ಟಿದ ಬಸವಣ್ಣನ ಧರ್ಮ. ಅದು ಸಂಪೂರ್ಣವಾಗಿ ವೈದಿಕ ಧರ್ಮಕ್ಕೆ ವಿರುದ್ಧವಾಗಿ ಹುಟ್ಟಿಕೊಂಡ ಪರ್ಯಾಯ ಧರ್ಮ. ಹಾಗಾಗಿ ಲಿಂಗಾಯತ ಧರ್ಮವು ಅಂದು-ಇಂದು-ಮುಂದೆಂದಿಗೂ ಜೀವವಿರೋಧಿ ವೈದಿಕ ಧರ್ಮದ ಭಾಗವಾಗಿರದೆ ಅದೊಂದು ಸ್ವತಂತ್ರ ಜೀವನ್ಮುಖಿ ಧರ್ಮವಾಗಿದೆ. ಬಸವಣ್ಣನವರು ಭೋದಿಸಿದ ತತ್ವ ಸಿದ್ಧಾಂತಗಳು ಸಂಪೂರ್ಣವಾಗಿ ಬ್ರಾಹ್ಮಣ ಧರ್ಮಕ್ಕೆ ತದ್ವಿರುದ್ಧವಾಗಿರುವುದರಿಂದಲೆ ಇಂದಿಗೂ ವೈದಿಕರು ಲಿಂಗಾಯತ ಧರ್ಮವನ್ನು ಕಂಡರೆ ಬೆದರುತ್ತಾರೆ ಮತ್ತು ದ್ವೆಷಿಸುತ್ತಾರೆ.
ಸಾಮಾನ್ಯವಾಗಿ ಕರ್ನಾಟಕದಲ್ಲಿ ಲಿಂಗಾಯತರೆಂದರೆ ಬಲಾಢ್ಯರು, ಶ್ರೀಮಂತರು ಎಂಬು ನಂಬಿಸಲಾಗಿದೆ. ಇದು ಪೂರ್ತಿ ಸತ್ಯವಲ್ಲ. ಲಿಂಗಾಯತ ಧರ್ಮದಲ್ಲಿ ಸುಮಾರು ೯೯ ಉಪ ವರ್ಗಗಳಿವೆ. ಈ ಕಾಯಕ ವರ್ಗಗಳಲ್ಲಿ ಬಹುತೇಕರು ದಲಿತ ಮುಂತಾದ ತಳ ಸಮುದಾಯದಿಂದ ಬಂದವರಾಗಿದ್ದಾರೆ. ಲಿಂಗಾಯತ ಧರ್ಮದಲ್ಲಿ ಬಹುತೇಕ ಕುಟುಂಬಗಳು ಮಧ್ಯಮˌ ಕೆಳ ಮಧ್ಯಮ ವರ್ಗಗಳಿಗೆ ಸೇರಿವೆ. ಆರ್ಥಿಕ ಹಾಗು ಶೈಕ್ಷಣಿಕ ಮಾನದಂಡದಿಂದ ನೋಡಿದಾಗ ಲಿಂಗಾಯತ ಕಾಯಕ ವರ್ಗದ ಜನರು ಇಂದಿಗೂ ಬಡವರು, ಹಾಗು ಹಿಂದುಳಿದವರಾಗಿದ್ದಾರೆ ಎಂದು ಅನೇಕ ಹಿಂದುಳಿದ ವರ್ಗಗಳ ಆಯೋಗದ ವರದಿಗಳು ಸ್ಪಷ್ಟಪಡಿಸಿವೆ. ಕೇವಲ ಬೆರಳೆಣಿಕೆಯ ರಾಜಕಾರಣಿಗಳು ಮತ್ತು ಉದ್ಯಮಿಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಲಿಂಗಾಯತರೆಂದರೆ ಬಲಾಢ್ಯರೆಂದು ಬಿಂಬಿಸಲಾಗಿದೆ.
೨೦೧೧ ರ ಜನಗಣತಿ ವರದಿಯ ಅನುಸಾರ ರಾಜ್ಯದಲ್ಲಿ ಲಿಂಗಾಯತರ ಜನಸಂಖ್ಯೆ ಶೇ. ೧೨.೩ ರಷ್ಟಿದೆ. ಅಂದರೆ ಲಿಂಗಾಯತರು ಮುಸ್ಲಿಮರಿಗಿಂತ ಕೇವಲ ಶೇ. ೩ ರಷ್ಟು ಹೆಚ್ಚಿನ ಪ್ರಮಾಣದಲ್ಲಿದ್ದಾರೆ. ರಾಜ್ಯದಲ್ಲಿ ಪರಿಶಿಷ್ಟ ಜಾತಿಗಳ ಜನಸಂಖ್ಯೆ ಶೇ. ೧೫ ರಷ್ಟಿದೆ. ಈ ಹಿನ್ನೆಲೆಯಲ್ಲಿ ಸಂಖ್ಯಾತ್ಮಕವಾಗಿಯೂ ಕೂಡ ಲಿಂಗಾಯತರು ಕರ್ನಾಟಕವೂ ಸೇರಿದಂತೆ ಒಟ್ಟಾರೆ ಭಾರತದಲ್ಲಿ ಒಂದು ಅಲ್ಪಸಂಖ್ಯಾತ ಸಮುದಾಯವರೇ ಆಗಿದ್ದಾರೆ ಎಂದು ೨೦೧೭-೧೮ ರ ನ್ಯಾಯಮೂರ್ತಿ ನಾಗಮೋಹನದಾಸ್ ವರದಿ ಹೇಳುತ್ತದೆ. ಈ ವಾದವನ್ನು ಪುಷ್ಟಿಕರಿಸಲು ನಾವು ಹಿಂದುಳಿದ ವರ್ಗಗಳ ಸ್ಥಿತಿಗತಿ ಅಧ್ಯಯನಕ್ಕಾಗಿ ರಾಜ್ಯ ಸರ್ಕಾರ ನೇಮಿಸಿದ್ದ ವಿವಿಧ ಆಯೋಗ, ಸಮಿತಿಯ ವರದಿಯ ಅಂಕಿಅಂಶಗಳನ್ನು ನೋಡಬಹುದಾಗಿದೆ.
ಹಿಂದೂ ಎಂದು ತಪ್ಪಾಗಿ ಕರೆಯಲ್ಪಡುವ ವೈದಿಕ ಅಥವಾ ಬ್ರಾಹ್ಮಣ ಧರ್ಮಕ್ಕೂ ಹಾಗು ಅವೈದಿಕ ಲಿಂಗಾಯತ ಧರ್ಮಕ್ಕೂ ಅನೇಕ ಸೈದ್ಧಾಂತಿಕ ಭಿನ್ನ ಭೇದಗಳಿವೆ. ಅವುಗಳನ್ನು ನಾಗಮೋಹನದಾಸ್ ಸಮಿತಿ ಈ ಕೆಳಗಿನಂತೆ ಗುರುತಿಸಿ ದಾಖಲಿಸಿದೆ.
೧. ವೈದಿಕ ಧರ್ಮ ಪ್ರತಿಪಾದಿಸುವ ವೇದಪ್ರಾಮಣ್ಯ ˌ ಬ್ರಾಹ್ಮಣ ಶ್ರೇಷ್ಟತೆˌ ಗ್ರಹಾಗ್ನಿಪಾಲನೆˌ ಸಂಧ್ಯಾವಂದನೆˌ ಪಿತುೃಪಕ್ಷಾಚರಣೆˌ ಪಿತುೃತರ್ತಣˌ ಗಾಯತ್ರಿಮಂತ್ರ ಪಠಣ(ಅದಕ್ಕಾಗಿ ಜುಟ್ಟು-ಜನಿವಾರಗಳು)ˌ ಬ್ರಹ್ಮೋಪದೇಶ(ಯಜ್ಞೋಪವಿತ್ ಧಾರಣೆ)ˌ ಗೋತ್ರಪ್ರವರಗಳ ಪುನಃರುಚ್ಛರಣದಂತಹ ಆಚರಣೆಗಳನ್ನು ಹಾಗೂ ವೇದಾಗಮ ಶಾಸ್ತ್ರ ˌ ಪುರಾಣಗಳನ್ನು ಲಿಂಗಾಯತ ಧರ್ಮವು ತಿರಸ್ಕರಿಸುತ್ತದೆ. ಅದಕ್ಕೆ ಪರ್ಯಾಯವಾಗಿ ವಚನಗಳೇ ಲಿಂಗಾಯತರಿಗೆ ಪ್ರಮಾಣವಾಗಿವೆ.
೨. ವೈದಿಕ ಧರ್ಮ ನಂಬುವ ಪಾಪ-ಪುಣ್ಯ ˌ ಸ್ವರ್ಗ-ನರಕˌ ಪುನರ್ಜನ್ಮ ˌ ಕರ್ಮಸಿದ್ಧಾಂತˌ ಜಪ-ತಪˌ ಹೋಮ-ಹವನˌ ಯಜ್ಞ-ಯಾಗˌ ವ್ರತ-ನಿಯಮಗಳುˌ ಮಡಿ-ಮೈಲಿಗೆ ಆಚರಣೆˌ ಋತುಚಕ್ರ ಮೈಲಿಗೆˌ ಮೂಢನಂಬಿಕೆ, ವಾಸ್ತು, ಜ್ಯೋತಿಷ್ಯ, ಪಂಚಾಂಗ, ವಾರ, ನಕ್ಷತ್ರ, ತಿಥಿಗಳನ್ನು ಲಿಂಗಾಯತ ಧರ್ಮಶಾಸ್ತ್ರಗಳಾದ ವಚನಗಳು ಕಟುವಾಗಿ ವಿರೋಧಿಸುತ್ತವೆ ಹಾಗು ಧಾರ್ಮಿಕ ಕಂದಾಚಾರಗಳನ್ನು ನಿರಾಕರಿಸುತ್ತವೆ.
೩. ವೈದಿಕ ಅಥವಾ ಬ್ರಾಹ್ಮಣ ಧರ್ಮದಲ್ಲಿ ಬಹುದೇವತಾ ಉಪಾಸನೆ ಇದ್ದರೆ, ಲಿಂಗಾಯತ ಧರ್ಮದಲ್ಲಿ ಏಕದೇವೋಪಾಸನೆ ಇದೆ. ವೈದಿಕರು ಮೂರ್ತಿಪೂಜಕರಾದರೆ ಲಿಂಗಾಯತರು ನಿರಾಕಾರನಾದ ಪರಮಾತ್ಮನನ್ನು ಇಷ್ಟಲಿಂಗ ರೂಪದಲ್ಲಿ ಪೂಜಿಸುತ್ತಾರೆ. ಹಾಗಾಗಿ ಲಿಂಗಾಯತ ಧರ್ಮವು ಜಗತ್ತಿನ ಏಕದೇವೋಪಾಸಕ ಧರ್ಮಗಳ ಸಾಲಿನಲ್ಲಿ ನಿಲ್ಲುತ್ತದೆ.
೪. ವೈದಿಕ ಧರ್ಮ ನಿಂತಿರುವುದೆ ಚಾತುರ್ವರ್ಣ ವ್ಯವಸ್ಥೆಯ ತಳಹದಿಯ ಮೇಲೆ. ವೈದಿಕರಲ್ಲಿ ಜಾತಿ ಮತ್ತು ಲಿಂಗ ಭೇದಗಳ ಆಚರಣೆಗಳಿವೆ. ಆದರೆ ಲಿಂಗಾಯತ ಧರ್ಮ ತತ್ವಗಳಲ್ಲಿ ಜಾತಿ ಮತ್ತು ಲಿಂಗ ಭೇದಕ್ಕೆ ಅವಕಾಶವಿಲ್ಲ.
೫. ವೈದಿಕ ಧರ್ಮದಲ್ಲಿ ಶೂದ್ರರು, ಮತ್ತು ಮಹಿಳೆಯರಿಗೆ ಮೋಕ್ಷ ಸಿಗುವುದಿಲ್ಲ, ಅವರು ವೇದ ಓದುವಂತಿಲ್ಲ. ಯಜ್ಞ ಮಾಡುವಂತಿಲ್ಲ. ಧರ್ಮ ಸಂಸ್ಕಾರಕ್ಕೆ ಅರ್ಹರಲ್ಲ. ಆದರೆ, ಲಿಂಗಾಯತ ಧರ್ಮಶಾಸ್ತ್ರದಲ್ಲಿ ಧಾರ್ಮಿಕ ಸಂಸ್ಕಾರವಾಗಿರುವ ಇಷ್ಟಲಿಂಗ ದೀಕ್ಷೆಗೆ ಎಲ್ಲರೂ ಅರ್ಹರು. ವರ್ಣಬೇಧ ಹಾಗೂ, ಲಿಂಗ ತಾರತಮ್ಯಕ್ಕೆ ಆಸ್ಪದವಿಲ್ಲ.
ಕಾಲಕಾಲಕ್ಕೆ ಕರ್ನಾಟಕ ಸರಕಾರ ನೇಮಿಸಿದ್ದ ವಿವಿಧ ಆಯೋಗ, ಸಮಿತಿಗಳ ವರದಿಗಳ ಪ್ರಕಾರ ಲಿಂಗಾಯತರ ಜನಸಂಖ್ಯೆ ಈ ಕೆಳಗಿನಂತೆ ದಾಖಲಾಗಿದೆ:
ವರ್ಷ, ಆಯೋಗ, ಜನಸಂಖ್ಯೆ (ಶೇ)
೧೯೧೯, ಮಿಲ್ಲರ್ ಕಮಿಟಿ, ೧೨
೧೯೬೦, ನಾಗನಗೌಡ ಕಮಿಟಿ, ೧೫.೫೭–೧೬
೧೯೭೫, ಹಾವನೂರು ಆಯೋಗ, ೧೪.೬೪
೧೯೮೬, ವೆಂಕಟಸ್ವಾಮಿ ಆಯೋಗ, ೧೬.೯೨
೧೯೯೦, ಚಿನ್ನಪ್ಪ ರೆಡ್ಡಿ ಆಯೋಗ, ೧೮.೪೨
೨೦೧೫, ಹಿಂದುಳಿದ ವರ್ಗಗಳ ಆಯೋಗ, ೮–೯ (ಅಂದಾಜು)*
(*೨೦೧೫ರಲ್ಲಿ ಕರ್ನಾಟಕ ಸರ್ಕಾರ ನಡೆಸಿದ ಸಾಮಾಜಿಕ ಆರ್ಥಿಕ ಗಣತಿಯಲ್ಲಿ ಲಿಂಗಾಯತರ ಪ್ರಮಾಣ ಶೇ. ೮ ರಿಂದ ೯ರಷ್ಟು ಇದೆ ಎಂದು ಅನಧಿಕೃತವಾಗಿ ತಿಳಿದುಬಂದಿದೆ. ಇದಕ್ಕೆ ಕಾರಣವೆಂದರೆ ಲಿಂಗಾಯತರೆಂದು ಗುರುತಿಸಿಕೊಂಡಿರುವ ಉಪವರ್ಗಗಳು ಸರ್ಕಾರದಿಂದ ನೀಡಲಾಗುವ ಮೀಸಲಾತಿ ಹಾಗು ವಿವಿಧ ಸವಲತ್ತುಗಳಿಗಾಗಿ ತಮ್ಮನ್ನು ಲಿಂಗಾಯತದ ಬದಲು ಹಿಂದೂಗಳು ಎಂದು ಬರೆಸಿಕೊಂಡಿವೆ. ಹೀಗಾಗಿ, ಲಿಂಗಾಯತರ ಜನಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ ಎಂದು ವರದಿ ಹೇಳಿದೆ).
ಹೀಗೆ ಬ್ರಿಟೀಷ್ ಆಡಳಿತದ ೧೫೦ ವರ್ಷಗಳ ಎಲ್ಲಾ ಜನಗಣತಿಗಳಲ್ಲಿ ˌ ವಿವಿಧ ಹಿಂದುಳಿದ ವರ್ಗಗಳ ಆಯೋಗಗಳ ವರದಿಗಳಲ್ಲಿ ˌ ಜಿಲ್ಲಾ ಗೆಜೆಟೀಯರ್ ಗಳಲ್ಲಿ ˌ ವಿವಿಧ ಸಂದರ್ಭಗಳ ನ್ಯಾಯಾಲಯಗಳ ತೀರ್ಪುಗಳಲ್ಲಿ ಹಾಗು ಸಂವಿಧಾನ ರಚನಾ ಸಭೆಯ ಚರ್ಚೆ/ನಿರ್ಣಯಗಳ ಅನುಸಾರ ಲಿಂಗಾಯತವು ಹಿಂದೂ ಎಂದು ತಪ್ಪಾಗಿ ಕರೆಯಲ್ಪಡುವ ವೈದಿಕ/ಬ್ರಾಹ್ಮಣ ಧರ್ಮದ ಭಾಗವಾಗಿರದೆ ಅದೊಂದು ಸ್ವತಂತ್ರ ಅವೈದಿಕ ಧರ್ಮವಾಗಿ ದಾಖಲೆಗಳಲ್ಲಿ ಸೇರಿಕೊಂಡಿದೆ. ಸ್ವಾತಂತ್ರಾ ನಂತರ ದೇಶದ ಸಮಗ್ರತೆಯ ನೆಪದಲ್ಲಿ ಅಂದಿನ ಸರಕಾರ ಲಿಂಗಾಯತರನ್ನು ಹಿಂದೂ ಧರ್ಮದ ಶೂದ್ರ ವರ್ಗಕ್ಕೆ ಸೇರಿಸಿತು ಎನ್ನುವ ಸಂಗತಿ ಲಿಂಗಾಯತರೆಲ್ಲರೂ ಅರಿತುಕೊಳ್ಳುವ ಅಗತ್ಯವಿದೆ.
~ಡಾ. ಜೆ ಎಸ್ ಪಾಟೀಲ.