ಬೆಂಗಳೂರು: ಯೋಜನೆ ಮತ್ತು ಸಾಂಖಿಕ ಇಲಾಖೆ ಸಚಿವ ಡಿ.ಸುಧಾಕರ್ ಅವರ ವಿರುದ್ದ ಜಾತಿ ನಿಂದನೆ ಪ್ರಕರಣ ದಾಖಲಾಗಿದ್ದು, ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಚಿವ ಡಿ ಸುಧಾಕರ್ ವಿರದ್ದ ಜಾತಿ ನಿಂದನೆ ಪ್ರಕರಣ ದಾಖಲಾಗಿದೆ. ಅವರು ರಾಜೀನಾಮೆ ಕೊಡಲಿ. ಬೇರೆಯವರ ವಿಚಾರಣೆ ಹೇಗೆ ಆಗುತ್ತದೆಯೊ ಈ ಪ್ರಕರಣದಲ್ಲಿಯೂ ಹಾಗೆಯೇ ಆಗಲಿ. ವಿಚಾರಣೆ ಆಗಿ ಆರೋಪದಿಂದ ಮುಕ್ತರಾದರೆ ಮತ್ತೆ ಬೇಕಾದರೆ ಅವರು ಸಚಿವರಾಗಲಿ ಎಂದರು.
ಈ ಪ್ರಕರಣದಲ್ಲಿ ಗೃಹ ಸಚಿವ ಪರಮೇಶ್ವರ್ ಮಧ್ಯಪ್ರವೇಶ ಮಾಡುತ್ತಿದ್ದಾರೆ. ಪೊಲಿಸರಿಗೆ ತನಿಖೆ ನಡೆಸಲು ಪರಮೇಶ್ವರ್ ಬಿಡಬೇಕು. ತಾವೇ ತನಿಖೆಗೆ ಮುಂದಾಗಬಾರದು. ಗೃಹ ಸಚಿವರು ಯಾವುದೇ ತನಿಖೆ ಮಾಡಲು ಅವಕಾಶ ಇಲ್ಲ. ಸಚಿವರ ವಿರುದ್ದದ ಪ್ರಕರಣದ ವರದಿ ತರಿಸಿಕೊಳ್ಳುವುದಾಗಿ ಹೇಳುತ್ತಾರೆ. ಎಫ್ಐಆರ್ ದಾಖಲಾಗಿದೆ. ಇದರಲ್ಲಿ ವರದಿ ತರಿಸಿಕೊಳ್ಳಲು ಅವಕಾಶ ಇಲ್ಲ. ತನಿಖೆ ನಡೆಸಲು ಪೊಲಿಸರಿಗೆ ಮುಕ್ತ ಅವಕಾಶ ಕೊಡಬೇಕು ಎಂದರು.
ಸುಧಾಕರ್ ಪ್ರಕರಣದ ಬಗ್ಗೆ ಸಿಎಂ ಸಿದ್ದರಾಮಯ್ಯ ಉಡಾಫೆಯಿಂದ ಮಾತನಾಡಿದ್ದಾರೆ. ಸಿದ್ದರಾಮಯ್ಯ ಗೆ ಸಂವಿಧಾನದ ಮೇಲೆ ವಿಶ್ವಾಸ ಇದ್ದರೆ ಸಚಿವ ಸುಧಾಕರ್ ರಾಜೀನಾಮೆ ಪಡೆಯಲಿ ಎಂದು ಆಗ್ರಹಿಸಿದರು.
ಸಚಿವ ಸುಧಾಕರ್ ಅವರು ತಮ್ಮ ವಿರುದ್ದ ಕೇಳಿ ಬಂದಿರುವ ಆರೋಪಗಳಿಗೆ ಕಾನೂನು ರೀತಿ ನಡೆದುಕೊಳ್ಳಬೇಕು. ಅದನ್ನು ಬಿಟ್ಟು ದಲಿತರ ಮೇಲೆ ದೌರ್ಜನ್ಯ ದಬ್ಬಾಳಿಕೆ ನಡೆಸಿರುವುದು ಸರಿಯಲ್ಲ. ಕಾಂಗ್ರೆಸ್ ನಾಯಕರು ಭಾಷಣದಲ್ಲಿ ಮಾತ್ರ ದಲಿತರ ಪರ ಮಾತನಾಡುತ್ತಾರೆ. ಆದರೆ, ಅವರ ಸಚಿವರ ನಡವಳಿಕೆ ಸಂಪೂರ್ಣ ದಲಿತ ವಿರೋಧಿಯಾಗಿದೆ. ಗ್ಯಾರೆಂಟಿ ಯೋಜನೆಗಳಿಗೆ ದಲಿತರಿಗೆ ಮೀಸಲಿಟ್ಟ 11 ಸಾವಿರ ಕೋಟಿ ರೂ. ಬಳಕೆ ಮಾಡಿಕೊಳ್ಳುತ್ತಿದ್ದಾರೆ. ದಲಿತರು ಇವರನ್ನು ಕ್ಷಮಿಸುವುದಿಲ್ಲ ಎಂದರು.