ನಾಳೆಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷ. ಒಂದೆಡೆ ಬಿಎಸ್ ಯಡಿಯೂರಪ್ಪ ಅವರಿಗೆ ತನ್ನ ಸರ್ಕಾರ ಎರಡು ವರ್ಷಗಳು ಪೂರೈಸಿರುವ ಖುಷಿ, ಇನ್ನೊಂದೆಡೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ಅಧಿಕಾರ ತ್ಯಜಿಸಬೇಕು ಎಂಬ ಬೇಜಾರು. ಇದರ ನಡುವೇ ಸಂಜೆ ವೇಳೆಗೆ ಸಿಎಂ ಯಡಿಯೂರಪ್ಪ ರಾಜೀನಾಮೆ ಬಳಿಕ ಯಾರು ಮುಖ್ಯಮಂತ್ರಿ ಆಗಬೇಕು? ಎಂಬ ಸ್ಪಷ್ಟ ಸಂದೇಶ ಹೈಕಮಾಂಡ್ ರವಾನಿಸಲಿದೆ. ಇಂದು ಸಂಜೆ ಒಳಗೆ ಸಂದೇಶ ಬರುವ ಸಾಧ್ಯತೆ ದಟ್ಟವಾಗುತ್ತಿದ್ದಂತೆಯೇ ಮುಖ್ಯಮಂತ್ರಿ ಮುಖ್ಯಮಂತ್ರಿ ಪಟ್ಟಕ್ಕಾಗಿ ಕೊನೆಯ ಸುತ್ತಿನ ಪೈಪೋಟಿ ಶುರುವಾಗಿದೆ.
75 ವರ್ಷ ಮೇಲ್ಪಟ್ಟ ಕಾರಣ ಬಿ.ಎಸ್ ಯಡಿಯೂರಪ್ಪರನ್ನು ಬದಲಾವಣೆ ಮಾಡೋದಾದರೆ ನಮ್ಮದೇನು ಅಭ್ಯಂತರವಿಲ್ಲ. ಬದಲಿಗೆ ಸಿಎಂ ಸ್ಥಾನಕ್ಕೆ ನಮ್ಮದೇ ಸಮುದಾಯದ ನಾಯಕರಾದ ಬಸನಗೌಡ ಪಾಟೀಲ್ ಯತ್ನಾಳ್, ಮುರುಗೇಶ್ ನಿರಾಣಿ, ಅರವಿಂದ್ ಬೆಲ್ಲದ್ರನ್ನು ಆಯ್ಕೆ ಮಾಡಿ ಎಂದು ಲಿಂಗಾಯತ ಸಮುದಾಯದ ಪ್ರಮುಖರು ಪಟ್ಟು ಹಿಡಿದಿದ್ದಾರೆ ಎನ್ನಲಾಗುತ್ತಿದೆ. ಹೀಗಿರುವಾಗ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಹಾಗೂ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಿ.ಟಿ ರವಿ ಹೆಸರೂ ಕೂಡ ಸಿಎಂ ಸ್ಥಾನಕ್ಕೆ ಕೇಳಿ ಬಂದಿದೆ.
ಈ ಸಂಬಂಧ ಬೆಳಗಾವಿಯಲ್ಲಿ ಮಾತನಾಡಿರುವ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ, ಸಂಜೆ ವೇಳೆಗೆ ಹೈಕಮಾಂಡ್ನಿಂದ ಸಂದೇಶ ಬರದಲಿದೆ ಎಂದಿದ್ದಾರೆ. ದೆಹಲಿಯಿಂದ ಸಂದೇಶ ಬಂದ ಕೂಡಲೇ ಮುಂದಿನ ಸಿಎಂ ಯಾರು ಎಂದು ಗೊತ್ತಾಗಲಿದೆ ಎಂದು ಗೌಪ್ಯತೆ ಕಾಪಾಡಿಕೊಂಡಿದ್ದಾರೆ. ಈಗ ಸ್ವಾಮೀಜಿಗಳು ಯಾವುದೇ ಸಮಾವೇಶ ಮಾಡೋದು ಬೇಡ, ಎಲ್ಲವೂ ಅಂತಿಮವಾಗಿದೆ ಎಂದು ಯಡಿಯೂರಪ್ಪ ಸ್ಪಷ್ಟ ಸಂದೇಶ ಸಾರಿದ್ದಾರೆ.
ನಾನು ಬಿಜೆಪಿ ಪಕ್ಷದ ಸಾಮಾನ್ಯ ಕಾರ್ಯಕರ್ತ. ಕೇಂದ್ರ ವರಿಷ್ಠರು ನೀಡುವ ಜವಾಬ್ದಾರಿ ನಿಭಾಯಿಸುವೆ. ಯಾರಿಗೆ ಸಿಎಂ ಸ್ಥಾನ ನೀಡಬೇಕು ಎಂದು ಹೈಕಮಾಂಡ್ಗೆ ಗೊತ್ತಿದೆ. ಎಲ್ಲರ ಜೊತೆಗೂ ಸಮಾಲೋಚನೆ ಮಾಡಿಯೇ ಹೈಕಮಾಂಡ್ ತೀರ್ಮಾನ ತೆಗೆದುಕೊಳ್ಳುತ್ತದೆ. ಯಡಿಯೂರಪ್ಪರನ್ನೇ ಸಿಎಂ ಆಗಿ ಮುಂದುವರಿಸಿದರೂ, ಈ ಸ್ಥಾನಕ್ಕೆ ಬೇರೆ ಯಾರನ್ನು ತಂದು ಕೂರಿಸಿದರೂ ನಾವು ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಎಂದಿದ್ದಾರೆ.
ವೀರಶೈವ ಲಿಂಗಾಯತ ಸಮುದಾಯಕ್ಕೆ ಸಿಎಂ ಪಟ್ಟ ಪಕ್ಕಾ ಎಂಬ ಚರ್ಚೆಯೂ ಜೋರಾಗಿದೆ. ಹೀಗಾಗಿ ಈ ನಡುವೆ ಹೊಸ ಬೆಳವಣಿಗೆಯೊಂದು ನಡೆದಿದೆ. ಹುಬ್ಬಳ್ಳಿಯ ಪ್ರಹ್ಲಾದ್ ಜೋಷಿ ನಿವಾಸಕ್ಕೆ ಭೇಟಿ ನೀಡಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಮಹತ್ವದ ಚರ್ಚೆ ನಡೆಸಿದ್ದಾರೆ. ದಿಢೀರ್ ಭೇಟಿ ನೀಡಿ ಪ್ರಹ್ಲಾದ್ ಜೋಷಿ ಜೊತೆ ಒಂದು ಗಂಟೆಗಳ ಕಾಲ ಬೊಮ್ಮಾಯಿ ಮಾತುಕತೆ ನಡೆಸಿರುವುದು ಭಾರೀ ಕುತೂಹಲ ಕೆರಳಿಸಿದೆ.
ಇನ್ನು, ತುಂಬಾ ದಿನಗಳ ನಂತರ ಜೋಷಿಯವರನ್ನ ಭೇಟಿಯಾಗುತ್ತಿದ್ದೇನೆ. ಜೋಷಿಯವರೇ ಕರೆ ಮಾಡಿ ಭೇಟಿಯಾಗುವಂತೆ ಸೂಚಿಸಿದ್ದರು. ಈ ವೇಳೆ ಮಳೆ ಹಾನಿ ಬಗ್ಗೆ ಚರ್ಚಿಸಿದ್ದೇವೆ. ನಾಯಕತ್ವ ಬದಲಾವಣೆ ಬಗ್ಗೆ ಯಾವುದೇ ಚರ್ಚೆ ನಡೆಸಿಲ್ಲ ಎಂದು ಬೊಮ್ಮಾಯಿ ಗೌಪ್ಯತೆ ಕಾಪಾಡಿಕೊಂಡಿದ್ದಾರೆ.
ಪ್ರಹ್ಲಾದ್ ಜೋಷಿ ಕೂಡ ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಬೊಮ್ಮಾಯಿ ಮೂಲಕ ತನ್ನ ಸ್ಪಷ್ಟ ಸಂದೇಶ ಕಳುಹಿಸಿದ್ದಾರೆ. ಬೊಮ್ಮಾಯಿ ಸಿಎಂ ಯಡಿಯೂರಪ್ಪ ಆಪ್ತ ಬಣದಲ್ಲಿ ಗುರುತಿಸಿಕೊಂಡ ಕಾರಣ ಜೋಷಿ ಹೀಗೆ ಮಾಡಿದ್ದರು ಎಂಬುದು ಟಾಕ್.
ಹೀಗೆ ಮುಖ್ಯಮಂತ್ರಿ ಸ್ಥಾನಕ್ಕೆ ಲಿಂಗಾಯತ ಮತ್ತು ಬ್ರಾಹ್ಮಣರ ನಡುವೆ ತೀವ್ರ ಪೈಪೋಟಿ ನಡೆಯುತ್ತಿರುವಾಗಲೇ ದಲಿತ ಸಿಎಂ ಮಾಡಲಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ. ಇದೇ ಸಂದರ್ಭದಲ್ಲಿ ವಾಲ್ಮೀಕಿ ನಾಯಕ ಸಮಾಜದ ನಾಯಕರಾದ ಶ್ರೀರಾಮುಲು ಅವರನ್ನು ಹೈಕಮಾಮಡ್ ನಾಯಕರು ದೆಹಲಿಗೆ ಕರೆಸಿಕೊಂಡು ಚರ್ಚಿಸಿದ್ದಾರೆ. ಹೀಗಾಗಿ ದಲಿತ ಸಿಎಂ ಮಾಡಲು ಹೈಕಮಾಂಡ್ ಮುಂದಾಗಿದ್ಯಾ ಎಂಬ ಚರ್ಚೆ ಶುರುವಾಗಿದೆ. ರಾಜ್ಯದಲ್ಲಿ ದಲಿತ ಸಿಎಂ ಮಾಡುವ ತೀರ್ಮಾನ ಹೈಕಮಾಂಡ್ನದ್ದು ಎಂದು ಯಡಿಯೂರಪ್ಪ ಜಾರಿಕೊಂಡಿದ್ದಾರೆ.
2023ರ ವಿಧಾನಸಭಾ ಚುನಾವಣೆ ದೃಷ್ಟಿಯಿಂದಲೇ ಹೈಕಮಾಂಡ್ ಭಾರೀ ತಂತ್ರಗಾರಿಕೆ ಹೆಣೆಯುತ್ತಿದೆ. ರಾಜ್ಯದಲ್ಲಿ ದಲಿತ ಸಮುದಾಯಕ್ಕೆ ಸೇರಿದ ಮತಗಳು ನಿರ್ಣಾಯಕ ಆಗುವ ಶ್ರೀರಾಮುಲರನ್ನು ಸಿಎಂ ಮಾಡಬಹುದು ಎಂದು ಹೇಳಲಾಗುತ್ತಿದೆ. ಕಾಂಗ್ರೆಸ್ ಮತಬ್ಯಾಂಕ್ ಆಗಿರುವ ದಲಿತರನ್ನು ಸೆಳೆಯುವ ಎಲ್ಲಾ ತಂತ್ರಗಳನ್ನು ಮಾಡುತ್ತಿದ್ದಾರೆ.
ಇತ್ತೀಚೆಗೆ ದಲಿತ ಸಮುದಾಯಕ್ಕೆ ಸೇರಿದ ಗೆಹ್ಲೋಟ್ ಅವರನ್ನು ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ. ದಲಿತ ಸಮುದಾಯಕ್ಕೆ ಸೇರಿರುವ ಎ ನಾರಾಯಣಸ್ವಾಮಿಯವರನ್ನು ಕೇಂದ್ರದಲ್ಲಿ ಸಚಿವರನ್ನಾಗಿ ಮಾಡಲಾಗಿದೆ. ಇದೀಗ ಮುಂದಿನ ಎರಡು ವರ್ಷಗಳ ಕಾಲ ದಲಿತರನ್ನೇ ಸಿಎಂ ಮಾಡಿ 2023ರ ವಿಧಾನಸಭಾ ಚುನಾವಣೆ ಗೆಲ್ಲೋ ಪ್ಲಾನ್ ಬಿಜೆಪಿಯದ್ದು.