ಶಿವಮೊಗ್ಗ ಜಿಲ್ಲೆಯ ಹುಣಸೋಡು ಪ್ರದೇಶದಲ್ಲಿ ನಿನ್ನೆ ರಾತ್ರಿ 10.20ರ ಸುಮಾರಿಗೆ ಬೃಹತ್ ಸ್ಫೋಟ ಹಾಗು ಭೂಮಿ ಕಂಪಿಸದ ಅನುಭವಾಗಿ ಜನರು ಭಯಭೀತರಾಗಿದ್ದರು. ಅಕ್ರಮ ಕ್ವಾರಿಯಲ್ಲಿ ನಡೆದ ಡೈನಾಮೈಟ್ ಸ್ಫೋಟ ಈ ಘಟನೆಗೆ ಕಾರಣ ಎಂದು ಹೇಳಲಾಗಿದೆ. ಈ ಸ್ಫೋಟದಿಂದಾಗಿ 10 ಕ್ಕೂ ಹೆಚ್ಚು ಜನ ಬಿಹಾರ ಮೂಲದ ವಲಸೆ ಕಾರ್ಮಿಕರು ಮೃತಪಟ್ಟಿರುವ ಶಂಕೆಯಿದೆ.
ಶಿವಮೊಗ್ಗದಲ್ಲಿ ಕಲ್ಲು ಕ್ವಾರೆ ಸ್ಫೋಟ ದುರಂತ ಸಂಗತಿ. ಕಾರ್ಮಿಕರ ಪ್ರಾಣಹಾನಿಯಾಗಿರುವುದು ನೋವುಂಟು ಮಾಡಿದೆ. ನೊಂದ ಕುಟುಂಬಗಳಿಗೆ ಸರ್ಕಾರ ಸಂಪೂರ್ಣ ಸಹಾಯ ನೀಡಲಿದೆ. ಘಟನೆಯಲ್ಲಿ ಗಾಯಗೊಂಡವರು ಬೇಗ ಚೇತರಿಸಿಕೊಳ್ಳಲಿ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮೂಲಕ ಸಂತಾಪ ಸೂಚಿಸಿದ್ದಾರೆ.
ಈ ದುರಂತ ಘಟನೆಗೆ ರಾಜಕೀಯ ಗಣ್ಯರು ಸಂತಾಪ ಸೂಚಿಸಿದ್ದಾರೆ. ಇದೊಂದು ಆಘಾತಕಾರಿ, ದುರದೃಷ್ಟಕರ ಘಟನೆ ಮೃತರ ಆತ್ಮಕ್ಕೆ ಶಾಂತಿಸಿಗಲಿ ರಕ್ಷಣಾ ಕಾರ್ಯಚರಣೆ ಸೇರಿದಂತೆ ಎಲ್ಲಾ ಅಗತ್ಯ ಕ್ರಮಗಳನ್ನು ಘಟನೆಯಾದ ತಡ ರಾತ್ರಿಯೇ ಕ್ರಮಕೈಗೊಳ್ಳಲಾಗಿದೆ. ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುತ್ತೆ ಎಂದು ರಾಜ್ಯದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.
ಕರ್ನಾಟಕದ ಕಲ್ಲು ಗಣಿಗಾರಿಕೆ ಕ್ವಾರೆಯಲ್ಲಿ ಡೈನಾಮಿಕ್ ಸ್ಪೋಟಗೊಂಡಿರುವುದು ದುರಂತ ಸಂಗತಿ. ಮುಂದಿನ ದಿನಗಳಲ್ಲಿ ಈ ರೀತಿಯ ದುರಂತಗಳನ್ನು ತಪ್ಪಿಸಲು ಈ ಘಟನೆ ಕುರಿತು ಆಳವಾಗಿ ತನಿಖೆ ನಡೆಸಬೇಕೆಂದು, ಸರ್ಕಾರಕ್ಕೆ ನಾಯಕ ರಾಹುಲ್ ಗಾಂಧಿ ಆಗ್ರಹಿಸಿದ್ದಾರೆ. ಈ ದುರಂತದಲ್ಲಿ ಮಡಿದ ಕಾರ್ಮಿಕರಿಗೆ ಸಂತಾಪ ಸೂಚಿಸಿದ್ದಾರೆ.
ಕ್ವಾರೆಗೆ ಜಿಲೆಟಿನ್ ಸಾಗಿಸುತ್ತಿದ್ದ ಲಾರಿ ಸ್ಪೋಟಗೊಂಡು ಅನೇಕ ಸಾವು ನೊವಾಗಿರುವುದು ತೀವ್ರ ದುಃಖಕರವಾದ ಸಂಗತಿ. ಸಿಎಂ ಬಿಎಸ್ವೈ ಸರ್ಕಾರ ಘಟನೆಯ ಬಗ್ಗೆ ನಿಷ್ಪಕ್ಷಪಾತವಾಗಿ ಕಟ್ಟುನಿಟ್ಟಾಗಿ ತನಿಖೆ ನಡೆಸಿ, ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸ ಬೇಕೆಂದು ಕಾಂಗ್ರೆಸ್ ನಾಯಕರಾದ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಕಲ್ಲು ಕ್ವಾರಿಯಲ್ಲಿ ನಡೆದ ಈ ಸ್ಫೋಟದ ಬಗ್ಗೆ ರಾಜ್ಯ ಸರ್ಕಾರ ತನಿಖೆ ನಡೆಸಬೇಕು. ಬಡ ಕಾರ್ಮಿಕರ ಜೀವ ಹರಣಕ್ಕೆ, ಈ ದುರ್ಘಟನೆಗೆ ಕಾರಣರಾದವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು. ಮುಂದಿನ ದಿನಗಳಲ್ಲಿ ಇಂತಹ ಅವಘಡಗಳು ಮರುಕಳಿಸದಂತೆ ಎಚ್ಚರವಹಿಸಬೇಕೆಂದು ಮಾಜಿ ಸಿಎಂ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.