ಹೊಸ ವರದಿಯೊಂದರ ಪ್ರಕಾರ 2020 ಮತ್ತು 2021 ವರ್ಷದಲ್ಲಿ ಭಾರತದಲ್ಲಿ 4.07 ಮಿಲಿಯನ್ ಜನರು COVID-19 ಸಾಂಕ್ರಾಮಿಕದಿಂದ ಸಾವನ್ನಪ್ಪಿದ್ದಾರೆ ಎಂದು ಅಂದಾಜಿಸಲಾಗಿದೆ. ಇದು ಭಾರತ ಅಧಿಕೃತವಾಗಿ ನೋಂದಾಯಿಸಿದ COVID-19 ಸಾವುಗಳ ಸಂಖ್ಯೆಗಿಂತ ಎಂಟು ಪಟ್ಟು ಹೆಚ್ಚು ಎನ್ನಲಾಗಿದೆ. ಭಾರತ ಸರ್ಕಾರದ ಅಧಿಕೃತ ಮಾಹಿತಿಯ ಪ್ರಕಾರ ಕೋವಿಡ್ನಿಂದ 0.5 ಮಿಲಿಯನ್ ನಷ್ಟು ಜನ ಮಾತ್ರ ಮೃತಪಟ್ಟಿದ್ದಾರೆ ಎಂದು ವರದಿ ಮಾಡಿದೆ.
ಗುರುವಾರ ‘ದಿ ಲ್ಯಾನ್ಸೆಟ್’ನಲ್ಲಿ ಪ್ರಕಟವಾದ ವರದಿಯ ಪ್ರಕಾರ, 2020 ಮಾರ್ಚ್ ರಿಂದ ಒಟ್ಟು 191 ದೇಶಗಳಲ್ಲಿ 18.2 ಮಿಲಿಯನ್ ಜನರು ಸಾವನ್ನಪ್ಪಿದ್ದಾರೆ ಎಂದು ವರದಿ ಮಾಡಿದರೆ. ಎಲ್ಲಾ ದೇಶಗಳ ಸರ್ಕಾರಗಳು ಸಲ್ಲಿಸಿದ ಮಾಹಿತಿಯ ಪ್ರಕಾರ 5.94 ಮಿಲಿಯನ್ ಸಾವುಗಳು ಮಾತ್ರ ದಾಖಲಾಗಿವೆ ಎಂದು ಹೇಳಿದೆ.
ದಿ ಲ್ಯಾನ್ಸೆಟ್ನಲ್ಲಿ ಪ್ರಕಟವಾದ ವರದಿಯು ‘ಇನ್ಸ್ಟಿಟ್ಯೂಟ್ ಫಾರ್ ಹೆಲ್ತ್ ಮೆಟ್ರಿಕ್ಸ್ ಅಂಡ್ ಇವಾಲ್ಯುಯೇಷನ್’ (IHME) ನ ತಜ್ಞರ ತಂಡವು ನಡೆಸಿದ ವಿಶ್ಲೇಷಣೆಯನ್ನು ಆದರಿಸಿದೆ. IHME ಯುಎಸ್ನ ಸ್ವತಂತ್ರ ಸಂಶೋಧನಾ ಸಂಸ್ಥೆಯಾಗಿದ್ದು, ಸಾಂಕ್ರಾಮಿಕ ರೋಗವು ಪ್ರಾರಂಭವಾದಾಗಿನಿಂದ ಇದು ವಿವಿಧ ಸಾಂಕ್ರಾಮಿಕ ರೋಗ ಮುನ್ಸೂಚನೆಗಳನ್ನು ನೀಡುತ್ತಾ ಬಂದಿತ್ತು.
24 ತಿಂಗಳುಗಳಲ್ಲಿ 1.13 ಮಿಲಿಯನ್ ಸಾವುಗಳೊಂದಿಗೆ ಎರಡನೇ ಅತಿ ಹೆಚ್ಚು ಹಾನಿಗೊಳಗಾದ ದೇಶ ಯುಎಸ್ ಎಂದು ವರದಿಯಾಗಿದೆ. ಇದು ಸಹ ಅಧಿಕೃತವಾಗಿ ದಾಖಲಾದ ಸಾವುಗಳಿಗಿಂತ 1.14 ಪಟ್ಟು ಹೆಚ್ಚು. ರಷ್ಯಾ, ಮೆಕ್ಸಿಕೊ, ಬ್ರೆಜಿಲ್, ಇಂಡೋನೇಷ್ಯಾ ಮತ್ತು ಪಾಕಿಸ್ತಾನಗಳಲ್ಲಿ ಈ ಅವಧಿಯಲ್ಲಿ 0.5 ಮಿಲಿಯನ್ಗಿಂತಲೂ ಹೆಚ್ಚಿನ ಸಾವುಗಳು ದಾಖಲಾಗಿವೆ. ಅಂದರೆ ಒಟ್ಟು ಸಾವಿನ ಅರ್ಧಕ್ಕಿಂತ ಹೆಚ್ಚು ಸಾವುಗಳನ್ನು ಈ ಏಳು ದೇಶಗಳು ದಾಖಲಿಸಿವೆ. ಆದರೆ ಗಮನಿಸಬೇಕಾದ ಸಂಗತಿ ಎಂದರೆ ಅಂದಾಜು ಹೆಚ್ಚುವರಿ ಸಾವುಗಳು ಕೋವಿಡ್ ಸಂದರ್ಭದ ಒಟ್ಟು ಸಾವುಗಳಾಗಿದ್ದು COVID-19 ಕಾರಣದಿಂದಾಗಿಯೇ ಆದ ಸಾವುಗಳು ಎಂದು ಹೇಳುವಂತಿಲ್ಲ.
“ಲಾಕ್ಡೌನ್ಗಳ ನೇರ ಪರಿಣಾಮಗಳು ಮತ್ತು ಆರ್ಥಿಕ ಪ್ರಕ್ಷುಬ್ಧತೆಯಿಂದಾಗಿಯೂ ಸಾವು ಸಂಭವಿಸಿರಬಹುದು” ಎಂದು ವಿಶ್ಲೇಷಣೆಯು ಹೇಳುತ್ತದೆ.
ಸಂಶೋಧನಾ ತಂಡವು ‘all-cause mortality’ ಅಂಕಿಅಂಶಗಳ ಸಹಾಯದಿಂದ COVID-19 ಸಮಯದಲ್ಲಾದ ಹೆಚ್ಚುವರಿ ಸಾವಿನ ಡೇಟಾವನ್ನು ಲೆಕ್ಕಾಚಾರ ಮಾಡಿದೆ. ಆದರೆ All csuse mortalityಯನ್ನು ಪ್ರಪಂಚದ 36 ದೇಶಗಳು ಮಾತ್ರ ಬಿಡುಗಡೆ ಮಾಡುತ್ತಿದ್ದು ಭಾರತ ಆ ಪಟ್ಟಿಯಲ್ಲಿಲ್ಲ.
ಈ ಬಗ್ಗೆ ಮಾತನಾಡಿರುವ ಗಣಿತಶಾಸ್ತ್ರಜ್ಞ ಮುರಾದ್ ಬನಾಜಿ “COVID-19 ನಿಂದಾಗಿ ಎಷ್ಟು ಹೆಚ್ಚುವರಿ ಸಾವುಗಳು ಸಂಭವಿಸಿವೆ ಎಂಬುದನ್ನು ಪ್ರತ್ಯೇಕಿಸಲು ಪ್ರಯತ್ನಿಸುವುದು ಅಸಾಧ್ಯ ಎಂದು ನಾನು ಭಾರತಕ್ಕೆ ಸಂಬಂಧಿಸಿದಂತೆ ಸಂಪೂರ್ಣ ಖಚಿತವಾಗಿ ಹೇಳಬಲ್ಲೆ” ಎಂದು ‘ದಿ ವೈರ್ ಸೈನ್ಸ್’ಗೆ ತಿಳಿಸಿದ್ದಾರೆ. ಕಳೆದ ವರ್ಷ ಪ್ರಕಟವಾದ ಅವರದ ವರದಿಯ ಪ್ರಕಾರ, ಭಾರತವು 2020 ಮತ್ತು 2021 ರಲ್ಲಿ 3 ಮಿಲಿಯನ್ ಹೆಚ್ಚುವರಿ ಸಾವುಗಳನ್ನು ಹೊಂದಿರಬಹುದು.
ಸಾವಿನ ಎಲ್ಲಾ ಕಾರಣಗಳು (All Cause mortality)
ಭಾರತಕ್ಕೆ ಸಂಬಂಧಿಸಿದಂತೆ, IHME ನಲ್ಲಿನ ವಿಶ್ಲೇಷಣಾ ತಂಡವು ಹೆಚ್ಚಿನ ಸಾವುಗಳನ್ನು ಅಂದಾಜು ಮಾಡಲು ನಾಗರಿಕ ನೋಂದಣಿ ವ್ಯವಸ್ಥೆ (CRS)ಯನ್ನು ಬಳಸಿದೆ. ಒಂದು ನಿರ್ದಿಷ್ಟ ವರ್ಷದಲ್ಲಿ ಆದ ಹೆಚ್ಚುವರಿ ಸಾವುಗಳನ್ನು ಲೆಕ್ಕಾಚಾರ ಮಾಡಲು, ಸಂಶೋಧಕರಿಗೆ ಎರಡು ಸೆಟ್ ಡೇಟಾ ಬೇಕಾಗುತ್ತದೆ: ಒಂದು ಬೇಸ್ಲೈನ್ ಅನ್ನು ಅಂದಾಜು ಮಾಡಲು ಮತ್ತು ಇನ್ನೊಂದು ಆ ಬೇಸ್ಲೈನ್ಗಿಂತ ಹೆಚ್ಚಿನದನ್ನು ಅಂದಾಜು ಮಾಡಲು.
ಬೇಸ್ಲೈನ್ ಅಂಕಿಅಂಶಗಳು 2018 ಮತ್ತು 2019 ರ CRS ಸಂಖ್ಯೆಗಳನ್ನು ಆಧರಿಸಿದೆ. ನಂತರ 2020 ಮತ್ತು 2021 ರಲ್ಲಾದ ಹೆಚ್ಚುವರಿ ಸಾವನ್ನು ಲೆಕ್ಕ ಹಾಕಲಾಯಿತು. ಆನಂತರ ಅದೇ ವರ್ಷಗಳಲ್ಲಿ ದಾಖಲಾದ ಸಾವಿನ ನಿಜವಾದ ಸಂಖ್ಯೆಗೆ ಸಂಖ್ಯೆಗಳನ್ನು ಇದನ್ನು ಹೋಲಿಸಿದಾಗ, 4.07 ಮಿಲಿಯನ್ನಷ್ಟು ವ್ಯತ್ಯಾಸ ಕಂಡುಬಂತು.
ಆದರೆ ಸಾವಿನ ನೋಂದಣಿಯನ್ನು ಸ್ಥಿರವಾಗಿ ದಾಖಲಿಸದ ಭಾರತದಲ್ಲಿ ಈ ಬೇಸ್ಲೈನನ್ನು ಪೂರ್ತಿಯಾಗಿ ನಂಬಲಾಗುವುದಿಲ್ಲ. ಅದಕ್ಕಾಗಿ ಸಂಶೋಧನಾ ತಂಡವು 2019 ರ ‘ಗ್ಲೋಬಲ್ ಬರ್ಡನ್ ಆಫ್ ಡಿಸೀಸ್ ಸ್ಟಡಿ’ಯ ಡೇಟಾವನ್ನೂ ಬಳಸಿಕೊಂಡಿದೆ.
ರಾಜ್ಯವಾರು ಡೇಟಾ
ವಿಶ್ಲೇಷಣೆಯ ಪ್ರಕಾರ, ಭಾರತದ ಎಂಟು ರಾಜ್ಯಗಳಲ್ಲಿ ಮರಣ ಪ್ರಮಾಣವು 1,00,000 ಜನರಿಗೆ ಸುಮಾರು 200ರಷ್ಟಿತ್ತು. ಉತ್ತರಾಖಂಡ, ಮಣಿಪುರ, ಮಹಾರಾಷ್ಟ್ರ, ಛತ್ತೀಸ್ಗಢ, ಹರಿಯಾಣ, ಹಿಮಾಚಲ ಪ್ರದೇಶ, ಪಂಜಾಬ್ ಮತ್ತು ಕರ್ನಾಟಕ ಆ ಎಂಟು ರಾಜ್ಯಗಳಾಗಿವೆ. ಒಟ್ಟು 191 ದೇಶಗಳಲ್ಲಿ 50 ದೇಶಗಳಲ್ಲಿ ಮಾತ್ರ ಇದಕ್ಕಿಂತ ಹಚ್ಚಿನ ಸಾವುಗಳಾಗಿವೆ. ಮತ್ತೊಂದೆಡೆ, ಅರುಣಾಚಲ ಪ್ರದೇಶ, ಆಂಧ್ರಪ್ರದೇಶ, ತೆಲಂಗಾಣ, ಸಿಕ್ಕಿಂ, ರಾಜಸ್ಥಾನ, ಗುಜರಾತ್, ಉತ್ತರ ಪ್ರದೇಶ, ಜಾರ್ಖಂಡ್, ಪಶ್ಚಿಮ ಬಂಗಾಳ ಮತ್ತು ಗೋವಾ ಜಾಗತಿಕ ಸರಾಸರಿಗಿಂತ ಕಡಿಮೆ ಮರಣ ಪ್ರಮಾಣವನ್ನು ಹೊಂದಿವೆ. ಅಂದರೆ 1,00,000 ಜನರಿಗೆ 120.6 ಸಾವುಗಳು. ಸಾವುಗಳ ಅಂದಾಜು ಸಂಖ್ಯೆಯ ಪ್ರಕಾರ, ಮಹಾರಾಷ್ಟ್ರವು 0.6 ಮಿಲಿಯನ್ನೊಂದಿಗೆ ಭಾರತದಲ್ಲಿ ಅಗ್ರಸ್ಥಾನದಲ್ಲಿದ್ದರೆ ಬಿಹಾರ 0.3 ಮಿಲಿಯನ್ನೊಂದಿಗೆ ಎರಡನೇ ಸ್ಥಾನದಲ್ಲಿದೆ.
ಈ IHME ಮಾತ್ರವಲ್ಲದೆ ಇತರ ವಿಶ್ಲೇಷಣೆಗಳು ಸಹ ಭಾರತದಲ್ಲಿ ಸರ್ಕಾರ ನೀಡಿರುವ ಪ್ರಮಾಣಕ್ಕಿಂತ ಸಾವಿನ ಪ್ರಮಾಣ ಹೆಚ್ಚಿದೆ ಎಂದು ಹೇಳಿವೆ. ಜನವರಿ 6, 2022 ರಂದು, ಟೊರೊಂಟೊ ವಿಶ್ವವಿದ್ಯಾನಿಲಯದ ಸಾಂಕ್ರಾಮಿಕ ರೋಗಶಾಸ್ತ್ರಜ್ಞರಾದ ಪ್ರಭಾತ್ ಝಾ ನೇತೃತ್ವದ ತಂಡ ನೀಡಿರುವ ವಿಶ್ಲೇಷಣಾ ವರ್ಇಯ ಪ್ರಕಾರ 2020 ಮತ್ತು 2021 ರಲ್ಲಿ ಭಾರತದಲ್ಲಿ 3.2 ಮಿಲಿಯನ್ ಹೆಚ್ಚುವರಿ ಸಾವುಗಳು ವರದಿಯಾಗಿವೆ. ಮತ್ತು COVID-19 ಎರಡನೇ ಅಲೆಯಲ್ಲಿ 2.7 ಮಿಲಿಯನ್ ಸಾವುಗಳಾಗಿವೆ.
ಸರ್ಕಾರ ಅಧಿಕೃತವಾಗಿ ಇಷ್ಟು ಸಾವುಗಳು ಸಂಭವಿಸಿಲ್ಲ ಎಂದು ಹೇಳುತ್ತಿದ್ದರೂ ಅನೇಕ ರಾಜ್ಯ ಸರ್ಕಾರಗಳು ತಮ್ಮ ನೋಂದಣಿ ವ್ಯವಸ್ಥೆಗಳು ದಾಖಲಿಸಿರುವುದಕ್ಕಿಂತ ಹೆಚ್ಚಿನ ಸಂತ್ರಸ್ತರಿಗೆ ಪರಿಹಾರದ ಹಕ್ಕುಗಳನ್ನು ಮಂಜೂರು ಮಾಡಿರುವುದು ಈ ವಿಚಾರವನ್ನು ಮೌನವಾಗಿ ಒಪ್ಪಿಕೊಂಡಂತಾಗಿದೆ. ಆದ್ದರಿಂದ ಕೇಂದ್ರ ಸರ್ಕಾರವು ಇದನ್ನು ಮತ್ತು ಇಂತಹ ಇತರ ಅಧ್ಯಯನಗಳನ್ನು ತಿರಸ್ಕರಿಸುವ ಬದಲು ಪರಿಶೀಲಿಸಬೇಕು ಎಂದು ಬನಾಜಿ ಹೇಳುತ್ತಾರೆ. “ಸಾವಿಗೀಡಾದವರು COVID ನಿಂದ ಜೀವ ಕಳೆದುಕೊಂಡದ್ದು ಅಲ್ಲ ಎಂದು ಯಾರಾದರೂ ಭಾವಿಸುತ್ತಾರಾದರೆ ಯಾವ ಬೇರೆ ಕಾರಣದಿಂದ ಸಾವಿಗೀಡಾಗಿದ್ದಾರೆ ಎಂದು ಹೇಳಬೇಕು” ಎಂದಿದ್ದಾರೆ.
“ಕಾರಣ ಏನೇ ಇರಲಿ, ಇದು ಸಾಂಕ್ರಾಮಿಕ ರೋಗವನ್ನು ಸರಿಯಾಗಿ ನಿರ್ವಹಿಸಿಲ್ಲ ಎಂಬುವುದನ್ನು ಹೇಳುತ್ತದೆ. 4 ಮಿಲಿಯನ್ ಜನರ ಸಾವು ಬೃಹತ್ ಸಂಖ್ಯೆಯ ಮರಣವೇ ಆಗಿದೆ” ಎನ್ನುತ್ತಾರೆ.