ಜಿಲ್ಲೆಯಲ್ಲಿ ಈಗಾಗಲೇ ಬೆಳೆ ಸಮೀಕ್ಷೆ ಮುಗಿದಿದೆ. ಆದರೆ, ಶೇ.33 ರಷ್ಟು ರೈತರ ಒಟ್ಟು ಜಮೀನಿನ ವಿಸ್ತೀರ್ಣದ ಮಾಹಿತಿ ನಿಖರವಾಗಿ ನಮೂದಿಸಲಾಗಿಲ್ಲ. ಅಧಿಕಾರಿಗಳ ಇಂತಹ ನಡೆಯಿಂದ ರೈತರಿಗೆ ಅನ್ಯಾಯವಾಗಲಿದೆ” ಎಂದು ಅಧಿಕಾರಿಗಳನ್ನು ಸಚಿವ ಕೃಷ್ಣ ಬೈರೇಗೌಡ ಅವರು ಎಚ್ಚರಿಸಿದ್ದಾರೆ.
ಬಳ್ಳಾರಿ ಜಿಲ್ಲಾಡಳಿತದ ಸಭಾಂಗಣದಲ್ಲಿ ಮಂಗಳವಾರ ನಡೆದ ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, “ಬರ ಪರಿಹಾರದ ಹಣ ರೈತರಿಗೆ ಆನ್ಲೈನ್ ಮೂಲಕವೇ ತಲುಪಲಿದೆ. “ಫ್ರೂಟ್ಸ್” ತಂತ್ರಾಂಶದಲ್ಲಿ ರೈತರ ಸಂಪೂರ್ಣ ಜಮೀನಿನ ಒಟ್ಟು ವಿಸ್ತೀರ್ಣ ನಮೂದಿಸಿದರೆ ಮಾತ್ರ ಅವರಿಗೆ ನ್ಯಾಯಯುತ ಪರಿಹಾರ ತಲುಪಲಿದೆ.
ಆದರೆ, ಬಳ್ಳಾರಿಯಲ್ಲಿ ಬೆಳೆ ಸಮೀಕ್ಷೆ ನಡೆದಿದ್ದರು ಶೇ.33 ರಷ್ಟು ರೈತರ ಜಮೀನಿನ ಒಟ್ಟು ವಿಸ್ತೀರ್ಣದ ಮಾಹಿತಿ ಫ್ರೂಟ್ಸ್ ತಂತ್ರಾಂಶದಲ್ಲಿ ಸಂಪೂರ್ಣವಾಗಿ ನಮೂದಿಸಲಾಗಿಲ್ಲ ಏಕೆ ? ಸರ್ಕಾರದ ಸೂಚನೆ ಪಾಲಿಸಲೂ ನಿಮಗೆ ಕಷ್ಟವೇ?” ಎಂದು ಅಧಿಕಾರಿಗಳ ವಿರುದ್ಧ ಅವರು ಆಕ್ರೋಶ ಹೊರಹಾಕಿದರು.
ಮುಂದುವರೆದು, “ಗ್ರಾಮ ಆಡಳಿತ ಅಧಿಕಾರಿಗೆ ಆತನ ಅಧಿಕಾರದ ವ್ಯಾಪ್ತಿಯಲ್ಲಿ ಯಾವ ರೈತನಿಗೆ ಎಲ್ಲಿ.. ಎಷ್ಟು ಏಕರೆ ಜಮೀನಿದೆ? ಎಂಬ ಕನಿಷ್ಟ ಮಾಹಿತಿ ಇದ್ದೇ ಇರುತ್ತದೆ. ಅದನ್ನು ಮತ್ತೆ ರೈತನಲ್ಲಿ ಕೇಳಿ ತಂತ್ರಾಂಶದಲ್ಲಿ ನಮೂದಿಸಿ” ಎಂದು ಸೂಚಿಸಿದರು.
“ಅಧಿಕಾರಿಗಳು ರೈತರ ಜಮೀನಿನ ಸಂಪೂರ್ಣ ವಿಸ್ತೀರ್ಣವನ್ನು ನಮೂದಿಸದಿದ್ದರೆ ರೈತರಿಗೆ ನ್ಯಾಯಯುತ ಪರಿಹಾರ ನೀಡಲು ಸಾಧ್ಯವಿಲ್ಲ. ಇದರಿಂದ ರೈತರಿಗೆ ಅನ್ಯಾಯವಾಗಲಿದೆ. ಮಳೆ ಇಲ್ಲದ ಕಾರಣ ರೈತರು ಬೆಳೆ ಕೈಸೇರದೆ ಸಂಕಷ್ಟಕ್ಕೀಡಾಗಿದ್ದಾರೆ. ಇಂತಹ ಸಂದರ್ಭದಲ್ಲಿ ನಾವು ರೈತರ ಪರ ನಿಲ್ಲಬೇಕಾಗಿದೆ. ಹೀಗಾಗಿ ರೈತರಿಗೆ ನ್ಯಾಯಯುತ ಪರಿಹಾರ ತಲುಪಿಸಲು ಮುಂದಿನ ವಾರದ ಒಳಗಾಗಿ ಅಧಿಕಾರಿಗಳು ತ್ವರಿತ ಗತಿಯಲ್ಲಿ ರೈತರ ಜಮೀನಿನ ನಿಖರ ಮಾಹಿತಿಯನ್ನು ನಮೂದಿಸಿ, ಇನ್ನಾದರೂ ಬೆಂಕಿ ಬಿದ್ದ ಮೇಲೆ ಭಾವಿ ತೋಡುವ ರೀತಿಯ ವರ್ತನೆ ನಿಲ್ಲಿಸಿ” ಎಂದರು.
ಪಹಣಿ ಜೊತೆಗೆ ಆಧಾರ್ ಲಿಂಕ್ ಮಾಡಲು ಕರೆ:
ರಾಜ್ಯದಲ್ಲಿ ಶೇ.70 ರಷ್ಟು ಸಣ್ಣ ರೈತರಿದ್ದಾರೆ. ಆದರೆ, ಕೇಂದ್ರ ಸರ್ಕಾರದ ಹಳೆಯ ಅಂಕಿಅಂಶಗಳ ಪ್ರಕಾರ ರಾಜ್ಯದಲ್ಲಿನ ಸಣ್ಣ ರೈತರ ಸಂಖ್ಯೆ ಶೇ.44 ಮಾತ್ರ. ಇದರಿಂದ ರಾಜ್ಯಕ್ಕೆ ಲಭ್ಯವಾಗುವ ಬರ ಪರಿಹಾರದಲ್ಲೂ ಅನ್ಯಾಯವಾಗುತ್ತಿದೆ.
ಹೀಗಾಗಿ ಗ್ರಾಮ ಲೆಕ್ಕಿಗರು ಮುಂದಿನ ದಿನಗಳಲ್ಲಿ ರೈತರ ಪಹಣಿಗಳನ್ನು ಆಧಾರ್ ನಂಬರ್ ಜೊತೆಗೆ ಲಿಂಕ್ ಮಾಡಿದರೆ ರಾಜ್ಯದ ಸಣ್ಣ ರೈತರ ಅಂಕಿಸಂಖ್ಯೆ ನಿಖರವಾಗಿ ತಿಳಿಯಲಿದೆ. ಇದನ್ನೇ ಕೇಂದ್ರದ ಮುಂದಿಟ್ಟು ರಾಜ್ಯದ ಹಕ್ಕನ್ನು ಮಂಡಿಸಬಹುದು. ಇದಕ್ಕೆ ಸಹಕಾರಿಯಾಗುವಂತೆ ಶೀಘ್ರದಲ್ಲೇ ಆ್ಯಪ್ ಒಂದನ್ನೂ ಅಭಿವೃದ್ಧಿ ಪಡಿಸಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ಸೂಚಿಸಿದರು.
ಕುಡಿಯುವ ನೀರು-ಮೇವಿನ ಬಗ್ಗೆ ಎಚ್ಚೆತ್ತುಕೊಳ್ಳಿ:
ಬಳ್ಳಾರಿ ಜಿಲ್ಲೆಯಲ್ಲಿ ಎಲ್ಲೇ ಕುಡಿಯುವ ನೀರಿನ ಸಮಸ್ಯೆ ಉಂಟಾದರೂ ಖಾಸಗಿ ಟ್ಯಾಂಕರ್ ಮೂಲಕ ನೀರು ಪೂರೈಸಬೇಕು, ಈಗಲೇ ಟೆಂಡರ್ ಮಾಡಿ ಮುಂಜಾಗ್ರತೆ ವಹಿಸಿ. ಇದೇ ಕಾರಣಕ್ಕೆ ಪ್ರತೀ ತಾಲೂಕಿನಲ್ಲೂ ಶಾಸಕರ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್ ಅನ್ನೂ ರಚಿಸಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳಿಗೆ ತಿಳಿಸಿದರು.
ಕುಡಿಯುವ ನೀರಿನ ಸಮಸ್ಯೆ ನೀಗಿಸಲು ಟ್ಯಾಂಕರ್ ಒಂದೇ ಪರಿಹಾರವಲ್ಲ. ಬದಲಿಗೆ ಖಾಸಗಿ ಬೋರ್ ವೆಲ್ ಗಳನ್ನು ಬಾಡಿಗೆಗೆ ಪಡೆದು ನೀರಿನ ಸಮಸ್ಯೆ ಎಲ್ಲೇ ಕಂಡರು 24 ಗಂಟೆಯ ಒಳಗಾಗಿ ನೀರು ಪೂರೈಸುವಂತಿರಬೇಕು. 15 ದಿನಗಳಲ್ಲಿ ಬಿಲ್ ಗೆ ಹಣ ಪಾವತಿ ಮಾಡಬೇಕು.
ಮೇವಿನ ವಿಚಾರದಲ್ಲೂ ಮುಂಜಾಗ್ರತಾ ತಯಾರಿ ಮಾಡಿಕೊಳ್ಳಬೇಕು. ರಾಜ್ಯದ ಮೇವನ್ನು ಪಕ್ಕದ ರಾಜ್ಯಗಳಿಗೆ ಕಳ್ಳಸಾಗಾಣೆ ಮಾಡುವುದನ್ನು ನಿರ್ಬಂಧಿಸಲು ಶೀಘ್ರದಲ್ಲೇ ಆದೇಶ ಹೊರಡಿಸಲಾಗುವುದು ಎಂದು ಅವರು ತಿಳಿಸಿದರು.
25 ವರ್ಷಗಳಿಂದ ಬಾಕಿ ಉಳಿದ ಬಗರ್ ಹುಕುಂ ಅರ್ಜಿ: ಸಚಿವರ ಆಕ್ರೋಶ:
ವಿಲೇವಾರಿಯಾಗದ ಬಗರ್ ಹುಕುಂ ಅರ್ಜಿಗಳ ಬಗ್ಗೆ ಗಮನ ಸೆಳೆದ ಸಚಿವ ಕೃಷ್ಣ ಬೈರೇಗೌಡ ಅವರು, “ನಮೂನೆ 50, 53, 57ಕ್ಕೆ ಸಂಬಂಧಿಸಿದಂತೆ ಅಕ್ರಮ-ಸಕ್ರಮಗೊಳಿಸಿ ಸಾಗುವಳಿ ಚೀಟಿ ನೀಡಲು ಕೋರಿ ಬಳ್ಳಾರಿಯಲ್ಲಿ ಸಾವಿರಾರು ಅರ್ಜಿಗಳು ಸಲ್ಲಿಕೆಯಾಗಿವೆ. ನಮೂನೆ 53ರ ಅಡಿಯಲ್ಲೇ ಸುಮಾರು 25,000 ಅರ್ಜಿಗಳು ಬಾಕಿ ಇವೆ.
1998 ರಲ್ಲೇ ನಮೂನೆ 53 ರ ಅರ್ಜಿ ಕರೆಯಲಾಗಿತ್ತು. 25 ವರ್ಷ ಆದ್ರೂ ಈ ಅರ್ಜಿಗಳು ಇನ್ನೂ ವಿಲೇವಾರಿ ಆಗಿಲ್ಲ ಅಂದ್ರೆ ಏನರ್ಥ? ಎಂದು ಕಿಡಿಕಾರಿದ ಅವರು, ಅಧಿಕಾರಿಗಳಿಗೆ ಕಂದಾಯ ಇಲಾಖೆಯ ಗಂಧ ಗಾಳಿಯೂ ಗೊತ್ತಿಲ್ಲ ಎಂಬುದು ಇದರಿಂದ ಖಚಿತವಾಗುತ್ತಿದೆ ” ಎಂದು ಅಸಮಾಧಾನ ಹೊರಹಾಕಿದರು.
ನಮೂನೆ 57 ರ ಅರ್ಜಿಯೂ ಸೇರಿ ಜಿಲ್ಲೆಯಲ್ಲಿ ಒಟ್ಟಾರೆ 1 ಲಕ್ಷಕ್ಕೂ ಅಧಿಕ ಅರ್ಜಿಗಳು ಸಲ್ಲಿಕೆಯಾಗಿವೆ. ಮುಂದಿನ ಒಂದು ವರ್ಷದಲ್ಲಿ ಈ ಎಲ್ಲಾ ಅರ್ಜಿಗಳೂ ವಿಲೇವಾರಿ ಆಗಬೇಕು. ಪ್ರತಿ ವಾರದ ಪ್ರಗತಿಯು ಆ್ಯಪ್ ನಲ್ಲಿ ಅಪ್ಡೇಟ್ ಆಗಬೇಕು. ಇಲ್ಲದಿದ್ದರೆ ತಹಶೀಲ್ದಾರ್ ಗಳಿಗೆ ನೋಟೀಸ್ ನೀಡಲಾಗುತ್ತದೆ” ಎಂದು ಅಧಿಕಾರಿಗಳನ್ನು ಸಚಿವ ಕೃಷ್ಣ ಬೈರೇಗೌಡ ಅವರು ಎಚ್ಚರಿಸಿದರು.
ಮುಂದುವರೆದು, “ಬಗರ್ ಹುಕುಂ ಅರ್ಜಿ ವಿಲೇವಾರಿ ಸಂದರ್ಭದಲ್ಲಿ ಅಧಿಕಾರಿಗಳು ಯಾವುದೇ ಪ್ರಭಾವಿಗಳ ಪಟ್ಟಭದ್ರ ಹಿತಾಸಕ್ತಿಗಳಿಗೆ ಅನುಕೂಲವಾಗುವಂತೆ ವರ್ತಿಸಬಾರದು, ಬದಲಾಗಿ ಬಡ ಜನರಿಗೆ ಮತ್ತು ಅರ್ಹರಿಗೆ ನ್ಯಾಯ ಒದಗಿಸಲು ಬದ್ಧರಾಗಿರಬೇಕು. ನಿಜಕ್ಕೂ ಉಳುಮೆಯಲ್ಲಿ ತೊಡಗಿರುವ ರೈತರಿಗೆ ಮಾತ್ರ ಸಾಗುವಳಿ ಚೀಟಿ ನೀಡಬೇಕು. ಆದರೆ, ಬಗರ್ ಹುಕುಂ ಅಡಿಯಲ್ಲಿ ಗೋಮಾಳ ಜಮೀನನ್ನು ಮಂಜೂರು ಮಾಡಬಾರದು” ಎಂದು ಅವರು ತಾಕೀತು ಮಾಡಿದರು.
ಬಗರ್ ಹುಕುಂ ಅರ್ಜಿ ವಿಲೇವಾರಿಗೆ ಆ್ಯಪ್
ನಮೂನೆ 50, 53, 57ರ ಅಕ್ರಮ ಸಕ್ರಮ ಯೋಜನೆಯಡಿ ಸಾವಿರಾರು ಅರ್ಜಿಗಳು ಸಲ್ಲಿಕೆಯಾಗಿವೆ. ಆದರೆ, ಕೃಷಿಯೇತರ ಚಟುವಟಿಕೆಗಳಲ್ಲಿ ತೊಡಗಿರುವವರಿಗೂ ಸಹ ಸಾಗುವಳಿ ಚೀಟಿ ನೀಡುವುದು ಅಸಾಧ್ಯ. ಅಲ್ಲದೆ, ಸಾವಿರಾರು ಎಕರೆ ಸರ್ಕಾರಿ ಭೂಮಿ ಅಕ್ರಮ ಸಾಗುವಳಿದಾರರ ಪಾಲಾಗಿದ್ದು, ಪ್ರತಿಯೊಂದು ಭಾಗಕ್ಕೂ ಅಧಿಕಾರಿಗಳೇ ನೇರ ಹೋಗಿ ಕೃಷಿ ನಡೆಯುತ್ತಿದೆಯೇ? ಎಂದು ಪರಿಶೀಲಿಸುವುದು ಸಾಧ್ಯವಿಲ್ಲ.
ಹೀಗಾಗಿ ಬಗರ್ ಹುಕುಂ ತಂತ್ರಾಶದ ಮೂಲಕ ಅಕ್ರಮ ಸಾಗುವಳಿ ಭೂಮಿಯಲ್ಲಿ ಕೃಷಿ ಅಥವಾ ಇನ್ಯಾವುದೇ ಚಟುವಟಿಕೆ ಬಗ್ಗೆ ಸ್ಯಾಟಲೈಟ್ ಇಮೇಜ್ ಮೂಲಕ ಮಾಹಿತಿ ಪಡೆದು ಅರ್ಜಿ ವಿಲೇವಾರಿ ಮಾಡುವುದು ನ್ಯಾಯಸಮ್ಮತವಾಗಲಿದೆ. ಅಲ್ಲದೆ, ಶೀಘ್ರ ಪ್ರಕ್ರಿಯೆಗೂ ಈ ಆ್ಯಪ್ ಸಹಕಾರಿಯಾಗಲಿದೆ. ಶೀಘ್ರದಲ್ಲೇ ಈ ಆ್ಯಪ್ ಅಧಿಕಾರಿಗಳ ಕೈಸೇರಲಿದೆ. ಈ ಆ್ಯಪ್ ಸಹಾಯದೊಂದಿಗೆ ಅಧಿಕಾರಿಗಳು ತ್ವರಿತಗತಿಯಲ್ಲಿ ಬಹರ್ ಹುಕುಂ ಅರ್ಜಿ ವಿಲೇವಾರಿಗೊಳಿಸಬಹುದು.
ಅಲ್ಲದೆ, ಅರ್ಜಿ ವಿಲೇವಾರಿಯಾದ ನಂತರ ಅರ್ಹ ಫಲಾನುಭವಿಗಳಿಗೆ ಇ-ಸಾಗುವಳಿ ಚೀಟಿಯನ್ನೂ ತಂತ್ರಾಂಶದ ಮೂಲಕವೇ ಒದಗಿಸಬಹುದು. ಮಂಜೂರಾದ ಪ್ರಕರಣಗಳಲ್ಲಿ ಕಾವೇರಿ 2.0 ಮೂಲಕ ನೋಂದಣಿ ಮಾಡಿಸಿಕೊಡಲು ಕ್ರಮವಹಿಸಲಾಗುವುದು. ಇದರಿಂದ ಜನರಿಗೂ ಅನುಕೂಲವಾಗಲಿದೆ. ಈ ಕ್ರಮದಿಂದಾಗಿ ಮುಂದಿನ ದಿನಗಳಲ್ಲಿ ಭೂ ಮಂಜೂರಾತಿ ತಕರಾರು ಪ್ರಕರಣಗಳನ್ನು ತಡೆಯಬಹುದು ಎಂದು ಸಚಿವ ಕೃಷ್ಣ ಬೈರೇಗೌಡ ಅವರು ತಿಳಿಸಿದರು.
ಕಂದಾಯ ಗ್ರಾಮ ಅಂತಿಮ ಪಟ್ಟಿ ಸಿದ್ದತೆಗೆ ವಾರದ ಗಡುವು
ಕಂದಾಯ ಇಲಾಖೆಗೆ ಸೇರದ ಕಾರಣ ಕಂದಾಯೇತರ ಜನವಸತಿ ನಿವಾಸಿಗಳು ಅಭಿವೃದ್ಧಿ ಯೋಜನೆಗಳಿಂದ ವಂಚಿತರಾಗುತ್ತಿದ್ದಾರೆ. ಇದೇ ಕಾರಣಕ್ಕೆ ಕರ್ನಾಟಕ ಭೂ ಕಂದಾಯ ಕಾಯಿದೆಗೆ ತಿದ್ದುಪಡಿ ತಂದು ತಾಂಡ-ಗೊಲ್ಲರಹಟ್ಟಿ ಸೇರಿದಂತೆ ಪ್ರದೇಶಗಳನ್ನು ಕಂದಾಯ ಗ್ರಾಮ ಎಂದು ಘೋಷಿಸಲು ಅನುವುಮಾಡಿಕೊಡಲಾಗಿತ್ತು.
ಸಾರ್ವಜನಿಕರ 30 ವರ್ಷಗಳ ಬೇಡಿಕೆಗೆ ಅನುಗುಣವಾಗಿ 2013ರ ಕಾಂಗ್ರೆಸ್ ಸರ್ಕಾರ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಹತ್ವದ ನಿರ್ಧಾರ ತೆಗದುಕೊಂಡಿದ್ದರು. ಆದರೆ, ಬಳ್ಳಾರಿಯಲ್ಲಿ ಈ ಸಂಬಂಧ ಸಮಾಧಾನಕರ ಕೆಲಸ ಆಗದಿರುವುದು ವಿಷಾಧನೀಯ. ಹೀಗಾಗಿ ಬಳ್ಳಾರಿಯಲ್ಲಿ ಶೀಘ್ರದಲ್ಲಿ ಕಾನೂನು ಪ್ರಕಾರ ಕಂದಾಯ ಗ್ರಾಮ ಘೋಷಿಸಿ ಹಕ್ಕುಪತ್ರ ನೀಡಿ ಎಂದರು ಸೂಚಿಸಿದರು.
ಬಳ್ಳಾರಿ ಜಿಲ್ಲೆಯಲ್ಲಿ ಒಟ್ಟು 73 ಕಂದಾಯ ಗ್ರಾಮಗಳು ರಚನೆಯಾಗಬೇಕಿತ್ತು. ಆದರೆ, ಈ ಪೈಕಿ 14 ಗ್ರಾಮಗಳನ್ನು ಮಾತ್ರ ಈವರೆಗೆ ಕಂದಾಯ ಗ್ರಾಮಗಳಾಗಿ ಘೋಷಿಸಲು ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. ಹಾಗಾದರೆ ಉಳಿದ ಜನರ-ಗ್ರಾಮಗಳ ಕತೆ ಏನು? ಅವರು ಬಡವರಲ್ವ? ಅವರಿಗೂ ಸರ್ಕಾರದ ಸೌಲಭ್ಯಗಳು ತಲುಪುವುದು ಬೇಡ್ವಾ? ಎಂದು ಕಿಡಿಕಾರಿದ ಸಚಿವರು,
ಇದು ಬಡವರ ಕೆಲಸ. ಅಧಿಕಾರಿಗಳು ದಯವಿಟ್ಟು ಮಾನವೀಯತೆಯಿಂದ ಕಾರ್ಯನಿರ್ವಹಿಸಬೇಕು. ಹೀಗಾಗಿ ಮುಂದಿನ ಒಂದು ವಾರದಲ್ಲಿ ಯಾವೆಲ್ಲಾ ಗ್ರಾಮಗಳನ್ನು ಕಂದಾಯ ಗ್ರಾಮಗಳೆಂದು ಘೋಷಿಸಬಹುದು ಎಂದು ಇಲಾಖೆಗೆ ಪಟ್ಟಿ ಕೊಡಿ. ಜನವರಿ 15 ರ ಒಳಗಾಗಿ ಎಲ್ಲರಿಗೂ ಹಕ್ಕುಪತ್ರ ನೀಡಿ ಎಂದು ಗಡುವು ನೀಡಿದರು.
ಒತ್ತುವರಿ ತೆರವುಗೊಳಿಸಿ ಸರ್ಕಾರಿ ಜಮೀನು ಉಳಿಸಲು ಕರೆ
ಸಭೆಯಲ್ಲಿ ಸರ್ಕಾರಿ ಭೂ ಒತ್ತುವರಿ ತೆರವಿನ ಬಗ್ಗೆಯೂ ಗಮನ ಸೆಳೆದ ಸಚಿವ ಕೃಷ್ಣ ಬೈರೇಗೌಡ ಅವರು,”ಭೂ ಒತ್ತುವರಿ ವಿಚಾರದಲ್ಲಿ ಬಳ್ಳಾರಿ ಬೆಂಗಳೂರಿನ ನಂತರದ ಸ್ಥಾನದಲ್ಲಿದೆ. ಸರ್ಕಾರಿ ಭೂ ಒತ್ತುವರಿಯನ್ನು ತೆರವುಗೊಳಿಸಲು ಸಿಎಂ ಸಿದ್ದರಾಮಯ್ಯ ಸಹ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಆದರೂ, ಅಧಿಕಾರಿಗಳು ಈ ಬಗ್ಗೆ ಕ್ರಮ ಜರುಗಿಸದಿರಲು ಕಾರಣವೇನು? ಎಂದು ಅಸಮಾಧಾನ ಹೊರಹಾಕಿದರು.
ಅಲ್ಲದೆ, ಇನ್ನಾದರೂ ಅಧಿಕಾರಿಗಳು ವಾರದಲ್ಲಿ ಒಂದು ದಿನ ಭೂ ಒತ್ತುವರಿ ತೆರವು ಕಾರ್ಯಾಚರಣೆಗೆ ಮುಂದಾಗಬೇಕು. ಹಾಗೆಂದು ದಶಕಗಳಿಂದ ಸಾಗುವಳಿ ಮಾಡುತ್ತಿರುವ ಬಡ ರೈತರ ಮೇಲೆ ನಿಮ್ಮ ದರ್ಪ ತೋರಿಸಬೇಡಿ ಎಂದು ಅವರು ಕಿವಿಮಾತು ಹೇಳಿದರು.
ಹೈಕೋರ್ಟ್ ಕೇಸ್ಗಳ ಬಗ್ಗೆ ಇಷ್ಟು ತಾತ್ಸಾರವೇಕೆ?: ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದ ಸಚಿವ ಕೃಷ್ಣ ಬೈರೇಗೌಡ
ಬಳ್ಳಾರಿ ಜಿಲ್ಲೆ ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಹೈಕೋರ್ಟ್ ನಲ್ಲಿ ಒಟ್ಟು 382 ಪ್ರಕರಣಗಳಿವೆ. ಈ ಪೈಕಿ 237 ಪ್ರಕರಣಗಳಲ್ಲಿ ತೆಗೆದುಕೊಂಡಿರು ಕ್ರಮ ಶೂನ್ಯ. ತಹಶೀಲ್ದಾರರು ನ್ಯಾಯಾಲಯದಲ್ಲಿ ಕನಿಷ್ಟ ವಕಾಲತ್ತನ್ನೂ ಸಹ ಸಲ್ಲಿಸಿಲ್ಲ ಎಂದು ಅಧಿಕಾರಿಗಳ ವಿರುದ್ಧ ಸಚಿವ ಕೃಷ್ಣ ಬೈರೇಗೌಡ ಅವರು ಕಿಡಿಕಾರಿದರು.
ಬಳ್ಳಾರಿ ಜಿಲ್ಲೆಯಿಂದ ಅಧಿಕ ಸಂಖ್ಯೆಯ ಪ್ರಕರಣಗಳು ಹೈಕೋರ್ಟ್ ನಲ್ಲಿವೆ. ಆದರೆ, ತಹಶಿಲ್ದಾರರು ಹಾಗೂ ಎಸಿಗಳು ಈ ಬಗ್ಗೆ ಯಾವುದೇ ಕ್ರಮ ಜರುಗಿಸಿಲ್ಲ.ಪರಿಣಾಮ ಹೈಕೋರ್ಟ್ ಕಂದಾಯ ಇಲಾಖೆಯನ್ನು ತರಾಟೆಗೆ ತೆಗೆದುಕೊಳ್ಳುತ್ತಿದೆ. ನೀವು ಮಾಡುವ ಕೆಲಸಕ್ಕೆ ಸರ್ಕಾರದ ಜಮೀನು ಖಾಸಗಿಯವರ ಪಾಲಾಗಲು ನಾವು ಸಹಿ ಹಾಕಬೇಕ? ಎಂದು ಅವರು ಕಿಡಿಕಾರಿದರು.
ಮುಂದುವರೆದು, ತಹಶಿಲ್ದಾರರು ಈಗಲಾದರೂ ತಮ್ಮ ಜವಾಬ್ದಾರಿ ಅರಿತು ಕೆಲಸ ಮಾಡಬೇಕು, ಹೈಕೋರ್ಟ್ ನಲ್ಲಿರುವ ಎಲ್ಲಾ ಪ್ರಕರಣಗಳಲ್ಲೂ ವಕಾಲತ್ತು ಸಲ್ಲಿಸಬೇಕು, ಮೂರು ತಿಂಗಳಲ್ಲಿ ಪ್ರಗತಿ ಕಾಣದಿದ್ದಲ್ಲಿ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಅಧಿಕಾರಿಗಳನ್ನು ಎಚ್ಚರಿಸಿದರು.
ಇ- ಆಫೀಸ್ ಅನುಷ್ಠಾನ, ಸಚಿವರ ತೀವ್ರ ಅಸಮಾಧಾನ!
ಅತ್ಯಂತ ಹಿಂದುಳಿದ ಜಿಲ್ಲೆಗಳಲ್ಲೂ ಇ-ಆಫೀಸ್ ಬಳಸುತ್ತಿದ್ದಾರೆ. ಆದರೂ, ಬಳ್ಳಾರಿ ತಾಲೂಕು ಕಚೇರಿಗಳಲ್ಲಿ ಇ-ಆಫೀಸ್ ಬಳಸುತ್ತಿಲ್ಲ. ಹಾಗಾದ್ರೆ ಸಚಿವರ ಮಾತಿಗೆ ಬೆಲೆ ಇಲ್ವ? ನಮ್ಮ ಸೂಚನೆಗಳನ್ನು ಯಾರೂ ಪಾಲಿಸೋದಿಲ್ವ?” ಎಂದು ಸಚಿವರು ಅಧಿಕಾರಿಗಳ ವಿರುದ್ಧ ಅಸಮಾಧಾನ ಹೊರಹಾಕಿದರು.
ಬಳ್ಳಾರಿ ತಾಲೂಕು ಕಚೇರಿಯಲ್ಲೇ ಈವರೆಗೆ ಇ-ಆಫೀಸ್ ನಲ್ಲಿ ಕೇವಲ 17 ಕಡತಗಳನ್ನು ಮಾತ್ರ ರಚಿಸಲಾಗಿದೆ ಎಂದು ಆಕ್ರೋಶ ಹೊರಹಾಕಿದ ಸಚಿವರು, ತಹಶೀಲ್ದಾರರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಅಲ್ಲದೇ ಮುಂದಿನ ದಿನಗಳಲ್ಲಿ ಎಲ್ಲಾ ಕಡತಗಳ ವಿಲೇವಾರಿಯೂ ಇ-ಆಫೀಸ್ ಮೂಲಕವೇ ನಡೆಯಬೇಕು, ಇಲ್ಲದಿದ್ದರೆ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಬಾಕ್ಸ್……….
ಕೂಡ್ಲಿಗಿ ತಾಲೂಕು ಕಚೇರಿಗೆ ದಿಢೀರ್ ಭೇಟಿ-ತಹಶೀಲ್ದಾರ್ ತಬ್ಬಿಬ್ಬು!
ಬಳ್ಳಾರಿ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಗೆ ಮುನ್ನವೇ ಸಚಿವ ಕೃಷ್ಣ ಬೈರೇಗೌಡ ಅವರು ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಕಚೇರಿಗೆ ದಿಢೀರ್ ಭೇಟಿ ನೀಡಿದರು.
ಆದರೆ, ಸಚಿವರು ಕಚೇರಿಗೆ ಆಗಮಿಸುವ ವಿಚಾರ ತಿಳಿಯದ ಅಧಿಕಾರಿಗಳು ಎಂದಿನಂತೆ 10.45 ಆದರೂ ಕಚೇರಿಗೆ ಹಾಜರಾಗಿರಲಿಲ್ಲ. ಸ್ವತಃ ತಹಶೀಲ್ದಾರ್ ಸಹ ಕಚೇರಿಗೆ ಆಗಮಿಸಿರಲಿಲ್ಲ. ಹೀಗಾಗಿ ಸಚಿವ ಕೃಷ್ಣ ಬೈರೇಗೌಡ ಅವರು ಹಾಜರಾತಿ ಪುಸ್ತಕ ಪರಿಶೀಲಿಸಿ ಎಲ್ಲಾ ಅಧಿಕಾರಿಗಳನ್ನೂ ತರಾಟೆಗೆ ತೆಗೆದುಕೊಂಡರು.
ಈ ವೇಳೆ ದಡಬಡಿಸಿ ಕಚೇರಿಗೆ ದೌಡಾಯಿಸಿದ ತಹಶೀಲ್ದಾರರನ್ನೂ ಸಹ ಸಚಿವರು ತರಾಟೆಗೆ ತೆಗೆದುಕೊಂಡರು. ಒಂದು ಸರ್ಕಾರಿ ಕಚೇರಿಯನ್ನು ನಡೆಸುವುದು ಹೀಗಾ? ಬಡವರ ಕೆಲಸ ಅಂದ್ರೆ ಏಕಿಷ್ಟು ತಾತ್ಸಾರ? ಎಂದು ಕಿಡಿಕಾರಿದರು.
ಸಭೆಯಲ್ಲಿ ಕಂಪ್ಲಿ ಶಾಸಕರಾದ ಗಣೇಶ್, ಕಂದಾಯ ಆಯುಕ್ತರಾದ ಸುನೀಲ್ ಕುಮಾರ್, ಬಳ್ಳಾರಿ ಜಿಲ್ಲಾಧಿಕಾರಿಯಾದ ಪ್ರಶಾಂತ್ ಕುಮಾರ್ ಮಿಶ್ರಾ ಉಪಸ್ಥಿತರಿದ್ದರು.