ಜನವರಿ 24 ಭಾನುವಾರದಂದು ನಡೆಯಬೇಕಿದ್ದ ಕರ್ನಾಟಕ ಲೋಕಸೇವಾ ಆಯೋಗ (KPSC) ನಡೆಸುವ FDA ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಸಂಬಂಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸಮಗ್ರ ತನಿಖೆಗೆ ಆದೇಶಿಸಿದ್ದಾರೆ.
ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಿರುವ ಯಡಿಯೂರಪ್ಪ, ಎಫ್ ಡಿಎ ಪ್ರಶ್ನೆಪತ್ರಿಕೆ ಪರೀಕ್ಷೆಗೂ ಮುನ್ನವೇ ಬಹಿರಂಗೊಂಡಿರುವ ವಿಚಾರ ಅಕ್ಷಮ್ಯ ಅಪರಾಧ, ಈ ಬಗ್ಗೆ ಅಧಿಕಾರಿಗಳಿಂದ ಕಳೆದ ರಾತ್ರಿಯೇ ಮಾಹಿತಿ ಪಡೆಯಲಾಗಿದೆ. ಪ್ರಕರಣ ಸಂಬಂಧ ಸಮಗ್ರ ತನಿಖೆಗೆ ಆದೇಶಿಸಲಾಗಿದೆ. ಈಗಾಗಲೇ ತಪ್ಪಿತಸ್ಥರ ಬಂಧನವಾಗಿದೆ. ಈ ಪ್ರಕರಣದಲ್ಲಿ ಭಾಗಿಯಾಗಿರುವ ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತು ಮಾಡುವಂತೆ ಈಗಾಗಲೇ ಸೂಚಿಸಿದ್ದೇನೆ. ಅಗತ್ಯ ಬಿದ್ದರೆ ಹುದ್ದೆಯಿಂದ ವಜಾಗೊಳಿಸಲು ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಈಗಾಗಲೇ 14 ಮಂದಿಯನ್ನು ಬಂಧನಕ್ಕೊಳಪಡಿಸಲಾಗಿದೆ. ಆರೋಪಿಗಳಿಂದ ರೂ.35 ಲಕ್ಷ ವಶಪಡಿಸಿಕೊಳ್ಳಲಾಗಿದೆ ಎಂದು ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಹೇಳಿದ್ದಾರೆ.
FDA ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂಬ ಬಗ್ಗೆ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ಬೆಂಗಳೂರಿನ ಜ್ಞಾನಭಾರತಿ ಠಾಣಾ ವ್ಯಾಪ್ತಿಯಲ್ಲಿನ ಉಪಕಾರ್ ಲೇಔಟ್ನ ಅಪಾರ್ಟ್ಮೆಂಟ್ ಮೇಲೆ ಸಿಸಿಬಿ ದಾಳಿ ನಡೆಸಿತ್ತು.
ಸಿಸಿಬಿ ಎಸಿಪಿ ವೇಣುಗೋಪಾಲ್ ನೇತೃತ್ವದಲ್ಲಿ ನಡೆದ ದಾಳಿ ವೇಳೆ 24 ಲಕ್ಷ ರೂಪಾಯಿ, 2 ವಾಹನ, ಪ್ರಶ್ನೆಪತ್ರಿಕೆ ಉತ್ತರಗಳ ಪ್ರತಿಯನ್ನೂ ಜಪ್ತಿ ಮಾಡಲಾಗಿದೆ. ಸ್ಥಳದಿಂದ ಮುಖ್ಯ ರುವಾರಿಗಳಾದ ಚಂದ್ರು, ರಾಚಪ್ಪ ಸೇರಿ 7 ಆರೋಪಿಗಳ ಬಂಧನವಾಗಿದೆ. ಈ ಗ್ಯಾಂಗ್ ಪ್ರಶ್ನೆ ಪತ್ರಿಕೆ ಪರೀಕ್ಷೆಯ ಬರೀ ಉತ್ತರಗಳನ್ನ ಮಾತ್ರ ಅಭ್ಯರ್ಥಿಗಳಿಗೆ ನೀಡಲು ಸಜ್ಜಾಗಿತ್ತು. ಪ್ರಾಥಮಿಕ ತನಿಖೆ ವೇಳೆ ಆ ಪ್ರತಿಗಳನ್ನು ಬೇರೆ ಬೇರೆ ಜಿಲ್ಲೆಗಳಲ್ಲಿರುವ ಸಹಚರರಿಗೆ ನೀಡಿರುವ ಮಾಹಿತಿ ಸಿಕ್ಕಿದೆ.
ಈಗಾಗಲೇ ಕೆಲ ಪರೀಕ್ಷಾ ಅಭ್ಯರ್ಥಿಗಳಿಗೂ ಉತ್ತರ ಪ್ರತಿಗಳನ್ನ ನೀಡಿರುವುದಾಗಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದಾರೆ. ಸದ್ಯ ಆರೋಪಿಗಳ ಸಹಚರರು ಸೇರಿದಂತೆ ಪರೀಕ್ಷಾ ಅಭ್ಯರ್ಥಿಗಳಿಗೂ ಕೂಡಾ ಸಿಸಿಬಿ ಅಧಿಕಾರಿಗಳು ಬಲೆ ಬೀಸಿದ್ದಾರೆ. ಈ ಹಿನ್ನೆಲೆಯಲ್ಲಿ ರಾತ್ರಿ ಸಿಸಿಬಿ ಕಚೇರಿಯಲ್ಲಿ ಆರೋಪಿಗಳ ವಿಚಾರಣೆ ನಡೆಸಲಾಗಿದೆ. ಪ್ರಕರಣ ಕಿಂಗ್ ಪಿನ್ ಚಂದ್ರು ಜೊತೆ ಇಲಾಖಾ ಮಟ್ಟದಲ್ಲಿ ಯಾರೆಲ್ಲ ಸಂಪರ್ಕದಲ್ಲಿದ್ದಾರೆ ಎಂಬುದರ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ.
ವಾಣಿಜ್ಯ ತೆರಿಗೆ ವಿಜಿಲೆನ್ಸ್ ಅಧಿಕಾರಿ ಬಂಧನ
ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ವಾಣಿಜ್ಯ ತೆರಿಗೆ ಇನ್ಸ್ಪೆಕ್ಟರ್ ಒಬ್ಬರನ್ನು ಬಂಧಿಸಲಾಗಿದೆ. ಬಂಧಿತ ಆರೋಪಿಯನ್ನು ಕೋರಮಂಗಲದ ಕಮರ್ಷಿಯಲ್ ಟ್ಯಾಕ್ಸ್ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ವಾಣಿಜ್ಯ ತೆರಿಗೆ ವಿಚಕ್ಷಣಾ ಇನ್ಸ್ಪೆಕ್ಟರ್ ಆಗಿರುವ ಚಂದ್ರು ಎಂದು ಗುರುತಿಸಲಾಗಿದೆ. ಆರೋಪಿ ಚಂದ್ರು ಪ್ರಶ್ನೆ ಪತ್ರಿಕೆ ಪಡೆದು ಮಾರಾಟ ಮಾಡುತ್ತಿದ್ದ. ಸದ್ಯ ಈತ ಅರೆಸ್ಟ್ ಆಗಿದ್ದಾನೆ. ಇನ್ನು ಈತನ ಬಳಿ ಪ್ರಶ್ನಾಪತ್ರಿಕೆ ಪಡೆಯಲು ಬಂದಿದ್ದ ಐವರನ್ನು ಬಂಧಿಸಲಾಗಿದೆ.
KPSC ಅಧಿಕಾರಿಯೇ ಶಾಮೀಲು?
ಪ್ರಶ್ನಾ ಪತ್ರಿಕೆ ಸೋರಿಕೆ ಹಗರಣದಲ್ಲಿ ಕರ್ನಾಟಕ ಲೋಕಸೇವಾ ಆಯೊಗದ ಅಧಿಕಾರಿಯೊಬ್ಬರು ಶಾಮೀಲಾಗಿರುವ ಕುರಿತು ಗುಮಾನಿಯಿದೆ. ಈ ಅಧಿಕಾರಿಯೇ ಚಂದ್ರು ಅವರಿಗೆ ಪ್ರಶ್ನಾ ಪತ್ರಿಕೆಗಳನ್ನು ನೀಡುತ್ತಿದ್ದು, ನಂತರ ಚಂದ್ರು ತನ್ನ ಜಾಲದ ಮುಖಾಂತರ ರಾಜ್ಯಾದ್ಯಂತ ಈ ಪ್ರಶ್ನಾ ಪತ್ರಿಕೆಗಳನ್ನು ಮಾರಾಟ ಮಾಡುತ್ತಿದ್ದ ಎಂಬ ಮಾಹಿತಿಯೂ ತಿಳಿದುಬಂದಿದೆ.