ಬೆಂಗಳೂರು: ಬಿ.ಕೆ ಹರಿಪ್ರಸಾದ್‌ಗೆ ಸಾಮಾನ್ಯ ಜ್ಞಾನ ಇಲ್ಲ ಎನ್ನುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆಗೆ ಕೆಪಿಸಿಸಿ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ ತಿರುಗೇಟು ನೀಡಿದ್ದು, “ಭಾಷಾ ಪ್ರಖಂಡ ಪಂಡಿತ”, “ಜ್ಞಾನ ಭಂಡಾರದ ಶಿಖರ”, “ಸಾರ್ವಜನಿಕ ಜೀವನದ ಸಾಕಾರಮೂರ್ತಿಯೇ” ಆಗಿರುವ ಪ್ರಹ್ಲಾದ್ ಜೋಶಿಯಿಂದ ಸಾಮಾನ್ಯ ಜ್ಞಾನ ಹೇಳಿಸಿಕೊಳ್ಳುವ ದುರ್ಗತಿ ನನಗಂತೂ ಬಂದಿಲ್ಲ, ಬರುವುದೂ ಇಲ್ಲ ಎಂದು ಕಿಡಿಕಾರಿದ್ದಾರೆ.

ಈ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಅವರು, ಯಡಿಯೂರಪ್ಪನವರು ಪಕ್ಷ ತೊರೆದು, ಹೊಸ ಪಕ್ಷ ಕಟ್ಟಿದಾಗ ಇದೇ ಜೋಶಿ, ಸಾರ್ವಜನಿಕವಾಗಿ ಆಡಿರುವ ಮಾತುಗಳು ಒಂದೊಂದು ಆಣಿಮುತ್ತುಗಳು ಎಂಬುದನ್ನು ಮರೆತಿದ್ದಾರೆ. ಯಾರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಲು ಷಡ್ಯಂತ್ರ ಮಾಡಿದ್ದಿರೋ, ಇಂದು ಅವರೇ ನಿಮ್ಮ ರಾಜಕೀಯದ ಪರಮ ಪೂಜ್ಯರು. ಹಿಂದೆ ಯಾರನ್ನು ರಾಜಕೀಯವಾಗಿ ನೆಲಸಮ ಮಾಡಿದ್ದೀರೋ, ಇಂದು ಅವರ ಪಾದಪೂಜೆ ಮಾಡುತ್ತಿರುವುದು ನಿಮ್ಮ ಸಾಮಾನ್ಯ ಜ್ಞಾನದ ಪರಮಾವಧಿಯೇ? ಎಂದು ಪ್ರಶ್ನಿಸಿದ್ದಾರೆ.

ಪ್ರಶ್ನೆಗಳ ಪ್ರಹಾರ ಮುಂದುವರಿಸಿರುವ ಅವರು, ಅಯೋಧ್ಯೆ ಶ್ರೀರಾಮನ ಹೆಸರಿನಲ್ಲಿ ನಿರ್ಮಾಣವಾದ ದೇವಸ್ಥಾನದ ಕಾಮಗಾರಿ ವೆಚ್ಚ ಹಾಗೂ ನಿರ್ವಹಣೆಯಲ್ಲಿ ನಡೆದಿರುವ ಕೋಟ್ಯಾಂತರ ಭ್ರಷ್ಟಾಚಾರದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಎದ್ದಿರುವ ಪ್ರಶ್ನೆಗಳಿಗೆ ಉತ್ತರ ನೀಡಲು ಬಿಜೆಪಿ ನಾಯಕರಿಗೆ ಯೋಗ್ಯತೆ ಇದೆಯೇ? “ನಾ ಖಾವೂಂಗಾ,ನಾ ಖಾನೇ ದೂಂಗಾ” ಎಂದು ಬೊಬ್ಬೆ ಹೊಡೆದಿದ್ದವರು ಈಗ ಬಾಯ್ತೆರೆದು ಮಾತಾಡುವುದು ಬಿಡಿ, ಮುಖ ಕೂಡ ತೋರಿಸುತ್ತಿಲ್ಲ ಯಾಕೆ? ಬಾಯಿ ಬಿಟ್ಟರೆ ಮುಖವಾಡ ಕಳಚುವ ಭಯವೇ?

ಶ್ರೀರಾಮನನ್ನು ರಾಜಕೀಯವಾಗಿ ಬಳಸಿಕೊಡವರು, ಶ್ರೀರಾಮನ ಹೆಸರಿನಲ್ಲಿ ಒಂದೊಂದು ಮತಗಳನ್ನು ಕೇಳಿ ಪಡೆದವರು, ಅದೇ ಶ್ರೀರಾಮನಿಗೆ ಜನ ಸಾಮಾನ್ಯರು ನೀಡಿದ ದೇಣಿಗೆಯ ಒಂದೊಂದು ರೂಪಾಯಿಯ ಲೆಕ್ಕಕೊಡಲು ಬಿಜೆಪಿ ನಾಯಕರಿಗೆ ಧೈರ್ಯ ಇಲ್ಲವೇ? ಸಾರ್ವಜನಿಕ ಪ್ರಶ್ನಗಳಿಗೆ ಉತ್ತರ ಕೊಡದೆ ಇರುವುದು ಸಾರ್ವಜನಿಕ ಭಾಷಾ ಪಂಡಿತರ ಸಾಮಾನ್ಯ ಜ್ಞಾನದ ಪರಿಮಿತಿಗೆ ಬರುವುದಿಲ್ಲವೇ?” ರಾಮನ ಹೆಸರನ್ನು ರಾಜಕೀಯಕ್ಕೆ ಬಳಸಬಹುದು, ರಾಮನ ಹೆಸರಿನಲ್ಲಿ ನಡೆದ ಪ್ರತಿಯೊಂದು ರೂಪಾಯಿಯ ಲೆಕ್ಕದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಬಿ.ಕೆ ಹರಿಪ್ರಸಾದ್ ಗುಡುಗಿದ್ದಾರೆ.






