ಕರೋನಾ ಸಾಂಕ್ರಾಮಿಕ ರೋಗದ ನಿರ್ವಹಣೆಯಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಮೆಚ್ಚುಗೆಗೊಳಗಾದ ಕೇರಳ ಆರೋಗ್ಯ ಮಂತ್ರಿ ಕೆಕೆ ಶೈಲಜಾ ಅವರು ನೂತನ ಸಚಿವ ಸಂಪುಟದಲ್ಲಿ ಅವಕಾಶ ವಂಚಿತರಾಗಿದ್ದಾರೆ. ಶೈಲಜಾ ಟೀಚರ್ ಎಂದೇ ಖ್ಯಾತಿ ಹೊಂದಿರುವ ಅವರು, ಕರೋನಾದ ಎರಡೂ ಅಲೆಯ ವೇಳೆಯೂ ಕೇರಳ ಆರೋಗ್ಯ ಕ್ಷೇತ್ರದಲ್ಲಿ ಮಾಡಿದ ನಿರ್ವಹಣೆ ವ್ಯಾಪಕ ಪ್ರಶಂಸೆ ಗಳಿಸಿತ್ತು.
ಇತ್ತೀಚಿನ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಪಡೆದಿದ್ದ LDF ಸರ್ಕಾರ ರಚಿಸಿದ್ದು, ಕಳೆದ ಬಾರಿಯ ಸಚಿವ ಸಂಪುಟದಲ್ಲಿದ್ದ ಎಲ್ಲಾ ಸಚಿವರನ್ನು ಸಂಪುಟದಿಂದ ಕೈಬಿಟ್ಟಿದ್ದು, ಪಿಣರಾಯಿ ವಿಜಯನ್ ಅವರನ್ನು ಮಾತ್ರ ಉಳಿಸಲಾಗಿದೆ.
ಕರೋನಾ, ನಿಫಾ ಸೇರಿದಂತೆ ಆರೋಗ್ಯ ತುರ್ತು ಪರಿಸ್ಥಿತಿ ಸಂಧರ್ಭದಲ್ಲಿ ಶೈಲಜಾ ಟೀಚರ್ ತೋರಿಸಿದ ಚಾತುರ್ಯಕ್ಕೆ ಅಂತರಾಷ್ಟ್ರೀಯ ಸಂಸ್ಥೆಗಳೇ ಶ್ಲಾಘಿಸಿದ್ದವು. ಕೇರಳದಲ್ಲಿ ಮಾತ್ರವಲ್ಲದೆ, ಬೇರೆ ರಾಜ್ಯಗಳಲ್ಲೂ ಶೈಲಜಾ ಹೆಸರುವಾಸಿಯಾಗಲು ಇದು ಕಾರಣವಾಗಿತ್ತು. ಅಂತಹ ಶೈಲಜಾ ಟೀಚರ್‌ರನ್ನೇ ಸಂಪುಟದಿಂದ ಕೈಬಿಟ್ಟಿರುವುದ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
” ಮುಖ್ಯಮಂತ್ರಿಯನ್ನು ಹೊರತುಪಡಿಸಿ ಹಿಂದಿನ ಎಲ್‌ಡಿಎಫ್ ಸಚಿವ ಸಂಪುಟದ ಯಾರೂ ಹೊಸ ಸಚಿವ ಸಂಪುಟದ ಭಾಗವಲ್ಲ. ಇದು ನಮ್ಮ ಪಕ್ಷದ ನಿರ್ಧಾರ. ನಮ್ಮ ಪಕ್ಷಕ್ಕೆ ಮಾತ್ರ ಹಾಗೆ ಮಾಡಲು ಧೈರ್ಯವಿದೆ. ಅನೇಕ ಪ್ರಭಾವಿಗಳಿಗ ಚುನಾವಣೆಗೆ ಸ್ಪರ್ಧಿಸಲು ಅವಕಾಶವಿರಲಿಲ್ಲ. ನಮಗೆ ಹೊಸ ಮುಖಗಳು ಬೇಕು” ಸಿಪಿಎಂ ಶಾಸಕ ಎಎನ್ ಶಂಶೀರ್ ತಿಳಿಸಿದ್ದಾರೆ.
ಎಂ.ವಿ.ಗೋವಿಂದನ್, ಕೆ ರಾಧಾಕೃಷ್ಣನ್, ಕೆ.ಎನ್. ಬಾಲಗೋಪಾಲ್, ಪಿ ರಾಜೀವ್, ವಿ.ಎನ್. ವಾಸವನ್, ಶಾಜಿ ಚೆರಿಯನ್, ವಿ ಶಿವಂಕುಟ್ಟಿ, ಮೊಹಮ್ಮದ್ ರಿಯಾಸ್, ಡಾ.ಆರ್.ಬಿಂದು, ವೀಣಾ ಜಾರ್ಜ್ ಮತ್ತು ವಿ ಅಬ್ದುಲ್ ರಹಮಾನ್(ಪಕ್ಷೇತರ) ಅವರು ಹೊಸ ಸಂಪುಟಕ್ಕೆ ಆಯ್ಕೆಯಾಗಿದ್ದಾರೆ ಎಂದು ವರದಿಗಳು ಸೂಚಿಸಿವೆ.
ಕೆ.ಕೆ.ಶೈಲಜಾ ಅವರನ್ನು ಸಚಿವ ಸಂಪುಟದಿಂದ ಹೊರಗಿಟ್ಟಿರುವ ಕುರಿತು ಕಾಂಗ್ರೆಸ್ ಮುಖಂಡ ಶಶಿ ತರೂರ್ ಕೂಡಾ ತೀಕ್ಷ್ಣವಾದ ಪ್ರತಿಕ್ರಿಯಿಸಿದ್ದಾರೆ.
ಕೇರಳ ಸಂಪುಟದಿಂದ ಶೈಲಜಾ ಟೀಚರ್ ಹೊರಗುಳಿಯುವದನ್ನು ನೋಡಿ ಬೇಸರವಾಗಿದೆ. ಆಕೆ ದಕ್ಷತೆ ಮತ್ತು ಸಾಮರ್ಥ್ಯವನ್ನು ಕೋವಿಡ್ ಸಂಧರ್ಭದಲ್ಲಿ ಅವರು ನಿರೂಪಿಸಿದ್ದಾರೆ. ಓರ್ವ ಆರೋಗ್ಯ ಮಂತ್ರಿಯಾಗಿ ಆಕೆ ಯಾವತ್ತೂ ಸಹಾಯಕ್ಕೆ ಧಾವಿಸುವಂತವರಾಗಿದ್ದರು, ಮುಖ್ಯವಾಗಿ ಕೋವಿಡ್ ದುರಿತ ಕಾಲದಲ್ಲಿ ಎಂದು ಶಶಿ ತರೂರ್ ಟ್ವೀಟ್ ಮಾಡಿದ್ದಾರೆ.
ಕೋವಿಡ್ ಕಾಲದಲ್ಲಿ ಸಾಕಷ್ಟು ಜನಪ್ರಿಯತೆಗೆ ಒಳಗಾದ ಶೈಲಜಾ ಟೀಚರ್‌ರನ್ನು ಕೈಬಿಟ್ಟ ಕುರಿತು ಎಡಪಕ್ಷದ ಮೇಲೆ ಸಾಮಾಜಿಕ ಜಾಲತಾಣದಲ್ಲಿ ತೀಕ್ಷ್ಣ ಟೀಕೆಗಳು ವ್ಯಕ್ತವಾಗಿವೆ. ಕೇರಳದ ಹೊರಗೂ ಎಡ ಪಕ್ಷದ ವೈಖರಿಯ ಕುರಿತು ಪ್ರಶ್ನೆಗಳು ಎದ್ದಿವೆ.
ಒಂದು ವಾದದ ಪ್ರಕಾರ ಪಿಣರಾಯಿ ವಿಜಯನ್ ಅವರ ಉತ್ತರಾಧಿಕಾರಿಯಾಗಿ ಬಿಂಬಿಸಲ್ಪಟ್ಟದ್ದೇ ಶೈಲಜಾ ಅವರನ್ನು ಸಂಪುಟದಿಂದ ಹೊರಗೆ ಉಳಿಸಲು ಕಾರಣ ಎನ್ನಲಾಗುತ್ತಿದೆ. ಕೇರಳ ರಾಜಕೀಯವನ್ನು ಹತ್ತಿರದಿಂದ ಗಮನಿಸಿದವರು, ಶೈಲಜಾ ಅವರನ್ನು ಚುನಾವಣಾ ಸಂಧರ್ಭದಲ್ಲೇ ಮೂಲೆಗುಂಪು ಮಾಡುವ ಪ್ರಯತ್ನ ನಡೆದಿತ್ತು ಎಂದು ಆರೋಪಿಸುತ್ತಾರೆ. ಅದಾಗ್ಯೂ, ಕಣ್ಣೂರು ಜಿಲ್ಲೆಯ ಮಟ್ಟನ್ನೂರು ಕ್ಷೇತ್ರದಿಂದ ಸ್ಪರ್ಧಿಸಿದ್ದ ಶೈಲಜಾ, ಸುಮಾರು 60 ಸಾವಿರಕ್ಕೂ ಹೆಚ್ಚು ಅಂತರದಿಂದ ವಿಜಯ ಸಾಧಿಸಿದ್ದರು.
ಆದರೆ, ತನ್ನನ್ನು ಸಂಪುಟದಿಂದ ಹೊರಗಿಟ್ಟ ಕಾರಣ ಪಕ್ಷದ ವಿರುದ್ಧ ಬರುತ್ತಿರುವ ತೀಕ್ಷ್ಣ ಟೀಕೆಗಳ ವಿರುದ್ಧ ಸ್ವತಃ ಶೈಲಜಾ ಅವರೇ ರಂಗಕ್ಕಿಳಿದಿದ್ದು, ಪಕ್ಷದ ಬೆನ್ನಿಗೆ ನಿಂತಿದ್ದಾರೆ. ಕಾಂಗ್ರೆಸ್, ಬಿಜೆಪಿ ಅಥವಾ ಮುಸ್ಲಿಂ ಲೀಗಿನ ರಾಜಕಾರಣದ ಅಳತೆಗೋಲಿನಿಂದ ನಮ್ಮನ್ನು ಅಳೆಯಲು ಬರಬೇಡಿ, ಸಿಪಿಎಂ ಒಂದು ವಿಭಿನ್ನ ಪಕ್ಷ ಎಂದು ಸಮಾಜಾಯಿಷಿ ನೀಡಿದ್ದಾರೆ.
ಸಿಪಿಎಂ ಬೆಂಬಲಿಗರೂ ಕೂಡಾ ಪಕ್ಷದ ನಿಲುವನ್ನು ಸಮರ್ಥಿಸುತ್ತಿದ್ದು, ಸಿಪಿಎಂ ಸಾರ್ವಜನಿಕ ಭಾವನಾತ್ಮಕತೆಗೆ ಹೆಚ್ಚು ಪ್ರಾಶಸ್ತ್ಯ ನೀಡುವುದಿಲ್ಲ. ಹಾಗಾಗಿ, ಜನ ಸಾಮಾನ್ಯರು ಶೈಲಜಾ ಆರೋಗ್ಯ ಮಂತ್ರಿಯಾಗಬೇಕೆಂದೂ ಭಾವಿಸಿದರೂ ಪಕ್ಷದ ತೀರ್ಮಾನ ಬೇರೆಯದ್ದೇ ಆಗಿರುತ್ತದೆ ಎನ್ನುತ್ತಿದ್ದಾರೆ.