ಬೆಂಗಳೂರು: ಪ್ರತಿ ವರ್ಷದಂತೆ ಈ ವರ್ಷವೂ ದೆಹಲಿಯಯಲ್ಲಿ ನಡೆಯಲಿರುವ 76ನೇ ಗಣರಾಜ್ಯೋತ್ಸವ ಪರೇಡ್‌ನಲ್ಲಿ(Republic day parade) ಕರ್ನಾಟಕ(Karnataka )ತನ್ನ ವಿಶಿಷ್ಟ ಸ್ತಬ್ಧಚಿತ್ರ ಪ್ರದರ್ಶನಕ್ಕೆ ಸಿದ್ಧತೆ ಮಾಡಿಕೊಂಡಿತ್ತು. ಆದರೆ, ಈ ಬಾರಿ ಕರ್ನಾಟಕದ ಸ್ತಬ್ಧಚಿತ್ರಕ್ಕೆ ಮುಖ್ಯ ಪರೇಡ್‌ನಲ್ಲಿ ಅವಕಾಶ ಇಲ್ಲ ಎನ್ನುವುದು ರಾಜ್ಯದ ಜನರಲ್ಲಿ ನಿರಾಸೆ ಮೂಡಿಸಿದೆ. ಈ ಬಾರಿ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಕರ್ನಾಟಕದ ಸ್ತಬ್ಧಚಿತ್ರಗಳ ಪ್ರದರ್ಶನಕ್ಕೆ ಅವಕಾಶ ಸಿಕ್ಕಿಲ್ಲ, ಬದಲಿಗೆ ಭಾರತ್ ಪರ್ವ್‌ನಲ್ಲಿ ಕರ್ನಾಟಕದ ಸ್ತಬ್ದ ಚಿತ್ರಗಳು ಪ್ರದರ್ಶನಗೊಳ್ಳಲಿವೆ.

ಈ ಬಾರಿ ಕರ್ನಾಟಕ ಸರ್ಕಾರ ಮಿಲೆಟ್ಸ್ ಟು ಮೈಕ್ರೋಚಿಪ್(Millet to Microchip) ಎಂಬ ಪರಿಕಲ್ಪನೆಯಡಿ ಅತ್ಯಂತ ವಿಶಿಷ್ಟ ಮತ್ತು ಅರ್ಥಪೂರ್ಣ ಸ್ತಬ್ಧಚಿತ್ರವನ್ನು ರೂಪಿಸಿತ್ತು. ಕೃಷಿ ಆಧಾರಿತ ರಾಜ್ಯವಾಗಿರುವ ಕರ್ನಾಟಕದ ರಾಗಿ, ಜೋಳ, ನವಣೆ, ಸಜ್ಜೆ ಸೇರಿದಂತೆ ಸಿರಿಧಾನ್ಯಗಳ ಬೆಳವಣಿಗೆ ಹಾಗೂ ಜಾಗತಿಕ ಮಟ್ಟದಲ್ಲಿ ರಾಜ್ಯ ಮುಂಚೂಣಿಯಲ್ಲಿರುವ ಮಾಹಿತಿ ತಂತ್ರಜ್ಞಾನ (IT), ಸ್ಟಾರ್ಟ್‌ಅಪ್, ಸೆಮಿಕಂಡಕ್ಟರ್ ಹಾಗೂ ಮೈಕ್ರೋಚಿಪ್ ಕ್ಷೇತ್ರದ ಸಾಧನೆಗಳನ್ನು ಒಂದೇ ಸ್ತಬ್ಧಚಿತ್ರದಲ್ಲಿ ಪ್ರದರ್ಶಿಸುವ ಉದ್ದೇಶವಾಗಿತ್ತು.

ಈ ಸ್ತಬ್ಧಚಿತ್ರದ ಮೂಲಕ ಆತ್ಮನಿರ್ಭರ ಭಾರತ ಪರಿಕಲ್ಪನೆಗೆ ಕರ್ನಾಟಕ ನೀಡಿರುವ ಕೊಡುಗೆಯನ್ನು ದೇಶದ ಮುಂದೆ ತೋರಿಸುವ ಪ್ರಯತ್ನ ಮಾಡಲಾಗಿತ್ತು. ಸ್ವಾವಲಂಬನೆ ಎಂಬುದು ರಾಜ್ಯಗಳಿಂದಲೇ ಆರಂಭವಾಗಬೇಕು ಎಂಬ ಸಂದೇಶವನ್ನು ಈ ಟ್ಯಾಬ್ಲೋ ಮೂಲಕ ಸಾರಲು ಯೋಜಿಸಲಾಗಿತ್ತು. ಜೊತೆಗೆ, ಕರ್ನಾಟಕದ ಸಾಂಸ್ಕೃತಿಕ ವೈಶಿಷ್ಟ್ಯತೆಯನ್ನು ತೋರಿಸಲು ಯಕ್ಷಗಾನ, ಕಂಸಾಳೆ ನೃತ್ಯ ಸೇರಿದಂತೆ ರಾಜ್ಯದ ಪರಂಪರಾತ್ಮಕ ಕಲಾ ರೂಪಗಳ ಚಿಹ್ನೆಗಳನ್ನು ಸ್ತಬ್ಧಚಿತ್ರದ ವಿವಿಧ ಭಾಗಗಳಲ್ಲಿ ಅಳವಡಿಸಲಾಗಿತ್ತು.

ಈ ವರ್ಷ ಗಣರಾಜ್ಯೋತ್ಸವ ಪರೇಡ್‌ನಲ್ಲಿ ನಡೆಯುವ ಗಣರಾಜ್ಯೋತ್ಸವ ಮೆರವಣಿಗೆಯಲ್ಲಿ 17 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು (UTಗಳು) ಹಾಗೂ 13 ಕೇಂದ್ರ ಸರ್ಕಾರಿ ಇಲಾಖೆಗಳು ಸೇರಿ ಒಟ್ಟು 30 ಸ್ತಬ್ಧಚಿತ್ರಗಳು ಪ್ರದರ್ಶನಗೊಳ್ಳಲಿವೆ. ಆದರೆ ಕರ್ನಾಟಕದ ಜೊತೆಗೆ ಗೋವಾ, ತೆಲಂಗಾಣ, ಆಂಧ್ರಪ್ರದೇಶ ಸೇರಿದಂತೆ ಕೆಲವು ರಾಜ್ಯಗಳು ಈ ಬಾರಿ ಮುಖ್ಯ ಪರೇಡ್‌ನಿಂದ ಹೊರಗುಳಿದಿವೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಇರುವ ಕಾಲಾವಕಾಶದಲ್ಲಿ ಸಮಾನ ಅವಕಾಶ ದೊರಕಬೇಕು ಎಂಬ ಉದ್ದೇಶದಿಂದ ಕೇಂದ್ರ ಈ ಸರದಿ ನೀತಿಯನ್ನು ಅನುಸರಿಸಿದೆ ಎನ್ನಲಾಗಿದೆ.

ಇನ್ನು ಕರ್ನಾಟಕ ಸರ್ಕಾರದ ಸ್ತಬ್ಧಚಿತ್ರವನ್ನು ಸಂಪೂರ್ಣವಾಗಿ ಕೈಬಿಡಲಾಗಿಲ್ಲ. ಬದಲಿಗೆ ಕೆಂಪು ಕೋಟೆ ಮೈದಾನದಲ್ಲಿ ನಡೆಯಲಿರುವ ಭಾರತ್ ಪರ್ವ್ ಕಾರ್ಯಕ್ರಮದಲ್ಲಿ ಈ ಸ್ತಬ್ಧಚಿತ್ರವನ್ನು ಸಾರ್ವಜನಿಕರ ವೀಕ್ಷಣೆಗೆ ಪ್ರದರ್ಶಿಸಲು ವ್ಯವಸ್ಥೆ ಮಾಡಲಾಗಿದೆ. ಇಲ್ಲಿ ದೇಶದ ವಿವಿಧ ಭಾಗಗಳಿಂದ ಆಗಮಿಸುವ ಜನರು ಕರ್ನಾಟಕದ ಈ ವಿಶಿಷ್ಟ ಪರಿಕಲ್ಪನೆಯನ್ನು ನೋಡಬಹುದಾಗಿದೆ. ಆದರೆ, ಮುಖ್ಯ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಅವಕಾಶ ಸಿಗದೇ ಇರುವುದರಿಂದ ರಾಜ್ಯ ಸರ್ಕಾರ ಮತ್ತು ಕರ್ನಾಟಕ ವಾರ್ತಾ ಇಲಾಖೆ ಅಸಮಾಧಾನಕ್ಕೆ ಕಾರಣವಾಗಿದೆ.

ಈ ಬಗ್ಗೆ ರಾಜ್ಯದ ಮಾಹಿತಿ ಇಲಾಖೆಯ ಅಧಿಕಾರಿಗಳು ಪ್ರತಿಕ್ರಿಯಿಸಿದ್ದು, 2022 ರಿಂದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಸಂಖ್ಯೆಯನ್ನು 15 ಕ್ಕೆ ಸೀಮಿತಗೊಳಿಸಲಾಗಿದೆ. ಈ ಬಾರಿಯ ಕೇಂದ್ರ ನಿರ್ಧಾರದಿಂದ ನಾವು ಸಂತೋಷವಾಗಿಲ್ಲ ಹಾಗಂತ ನಾವು ಯಾರನ್ನೂ ದೂರುವುದಿಲ್ಲ. ಆದರೆ ಪ್ರತಿ ವರ್ಷ ಮೆರವಣಿಗೆಯಲ್ಲಿ ಭಾಗವಹಿಸುವ ಗುಜರಾತ್ ಮತ್ತು ಉತ್ತರ ಪ್ರದೇಶಕ್ಕೆ ನೀಡಲಾಗುವ ವಿಶೇಷ ಆದ್ಯತೆ ನೀಡಲಾಗುತ್ತಿದೆ. ಈ ತಾರತಮ್ಯದ ಬಗ್ಗೆ ನಾವು ಧ್ವನಿ ಎತ್ತಿದ್ದೇವೆ ಎಂದು ತಿಳಿಸಿದ್ದಾರೆ.

ದೆಹಲಿಯಲ್ಲಿ 200 ಕುಶಲಕರ್ಮಿಗಳ ತಂಡವನ್ನು 2 ಕೋಟಿ ರೂಪಾಯಿ ವೆಚ್ಚದಲ್ಲಿ ಟ್ಯಾಬ್ಲೋ ರಚಿಸಲು ನಿಯೋಜಿಸಲಾಗಿತ್ತು. ಇದೀಗ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಕರ್ನಾಟಕ ಸ್ತಬ್ಧಚಿತ್ರ ಪ್ರದರ್ಶನವನ್ನು ಕೈಬಿಟ್ಟಿರುವುದು, ಕರ್ನಾಟಕದ ಬಗ್ಗೆ ಕೇಂದ್ರ ಸರ್ಕಾರಕ್ಕಿರುವ ತಾರತಮ್ಯವೇ ಎನ್ನುವ ಪ್ರಶ್ನೆ ಒಂದೆಡೆಯಾದರೆ, ವ್ಯಹಿಸಿರುವ 2 ಕೋಟಿ ರೂಪಾಯಿ ವೆಚ್ಚವನ್ನು ಭರಿಸುವರು ಯಾರು ಎನ್ನುವುದು ಕರ್ನಾಟಕ ಜನರ ಪ್ರಶ್ನೆಯಾಗಿದೆ.












