ಪಂಚರಾಜ್ಯ ಚುನಾವಣೆ ಫಲಿತಾಂಶ ಬಿಜೆಪಿಗೆ ನಯಾ ಹುಮ್ಮಸ್ಸು ನೀಡಿದೆ. ಅದಾಗಿಯೂ 2018ಕ್ಕೆ ಹೋಲಿಸಿಕೊಂಡರೆ 2022ರಲ್ಲಿ ಭಾಜಪ ಪ್ರದರ್ಶನ ನೀರಸವಾಗಿದೆ. ಈ ಫಲಿತಾಂಶ ಕರ್ನಾಟಕದ ಮೇಲೂ ಪ್ರಭಾವ ಬೀರಲಿದೆ. ಎಲ್ಲಾ ರಾಜ್ಯಗಳ ರಾಜಕೀಯ ನೆಲೆಗಟ್ಟು ಬೇರೆಯದ್ದೇ ಆಗಿದ್ದರೂ ಬಿಜೆಪಿಯ ಚುನಾವಣಾ ತಂತ್ರಗಾರಿಕೆ ಹೆಚ್ಚು ಕಮ್ಮಿ ಏಕರೂಪವಾದದ್ದು. ಹೀಗಾಗಿ ಈಗೀಂದೀಗಲೇ ರಾಜ್ಯ ರಾಜಕೀಯ ಪಡಸಾಲೆಯಲ್ಲಿ ಬಹಿರಂಗವಾಗಿಯೇ ತಯಾರಿಗಳು ಶುರುವಾಗಿದೆ. ಇದಕ್ಕೆ ಪೂರಕ ಎಂಬಂತೆ ಜನತಾ ದಳ ಮುಂದಿನ ಚುನಾವಣೆಗೆ ಭರದ ಸಿದ್ಧತೆ ನಡೆಸುತ್ತಿದ್ದು, ಬಜೆಟ್ ಅಧಿವೇಶನದಲ್ಲಿ ಕಾಂಗ್ರೆಸ್ ವಿರುದ್ಧ ಮತ್ತೆ ಈಗಲ್ಟನ್ ರೆಸಾರ್ಟ್ ಪ್ರಕರಣ ಎತ್ತಿಟ್ಟು ಹರಿಹಾಯ್ದಿದ್ದಾರೆ.
ಸಿಎಂ ಬಸವರಾಜ ಬೊಮ್ಮಾಯಿ ಮಂಡಿಸಿದ್ದ ತಮ್ಮ ಚೊಚ್ಚಲ ಆಯವ್ಯಯಕ್ಕೆ ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ ಪ್ರತಿಕ್ರಿಯೆ ಕೊಟ್ಟಿದ್ದರು. ಇದನ್ನು ಕೇಂದ್ರವಾಗಿಸಿಕೊಂಡ ಮಾಜಿ ಮುಖ್ಯಮಂತ್ರಿ ಹೆಚ್‌ಡಿ ಕುಮಾರಸ್ವಾಮಿ ಸಿಎಂ ಬೊಮ್ಮಾಯಿ ಮಂಡಿಸಿದ ಬಜೆಟ್ ಬಿಟ್ಟು ಅದಕ್ಕೆ ಸಿದ್ದರಾಮಯ್ಯ ಕೊಟ್ಟ ಪ್ರತಿಕ್ರಿಯೆಗೆ ಮಾತಿನ ಏಣಿ ಹತ್ತಿಸಿದರು. ಈ ವೇಳೆ ಸಿದ್ದರಾಮಯ್ಯನನ್ನು ಹೆಣೆಯಲು ಕುಮಾರಸ್ವಾಮಿ ಈಗಲ್ಟನ್ ರೆಸಾರ್ಟ್ ಪ್ರಕರಣವನ್ನು ಪ್ರಸ್ತಾಪಿಸಿ ಬಿಜೆಪಿ ನಾಯಕ ಚಪ್ಪಾಳೆ ಗಿಟ್ಟಿಸಿಕೊಂಡಿದ್ದಲ್ಲದೆ ಸಿದ್ದರಾಮಯ್ಯರಿಂದ ತಪರಾಕಿ ಹಾಕಿಸಿಕೊಂಡರು.
ಅಸಲಿಗೆ ಏನಿದು ಈಗಲ್ಟನ್ ರೆಸಾರ್ಟ್..? ಈ ಈಗಲ್ಟನ್ ರೆಸಾರ್ಟ್ ಯಾಕಿಷ್ಟು ಪ್ರಾಮುಖ್ಯತೆ ಪಡೆದುಕೊಂಡಿದೆ..? ಕುಮಾರಸ್ವಾಮಿ ಅವರೇಕೆ ಬಜೆಟ್ ಅಧಿವೇಶನದಲ್ಲಿ ಏಕಾಏಕಿ ಈಗಲ್ಟನ್ ರೆಸಾರ್ಟ್ ಹೆಸರು ಪ್ರಸ್ತಾಪಿಸಿದರು..? ಹೀಗೆ ಸದ್ಯ ರಾಜ್ಯ ರಾಜಕಾರಣದಲ್ಲಿ ಈಗಲ್ಟನ್ ರೆಸಾರ್ಟ್ ಪ್ರಕರಣ ಮತ್ತೆ ಚರ್ಚೆಯ ಬಿಂದುವಾಗಿದೆ.
2002ರಲ್ಲಿ ಚಾಮುಂಡೇಶ್ವರಿ ಬಿಲ್ಡ್ ಟೆಕ್ ಪ್ರೈ.ಲಿ ಎಂಬ ಖಾಸಗಿ ಸಂಸ್ಥೆ ಈಗಲ್ಟನ್ ರೆಸಾರ್ಟ್ ಹೆಸರಿನಲ್ಲಿ ಸುಪ್ರೀಂ ಕೋರ್ಟ್ ಗೆ ಅರ್ಜಿ ಹಾಕಿತ್ತು. ಸುಮಾರು 75 ಏಕರೆ ಪೈಕಿ ಅರ್ಧದಷ್ಟು ಜಮೀನು ಸರ್ಕಾರಿ ಜಮೀನು ಒತ್ತುವರಿ ಮಾಡಲಾಗಿದೆ ಎಂದು ಆರೋಪಿಸಲಾಗಿತ್ತು. ಈ ವೇಳೆ ಸರ್ಕಾರದ ವಿರುದ್ಧ ಚಾಮುಂಡೇಶ್ವರಿ ಬಿಲ್ಡ್ ಟೆಕ್ ಪ್ರೈ.ಲಿ ಸಂಸ್ಥೆ ಕೋರ್ಟ್ ಮೆಟ್ಟಿಲೇರಲಾಗಿತ್ತು. ರಾಮನಗರ ಜಿಲ್ಲೆಯ ಬಿಡದಿಗೆ ಸೇರಿದ ಹಳ್ಳಿ ಭಾಗದ ಜಾಗವೊಂದರಲ್ಲಿ ಈ ರೆಸಾರ್ಟ್ ನಿರ್ಮಾಣ ಮಾಡಲಾಗಿತ್ತು. ಆರಂಭದಲ್ಲಿ ಗುರುತರವಾದ ಆರೋಪಗಳು ಇಲ್ಲದೇ ಇದ್ದರೂ ಬಳಿಕ ಜಮೀನಿನ ಮೌಲ್ಯ ಹಾಗೂ ಬೇಡಿಕೆ ಹೆಚ್ಚಾದ ಕಾರಣ ರಾಜಕಾರಣಿಗಳು ಕಣ್ಣು ಈ ರೆಸಾರ್ಟ್ ಮೇಲೆ ಬಿದ್ದಿದೆ. ಈ ಈಗಲ್ಟನ್ ರೆಸಾರ್ಟ್ ಬಗ್ಗೆ ಆಫ್ ದಿ ರೆಕಾರ್ಟ್ ಬಗ್ಗೆ ಮಾತನಾಡಿದ ವ್ಯಕ್ತಿಯೊಬ್ಬರು, ಮಾಜಿ ಸಿಎಂ ಹೆಚ್‌ಡಿ ಕುಮಾರಸ್ವಾಮಿ ಹಾಗೂ ಡಿಕೆ ಶಿವಕುಮಾರ್ ನಡುವೆ ಈ ಈಗಲ್ಟನ್ ರೆಸಾರ್ಟ್ ಕಾರಣಕ್ಕೆ ದೊಡ್ಡ ಸಂಘರ್ಷವೇ ನಡೆದು ಹೋಗಿದೆ ಎಂದು ಹೇಳಿದ್ದಾರೆ. ಕೋರ್ಟ್ ಮೆಟ್ಟಿಲೇರಿದ್ದ ಈ ಪ್ರಕರಣವನ್ನು ಇತ್ಯರ್ಥ ಮಾಡಲು ನ್ಯಾಯಾಲಯ, 75 ಏಕರೆ ಜಮೀನಿನ ಮಾರುಕಟ್ಟೆ ಮೌಲ್ಯವಾದ 950 ಕೋಟಿ ರೂಪಾಯಿಗಳನ್ನು ಸರ್ಕಾರಕ್ಕೆ ನೀಡುವಂತೆ ಹೇಳಿ ಕಟ್ಟಪ್ಪಣೆ ಹಾಕಿತ್ತು. ಅದಕ್ಕೂ ಮೊದಲು ತಕ್ಷಣವೇ 15 ಕೋಟಿ ರೂಪಾಯಿ ಪಾವತಿಸುವಂತೆ ಆದೇಶ ನೀಡಿತ್ತು.
ಇದಿಷ್ಟೂ ಒಂದೆಡೆಯಾದರೂ ಇದರಿಂದ ಲಾಭ ಪಡೆಯುವ ಜಿದ್ದು ಹೆಚ್‌ಡಿ ಕುಮಾರಸ್ವಾಮಿ ಹಾಗೂ ಡಿಕೆ ಶಿವಕುಮಾರ್ ನಡುವೆ ನಡೆಯುತ್ತಲೇ ಇದೆ. ಕಾಂಗ್ರೆಸ್ ಸಿದ್ದರಾಮಯ್ಯ ನೇತೃತ್ವದಲ್ಲಿ ಪೂರ್ಣಪ್ರಮಾಣದ ಸರ್ಕಾರ ರಚಿಸಿದಾಗ ಈಗಲ್ಟನ್ ರೆಸಾರ್ಟ್ ಪ್ರಕರಣದಿಂದ ಈಗಿನ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಜೇಬು ತುಂಬಿಸಿಕೊಂಡಿದ್ದಾರೆ ಮತ್ತು ಜಮೀನು ಪಡೆಯುವ ಕೆಲಸಕ್ಕೂ ಕೈ ಹಾಕಿದ್ದರು ಎನ್ನಲಾಗಿದೆ. ಇದನ್ನು ಸಹಿಸಿಕೊಳ್ಳದ ಕುಮಾರಸ್ವಾಮಿ ತಮ್ಮ ಪಾಲಿಗೂ ಚಾಮುಂಡೇಶ್ವರಿ ಬಿಲ್ಡ್ ಟೆಕ್ ಪ್ರೈ.ಲಿ ಕಂಪೆನಿಗೆ ಕೈ ಚಾಚಿದ್ದರೂ. ಅದಾಗಿಯೂ ಆಗಾಗ್ಗೆ ಇಬ್ಬರನ್ನೂ ಸಂತೃಪ್ತಿ ಪಡಸಿಸುವ ಕೆಲಸವಷ್ಟೇ ನಡೆಯುತ್ತಿತ್ತು.
ನಿಮಗೆ ನೆನಪಿರಬಹುದು. ಗುಜರಾತ್ ಕೈ ಶಾಸಕರನ್ನು ಕರೆತಂದ ಡಿಕೆಶಿ ಆಪರೇಷನ್ ಕಮಲಕ್ಕೆ ಸೆಡ್ಡು ಹೊಡೆದಿದ್ದರು. ಹಾಗೆ ಕರೆತಂದ ಶಾಸಕರನ್ನು ಡಿಕೆಶಿ ಬಚ್ಚಿಟ್ಟು ಮೀಸೆ ತಿರುವುದ್ದೇ ಇದೇ ಈಗಲ್ಟನ್ ರೆಸಾರ್ಟ್ ನಲ್ಲಿ. ಆರಂಭದಲ್ಲಿ ಹೇಗೆ ಎಲ್ಲಿ ಎಂಬ ಮಾಹಿತಿಯೇನು ಇಲ್ಲದೇ ಇದ್ದರೂ ಸಮಯ ಕಳೆದಂತೆ ಹೆಚ್‌ಡಿಡಿ ಶಾಸಕರನ್ನು ಬಚ್ಚಿಟ್ಟ ವಿವರ ಜಗಜ್ಜಾಹಿರು ಮಾಡಿದ್ದರು. ತದನಂತರ ಅಲ್ಲಿಂದ ಡಿಕೆಶಿ ಎಲ್ಲಾ ಶಾಸಕರನ್ನು ಕರಕೊಂಡು ಹೈದರಾಬಾದ್ ಗೆ ಪ್ರಯಾಣ ಬೆಳೆಸಿದ್ದರು. ಉಂಡು ಹೋದವ ಕೊಂಡು ಹೋಗಲಿಲ್ಲ ಎಂಬಂತೆ ಅಂದು ಡಿಕೆಶಿಗೆ ಮಗ್ಗುಲ ಮುಳ್ಳಾಗಿದ್ದು ಕುಮಾರಸ್ವಾಮಿ. ರಿಪಬ್ಲಿಕ್ ಆಫ್ ರಾಮನಗರ ಮಾಡಲು ಹೊರಟಿರುವ ಕುಮಾರಸ್ವಾಮಿ ಹಾಗೂ ಡಿಕೆಶಿಗೆ ರಾಮನಗರಕ್ಕೆ ಒಬ್ಬನೇ ರಾಜ ಸಾಕು. ಮತ್ತು ಅದು ನಾನಾಗಿರಬೇಕು ಎಂಬ ತವಕ. ಇದರ ನಡುವೆ ಇಬ್ಬರ ಕೈಗೂ ಅಸ್ತ್ರವೆಂಬಂತೆ ಸಿಕ್ಕ ಈಗಲ್ಟನ್ ರೆಸಾರ್ಟ್ ಅಕ್ಷರಶಃ ರಾಜಕೀಯ ದಾಳವಾಗಿ ಮಾರ್ಪಾಡಾಯಿತು. ಇಷ್ಟರ ಮೇಲೂ ಈಗಲ್ಟನ್ ರೆಸಾರ್ಟ್ ನಿರ್ಮಾಣವಾಗಿರುವದೇ ಸರ್ಕಾರದ ಜಮೀನಿನಲ್ಲಿ ಎಂಬುವುದು ವಾಸ್ತವ.
ಆದರೆ ಕಾಂಗ್ರೆಸ್ – ದಳ ಮೈತ್ರಿ ಸರ್ಕಾರದ ವೇಳೆ ಇಡೀ ಸರ್ಕಾರದ ಎಲ್ಲಾ ಕಾರ್ಯಚಟುವಟಿಕೆಗಳು ನಡೆದಿದ್ದೇ ಈ ವಿವಾದಿತ ಈಗಲ್ಟನ್ ರೆಸಾರ್ಟ್ ನಲ್ಲಿ. ಮೈತ್ರಿ ಮಾಡಿಕೊಂಡ ಬಳಿಕ ಡಿಕೆಶಿ ಹಾಗೂ ಕುಮಾರಸ್ವಾಮಿ ಎಲ್ಲವನ್ನೂ ಬದಿಗಿಟ್ಟು ಸಂಧಾನಮಾಡಿಕೊಂಡು ಸಮಾನ ಮನಸ್ಕರಂತೆ ಹಂಚಿ ತಿನ್ನುವ ಲೆಕ್ಕಾಚಾರ ಹಾಕಿಕೊಂಡಿದ್ದರು. ಆದರೆ ಆಪರೇಷನ್ ಕಮಲ ಇವರ ಎಲ್ಲಾ ಲೆಕ್ಕಾಚಾರಗಳನ್ನು ಬುಡಮೇಲು ಮಾಡಿಬಿಟ್ಟಿತು. ಎಲ್ಲಿಯವರೆಗೆ ಎಂದರೆ ಈಗಲ್ಟನ್ ರೆಸಾರ್ಟ್ ಹೆಸರು ಕುಮಾರಸ್ವಾಮಿ ಪ್ರಸ್ತಾಪಿಸಿದ ಕೂಡಲೇ ಸಿದ್ದರಾಮಯ್ಯ ಎಷ್ಟು ಪರ್ಸಂಟೇಜ್ ಪಡೆದುಕೊಂಡಿದ್ದೀರಿ ಎಂಬ ಪ್ರಶ್ನೆಗೆ ಆರಂಭದಲ್ಲಿ ಕುಮಾರಸ್ವಾಮಿ ತಬ್ಬಿಬ್ಬಾದರೂ, ಮಾನವೀಯತೆಯ ಪರ್ಸಂಟೇಜ್ ಎಂದು ಎದೆ ತಟ್ಟಿದರು.
ಈಗ ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್ ಹೈವೆ ನಿರ್ಮಾಣ ಕೊನೆಯ ಹಂತದಲ್ಲಿದೆ. ರಾಮನಗರದ ಬಿಡದಿ ಇನ್ನೇನು ಕೆಲವೇ ವರ್ಷದಲ್ಲಿ ಬೆಂಗಳೂರು ಸೇರಿಕೊಳ್ಳಲಿದೆ. ಜಮೀನು ಚಿನ್ನಕ್ಕೆ ಸಮನಾದ ಬೆಲೆಗೆ ಬಾಳಲಿದೆ. ಈ ಜಾಗದಲ್ಲಿ ಒಂದಿಷ್ಟು ಏಕರೆ ಸಿಕ್ಕರೆ ಬೇಡ ಎನ್ನಲಾದೀತೆ..? ಮತ್ತು ಕುಮಾರಸ್ವಾಮಿಯವರಿಗೆ ಈಗಲ್ಟನ್ ರೆಸಾರ್ಟ್ ಹೆಸರು ಪ್ರಸ್ತಾಪಿಸಿ ಕಾಂಗ್ರೆಸ್ ಅನ್ನು ಕೆಣಕುವಂತೆ ಕಮಲ ನಾಯಕರ ಕುಮ್ಮಕ್ಕೂ ಇದೆ. ಇದುವೇ ಈಗ ಮತ್ತೆ ಈಗಲ್ಟನ್ ರೆಸಾರ್ಟ್ ಪ್ರಕರಣ ಮುನ್ನಲೆಗೆ ಬರಲಿರುವ ಮತ್ತೊಂದು ಪ್ರಮುಖ ಕಾರಣ ಎಂದು ಹೆಸರು ಹೇಳಲು ಇಚ್ಚಿಸಿದ ಜೆಡಿಎಸ್ ನಾಯಕರೊಬ್ಬರು ಹೇಳುತ್ತಾರೆ.
ಕುಮಾರಸ್ವಾಮಿಯವರು ಈ ಜಮೀನಿನ 25 ಏಕರೆಗೆ ಕಣ್ಣಿಟ್ಟರೆ ಕೊಂಡುಕೊಳ್ಳುವ ರೀತಿಯಲ್ಲಾದರೂ ಇಡೀ ಈಗಲ್ಟನ್ ರೆಸಾರ್ಟ್ ಕೊಂಡುಕೊಳ್ಳುವ ಯೋಚನೆ ಡಿಕೆಶಿಯದ್ದು. ತನಗೆ ಸಿಗದಿದ್ದರೆ ಯಾರಿಗೂ ಸಿಗಬಾರದು ಎಂಬ ಹಠಕ್ಕೆ ಬಿದ್ದಿರುವ ಕುಮಾರಸ್ವಾಮಿಯವರು ಹಳೇ ದೋಸ್ತ್ ಗೆ ಹೊಸ ಅಡ್ಡಗಾಲು ಹಾಕಿ ತಡೆದು ನಿಲ್ಲಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇಂತಿಪ್ಪ ಸಮಯದಲ್ಲೂ ಈಗಲ್ಟನ್ ರೆಸಾರ್ಟ್ ಪ್ರಕರಣ ರಾಜಕಾರಣಿಗಳ ಸ್ವಹಿತಾಸಕ್ತಿಗಾಗಿ ಮಾತ್ರ ಎಂದರೆ ರಾಜಕೀಯ ಒಂದು ದೊಡ್ಡ ವ್ಯವಹಾರವಾಗಿ ಮಾರ್ಪಟ್ಟಿದೆ ಎಂಬುವುದಕ್ಕಿರುವ ನಿದರ್ಶನ. ಮತ್ತು ಈಗಲ್ಟನ್ ರೆಸಾರ್ಟ್ ಇಬ್ಬರು ಪ್ರಭಾವಿಗಳ ಅಸ್ತಿತ್ವದ ಅಳಿವುಳಿನ ವಿಷಯವಾಗಿದೆ ಎಂಬುವುದನ್ನು ಮತ್ತೆ ಒತ್ತಿ ಹೇಳಬೇಕಿಲ್ಲ.
ReplyForward |