ಆರ್ಥಿಕ ಹಾಗೂ ಸಾಮಾಜಿಕ ಅಸಮತೋಲನದಿಂದ ಬಳಲುತ್ತಿದ್ದ ಪಂಜಾಬ್ ಈಗ ಜನ ಸಾಮಾನ್ಯನ (ಆಮ್ ಆದ್ಮಿ) ‘ಕೈ’ ಹಿಡಿದಿದೆ. ಪಂಜಾಬ್’ನಲ್ಲಿ ನಿರ್ಮಾಣವಾಗಿದ್ದ ರಾಜಕೀಯ ಸುಂಟರಗಾಳಿ ಅತಿರಥ, ಮಹಾರಥರನ್ನೇ ಬುಡಮೇಲು ಮಾಡಿದೆ. ಹಾಲಿ, ಮಾಜಿ ಸಿಎಂಗಳು ಸೇರಿದಂತೆ ತಮಗೆ ಸೋಲೇ ಇಲ್ಲ ಎಂಬಂತೆ ಬೀಗುತ್ತಿದ್ದ ಘಟಾನುಘಟಿಗಳು ನೆಲಕಚ್ಚಿದ್ದಾರೆ. ಇದಕ್ಕೆ ಕಾರಣ ಏನು? ಪಂಜಾಬ್’ನಲ್ಲಿ ಏಕಾಏಕಿ ಆಮ್ ಆದ್ಮಿಯ ಬಿರುಗಾಳಿ ಹೇಗೆ ಬೀಸಿತು? ಆಮ್ ಆದ್ಮಿ ಪಕ್ಷದ ಮುಂದಿನ ಹಾದಿ ಸುಗಮವಾಗಿರುವುದೇ? ಈ ಕುರಿತ ವಿಶ್ಲೇಷಣೆ ಇಲ್ಲಿದೆ.
ಈ ಬಾರಿಯ ಚುನಾವಣೆಯಲ್ಲಿ ಪ್ರಕಾಶ್ ಸಿಂಗ್ ಬಾದಲ್ ಕುಟುಂಬ, ಅಮರೀಂದರ್ ಸಿಂಗ್ ವರ್ಚಸ್ಸು ಸೇರಿದಂತೆ ರಾಷ್ಟ್ರೀಯ ಪಕ್ಷವೆಂಬ ಹೆಗ್ಗಳಿಕೆ (?) ಹೊಂದಿದ್ದ ಕಾಂಗ್ರೆಸ್ ಪಕ್ಷವನ್ನು ಧೂಳಿಪಟ ಮಾಡಿ ಆಮ್ ಆದ್ಮಿ ಪಕ್ಷ ಗದ್ದುಗೆಗೆ ಏರಿದೆ. ಪಂಜಾಬ್’ನ ಸಾಂಪ್ರದಾಯಿಕ ರಾಜಕೀಯ ಪಕ್ಷಗಳ ಪತನದ ಹಾದಿಯನ್ನು ಕಂಡುಹಿಡಿಯುವುದು ಅಷ್ಟೇನು ಕಷ್ಟಕರವಲ್ಲ.
ಪಂಜಾಬಿ ಸಿಖ್ಖರ ಹಾಗೂ ರೈತ ಪರವಾದ ಪಕ್ಷವೆಂದು ಗುರುತಿಸಿಕೊಂಡಿದ್ದ ಶಿರೋಮಣಿ ಅಕಾಲಿದಳ, ತಾನು ಸಿಖ್ಖರ ಪಕ್ಷವೆಂದು ಮಾತ್ರ ಬಿಂಬಿಸಿಕೊಳ್ಳಲು ಪ್ರಯತ್ನಿಸಿದ್ದು ಅದಕ್ಕೆ ಮಾರಕವಾಗಿ ಪರಿಣಮಿಸಿತು. ಮಿಗಿಲಾಗಿ, ಕರಾಳ ಕೃಷಿ ಕಾಯ್ದೆಗಳು ಜಾರಿಯಾದಾಗ ಮೊತ್ತಮೊದಲು ಅವುಗಳಿಗೆ ಬೆಂಬಲ ಸೂಚಿಸಿದ್ದರಿಂದ ಕೃಷಿಕರ ಕೆಂಗಣ್ಣಿಗೆ ಗುರಿಯಾಗಿತ್ತು. ಇದು ಅಕಾಲಿದಳದ ಪತನಕ್ಕೆ ಪ್ರಮುಖ ಕಾರಣ.
ಇನ್ನು ಜನರಿಂದ ದೂರ ಉಳಿಯುವುದು ಕಾಂಗ್ರೆಸ್ ಪಾಲಿಗೆ ಹೊಸದೇನಲ್ಲ. 2017ರಲ್ಲಿ ಶಿರೋಮಣಿ ಅಕಾಲಿದಳ ಹಾಗೂ ಬಾದಲ್ ಕುಟುಂಬದ ವಿರುದ್ದ ಗುಡುಗಿ ಅಧಿಕಾರ ಪಡೆದುಕೊಂಡಿದ್ದ ಅಂದಿನ ಕಾಂಗ್ರೆಸ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್, ಮತ್ತೆ ಬಾದಲ್ ಕುಟುಂಬದ ಜತೆ ಕೈಜೋಡಿಸಿದ್ದು ಕಾಂಗ್ರೆಸ್ ಹಾಗೂ ಅಮರಿಂದರ್ ಸಿಂಗ್ ಅವರಿಗೆ ಮುಳುವಾಯಿತು. ಅಮರಿಂದರ್ ಸಿಂಗ್ ಮತ್ತು ಬಾದಲ್ ಕುಟುಂಬದ ನಡುವಿನ ಸಖ್ಯಕ್ಕೆ ಪಂಜಾಬ್ ಜನತೆ ಪಾಠ ಕಲಿಸಲು ಹೊರಟಿತ್ತು. ಈ ಕಾರಣವನ್ನು ಮುಂದಿಟ್ಟುಕೊಂಡು ಅಮರಿಂದರ್ ಸಿಂಗ್ ಅವರನ್ನು ಕಳೆದ ವರ್ಷ ಸಿಎಂ ಸ್ಥಾನದಿಂದ ವಜಾಗೊಳಿಸಲಾಗಿತ್ತು. ಸುಮಾರು 25 ವರ್ಷಗಳಿಂದ ಪಂಜಾಬನ್ನು ಆಳುತ್ತಿದ್ದ ಎರಡು ಕುಟುಂಬಗಳಿಂದ ಜನರಿಗೆ ಮುಕ್ತಿ ದೊರೆಯಿತು ಎಂಬ ಭಾವನೆ ಬೆಳೆಯಿತು.
ಇದರ ಬಳಿಕ ನಡೆದದ್ದು ಹೊಸ ಸಿಎಂ ಆಯ್ಕೆ ಎಂಬ ಪ್ರಹಸನ. ಶಾಸಕಾಂಗ ಪಕ್ಷದ ಸಭೆಯಲ್ಲಿ ಸಿಎಂ ಸ್ಥಾನದ ಆಕಾಂಕ್ಷಿಗಳ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಟ್ಟಾಗ, ಚರಣ್ ಜೀತ್ ಸಿಂಗ್ ಚನ್ನಿ ಅವರನ್ನು ಬೆಂಬಲಿಸಿದ್ದು ಕೇವಲ ಒಬ್ಬ ಶಾಸಕ ಮಾತ್ರ. ಇತರ 77 ಶಾಸಕರು ಚರಣ್ಜೀತ್ ಆಯ್ಕೆಯ ವಿರುದ್ದವಿದ್ದರು. ನವಜೋತ್ ಸಿಂಗ್ ಸಿಧು ಅವರನ್ನು ಬೆಂಬಲಿಸಿದ್ದು ಕೇವಲ ನಾಲ್ಕು ಜನ ಶಾಸಕರು ಮಾತ್ರ. ಇತರರು ಅವರ ವಿರುದ್ದ ಮುನಿಸಿಕೊಂಡಿದ್ದರು. ಯಾವಾಗ ಪ್ರಮುಖ ನಾಯಕರ ಮೇಲೆ ಶಾಸಕರಿಗೇ ವಿಶ್ವಾಸ ಇಲ್ಲದಾಯಿತೋ, ಅಂದಿನಿಂದಲೇ ಕಾಂಗ್ರೆಸ್ ಸೋಲಿನ ಹಾದಿ ತುಳಿದಿತ್ತು.
‘ದಲಿತ ಸಿಎಂ’ ಎಂಬ ಸಾಮಾಜಿಕ ಕಳಕಳಿಯ ದಾಳವನ್ನು ಉರುಳಿಸಿದರೂ, ಅದನ್ನು ಮತಗಳಾಗಿ ಪರಿವರ್ತಿಸುವಲ್ಲಿ ಕಾಂಗ್ರೆಸ್ ವಿಫಲವಾಯಿತು. ಇದಕ್ಕೆ ಪ್ರಮುಖ ಕಾರಣ ಆಂತರಿಕ ಕಲಹ. ದಲಿತ ಸಿಎಂ ಎಂಬ ದಾಳ ಆಡಳಿತ ವಿರೋಧಿ ಅಲೆಯನ್ನು ಮೆಟ್ಟಿ ನಿಲ್ಲುತ್ತದೆ ಎಂದು ವಿಶ್ಲೇಷಿಸಲಾಗಿತ್ತಾದರೂ, ಅದರ ಸದುಪಯೋಗ ಪಡೆದುಕೊಳ್ಳಲು ಖುದ್ದು ಕಾಂಗ್ರೆಸ್ ನಾಯಕರಿಗೇ ಸಾಧ್ಯವಾಗಿರಲಿಲ್ಲ.

ಪ್ರಮುಖವಾಗಿ, ಸಿಖ್ಖ್ ಸಮುದಾಯದ ಹೊರಗಿನವರನ್ನು ಸಿಎಂ ಆಗಿ ನೇಮಿಸಿದ್ದು ಹಲವು ಶಾಸಕರ ಅಸಮಾಧಾನಕ್ಕೆ ಕಾರಣವಾಯಿತು. ಇದರ ವಿರುದ್ದ ಬಹಿರಂಗವಾಗಿ ಆಖ್ರೋಶವನ್ನು ಹೊರಹಾಕಿದಂತಹ ಪ್ರಸಂಗಗಳೂ ನಡೆದವು. ಇದು ಹಿಂದೂ ಶಾಸಕರಲ್ಲಿ ಹಾಗೂ ರಾಜಕೀಯ ಮುಖಂಡರಲ್ಲಿ ವೈಮನಸ್ಸು ಹುಟ್ಟುಹಾಕಲು ಕಾರಣವಾಯಿತು.
ಎಲ್ಲದಕ್ಕೂ ಮಿಗಿಲಾಗಿ, ಖುದ್ದು ಸಿಎಂ ಚನ್ನಿ ಅವರು ತಮ್ಮ ಸಹೋದರ ಪಕ್ಷೇತರನಾಗಿ ಚುನಾವಣೆಗೆ ನಿಂತಾಗ ಅವನಿಗೆ ಬೆಂಬಲ ಸೂಚಿಸಿ ಅಶಿಸ್ತು ಪ್ರದರ್ಶಿಸಿದ್ದರು. ಈ ಸಂದರ್ಭದಲ್ಲಿ ಹೈಕಮಾಂಡ್ ಯಾವುದೇ ಕ್ರಮವನ್ನೂ ತೆಗೆದುಕೊಳ್ಳದೇ ಇರುವುದು ಪಕ್ಷದೊಳಗೆ ಮತ್ತಷ್ಟು ಗೊಂದಲವನ್ನು ಸೃಷ್ಟಿಸಿತ್ತು. ಮಾಜಿ ಸಿಎಂ ಚನ್ನಿ ಮನೆಯ ಮೇಲೆ ಜನವರಿ 18ರಂದು ಇಡಿ ದಾಳಿ ನಡೆದಾಗಿ ದೊಡ್ಡ ಮೊತ್ತದ ನಗದು ಹಾಗೂ ವಿವರಣೆ ಸಿಗದಂತಹ ಬ್ಯಾಂಕ್ ಖಾತೆಗಳ ಮಾಹಿತಿ ಲಭಿಸಿತ್ತು. ಇವೆಲ್ಲವು ಚನ್ನಿ ಹಾಗೂ ಕಾಂಗ್ರೆಸ್ ಸೋಲಿನ ಬೆಂಕಿಗೆ ತುಪ್ಪ ಎರೆದಂತೆ ಆಗಿತ್ತು.
ಹಲವು ದಶಕಗಳ ದುರಾಡಳಿತ, ಸಾಮಾನ್ಯರ ಕೈಗೆ ಎಟುಕುವಂತೆ ಲಭಿಸುತ್ತಿರುವ ಡ್ರಗ್ಸ್ ಹಾವಳಿ, ಅಕ್ರಮ ಮರಳುಗಾರಿಕೆ, ಅಕ್ರಮ ಸಾರಾಯಿ ದಂದೆಗಳಿಂದ ಜನರು ಮೊದಲೇ ರೋಸಿ ಹೋಗಿದ್ದರು. ಹಲವು ವರ್ಷಗಳ ಹಿಂದೆ ಅಕಾಲಿದಳ ಈ ಅಕ್ರಮಗಳ ಗಾಯವನ್ನು ಪಂಜಾಬಿಗೆ ಮಾಡಿದ್ದರೆ, ಕಾಂಗ್ರೆಸ್ ಆ ಗಾಯ ಕೊಳೆತು ಹುಣ್ಣಾಗುವಂತೆ ಮಾಡಿತ್ತು. ಈ ಕಾರಣಕ್ಕೆ ಕಾಂಗ್ರೆಸ್ ವಿರುದ್ದ ಜನರಲ್ಲಿ ಆಳವಾದ ಭಾವನೆ ಬೇರೂರಿತ್ತು.
ಚುನಾವಣೆಯಲ್ಲಿ ಸೋತರೂ, ಕಾಂಗ್ರೆಸ್ಸನ್ನು ಸೋಲಿಸಿದೆ ಎಂಬ ನೆಮ್ಮದಿ ಅಮರಿಂದರ್ ಸಿಂಗ್ ಗೆ ಇದ್ದೇ ಇರುತ್ತದೆ. ಬಿಜೆಪಿ ಜತೆಗಿನ ಸಖ್ಯ ಮುರಿದ ಬಳಿಕ ಅಲ್ಪ ಕ್ಷೇತ್ರಗಳನ್ನಾದರೂ ಉಳಿಸಿಕೊಂಡ ಸಮಾಧಾನ ಅಕಾಲಿದಳಕ್ಕಿದೆ. ಆದರೆ, ಈ ಚುನಾವಣೆಯಲ್ಲಿ ಅಸಲಿ ನಷ್ಟ ಉಂಟಾಗಿದ್ದು ಕಾಂಗ್ರೆಸ್’ಗೆ. ಇವೆಲ್ಲಾ ಕಾರಣಗಳಿಂದ ಆಪ್ ಸುಲಭವಾಗಿ ಸಿಖ್ಖರ ನಾಡಿನಲ್ಲಿ ತನ್ನ ಬಾವುಟವನ್ನು ಭದ್ರವಾಗಿ ಹಾರಿಸಿತು. ಆಪ್ ಪೊರಕೆ ಸಾಂಪ್ರದಾಯಿಕ ರಾಜಕೀಯ ಪಕ್ಷಗಳನ್ನು ಬುಡ ಸಮೇತ ಗುಡಿಸಿಹಾಕಿತು.
ಆಪ್ ಮುಂದಿರುವ ಸವಾಲುಗಳೇನು?
ಜನ ಬದಲಾವಣೆ ಬಯಸಿ ಆಪ್ ಅಧಿಕಾರಕ್ಕೇನೋ ಏರಿರಬಹುದು, ಆದರೆ ಮುಂದಿನ ಹಾದಿ ಸುಗಮವಾದದ್ದೇನಲ್ಲ. ಮುಂದಿನ ಮೂರು ತಿಂಗಳಲ್ಲಿ ಜಿ ಎಸ್ ಟಿ ಅನುದಾನ ಕೊನೆಗೊಂಡಾಗ, ಆದಾಯ ಮತ್ತು ಖರ್ಚುಗಳ ನಡುವೆ ಉಂಟಾಗುವ ಭಾರಿ ವ್ಯತ್ಯಾಸ ಆಪ್ ಸರ್ಕಾರವನ್ನು ಇಕ್ಕಟ್ಟಿಗೆ ಈಡು ಮಾಡಲಿದೆ. ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿರುವ ಆಶ್ವಾಸನೆಗಳನ್ನು ಈಡೇರಿಸಲು ತಗಲುವ ಖರ್ಚು ಆದಾಯಕ್ಕಿಂತಲೂ ಹೆಚ್ಚಾಗಿದೆ. ಈ ಹಣಕಾಸಿನ ಅಡಚಣೆಯನ್ನು ಗಮನಿಸಿದಾಗ, ಅಧಿಕಾರಕ್ಕೇರಿದ ಕೆಲವೇ ತಿಂಗಳಲ್ಲಿ, ನಿಜವಾದ ‘ಆಮ್ ಆದ್ಮಿ’ಯ ಸ್ವರೂಪವನ್ನು ನೋಡಲು ಸಿಗುವ ಸಾಧ್ಯತೆಯಿದೆ.
ಮೇಲಾಗಿ, ಆಪ್ ಪರವಾಗಿ ವಿಧಾನಸಭೆಗೆ ಪ್ರವೇಶ ಪಡೆದವರಲ್ಲಿ ಬಹುತೇಕರು ಹೊಸಬರು. ನುರಿತ ರಾಜಕೀಯ ನಾಯಕರ ಕೊರತೆಯೂ ಆಮ್ ಆದ್ಮಿ ಪಕ್ಷವನ್ನು ಕಾಡಲಿದೆ. ಆಪ್’ನಿಂದ ಈ ಬಾರಿ ಚುನಾವಣೆಗೆ ಸ್ಪರ್ಧಿಸಿದವರಲ್ಲಿ ಶೇ. 51ರಷ್ಟು ಅಭ್ಯರ್ಥಿಗಳು ಕ್ರಿಮಿನಲ್ ಹಿನ್ನೆಲೆ ಉಳ್ಳವರು. ಬಹುತೇಕರು ಬೇರೆ ಪಕ್ಷಗಳಿಂದ ವಲಸೆ ಬಂದವರು. ಇವರು ಎಷ್ಟರ ಮಟ್ಟಿಗೆ ಆಮ್ ಆದ್ಮಿ ಪಕ್ಷದ ಸಿದ್ದಾಂತಗಳನ್ನು ನಂಬಿ ಆ ಪ್ರಕಾರ ಆಡಳಿತ ನಡೆಸುತ್ತಾರೆ ಎಂಬುದು ಕೂಡಾ ಗಮನಿಸಬೇಕಾದ ವಿಚಾರ.
‘ದೆಹಲಿ ಮಾಡೆಲ್’ ಹೆಸರಿನಲ್ಲಿ ಪಂಜಾಬಿನಲ್ಲಿ ಅಧಿಕಾರಕ್ಕೆ ಏರಿರುವ ಆಮ್ ಆದ್ಮಿ ಪಕ್ಷದ ಮುಂದಿನ ಹಾದಿ ನಿಜಕ್ಕೂ ಕಠಿಣವಾಗಿರಲಿದ್ದು, ಇದನ್ನು ಆಪ್’ನ ಸಿಎಂ ಅಭ್ಯರ್ಥಿ ಭಗವಂತ್ ಮಾನ್ ಮತ್ತು ಅರವಿಂದ್ ಕೇಜ್ರಿವಾಲ್ ಯಾವ ರೀತಿ ನಿಭಾಯಿಸಿ ಬರಿ ಕಲ್ಲು ಮುಳ್ಳುಗಳಿಂದ ತುಂಬಿರುವ ಹಾದಿಗೆ ರತ್ನಗಂಬಳಿ ಹಾಸುವಲ್ಲಿ ಯಶಸ್ವಿಯಾಗುತ್ತಾರೋ ಎಂದು ಕಾದು ನೋಡಬೇಕಿದೆ.







