ಬೆಂಗಳೂರು : ಕಾಗದದಲ್ಲಿ 10.65 ಲಕ್ಷ ಟನ್ ಗೊಬ್ಬರ, ರೈತರ ಕೈಯಲ್ಲಿ ಖಾಲಿ ಚೀಲ, ಇದು ಡಿಕೆ ಶಿವಕುಮಾರ್ ಸರ್ಕಾರದ ಕೃಷಿ ನೀತಿ! ಮುಂಗಾರು ಆರಂಭವಾಗಿದೆ. ರೈತರು ಬಿತ್ತನೆಗೆ ಸಜ್ಜಾಗಿದ್ದಾರೆ. ಆದರೆ ರಾಜ್ಯ ಕಾಂಗ್ರೆಸ್ ಸರ್ಕಾರದ ವೈಫಲ್ಯದಿಂದ ರಾಜ್ಯದ ಅನ್ನದಾತ ಇಂದು ರಸಗೊಬ್ಬರಕ್ಕಾಗಿ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯದಲ್ಲಿ ಸರ್ಕಾರ ಇದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಕೃಷಿ ಸಚಿವರಂತೂ ಇಲ್ಲವೇ ಇಲ್ಲ, ರೈತರು ಗೋಳಾಡುತ್ತಿದ್ದಾರೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಲೇವಡಿ ಮಾಡಿದ್ದಾರೆ.

ಸಹಕಾರ ಸಂಘಗಳ ಮುಂದೆ ಸಾಲುಗಟ್ಟಿ ನಿಂತಿದ್ದಾರೆ, ಗೊಬ್ಬರಕ್ಕಾಗಿ ಹಗಲು-ರಾತ್ರಿ ಅಲೆದಾಡುತ್ತಿದ್ದಾರೆ. ಆದರೆ ಕೃಷಿ ಸಚಿವರು ಮತ್ತು ಕಾಂಗ್ರೆಸ್ ಸರ್ಕಾರ ಮಾತ್ರ ಖಾತೆ ಹಂಚಿಕೆ ಗಲಾಟೆಯಲ್ಲಿ ಮಗ್ನವಾಗಿದೆ. ಅತ್ಯಂತ ದೊಡ್ಡ ವಿಪರ್ಯಾಸ ಏನು ಗೊತ್ತೇ? ಕೃಷಿ ಇಲಾಖೆಯ ಅಧಿಕೃತ ಅಂಕಿ-ಅಂಶಗಳ ಪ್ರಕಾರ ರಾಜ್ಯದಲ್ಲಿ 10.65 ಲಕ್ಷ ಮೆಟ್ರಿಕ್ ಟನ್ ರಸಗೊಬ್ಬರ ದಾಸ್ತಾನಿದೆಯಂತೆ ಎಂದು ಕುಟುಕಿದ್ದಾರೆ.
ಹಾಗಾದರೆ ನಮ್ಮ ಪ್ರಶ್ನೆ ಇಷ್ಟೇ… ಕೊಪ್ಪಳದಲ್ಲಿ ಗೊಬ್ಬರ ಎಲ್ಲಿದೆ? ಗದಗದಲ್ಲಿ ಗೊಬ್ಬರ ಎಲ್ಲಿದೆ? ಹಾವೇರಿಯಲ್ಲಿ ಗೊಬ್ಬರ ಎಲ್ಲಿದೆ? ಕಲಬುರಗಿಯಲ್ಲಿ ಗೊಬ್ಬರ ಎಲ್ಲಿದೆ? ಯಾದಗಿರಿಯಲ್ಲಿ ಗೊಬ್ಬರ ಎಲ್ಲಿದೆ? ಬಳ್ಳಾರಿಯಲ್ಲಿ ಗೊಬ್ಬರ ಎಲ್ಲಿದೆ? ಕಾಗದದಲ್ಲಿ ದಾಸ್ತಾನು ಇದ್ದರೆ ಸಾಲದು, ಅದು ರೈತನ ಕೈಗೆ ತಲುಪಬೇಕು. ಎಕರೆಗೆ ಕೇವಲ ಒಂದು ಚೀಲ ಮಾತ್ರ ಕೊಟ್ಟು ಮೋಸ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ : Karnataka Rain: ರಾಜ್ಯದಲ್ಲಿ ಮುಂದಿನ 3 ದಿನ ಭರ್ಜರಿ ಮಳೆ
ಗಂಟೆಗಟ್ಟಲೆ ಸಾಲಿನಲ್ಲಿ ನಿಂತರೂ ಗೊಬ್ಬರ ಸಿಗುತ್ತಿಲ್ಲ. ರೈತ ಸಂಪರ್ಕ ಕೇಂದ್ರಗಳಲ್ಲಿ “ದಾಸ್ತಾನು ಇಲ್ಲ” ಎಂಬ ಫಲಕ ತೂಗಾಡುತ್ತಿದೆ, ಇದೇನಾ ಕಾಂಗ್ರೆಸ್ ಸರ್ಕಾರದ ರೈತಪರ ಆಡಳಿತ? ಗ್ಯಾರಂಟಿಗಳ ಪ್ರಚಾರಕ್ಕೆ ಸಾವಿರಾರು ಕೋಟಿ ಖರ್ಚು ಮಾಡುವ, ಸರ್ಕಾರಕ್ಕೆ, ರೈತನಿಗೆ ಸಮಯಕ್ಕೆ ಗೊಬ್ಬರ ತಲುಪಿಸುವ ಕನಿಷ್ಠ ಸಾಮರ್ಥ್ಯವೂ ಇಲ್ಲವೇ? ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೇ, ನಿಮ್ಮ ಸರ್ಕಾರದ ಬಳಿ ಉತ್ತರ ಇದೆಯೇ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
10.65 ಲಕ್ಷ ಟನ್ ಗೊಬ್ಬರ ನಿಜವಾಗಿಯೂ ಎಲ್ಲಿದೆ? ಯಾರ ನಿರ್ಲಕ್ಷ್ಯದಿಂದ ರೈತರು ಪರದಾಡುತ್ತಿದ್ದಾರೆ? ನಿಮ್ಮ ಸಂಪುಟದಲ್ಲಿ ಕೃಷಿ ಸಚಿವರು ಯಾಕಿಲ್ಲ? ಯಾವಾಗ ನೇಮಕವಾಗುತ್ತಾರೆ? ಅನ್ನದಾತನನ್ನು ಸರತಿ ಸಾಲಿನಲ್ಲಿ ನಿಲ್ಲಿಸಿ, ಕಾಗದದಲ್ಲಿ ಮಾತ್ರ ಗೊಬ್ಬರ ತೋರಿಸುವ ಈ ಮೋಸದ ಆಡಳಿತವನ್ನು ಕರ್ನಾಟಕದ ರೈತರು ಎಂದಿಗೂ ಕ್ಷಮಿಸುವುದಿಲ್ಲ. ರೈತರ ಶಾಪ ತಟ್ಟಿದ ಸರ್ಕಾರ ಯಾವತ್ತೂ ಉಳಿದಿಲ್ಲ, ಈ ಕಾಂಗ್ರೆಸ್ ಸರ್ಕಾರವೂ ಇದಕ್ಕೆ ಹೊರತಲ್ಲ ಎಂದು ವಿಪಕ್ಷ ನಾಯಕ ಆರ್. ಅಶೋಕ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಾಗ್ದಾಳಿ ನಡೆಸಿದ್ದಾರೆ.






