ಸೋಮವಾರ ಬೆಳಿಗ್ಗೆ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಮ್ಲಜನಕ ಕೊರತೆಯಿಂದ 24 ರೋಗಿಗಳು ಮೃತಪಟ್ಟ ಸುದ್ದಿ ಹೊರಬೀಳತಿದ್ದಂತೆಯೇ ಜಿಲ್ಲೆಯ ಜನತೆ ಒಂದು ಕ್ಷಣ ಬೆಚ್ಚಿ ಬಿದ್ದಿದ್ದರು. ಒಂದೆಡೆ ರಾಜ್ಯ ಸರ್ಕಾರ ಆಮ್ಲಜನಕ ಕೊರತೆ ಇಲ್ಲ ಎನ್ನುತ್ತಿದೆ. ಮತ್ತೊಂದೆಡೆ ಜ್ವಲಂತ ಸಾಕ್ಷಿಯಾಗಿ ಜನರು ಮೃತಪಟ್ಟಿದ್ದಾರೆ. ಈ ಸುದ್ದಿ ಇಡೀ ದೇಶಾದ್ಯಂತ ಭಾರೀ ಖಂಡನೆಗೂ ಕಾರಣವಾಗಿದೆ. ಆಸ್ಪತ್ರೆ ಮೂಲಗಳ ಪ್ರಕಾರ ಬೆಳಿಗ್ಗೆ ಆಮ್ಲಜನಕ ಕೊರತೆಯಿಂದ ಮೃತರಾದವರ ಸಂಖ್ಯೆ 12 , ಆದರೆ ಇಂದು ಮದ್ಯಾಹ್ನ ಜಿಲ್ಲೆಗೆ ಆಗಮಿಸಿದ ರಾಜ್ಯ ಅರೋಗ್ಯ ಸಚಿವ ಡಿ ಸುಧಾಕರ್ ಅವರು ಪತ್ರಿಕಾ ಗೋಷ್ಟಿಯಲ್ಲಿ ನೀಡಿದ ಮಾಹಿತಿಯ ಪ್ರಕಾರ ಆಮ್ಲಜನಕ ಕೊರತೆಯಿಂದ ಸಾವನ್ನಪ್ಪಿದವರ ಸಂಖ್ಯೆ ಕೇವಲ 3. ಅವರು ನೀಡಿದ ಮಾಹಿತಿಯ ಪ್ರಕಾರ ಕಳೆದ 24 ಗಂಟೆಗಳಲ್ಲಿ 24 ಜನರು ಸಾವನ್ನಪ್ಪಿದ್ದಾರೆ. ಅವರಲ್ಲಿ ಕೇವಲ ಮೂವರು ಮಾತ್ರ ( ಸೋಮವಾರ ಬೆಳಿಗ್ಗೆ 12 ರಿಂದ 3ರವರೆಗೆ ) ಆಮ್ಲಜನಕದ ಕೊರತೆಯಿಂದಾಗಿ ಮೃತಪಟ್ಟಿದ್ದಾರೆ ಎಂದು ವೈದ್ಯರು ಪ್ರಾಥಮಿಕ ಮಾಹಿತಿಯಲ್ಲಿ ತಿಳಿಸಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಾ.ಕೆ.ಸುಧಾಕರ್ ಅವರು, ‘ಕೋವಿಡ್ ಆಸ್ಪತ್ರೆಯಲ್ಲಿ 123 ರೋಗಿಗಳು ದಾಖಲಾಗಿದ್ದರು. ಈ ಪೈಕಿ 14 ಜನ ವೆಂಟಿಲೇಟರ್, 36 ಮಂದಿ ಹೆಚ್ಚು ಆಮ್ಲಜನಕ ಅವಶ್ಯಕ ಇರುವ ಹಾಸಿಗೆಗಳಲ್ಲಿದ್ದರು. 58 ಮಂದಿ ಐಸಿಯುನಲ್ಲಿ ಹಾಗೂ 29 ಮಂದಿ ಸಾಮಾನ್ಯ ಆಮ್ಲಜನಕದ ಹಾಸಿಗೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಜಿಲ್ಲಾಡಳಿತ, ವೈದ್ಯಕೀಯ ಕಾಲೇಜು ಹಾಗೂ ಆರೋಗ್ಯ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, ಭಾನುವಾರ ಬೆಳಿಗ್ಗೆ 7 ರಿಂದ ಮಧ್ಯರಾತ್ರಿ 12 ಗಂಟೆವರೆಗೆ 14 ಜನರು ಮೃತಪಟ್ಟಿದ್ದಾರೆ.
ಹಲವು ದಿನಗಳಿಂದ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮಧ್ಯರಾತ್ರಿ 12 ಗಂಟೆಯಿಂದ ಮುಂಜಾವು 3 ಗಂಟೆಯವರೆಗೆ ಮೂವರು ಅಸುನೀಗಿದ್ದಾರೆ. 3 ಗಂಟೆಯಿಂದ ಬೆಳಿಗ್ಗೆ 7 ಗಂಟೆಯವರೆಗೆ ಏಳು ಜನರು ಮೃತಪಟ್ಟಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ 23 ಜನರು ಮೃತಪಟ್ಟಿದ್ದರೆ, ಒಬ್ಬರು ಕಾಮಗೆರೆ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಎಲ್ಲ ಕಡೆಯೂ ಆಮ್ಲಜನಕದ ಬೇಡಿಕೆ ಹೆಚ್ಚಾಗಿದೆ. ಸರ್ಕಾರ ಪೂರೈಸಲು ಎಲ್ಲ ಕ್ರಮ ಕೈಗೊಳ್ಳುತ್ತಿದೆ. ಈ ಅನಿರೀಕ್ಷಿತ ಸಾಂಕ್ರಾಮಿಕ ರೋಗದ ವಿರುದ್ಧ ಸರ್ಕಾರ ಪರಿಣಾಮಕಾರಿಯಾಗಿ ಹೋರಾಡುವಾಗ ಇಂತಹ ಘಟನೆ ನಡೆದಿರುವುದು ಬೇಸರ ತಂದಿದೆ. ಸರ್ಕಾರ ಈಗಾಗಲೇ ತನಿಖೆಗೆ ಆದೇಶಿಸಿದೆ. ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುತ್ತೇವೆ’ ಎಂದು ಹೇಳಿದರು. ಇಲ್ಲಿ ಸಚಿವರು ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆಯೇ ಹೊರತೂ ತಮ್ಮ ಹೊಣೆಗಾರಿಕೆಯ ಬಗ್ಗೆ ಏನೂ ಹೇಳಿಲ್ಲ.
ರಾಜ್ಯದ ಆರೋಗ್ಯ ಸಚಿವರಾಗಿ ಇಂತಹ ತುರ್ತು ಸಮಯದಲ್ಲಿ ಕನಿಷ್ಟ ಪಕ್ಷ ಎಲ್ಲಾ ಜಿಲ್ಲಾ ಅಸ್ಪತ್ರೆಗಳಿಗೂ ಆಮ್ಲಜನಕ ವ್ಯವಸ್ಥಿತವಾಗಿ ಸರಬರಾಜು ಆಗುತ್ತಿದೆಯೇ ಎಂಬುದನ್ನು ಮಾನಿಟರ್ ಮಾಡುವುದು ಆರೋಗ್ಯ ಇಲಾಖೆಯ ಅತ್ಯವಶ್ಯ ಕರ್ತವ್ಯ ಆಗಿತ್ತು ಎಂಬುದನ್ನು ಮರೆಯುವಂತಿಲ್ಲ.
ಈ ಘಟನೆಯನ್ನು ಖಂಡಿಸಿ ಸ್ಥಳೀಯರು ಜಿಲ್ಲಾಡಳಿತದ ಮುಂದೆ ಪ್ರತಿಭಟನೆ ಆರಂಭಿಸಿದ್ದಾರೆ. ರಾಜ್ಯದ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಸುರೇಶ್ ಕುಮಾರ್ ಅವರ ದಿವ್ಯ ನಿರ್ಲಕ್ಷ್ಯತೆ ಎದ್ದು ಕಾಣುತ್ತಿದೆ. ಇದರ ನೇರ ಹೊಣೆ ಹೊತ್ತು ಇಬ್ಬರು ರಾಜೀನಾಮೆ ನೀಡುತ್ತಾರಾ ? ಎಂಬ ಪ್ರಶ್ನೆಗಳು ಚರ್ಚೆಗೆ ನಾಂದಿ ಹಾಡಿದೆ. ಜಿಲ್ಲೆಯಲ್ಲಿ 24 ಕರೋನಾ ಸೋಂಕಿತರ ಸರಣಿ ಸಾವಿನ ಬಗ್ಗೆ ನ್ಯಾಯಾಂಗ ತನಿಖೆಗೆ ಆದೇಶ ಮಾಡಿ, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಿ ಎಂಬ ಕೂಗು ಪ್ರಬಲವಾಗಿ ಕೇಳಿ ಬರುತ್ತಿದೆ.
ಚಾಮರಾಜನಗರ ರಾಜ್ಯದ ಅತ್ಯಂತ ಹಿಂದುಳಿದಿರುವ ಜಿಲ್ಲೆಗಳಲ್ಲಿ ಒಂದು. ಇಲ್ಲಿ ಶೇಕಡಾ 80 ರಷ್ಟು ಜನರು ಕಾರ್ಮಿಕರು ಮತ್ತು ಅತೀ ಸಣ್ಣ ರೈತರು. ಇವರು ಖಾಸಗೀ ಆಸ್ಪತ್ರೆಗಳ ಚಿಕಿತ್ಸೆ ಪಡೆಯುವಷ್ಟು ಹಣವಂತರೇ ಅಲ್ಲ. ಇರುವ ಏಕೈಕ ಸರ್ಕಾರಿ ಆಸ್ಪತ್ರೆಯಲ್ಲಿ ಈ ಅವ್ಯವಸ್ಥೆ ಆದರೆ ಜನರು ಏನು ಮಾಡಬೇಕು ? ಇದಕ್ಕೆ ನೇರ ಹೊಣೆ ಹೊತ್ತು ಉಸ್ತುವಾರಿ ಸಚಿವ ಸುರೇಶ್ ಕುಮಾರ್ ರಾಜೀನಾಮೆ ನೀಡಬೇಕಲ್ಲವೇ ?
ಆದರೆ, ಇಬ್ಬರು ಸಚಿವರ ದಿವ್ಯ ನಿರ್ಲಕ್ಷ್ಯದಿಂದ ಚಾಮರಾಜನಗರದಲ್ಲಿ ಒಂದೇ ದಿನ 24 ಮಂದಿ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾರೆ. ಆಕ್ಸಿಜನ್ ಇಲ್ಲದೇ ನರಳಿ- ನರಳಿ ಸಾವನ್ನಪ್ಪಿದ್ದಾರೆ. ಬೆಂಕಿ ಬಿದ್ದ ಮೇಲೆ ಬಾವಿ ತೋಡಲು ಉಸ್ತುವಾರಿ ಸಚಿವರು ಇದೀಗ ಚಾಮರಾಜನಗರ ಜಿಲ್ಲೆಗೆ ಭೇಟಿಕೊಟ್ಟಿದ್ದಾರೆ. ಅಲ್ಲಿಗೆ ಹೋಗಿ ಮತ್ತೆ ತಿಪ್ಪೆ ಸಾರಿಸುವ ಕೆಲಸ ಮಾಡಿ ವಾಪಸು ಬರುತ್ತಾರಾ ನೋಡಬೇಕು.
ನಿನ್ನೆಯಷ್ಟೇ ಸಚಿವ ಸುರೇಶ್ ಕುಮಾರ್ ತನ್ನ ಫೇಸ್ಬುಕ್ನಲ್ಲಿ ಪೋಸ್ಟ್ ಹಾಕಿಕೊಂಡಿದ್ದು ರಾಜಾಜಿನಗರದ ಭಾಷ್ಯಂ ವೃತ್ತದಲ್ಲಿ ಖಾಸಗಿ ಆಸ್ಪತ್ರೆಯನ್ನು ಕೋವಿಡ್ ಕೇರ್ ಸೆಂಟರ್ ಮಾಡಿ ಅದಕ್ಕೆ ಚೈತನ್ಯ ಕೇಂದ್ರ ಎಂದು ಸ್ವತಃ ಸುರೇಶ್ ಕುಮಾರ್ ಅವರೇ ಹೆಸರಿಟ್ಟಿದ್ದಾರೆ. ಆ ಚೈತನ್ಯ ಕೇಂದ್ರಕ್ಕೆ ರಾಜಾಜಿನಗರದ ಬಿಜೆಪಿಗರಿಂದ ಆಂಬ್ಯುಲೆನ್ಸ್ ನೀಡಲಾಗಿದೆ. ಸ್ಟೀಮ್ , ಕಷಾಯಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ ಸಚಿವವರು ಇಲ್ಲಿ ಮಾಡಿದ ಕೆಲಸದ ಕಾಲು ಭಾಗ ಚಾಮರಾಜನಗರದಲ್ಲಿ ಮಾಡಲಿಲ್ಲ. ಚಾಮರಾಜನಗರ ಜಿಲ್ಲೆಯಲ್ಲಿರುವ ಬಹುತೇಕರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವಂಥ ಶಕ್ತಿವಂತರಲ್ಲ,ತೀರ ಕಡು ಬಡುವರು, ಸಣ್ಣ ರೈತರಾಗಿದ್ದಾರೆ. 24 ಜನರ ಸಾವನ್ನು ಜನತೆ ಮತ್ತು ವಿರೋಧ ಪಕ್ಷಗಳೂ ಗಂಭಿರವಾಗಿ ಪರಿಗಣಿಸಿವೆ. ಇಬ್ಬರೂ ಸಚಿವರು ರಾಜೀನಾಮೆಗೆ ಕೊಡಲಿ ಎಂಬ ಕೂಗು ಕೇಳಿ ಬರುತ್ತಿವೆ.