ಕಾಂಗ್ರೆಸ್ ಪಕ್ಷ ಎಲ್ಲರಿಗೂ ಮುಂಚಿತವಾಗಿ ಟಿಕೆಟ್ ಘೋಷಣೆ ಮಾಡುವ ಹುಮ್ಮಸ್ಸಿನಲ್ಲಿದೆ. ಈಗಾಗಲೇ ಟಿಕೆಟ್ ಆಕಾಂಕ್ಷಿಗಳಿಂದ ಅರ್ಜಿ ಆಹ್ವಾನ ಮಾಡಿದ್ದ ಕಾಂಗ್ರೆಸ್, ಟಿಕೆಟ್ ಆಕಾಂಕ್ಷಿಗಳ ಲೆಕ್ಕಚಾರದಲ್ಲಿ ಕ್ಷೇತ್ರವಾರು ಗೆಲ್ಲುವ ಅಭ್ಯರ್ಥಿಗಳ ಪಟ್ಟಿಯನ್ನು ಹೈಕಮಾಂಡ್ಗೆ ಕಳುಹಿಸಿದ್ದು, ಟಿಕೆಟ್ ಆಯ್ಕೆ ಪ್ರಕ್ರಿಯೆ ಶುರುವಾಗಿದೆ. ಇದರ ಬೆನ್ನಲ್ಲೇ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಸೇರಿದಂತೆ ಕೆಪಿಸಿಸಿ ಕಾರ್ಯಾಧ್ಯಕ್ಷರು ಹಾಗು ಹಿರಿಯ ನಾಯಕರಿಗೆ ಹೈಕಮಾಂಡ್ ಬುಲಾವ್ ಕೊಟ್ಟಿದ್ದು, ಸೋಮವಾರ ಬೆಳಗ್ಗೆಯೇ ದೆಹಲಿ ವಿಮಾನ ಹತ್ತಿದ್ದಾರೆ. ಇದರ ಬೆನ್ನಲ್ಲೇ ಡಿಕೆಶಿ ಬಣ ಸಿದ್ದರಾಮಯ್ಯ ಬಣ ಅನ್ನೋ ಗಲಾಟೆಗಳು ಅಲ್ಲಲ್ಲಿ ಜೋರಾಗುತ್ತಿರುವುದು ಕಾಂಗ್ರೆಸ್ ನಾಯಕರಿಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ.
ಮೂಡಿಗೆರೆಯಲ್ಲಿ ಸಿದ್ದರಾಮಯ್ಯ Vs ಡಿಕೆ ಬಣ..!
ಕಳೆದ ವಾರ ಚಿಕ್ಕಮಗಳೂರಿನ ಮೂಡಿಗೆರೆ ಕ್ಷೇತ್ರದಲ್ಲಿ ಪ್ರವಾಸ ಕೈಗೊಂಡಿದ್ದ ಡಿ.ಕೆ ಶಿವಕುಮಾರ್ಗೆ ಪ್ರತ್ಯೇಕವಾಗಿ ಬಣಗಳು ಸ್ವಾಗತ ಕೋರಿದ್ದ ಸುದ್ದಿ ಪ್ರಸಾರ ಆಗಿತ್ತು. ಟಿಕೆಟ್ ಆಕಾಂಕ್ಷಿ ಆಗಿರುವ ಮಾಜಿ ಸಚಿವ ಮೋಟಮ್ಮ ಪುತ್ರಿ ನಯನಾ ಮೋಟಮ್ಮನ ಹಾಗೂ ಬೇರೊಂದು ಗುಂಪು ಪ್ರತ್ಯೇಕವಾಗಿ ಸ್ವಾಗತ ಮಾಡಿದ್ದವು. ಇದು ಟಿಕೆಟ್ ಆಹ್ವಾನ ಮಾಡಿದ್ದಕ್ಕೆ ಸೃಷ್ಟಿಯಾದ ಭಿನ್ನಮತ ಎನ್ನುವ ಮಾತುಗಳು ಕೇಳಿಬಂದಿದ್ದವು. ಟಿಕೆಟ್ ಯಾರಿಗೆ ಬೇಕು ಎಂದಾಗ ಸಾಮಾನ್ಯವಾಗಿ ಎಲ್ಲರೂ ಟಿಕೆಟ್ ಬೇಕು ಎನ್ನುತ್ತಾರೆ. ಕಾಂಗ್ರೆಸ್ನಲ್ಲಿ ಇದೀಗ 224 ಕ್ಷೆತ್ರಗಳಿಗೆ 1300 ಆಕಾಂಕ್ಷಿಗಳು ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಟಿಕೆಟ್ ಸಿಗದಿದ್ದರೆ ಸಾಮಾನ್ಯವಾಗಿ ಭಿನ್ನಮತ ಸ್ಫೋಟವಾಗುತ್ತೆ, ಇಲ್ಲವೇ ಪಕ್ಷದಲ್ಲೇ ಇದ್ದರೂ ಸಂಘಟನೆ ಕೈಬಿಟ್ಟು ಮನೆಯಲ್ಲಿ ಉಳಿಯುತ್ತಾರೆ.
ಸಿದ್ದರಾಮಯ್ಯ ಎದುರಲ್ಲೇ ಬಯಲಾಯ್ತು ಟಿಕೆಟ್ ಭಿನ್ನಮತ..!
ಬೆಂಗಳೂರಿನ ಟಿ ದಾಸಹಳ್ಳಿ ಕ್ಷೇತ್ರದಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಪಕ್ಷಾತೀತ ಕಾರ್ಯಕ್ರಮ ಆಗಿತ್ತು. ಮಾಜಿ ಶಾಸಕ ಮುನಿರತ್ನ ಹಾಗು ಹಾಲಿ ಶಾಸಕ ಮಂಜುನಾಥ್ ಕೂಡ ಸಭೆಗೆ ಆಗಮಿಸಿದ್ದರು. ಆದರೆ ಸಭೆಗೂ ಮೊದಲೂ ತೆರೆದ ವಾಹನದಲ್ಲಿ ರೋಡ್ ಶೋ ಮಾಡಿದ್ದ ಸಿದ್ದರಾಮಯ್ಯಗೆ ಡಾ ನಾಗಲಕ್ಷ್ಮೀ ಸಾಥ್ ನೀಡಿದ್ದರು. ಸಿದ್ದರಾಮಯ್ಯ ಕಾರಿನಲ್ಲೇ ನಿಂತು ಜನರತ್ತ ಕೈ ಬೀಸಿದ್ದರು. ಜೊತೆಗೆ ಸಿದ್ದರಾಮಯ್ಯ ಭಾಷಣ ಮಾಡುವಾಗ ಜೊತೆಯಲ್ಲೇ ನಿಂತು ನಾನು ಮುಂದಿನ ಕಾಂಗ್ರೆಸ್ ಅಭ್ಯರ್ಥಿ ಎನ್ನುವುದನ್ನು ಪರೋಕ್ಷವಾಗಿ ಜನರಿಗೆ ತಿಳಿಸುವ ಕೆಲಸ ಮಾಡಿದ್ದರು. ಆದರೆ ಅದೇ ಕಾರ್ಯಕ್ರಮದಲ್ಲಿ ಮಾತನಾಡಲು ಆಗಮಿಸಿದ ಗೀತಾ ಶಿವರಾಮ್, ಭಾಷಣಕ್ಕೆ ಸ್ವತಃ ಸಿದ್ದರಾಮಯ್ಯ ಸಾಕು ಭಾಷಣ ನಿಲ್ಲಿಸಿ ಎನ್ನುವ ಮೂಲಕ ತಡೆದಿದ್ದಾರೆ.

ಡಿಕೆಶಿ ಬಣ ಸಿದ್ದರಾಮಯ್ಯ ಬಣ..! ಕಾಂಗ್ರೆಸ್ ಬಣ ಛಿದ್ರ ಛಿದ್ರ..!
ಡಿಕೆ ಶಿವಕುಮಾರ್ ಬೆಂಬಲಿಗಳು ಅನ್ನೋ ಕಾರಣಕ್ಕೆ ಗೀತಾ ಶಿವರಾಮ್ ಅವರಿಗೆ ಮಾತನಾಡಲು ಅವಕಾಶ ಕೊಡಲಿಲ್ಲ ಎನ್ನುವ ಮಾತುಗಳು ಕೇಳಿ ಬಂದಿವೆ. ಆದರೆ ಸಿದ್ದರಾಮಯ್ಯ ಉದ್ದೇಶಪೂರ್ವಕವಾಗಿ ಮಾತನ್ನು ನಿಲ್ಲಿಸಿದ್ದಲ್ಲ. ಸಮಯ ಮೀರಿದ್ದರಿಂದ ಕಡಿಮೆ ಮಾತನಾಡುವಂತೆ ಎಲ್ಲರಿಗೂ ತಿಳಿಸಲಾಗಿತ್ತು ಎಂದು ಡಾ ನಾಗಲಕ್ಷ್ಮೀ ಸಮರ್ಥನೆ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ನಮ್ಮದು ಕಾಂಗ್ರೆಸ್ ಪಕ್ಷ. ಡಿಕೆಶಿ ಬಣ, ಸಿದ್ದರಾಮಯ್ಯ ಬಣ ಅನ್ನೋದು ಕೇವಲ ಮಾಧ್ಯಮಗಳ ಸೃಷ್ಟಿ ಎಂದಿದ್ದಾರೆ. ಆದರೆ ಸಿದ್ದರಾಮಯ್ಯ ಭಾಷಣ ಮಾಡುವಾಗ ಗೀತಾ ಶಿವಕುಮಾರ್ ಹೆಸರು ಹೇಳಿದಾಗ ಸಭೆಯಲ್ಲಿ ಗೀತಾ ಶಿವರಾಮ್ ಇರಲಿಲ್ಲ, ಅಷ್ಟು ಹೊತ್ತಿಗೆ ಮುನಿಸಿಕೊಂಡು ವೇದಿಕೆಯಿಂದ ಇಳಿದು ಹೋಗಿದ್ದರು.
ಟಿಕೆಟ್ ಫೈನಲ್ ಮಾಡುವತ್ತ ಕಾಂಗ್ರೆಸ್ ಹಿರಿಯರ ಟೀಂ..!
ದೆಹಲಿಯಲ್ಲಿ ಬೀಡು ಬಿಟ್ಟಿರುವ ರಾಜ್ಯ ಕಾಂಗ್ರೆಸ್ ನಾಯಕರು, ಟಿಕೆಟ್ ಅಂತಿಮ ಮಾಡುವ ಬಗ್ಗೆ ಹೈಕಮಾಂಡ್ ಜೊತೆಗೆ ಚರ್ಚೆ ನಡೆಸುತ್ತಿದ್ದಾರೆ. ಈಗ ನಾಯಕರ ನಿಜಬಣ್ಣ ಹೊರಬೀಳುವ ಸಾಧ್ಯತೆಯಿದ್ದು, ಯಾರು ಮೇಲುಗೈ ಸಾಧಿಸಲಿದ್ದಾರೆ ಅನ್ನೋ ಕುತೂಹಲ ಮೂಡಿಸಿದೆ. ಒಂದು ವೇಳೆ ಟಿಕೆಟ್ ಹಂಚಿಕೆಯಲ್ಲಿ ಸಮಬಲ ಸಾಧಿಸಿದರೆ, ಕ್ಷೇತ್ರದಲ್ಲಿ ಸೋಲು ಗೆಲುವಿನಲ್ಲಿ ಯಾವ ನಾಯಕರು ಯಾವ ಪಾತ್ರ ವಹಿಸಲಿದ್ದಾರೆ ಅನ್ನೋದನ್ನು ಕಾದು ನೋಡಬೇಕು. ಇದರ ನಡುವೆ ಎಐಸಿಸಿ ಅಧ್ಯಕ್ಷ ಆಗಿರುವ ಮಲ್ಲಿಕಾರ್ಜುನ ಖರ್ಗೆ ಅವರ ಗ್ರೂಪ್ ಕೂಡ ಆ್ಯಕ್ಟೀವ್ ಆಗಿದೆ ಎನ್ನುವ ಸಂದೇಶ ಕಾಂಗ್ರೆಸ್ ವಲಯದಲ್ಲೇ ಹರಿದಾಡ್ತಿದೆ. ಇದು ಕಾಂಗ್ರೆಸ್ ಪಾಲಿಗೆ ಗೆಲ್ಲುವ ಕುದುರೆಗೆ ಕಂದಕ ತೋಡಿದಂತೆ ಎನ್ನುವುದು ರಾಜಕೀಯ ಪರಿಣಿತರ ಮಾತು
ಕೃಷ್ಣಮಣಿ






