ಬಾದಾಮಿ : ಸಮಗ್ರ ಕನ್ನಡಗರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಾವೇರಿ ನೀರಿನ ಹೋರಾಟಕ್ಕಾಗಿ ಅ.೧೩ ರಂದು ಗುರುವಾರ ಬೆಳಿಗ್ಗೆ ೬ ರಿಂದ ಸಂಜೆ ೬ ಗಂಟೆಯವರೆಗೆ ಅಖಂಡ ಕರ್ನಾಟಕ ಬಂದ್ ನಡೆದೇ ನಡೆಯುತ್ತದೆ ಎಂದು ಕನ್ನಡ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ ತಿಳಿಸಿದ್ದಾರೆ.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ಮಹದಾಯಿ, ಕಳಸಾ ಬಂಡೂರಿ, ಉತ್ತರ ಕರ್ನಾಟಕ ಅಭಿವೃದ್ಧಿ, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಸೇರಿದಂತೆ ಸಮಗ್ರ ಅಭಿವೃದ್ಧಿಯಾಗಬೇಕು. ತಮಿಳುನಾಡಿಗೆ ಯಾವುದೇ ಕಾರಣಕ್ಕೂ ನೀರು ಬಿಡುವ ಪ್ರಶ್ನೆಯೇ ಇಲ್ಲ ಎಂದು ಗುಡುಗಿದ್ದಾರೆ.
ನಾಳೆ ಸಮಗ್ರ ಕನ್ನಡಗರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬಂದ್ ನಡೆಯಲಿದ್ದು, ವಾಹನ, ಬಸ್, ಅಟೋ, ಹೋಟೆಲ್ ಮಾಲೀಕರು ಸೇರಿದಂತೆ ಎಲ್ಲರೂ ಬೆಂಬಲ ಕೊಡುತ್ತಿದ್ದಾರೆ. ಮಳೆಯಾಗಿದೆ ನೀರು ಬಂದಿದೆ ಬಂದ್ ಮಾಡುವುದು ಬೇಡ ಎಂದು ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ : ಭ್ರಷ್ಟಾಚಾರ ಮಾಡಿದ್ರೆ ಬಡಿದು ಹಾಕುವೆ: ಸಿಎಂ ಡಿ.ಕೆ ಶಿವಕುಮಾರ್ ಖಡಕ್ ಎಚ್ಚರಿಕೆ
ತಮಿಳುನಾಡಿನ ವಿರುದ್ಧ ಬಂದ್ ಮಾಡಿಯೇ ತಿರುತ್ತೇವೆ. ಎಷ್ಟೇ ಅಪಪ್ರಚಾರ ಮಾಡಿದರೂ ಬಂದ್ ನಿಲ್ಲಲ್ಲ. ಬಂದ್ ಬೆಳಿಗ್ಗೆ 6 ರಿಂದ ಸಂಜೆ 6 ಗಂಟೆಯವರೆಗೆ ನಡೆಯಲಿದ್ದು, ಬಂದ್ ಶಾಂತಿಯುತವಾಗಿರುತ್ತದೆ. ಎಲ್ಲ ಕನ್ನಡಪರ ಸಂಘಟನೆಗಳು ಬೆಂಬಲ ನೀಡಿವೆ, ಜನತೆ ಇದಕ್ಕೆ ಕಿವಿಕೊಡಬಾರದು ಎಂದು ವಾಟಾಳ್ ಮನವಿ ಮಾಡಿದ್ದಾರೆ.
ಇಮ್ಮಡಿ ಪುಲಿಕೇಶಿ ಮೂರ್ತಿ ಪ್ರತಿಷ್ಟಾಪನೆ ಆಗಲಿ…
ಚಾಲುಕ್ಯರ ಈ ನಾಡಿನಲ್ಲಿ ಇಮ್ಮಡಿ ಪುಲಿಕೇಶಿಯ ಮೂರ್ತಿ ಪ್ರತಿಷ್ಟಾಪನೆ ಆಗದೇ ಇರುವುದು ದುರಂತ. ಆ ಹೆಸರೇ ಕನ್ನಡಿಗರಿಗೆ ಐತಿಹಾಸಿಕ ದಾಖಲೆ, ಚಾಲುಕ್ಯರ ಕೋಟೆ ಇಮ್ಮಡಿ ಪುಲಿಕೇಶಿ ಮೂರ್ತಿ ಪ್ರತಿಷ್ಟಾಪನೆ ಆಗಬೇಕು. ಜನರಿಗಾಗಿ ಹೋರಾಟ ಮಾಡಿದ ಹೋರಾಟಗಾರರ ಮೇಲೆ, ರೈತರ ಮೇಲೆ, ಹಾಕಿರುವ ಕೇಸ್ ಗಳನ್ನು ಸರಕಾರ ಕೂಡಲೇ ಹಿಂದಕ್ಕೆ ಪಡೆಯಬೇಕು ಎಂದು ವಾಟಾಳ್ ಆಗ್ರಹಿಸಿದ್ದಾರೆ.






