ಪೋಷಕರ ಜೊತೆ ಸೇರಿ ಅತ್ತಿಗೆಗೆ ವರದಕ್ಷಿಣೆ ತರುವಂತೆ ಕಿರುಕುಳ ನೀಡುತ್ತಿದ್ದ ಸ್ಯಾಂಡಲ್‌ವುಡ್‌ನ ಒಂದು ಕಾಲದ ಸ್ಟಾರ್ ನಟಿಗೆ ಕರ್ನಾಟಕ ಹೈಕೋರ್ಟ್ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.
ಹಿರಿಯ ನಟ ದಿ || ಕಾಶಿನಾಥ್ ನಟಿಸಿ ಅ=ನಿರ್ದೇಶಿಸಿದ್ದ ಅನುಭವ ಚಿತ್ರದ ಮೂಲಕ ಚಂದನವನ ಪ್ರವೇಶಿಸಿದ್ದ ನಟಿ ಅಭಿನಯ ವರದಕ್ಷಿಣೆ ಕಿರುಕುಳದ ಆರೋಪದ ಮೇಲೆ ಇದೀಗ ಜೈಲು ಪಾಲಾಗಿದ್ದಾರೆ.
ನಟಿ ಅಭಿನಯರವರ ಸಹೋದರ ಶ್ರೀನಿವಾಸ್ ಅವರ ಪತ್ನಿ ಲಕ್ಷ್ಮೀದೇವಿಗೆ ಕುಟುಂಬಸ್ಥರು ನಿರಂತರವಾಗಿ ವರದಕ್ಷಿಣೆ ಕಿರುಕುಳ ನೀಡುತ್ತಿದ್ದರು. ಮದುವೆಯ ವೇಳೆ 80 ಸಾವಿರ ರೂಪಾಯಿ ಹಾಗೂ 250 ಗ್ರಾಂ ಚಿನ್ನಾಭರಣ ಪಡೆದಿದ್ರು ಮತ್ತು 1 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು ಎಂದು ತಿಳಿದು ಬಂದಿತ್ತು.
ವರದಕ್ಷಿಣೆ ಪಡೆದಿದ್ದಲ್ಲದೆ ಹೆರಿಗೆಗೆ ತವರು ಮನೆಗೆ ಹೋದ ಲಕ್ಷ್ಮೀದೇವಿಯನ್ನ ಮನೆಗೆ ಕರೆತಂದಿರಲಿಲ್ಲ ಈ ಬಗ್ಗೆ ಪೋಷಕರು ಅಭಿನಯರವರ ಮನೆ ಬಳಿ ಹೋಗಿ ವಿಚಾರಿಸಿದಾಗ ಅವಮಾನ ಮಾಡಿದ್ದರು ಎಂದು ತಿಳಿದು ಬಂದಿದೆ.

ಈ ಬಗ್ಗೆ 2002 ರಲ್ಲಿ ಚಂದ್ರಾಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು ಮತ್ತು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಪೊಲೀಸರು ಚಾರ್ಜ್‌ಶೀಟ್‌ಸಲ್ಲಿಸಿದ್ದರು ಮತ್ತು ಪ್ರಕರಣದ ಐವರು ಆರೋಪಿಗಳಿಗೆ ನ್ಯಾಯಾಲಯ ತಲಾ 2 ವರ್ಷ ಶಿಕ್ಷೆ ಪ್ರಕಟಿಸಿತ್ತು.
ಇದನ್ನು ಪ್ರಶ್ನಿಸಿ ಅಭಿನಯ ಕುಟುಂಬಸ್ಥರು ಜಿಲ್ಲಾ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು ಮತ್ತು ನ್ಯಾಯಾಲಯವು ಐವರು ಆರೋಪಿಗಳನ್ನು ಪ್ರಕರಣದಿಂದ ಖುಲಾಸೆಗೊಳಿಸಿತ್ತು.
ಜಿಲ್ಲಾ ನ್ಯಾಯಾಲಯ ಆದೇಶ ಪ್ರಶ್ನಿಸಿ ಲಕ್ಷ್ಮೀದೇವಿ ಹಾಗು ಸರ್ಕಾರ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು ಅರ್ಜಿ ವಿಚಾರಣೆ ನಡೆಸಿದ ನ್ಯಾ.ಹೆಚ್.ಬಿ. ಪ್ರಭಾಕರ್ ಶಾಸ್ತ್ರಿ ಅವರಿದ್ದ ಏಕಸದಸ್ಯ ಪೀಠವು ಮ್ಯಾಜಿಸ್ಟ್ರೇಟ್ ಕೋರ್ಟ್ ಆದೇಶವನ್ನ ಎತ್ತಿ ಹಿಡಿದಿದೆ ಮತ್ತು ಆರೋಪಿಗಳಿಗೆ ಜೈಲು ಶಿಕ್ಷೆ ಪ್ರಕಟಿಸಿದೆ.
ಈಗಾಗಲೇ ಪ್ರಕರಣದ ಪ್ರಮುಖ ಆರೋಪಿಗಳಾದ ಎ1-ಶ್ರೀನಿವಾಸ್ ಹಾಗೂ ಎ-2 ರಾಮಕೃಷ್ಣ ಮೃತಪಟ್ಟಿರುವ ಹಿನ್ನಲೆಯಲ್ಲಿ ಎ-3 ಜಯಮ್ಮಗೆ 5 ವರ್ಷ , ಎ-4 ಚಲುವರಾಜ್, ಎ-5 ಅಭಿನಯಾಗೆ ತಲಾ 2 ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಲಾಗಿದೆ.






