ಪತ್ರಕರ್ತೆ ಸೌಮ್ಯಾ ವಿಶ್ವನಾಥನ್ ಹತ್ಯೆ ಪ್ರಕರಣದಲ್ಲಿ ನಾಲ್ವರು ಅಪರಾಧಿಗಳಿಗೆ ದೆಹಲಿಯ ಸಾಕೇತ್ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿದೆ.
ದೆಹಲಿಯಲ್ಲಿ 2008ರ ಸೆಪ್ಟೆಂಬರ್ ರಂದು ಕೆಲಸ ಮುಗಿಸಿ ಕಚೇರಿಯಿಂದ ಮನೆಗೆ ಹಿಂದಿರುಗುವಾಗ ಪತ್ರಕರ್ತೆ ಸೌಮ್ಯಾ ವಿಶ್ವನಾಥನ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು. ಇದೀಗ 15 ವರ್ಷಗಳ ಬಳಿಕ ತೀರ್ಪು ಹೊರ ಬಂದಿದೆ. ರವಿ ಕಪೂರ್, ಅಜಯ್ ಕುಮಾರ್, ಅಮಿತ್ ಶುಕ್ಲಾ ಮತ್ತು ಬಲ್ಜೀತ್ ಮಲಿಕ್ ಎಂಬುವವರು ಅಪರಾಧಿಗಳಾಗಿದ್ದು, ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಇದಲ್ಲದೇ ಅಪರಾಧಿಗಳಿಗೆ 5 ಲಕ್ಷ ರೂಪಾಯಿ ದಂಡವನ್ನೂ ಹಾಕಲಾಗಿದೆ. ಮತ್ತೊಬ್ಬ ಅಪರಾಧಿ ಅಜಯ್ ಸೇಥಿ ಎಂಬಾತನಿಗೆ ಮೂರು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.
ದೆಹಲಿಯಲ್ಲಿ ದೃಶ್ಯ ಮಾಧ್ಯಮದಲ್ಲಿ ಪತ್ರಕರ್ತೆಯಾಗಿದ್ದ ಸೌಮ್ಯಾ ವಿಶ್ವನಾಥನ್ 2008ರ ಸೆಪ್ಟೆಂಬರ್ 30ರಂದು ಬೆಳಗಿನ ಜಾವ 3:30ರ ಸುಮಾರಿಗೆ ಕಚೇರಿಯಿಂದ ಮನೆಗೆ ಹಿಂದಿರುಗುವಾಗ ಹಿಂಬಾಲಿಸಿಕೊಂಡು ಬಂದಿದ್ದ ಐವರು ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿ, ಸೌಮ್ಯಾ ಅವರನ್ನು ಬರ್ಬರವಾಗಿ ಕೊಲೆ ಮಾಡಿದ್ದರು. ತಮ್ಮ ಕೃತ್ಯ ಬಯಲಾಗದಂತೆ ಮಾಡಲು ರಸ್ತೆ ಅಪಘಾತ ಎಂಬಂತೆ ಬಿಂಬಿಸಿದ್ದರು.
ಆದರೆ, ವಿಧಿವಿಜ್ಞಾನ ವರದಿಗಳಲ್ಲಿ ಸೌಮ್ಯಾ ತಲೆಗೆ ಗುಂಡೇಟು ತಗುಲಿ ಸಾವನ್ನಪ್ಪಿದ್ದಾರೆ ಎಂದು ಬಹಿರಂಗವಾಗಿತ್ತು. ಇದರಿಂದ ಇದೊಂದು ಕೊಲೆ ಎಂದು ಸ್ಪಷ್ಟವಾಗಿ, ಇದರ ಆಧಾರದ ಮೇಲೆ ದೆಹಲಿ ಪೊಲೀಸರು ತನಿಖೆ ಪ್ರಾರಂಭಿಸಿದ್ದರು. ಇಂದು ಐವರಿಗೂ ಕೋರ್ಟ್ ಶಿಕ್ಷೆ ವಿಧಿಸಿದೆ. ಅದರಲ್ಲಿ ನಾಲ್ವರಿಗೆ ಜೀವಾವಧಿ ಒರ್ವನಿಗೆ ಮೂರು ವರ್ಷ ಜೈಲು ಶಿಕ್ಷೆಯಾಗಿದೆ.