ರಾಷ್ಟ್ರ ರಾಜಧಾನಿಯಲ್ಲಿರುವ ಜವಹರ್‌ಲಾಲ್ ನೆಹರೂ ಯುನಿವರ್ಸಿಟಿಯ ಕ್ಯಾಂಪಸ್ ಒಳಗಡೆ ಮೊತ್ತ ಮೊದಲ ಕರೋನಾ ಸೋಂಕು ಪತ್ತೆಯಾಗಿದೆ. ಕ್ಯಾಂಪಸ್ ಒಳಗಡೆ ಇರುವಂತಹ ಔಷಧಾಲಯ ಒಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಓರ್ವನಲ್ಲಿ ಸೋಂಕು ಇರುವುದು ದೃಢಪಟ್ಟಿದೆ.
ಜೆಎನ್‌ಯು ರಿಜಿಸ್ಟ್ರಾರ್ ಆಗಿರುವಂತಹ ಪ್ರಮೋದ್ ಕುಮಾರ್ ಅವರು ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಸೋಂಕಿತ ವ್ಯಕ್ತಿಯು ಕ್ಯಾಂಪಸ್ ಒಳಗಡೆಯೇ ವಾಸಿಸುತ್ತಿದ್ದು, ತನ್ನ ಕುಟುಂಬದೊಂದಿಗೆ ಹೋಂ ಕ್ವಾರೆಂಟೈನ್‌ಗೆ ಒಳಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಆದರೆ, ಅವನ ಕುಟುಂಬದಲ್ಲಿ ಬೇರೆ ಯಾರಿಗಾದರೂ ಸೋಂಕು ತಗುಲಿದೆಯೇ ಎನ್ನುವ ಕುರಿತು ಯಾವುದೇ ಮಾಹಿತಿ ಲಭಿಸಿಲ್ಲ.
ಸೋಂಕಿತನೊಂದಿಗೆ ಎಷ್ಟು ಜನರು ಸಂಪರ್ಕಕ್ಕೆ ಬಂದಿದ್ದರು ಎನ್ನುವ ಕುರಿತಾಗಿ ಕೂಡ ನಿಖರ ಮಾಹಿತಿ ತಿಳಿದು ಬರದೇ ಇರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ.

ಲಾಕ್‌ಡೌನ್ ಆರಂಭವಾಗುವ ಸಮಯದಲ್ಲಿ ಜೆಎನ್‌ಯು ಕ್ಯಾಂಪಸ್‌ನಲ್ಲಿದ್ದ ವಿದ್ಯಾರ್ಥಿಗಳನ್ನು ವಾಪಾಸ್ಸು ಮನೆಗೆ ಕಳುಹಿಸಲಾಗಿತ್ತು. ಆದರೂ, ಇನ್ನೂ ಹಲವು ವಿದ್ಯಾರ್ಥಿಗಳು ಹಾಸ್ಟೆಲ್‌ನಲ್ಲೇ ಉಳಿದುಕೊಂಡಿದ್ದರು. ಇವರೊಂದಿಗೆ ಹಲವಾರು ಪ್ರೊಫಿಸರ್‌ಗಳು ಕೂಡಾ ಕ್ಯಾಂಪಸ್ ಒಳಗಡೆ ವಾಸಿಸುತ್ತಿದ್ದಾರೆ.
ಇನ್ನು, ಜೂನ್ 4ರಂದು ಜಾಮಿಯಾ ಮಿಲಿಯಾ ಇಸ್ಲಾಮಿಯಾ ಕ್ಯಾಂಪಸ್‌ನಲ್ಲಿ ಕೂಡಾ ಬೋಧಕೇತರ ಸಿಬ್ಬಂದಿಯೋರ್ವರಿಗೆ ಸೋಂಕು ತಗುಲಿದ್ದು ಪತ್ತೆಯಾಗಿತ್ತು. ಆ ಕಾರಣಕ್ಕಾಗಿ ಜಾಮಿಯಾ ಕ್ಯಾಂಪಸ್ ಅನ್ನು ಜೂನ್ 30ರ ವರೆಗೆ ಮುಚ್ಚಲಾಗಿದೆ ಹಾಗೂ ಎಲ್ಲಾ ಸಿಬ್ಬಂದಿಗಳಿಗೆ ಮನೆಯಲ್ಲೇ ಇರುವಂತೆ ಸಲಹೆ ನೀಡಲಾಗಿದೆ.










