ತುಮಕೂರು : ರಾಜ್ಯ ವಿಧಾನಸಭಾ ಚುನಾವಣೆಯ ಹೊಸ್ತಿಲಿನಲ್ಲಿ ಯಾರು ಯಾವ ಪಕ್ಷಕ್ಕೆ ಜಂಪ್ ಆಗ್ತಾರೆ ಅನ್ನೋದನ್ನು ಊಹಿಸಲೂ ಅಸಾಧ್ಯ ಎಂಬಂತಾಗಿದೆ. ಸ್ವಪಕ್ಷದ ಮೇಲೆ ಬಂಡಾಯ ಸಾರಿ ಬೇರೆ ಪಕ್ಷಕ್ಕೆ ಹಾರುವವರು ಒಂದೆಡೆಯಾದರೆ ವಿವಿಧ ಆಫರ್ಗಳಿಗೆ ಮನಸೋತು ಪಕ್ಷಾಂತರ ಮಾಡುವವರೂ ಇದ್ದಾರೆ. ಈ ಎಲ್ಲದರ ನಡುವೆ ಸ್ವಪಕ್ಷದ ವಿರುದ್ಧ ಬಂಡಾಯವೆದ್ದು ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿ ಜೆಡಿಎಸ್ ಪಕ್ಷದಿಂದ ಅಮಾನತುಗೊಂಡಿದ್ದ ಗುಬ್ಬಿ ಕ್ಷೇತ್ರ ಶಾಸಕ ಎಸ್.ಆರ್ ಶ್ರೀನಿವಾಸ್ಗೆ ತೆನೆ ಪಕ್ಷ ಇದೀಗ ಮರಳಿ ಗೂಡಿಗೆ ಸೇರುವಂತೆ ಆಫರ್ ನೀಡಿದೆ.

ತುಮಕೂರಿನಲ್ಲಿ ಈ ವಿಚಾರವಾಗಿ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ, ದೇವೇಗೌಡರಿಗೆ, ಕುಮಾರಸ್ವಾಮಿಗೆ ಎಸ್.ಆರ್ ಶ್ರೀನಿವಾಸ್ ಬಗ್ಗೆ ಗೌರವವಿದೆ. ಎಲ್ಲರಿಗೂ ಕೈ ಮುಗಿದು ಒಳಗೆ ಬಾ ಯಾತ್ರಿಕನೇ. ಎಸ್.ಆರ್ ಶ್ರೀನಿವಾಸ್ ಒಂದು ಕಾಲದಲ್ಲಿ ನಮ್ಮ ಜೊತೆ ಚೆನ್ನಾಗಿಯೇ ಇದ್ದರು. ಕೃಷ್ಣನಿಗೂ ಚೌತಿಯ ಚಂದ್ರನನ್ನು ನೋಡಿ ಅಪವಾದ ಬಂದಿತ್ತು .ದೇವರು ಅವರಿಗೆ ಒಳ್ಳೆಯ ಬುದ್ಧಿ ನೀಡಲಿ. ಈ ಬಗ್ಗೆ ಅವರು ಚಿಂತೆ ಮಾಡಲಿ. ಶ್ರೀನಿವಾಸ್ ಪುತ್ರ ಹಾಗೂ ಧರ್ಮಪತ್ನಿ ಒಳ್ಳೆಯವರಿದ್ದಾರೆ. ಮನೇಲಿ ಕುಳಿತು ಈ ಆಫರ್ ಬಗ್ಗೆ ಚಿಂತೆ ಮಾಡಲಿ. ನಮಗೆ ಯಾರ ಮೇಲೂ ದ್ವೇಷವಿಲ್ಲ ಎಂದು ಹೇಳುವ ಮೂಲಕ ಬಹಿರಂಗ ಆಫರ್ ನೀಡಿದ್ದಾರೆ.

ಕಳೆದ ವರ್ಷ ಜೆಡಿಎಸ್ ಪಕ್ಷದಿಂದ ದೂರಾಗಿದ್ದ ಎಸ್.ಆರ್ ಶ್ರೀನಿವಾಸ್ ಈ ವರ್ಷ ಭಾರತ್ ಜೋಡೋ ಯಾತ್ರೆಯಲ್ಲಿ ಕಾಣಿಸಿಕೊಂಡಿದ್ದರು. ಕೂಡಲೇ ಸಾರಾ ಮಹೇಶ್ ವಾಪಸ್ ಜೆಡಿಎಸ್ಗೆ ಮರಳುವಂತೆ ಗುಬ್ಬಿ ವಾಸಣ್ಣನಿಗೆ ಮನವಿ ಮಾಡಿದ್ದರು. ಆದರೆ ಈ ಆಫರ್ನ್ನು ಶ್ರೀನಿವಾಸ್ ತಿರಸ್ಕರಿಸಿದ್ದರು. ಇದೀಗ ಜೆಡಿಎಸ್ ರಾಜ್ಯಾಧ್ಯಕ್ಷ ಮತ್ತೊಂದು ಆಫರ್ ನೀಡಿದ್ದು ಎಸ್.ಆರ್ ಶ್ರೀನಿವಾಸ್ ಏನು ಮಾಡ್ತಾರೆ ಅಂತಾ ಕಾದು ನೋಡಬೇಕಿದೆ.












