2023ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ಇನ್ನು ಒಂದೂವರೆ ವರ್ಷ ಬಾಕಿಯಿರುವಂತೆಯೇ ಮೈಕೊಡವಿ ನಿಲ್ಲಲು ದಳಪತಿಗಳು ಸಜ್ಜಾಗಿದ್ದಾರೆ. ಜೆಡಿಎಸ್ನ ನಾಯಕರಿಗೆ ರಾಜಕೀಯದ ಪಾಠ ಮಾಡಲು ಹೆಚ್ಡಿ ಕುಮಾರಸ್ವಾಮಿ ಹಾಗೂ ಹೆಚ್ಡಿ ದೇವೇಗೌಡ ಮುಂದಾಗಿದ್ದು, ಇಂದಿನಿಂದ 4 ದಿನಗಳ ಕಾಲ ಕಾರ್ಯಗಾರ ನಡೆಸಲಾಗುತ್ತಿದೆ. ಕುಮಾರಸ್ವಾಮಿಯವರ ಬಿಡದಿ ತೋಟದ ಮನೆಯೇ ರಾಜಕೀಯದ ಪಾಠಶಾಲೆಯಾಗಲಿದೆ.
ಮುಂದಿನ ವಿಧಾನಸಭಾ ಚುನಾವಣೆ ಗೆಲ್ಲಲು ಆಗಲೇ ರಾಜಕೀಯ ಪಕ್ಷಗಳು ಅಖಾಡಕ್ಕೆ ಧುಮುಕಿವೆ. ತಂತ್ರ-ಪ್ರತಿತಂತ್ರಗಳನ್ನು ಸಿದ್ಧಪಡಿಸುತ್ತಿದ್ದು, ರಣಭೂಮಿಗೆ ಇಳಿಯುವ ಮುನ್ನ ಸಮರಾಭ್ಯಾಸದಲ್ಲಿ ತೊಡಗಿಕೊಂಡಿವೆ. ಕಮಲವನ್ನು ಮತ್ತೆ ಅಧಿಕಾರಕ್ಕೆ ತರಲು ಬಿಎಸ್ವೈ ರಾಜ್ಯ ಪ್ರವಾಸಕ್ಕೆ ಮುಂದಾಗಿದ್ರೆ, ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಜೋಡೆತ್ತುಗಳಂತೆ ಸರ್ಕಾರದ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಸದ್ಯ ರಾಷ್ಟ್ರೀಯ ಪಕ್ಷಗಳಿಗೆ ತಾವೇನೂ ಕಡಿಮೆಯಿಲ್ಲ ಎನ್ನುವಂತೆ ಜೆಡಿಎಸ್ ಕೂಡ ಚುನಾವಣಾ ಕದನಕ್ಕೆ ಸಿದ್ಧತೆ ನಡೆಸುತ್ತಿದ್ದು, ರಾಮನಗರದ ಬಿಡದಿ ತೋಟದ ಮನೆಯಲ್ಲಿ ತನ್ನ ಕದನಕಲಿಗಳಿಗೆ ಸಮರಕಲೆ ಹೇಳಿಕೊಡಲು ದಳಪತಿಗಳು ಮುಂದಾಗಿದ್ದಾರೆ.
ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡ ಹಾಗೂ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ನೇತೃತ್ವದಲ್ಲಿ ಕಾರ್ಯಾಗಾರ ನಡೆಯುತ್ತಿದೆ. ಇಂದು ಕಾರ್ಯಾಗಾರಕ್ಕೆ ದೇವೇಗೌಡರು ಚಾಲನೆ ನೀಡಿದರು. ಸೋಮವಾರ, ಮಂಗಳವಾರದಂದು ಹಾಲಿ ಹಾಗೂ ಮಾಜಿ ಶಾಸಕರ ಜೊತೆ ಚರ್ಚೆ ನಡೆಸಲಿದ್ದು, ಸೋತ ಅಭ್ಯರ್ಥಿಗಳು, ಟಿಕೆಟ್ ಆಕಾಂಕ್ಷಿಗಳು ಹಾಗೂ ಜಿಲ್ಲಾಧ್ಯಕ್ಷರ ಜೊತೆಯೂ ಮಾತುಕತೆ ನಡೆಸಲಿದ್ದಾರೆ. ಸೆಪ್ಟೆಂಬರ್ 29ರಂದು ಜೆಡಿಎಸ್ ಮಹಿಳಾ ನಾಯಕರ ಕಾರ್ಯಾಗಾರ ನಡೆಯಲಿದ್ದು, ಸೆಪ್ಟೆಂಬರ್ 30ರಂದು ಯುವ ಹಾಗೂ ವಿದ್ಯಾರ್ಥಿ ಘಟಕಗಳ ಜೊತೆ ಚರ್ಚೆ ನಡೆಯಲಿದೆ.
ಇನ್ನು ಕಾರ್ಯಾಗಾರದಲ್ಲಿ ದಳಪತಿಗಳು ಜೆಡಿಎಸ್ ನಾಯಕರಿಗೆ ರಾಜಕೀಯದ ಪಾಠ ಮಾಡಿದ್ದಾರೆ. ಅಭ್ಯರ್ಥಿ ಘೋಷಣೆಗೂ ಮುನ್ನ ಅಭ್ಯರ್ಥಿಗಳಿಗೆ ಚುನಾವಣಾ ರಾಜಕೀಯದ ಆಳ-ಅಗಲವನ್ನು ದಳಪತಿಗಳು ಪರಿಚಯ ಮಾಡಿಕೊಟ್ಟಿದ್ದಾರೆ.
ಹೆಚ್.ಡಿ. ಕುಮಾರಸ್ವಾಮಿ ಅವರು ಕಾರ್ಯಗಾರದಲ್ಲಿ ಭಾಗವಹಿಸಿದ್ದ 200 ಪ್ರತಿನಿಧಿಗಳಿಗೆ ಚುನಾವಣೆಯ ಗೆಲುವಿನ ಪಾಠ ಮಾಡಿದರು. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ 2023ರ ಚುನಾವಣೆ ಎದುರಿಸುವ ಬಗ್ಗೆ ತಮ್ಮ ಕನಸು ಮತ್ತು ಪರಿಕಲ್ಪನೆಗಳನ್ನು ಹಂಚಿಕೊಂಡರು. ಜನರನ್ನು ತಲುಪುವ ಬಗೆ, ಸಂಘಟನೆ, ಕಾರ್ಯಕರ್ತರನ್ನು ಒಗ್ಗೂಡಿಸುವುದು, ಕಾಲ ಕಾಲಕ್ಕೆ ಪಕ್ಷ ನೀಡುವ ಸೂಚನೆಗಳನ್ನು ಪಾಲಿಸುವುದು, ಗೆಲುವಿಗಾಗಿ ಮಾಡಬೇಕಾದ ಎಲ್ಲ ಪ್ರಯತ್ನಗಳ ಬಗ್ಗೆ ಕುಮಾರಸ್ವಾಮಿ ಅವರು ವಿವರವಾಗಿ ಹೇಳಿದರು.
ಪಕ್ಷವನ್ನು ಸಂಘಟನೆ ಮಾಡುವುದರ ಜತೆಗೆ ಮಹಿಳಾ ಘಟಕ, ಯುವ ಘಟಕ, ವಿಧ್ಯಾರ್ಥಿ ಘಟಕವನ್ನು ಬಲಗೊಳಿಸುವ ಬಗ್ಗೆ ಕೂಡ ಅವರು ಕೆಲ ಸಲಹೆಗಳನ್ನು ನೀಡಿದರು. ಕಷ್ಟ ಕಾಲದಲ್ಲಿ ಪಕ್ಷದ ಜೊತೆ ನಿಂತ ಯಾರನ್ನು ಕೈ ಬಿಡುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ ಅವರು, ಎಲ್ಲರೂ ತಮ್ಮ ಶಕ್ತಿಯನ್ನು ಬಳಸಿ ಸಂಘಟನೆ ಮಾಡಿ, ಗೆಲ್ಲಬೇಕು. ಅದಕ್ಕೆ ಬೇಕಾದ ಎಲ್ಲ ಸಹಕಾರ ಪಕ್ಷ ನೀಡಲಿದೆ ಎಂದರು.
ಅಭ್ಯರ್ಥಿ ಆಗಬೇಕೆಂಬ ಹಂಬಲ ಇದ್ದರೆ ಸಾಲದು. ಗೆಲ್ಲಲೇಬೇಕು ಎಂಬ ಛಲವು ಬೇಕು. ಸಿಕ್ಕಿದ ಅವಕಾಶವನ್ನು ಕಳೆದುಕೊಳ್ಳುವುದು ಬೇಡ ಎಂದು ಅವರು ಕಿವಿಮಾತು ಹೇಳಿದರು.
ಇನ್ನು ಉಳಿದ ಮೂರು ದಿನದ ಕಾರ್ಯಗಾರದಲ್ಲಿ ದಳಪತಿಗಳು ಅಭ್ಯರ್ಥಿಗಳಿಗೆ ತಮ್ಮ ರಾಜಕೀಯ ಅನುಭವಗಳನ್ನು ಧಾರೆ ಎರೆಯಲಿದ್ದಾರೆ. ಅಭ್ಯರ್ಥಿ ಘೋಷಣೆಗೂ ಮುನ್ನ ಅಭ್ಯರ್ಥಿಗಳನ್ನು ತಿದ್ದಿ ತೀಡುವ ಪ್ರಯೋಗ ನಡೆಯಲಿದ್ದು, ರಾಜಕೀಯ ತಂತ್ರಗಾರಿಕೆ, ಒಳಸುಳಿ, ದಾಳ ಉರುಳಿಸುವುದು ಹೇಗೆ? ಅನ್ನೋದನ್ನ ಮನವರಿಕೆ ಮಾಡಿಕೊಡಲಿದ್ದಾರೆ. ಜೊತೆಗೆ ನೈಪುಣ್ಯತೆ ಬೆಳವಣಿಗೆ, ವಾಕ್ಚಾತುರ್ಯ, ಇಮೇಜ್ ಹೆಚ್ಚಿಸಿಕೊಳ್ಳೋದೇಗೆ? ಅನ್ನೋದ್ರ ಕುರಿತು ಪಾಠ ನಡೆಯಲಿದೆ. ಜೊತೆಗೆ ಆಯಾ ಕ್ಷೇತ್ರಗಳ ಹಿನ್ನೆಲೆ, ಮಹತ್ವ, ಜನಸಂಖ್ಯೆ, ಜಾತಿವಾರು ಪ್ರಾಬಲ್ಯದ ಬಗ್ಗೆ ಅಭ್ಯರ್ಥಿಗಳಿಗೆ ಮಾಹಿತಿ ನೀಡೋದ್ರ ಜೊತೆಗೆ ಪಕ್ಷದ ಸದ್ಯದ ಪರಿಸ್ಥಿತಿ, ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಬಗ್ಗೆ ಅಭ್ಯರ್ಥಿಗಳಿಗೆ ದಳಪತಿಗಳು ತಿಳಿ ಹೇಳಲಿದ್ದಾರೆ.
ಕೇವಲ ಪಾಠ ಮಾಡೋದಷ್ಟೇ ಅಲ್ಲ. ಭಾವಿ ಅಭ್ಯರ್ಥಿಗಳಿಗೆ ಒಂದಷ್ಟು ಹೋಂ ವರ್ಕ್ನ್ನು ದಳಪತಿಗಳು ನೀಡಲಿದ್ದಾರೆ. ಹೋಂ ವರ್ಕ್ ನೋಡಿ ಪರೀಕ್ಷೆಯಲ್ಲಿ ಅಭ್ಯರ್ಥಿಗಳು ಪಾಸೋ ಫೇಲೋ ಅನ್ನೋದನ್ನ ಜೆಡಿಎಸ್ ನಾಯಕರು ನಿರ್ಧರಿಸಲಿದ್ದಾರೆ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಮಾಡುವುದು ಹಾಗೂ ಸದಸ್ಯತ್ವ ನೋಂದಣಿ ಮಾಡಿಸುವುದು. ಅಭ್ಯರ್ಥಿಗಳು ಜನರ ಜೊತೆ ಬೆರೆಯಬೇಕು ಹಾಗೂ ಸಮಸ್ಯೆಗಳನ್ನು ಆಲಿಸಬೇಕು. ಹಾಗೆ ಕಾರ್ಯಕರ್ತರ ಜೊತೆ ನಿರಂತರ ಸಂಪರ್ಕ ಸಾಧಿಸಬೇಕು.
ಒಟ್ನಲ್ಲಿ ಪ್ರತಿ ಸಾರಿ ಚುನಾವಣೆಯಲ್ಲಿ ಕಿಂಗ್ ಮೇಕರ್ ಆಗೋ ಜೆಡಿಎಸ್ ಈ ಬಾರಿ ಕಿಂಗ್ ಆಗೋ ಗುರಿಯೊಂದಿಗೆ ಸಮರಾಭ್ಯಾಸ ಆರಂಭಿಸಿದೆ. ರಾಜಕೀಯ ರಣಾಂಗಣಕ್ಕೆ ಧುಮುಕುವ ಮೊದಲು ತನ್ನ ಅಭ್ಯರ್ಥಿಗಳಿಗೆ ರಾಜಕೀಯದ ಪಾಠವನ್ನು ಹೇಳಿಕೊಡುತ್ತಿದೆ.