ಕಾಂಗ್ರೆಸ್ ಪಕ್ಷ ಈ ಬಾರಿ ಚುನಾವಣಾ ಸ್ಪರ್ಧೆಗೆ ಅರ್ಜಿ ಆಹ್ವಾನ ಮಾಡಿತ್ತು. ಅದೇ ಈಗ ಕಾಂಗ್ರೆಸ್ಗೆ ಸಂಕಷ್ಟ ತಂದೊಡ್ಡಿದೆ. ಒಂದೊಂದು ಕ್ಷೇತ್ರದಲ್ಲಿ ಮೂರ್ನಾಲ್ಕು ಹಾಗು ಏಳೆಂಟು ಅರ್ಜಿಗಳೂ ಬಂದಿವೆ. ಈಗ ಅರ್ಜಿ ವಿಲೇವಾರಿ ಮಾಡುವ ಸಲುವಾಗಿ ಬೆಳಗಾವಿಯಲ್ಲಿ ಚುನಾವಣಾ ಸಮಿತಿ ಸಭೆ ಮಾಡಲಾಗಿದೆ. ಜಿಲ್ಲಾ ಸಮಿತಿಗಳಿಗೆ ಅರ್ಜಿಗಳನ್ನು ವಾಪಸ್ ಕಳುಹಿಸಿ ಪ್ರತಿಕ್ಷೇತ್ರದಿಂದ ಗೆಲ್ಲುವಂತಹ ಇಬ್ಬರು ಅಭ್ಯರ್ಥಿಗಳ ಹೆಸರನ್ನು ಅಂತಿಮ ಮಾಡಿ ಕಳುಹಿಸಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಸೂಚನೆ ಕೊಟ್ಟಿದ್ದಾರೆ. ಜಿಲ್ಲಾ ಸಮಿತಿಗೆ ಇಬ್ಬರು ಹಿರಿಯ ನಾಯಕರನ್ನೂ ಕಳುಹಿಸಲು ತೀರ್ಮಾನ ಮಾಡಿದ್ದು, ಜನವರಿ 1, 2023ರ ಒಳಗೆ ಎಲ್ಲಾ ಕಡೆಯಿಂದಲೂ ಮಾಹಿತಿ ಪಡೆದು ಸಂಕ್ರಾಂತಿ ಒಳಗೆ ಅಂತಿಮ ಪಟ್ಟಿ ಬಿಡುಗಡೆ ಮಾಡುವ ಸಿದ್ಧತೆಯಲ್ಲಿದೆ ಕಾಂಗ್ರೆಸ್.
ಸಿದ್ದರಾಮಯ್ಯ ಷರತ್ತಿಗೆ ತಲೆಬಾಗಿದ ಕಾಂಗ್ರೆಸ್ ಹೈಕಮಾಂಡ್ !
ಕಳೆದ ವಾರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ನಡೆದಿದ್ದ ಸಭೆಯಲ್ಲಿ ಟಿಕೆಟ್ ಆಯ್ಕೆ ಸಂಬಂಧ ಹೈಕಮಾಂಡ್ ಯಾವುದೇ ನಿಲುವು ತೆಗೆದುಕೊಳ್ಳುವುದಿಲ್ಲ. ಸ್ಥಳೀಯವಾಗಿ ಗೆಲ್ಲುವ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ, ಒಟ್ಟಿನಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಬೇಕು, ಸಿದ್ದರಾಮಯ್ಯ ಹಾಗು ಡಿಕೆ ಶಿವಕುಮಾರ್ ನಡುವೆ ಮುಖ್ಯಮಂತ್ರಿ ಫೈಟ್ ನಡೆಸದೆ ಕಾಂಗ್ರೆಸ್ ಪಕ್ಷವನ್ನು ಒಮ್ಮತದಿಂದ ಆಯ್ಕೆ ಮಾಡಿಕೊಂಡು ಬನ್ನಿ. ಆ ಬಳಿಕ ಶಾಸಕಾಂಗ ಪಕ್ಷದ ತೀರ್ಮಾನದಂತೆ ಮುಖ್ಯಮಂತ್ರಿ ಆಯ್ಕೆ ಮಾಡೋಣ ಎಂದಿದ್ದರು. ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ಬಳಿಕ ಕೆಲವೊಂದು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದ ಸಿದ್ದರಾಮಯ್ಯ, ಇವರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಆಗ್ತಾರೆ, ನೀವು ಗೆಲ್ಲಿಸಬೇಕು ಎಂದು ಕರೆ ನೀಡಿದ್ದರು. ಆ ಬಳಿಕ ಸಿದ್ದರಾಮಯ್ಯ ಏಕಪಕ್ಷೀಯವಾಗಿ ಟಿಕೆಟ್ ಘೋಷಣೆ ಮಾಡುವುದು ಸರಿಯಲ್ಲ ಎನ್ನುವ ಆಕ್ಷೇಪ ವ್ಯಕ್ತವಾಗಿತ್ತು. ಹಾಗಾಗಿ ಹೈಕಮಾಂಡ್ ಬಳಿ ಷರತ್ತು ಹಾಕಿದ್ದರು.

ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಘೋಷಣೆ ಬಳಿಕವೇ ಪ್ರಚಾರ ಮಾಡೋಣ !
ರಾಜಕೀಯದಲ್ಲಿ ಕೆಲವೊಂದು ಉದ್ದೇಶ ಇಟ್ಟುಕೊಂಡು ಹತ್ತಾರು ಕಾರ್ಯಕ್ರಮ ಮಾಡುವುದು ಸಹಜ. ಆ ಕಾರ್ಯಕ್ರಮಗಳಿಗೆ ನಾವು ಹೋದಾಗ ಅಲ್ಲಿನ ಜನರನ್ನು ಉದ್ದೇಶಿಸಿ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ಎಂದು ಹೇಳುತ್ತೇವೆ. ಅಥವಾ ಒಂದೊಮ್ಮೆ ಪ್ರಬಲ ಅಭ್ಯರ್ಥಿ ಎನಿಸಿದಾಗ ನಾವು ಇವರೇ ಅಭ್ಯರ್ಥಿ ಆಗ್ತಾರೆ, ಗೆಲ್ಲಿಸಿ ಅಂತಾನೂ ಹೇಳಬೇಕಾಗುತ್ತದೆ. ಅದನ್ನು ತಪ್ಪು ಎಂದರೆ ಮೊದಲು ಟಿಕೆಟ್ ಘೋಷಣೆ ಆಗಲಿ. ಆ ಬಳಳಿಕವೇ ನಾವು ಪ್ರಚಾರ ಮಾಡೋಣ ಎಂದಿದ್ದರು. ಅಷ್ಟೇ ಅಲ್ಲದೆ ನಾವು ಒಂದು ಕ್ಷೇತ್ರದಲ್ಲಿ ಪ್ರಚಾರಕ್ಕೆ ಹೋದಾಗ ಇಬ್ಬರು ಮೂವರು ಪ್ರತ್ಯೇಕವಾಗಿ ಬಂದು ಸ್ವಾಗತ ಮಾಡುವುದು, ಅಲ್ಲಲ್ಲಿ ಒಂದಿಷ್ಟು ಜನರು ಸೇರುವುದರಿಂದ ಪಕ್ಷದಲ್ಲಿ ಗೊಂದಲ ಇದೆ ಎನ್ನುವ ಸಂದೇಶ ಹೋಗುತ್ತದೆ. ಒಂದು ಕ್ಷೇತ್ರದಲ್ಲಿ ಓರ್ವ ಅಬ್ಯರ್ಥಿಯನ್ನು ಘೋಷಣೆ ಮಾಡಿದರೆ ಪ್ರಚಾರಕ್ಕೂ ಅನುಕೂಲ ಎನ್ನುವುದನ್ನೂ ವಿವರಿಸಿದ್ದರು. ಹೈಕಮಾಂಡ್ ಕೂಡ ಇದಕ್ಕೆ ಒಪ್ಪಿಗೆ ನೀಡಿದೆ ಎನ್ನಲಾಗಿದೆ.
ಸಿದ್ದರಾಮಯ್ಯ ಹಠಕ್ಕೆ ಕಾಂಗ್ರೆಸ್ ಲೆಕ್ಕಾಚಾರವೇ ಉಲ್ಟಂಪಲ್ಟಾ ?
ಭಾನುವಾರದ ಚುನಾವಣಾ ಸಮಿತಿ ಸಭೆ ಬಳಿಕವೂ ಡಿ.ಕೆ ಶಿವಕುಮಾರ್ ಈ ಬಗ್ಗೆ ಕಟ್ಟು ನಿಟ್ಟಾಗಿ ಮಾತನಾಡಿದ್ದಾರೆ. ಯಾರಿಗೂ ಟಿಕೆಟ್ ಘೋಷಣೆ ಮಾಡುವ ಅಧಿಕಾರ ಇಲ್ಲ. ಹಾಗೇನಾದರೂ ಟಿಕೆಟ್ ಘೋಷಣೆ ಮಾಡಿದರೆ ನೋಟಿಸ್ ನೀಡುವ ಕೆಲಸ ಮಾಡ್ತೇವೆ ಎಂದಿದ್ದಾರೆ. ಆದರೆ ಸಿದ್ದರಾಮಯ್ಯ ಹಠ ಹಿಡಿದ ಕಾಂರಣದಿಂದ ಕಾಂಗ್ರೆಸ್ ಈ ಮೊದಲು ಮಾಡಿದ್ದ ಯೋಜನೆ ಹಳ್ಳ ಹಿಡಿದಿದೆ ಎನ್ನುವುದು ಖಚಿತ ಆಗ್ತಿದೆ. ದೆಹಲಿಯಲ್ಲಿ ಸಭೆ ಮುಗಿದ ಬಳಿಕ ಮಾಧ್ಯಮಗಳ ಎದುರು ಮಾತನಾಡಿದ್ದು, ರಾಜ್ಯ ಕಾಂಗ್ರೆಸ್ ಉಸ್ತುವಾರಿ, ರಣ್ದೀಪ್ ಸಿಂಗ್ ಸುರ್ಜೇವಾಲ, ಮುಂದಿನ 75 ದಿನಗಳು ನಮಗೆ ತುಂಬಾ ಪ್ರಮುಖ ಆದದ್ದು, ಬಿಜೆಪಿ ಸರ್ಕಾರದ ಶೇಕಡ 40ರಷ್ಟು ಕಮಿಷನ್ ವಿಚಾರ, ಮತದಾರರ ಪಟ್ಟಿಯಲ್ಲಿ ಅಕ್ರಮ ವಿಚಾರವಾಗಿ ರಾಜ್ಯಾದ್ಯಂತ ಜನರಿಗೆ ತಿಳಿಸುವ ಕೆಲಸ ಮಾಡ್ತೇವೆ ಎಂದಿದ್ದರು. ಇದಕ್ಕಾಗಿ ಸಿದ್ದರಾಮಯ್ಯ ಹಾಗು ಡಿ.ಕೆ ಶಿವಕುಮಾರ್ ಒಗ್ಗಟ್ಟಾಗಿ ಪ್ರಚಾರಕ್ಕೆ ಒಟ್ಟಿಗೆ ತೆರಳುವಂತೆ ಸೂಚನೆ ಕೊಡಲಾಗಿತ್ತು. ಇದೀಗ ಎಲ್ಲವೂ ಅದಲು ಬದಲಾಗಿವೆ ಎನ್ನಬಹುದು.
ಕೃಷ್ಣಮಣಿ






