ಮಾಜಿ ಶಾಸಕ ಮಧು ಬಂಗಾರಪ್ಪ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರುವುದು ಬಹುತೇಕ ಖಚಿತವಾಗಿದ್ದು, ಮುಂದಿನ ತಿಂಗಳು ಶಿವಮೊಗ್ಗದಲ್ಲೇ ನಡೆಯಲಿರುವ ಸಮಾವೇಶದಲ್ಲಿ ಅಧಿಕೃತವಾಗಿ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎನ್ನಲಾಗಿದೆ.
ಗುರುವಾರ ಬೆಂಗಳೂರಿನ ಸದಾಶಿವನಗರದಲ್ಲಿ ಕಾಂಗ್ರೆಸ್ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರನ್ನು ಭೇಟಿಯಾದ ಮಧು ಬಂಗಾರಪ್ಪ, ಪಕ್ಷ ಸೇರ್ಪಡೆಯ ಸಮಾವೇಶದ ದಿನಾಂಕ ನಿಗದಿಯ ಬಗ್ಗೆ ಚರ್ಚೆ ನಡೆಸಿದ್ದಾರೆ. ಶಿವಮೊಗ್ಗ ಸೇರಿದಂತೆ ಮಲೆನಾಡು ಮತ್ತು ಮಧ್ಯಕರ್ನಾಟಕ ಭಾಗದಲ್ಲಿ ಸಾಕಷ್ಟು ಪ್ರಭಾವ ಹೊಂದಿದ್ದ ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪ ಕುಟುಂಬ, ಮಧು ಬಂಗಾರಪ್ಪ ಅವರೊಂದಿಗೆ ಮತ್ತೆ ಕಾಂಗ್ರೆಸ್ ಜೊತೆ ಸೇರುತ್ತಿದ್ದು, ಅವರೊಂದಿಗೆ ಶಿವಮೊಗ್ಗ ಜಿಲ್ಲೆಯ ಬಹುತೇಕ ಜೆಡಿಎಸ್ ಪ್ರಮುಖರು ಕೂಡ ಕಾಂಗ್ರೆಸ್ನೊಂದಿಗೆ ‘ಕೈ’ ಜೋಡಿಸಲಿದ್ದಾರೆ.
ಆ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲಿ ಅದ್ದೂರಿ ಸಮಾವೇಶವನ್ನು ಸಂಘಟಿಸಿ, ಆ ಸಮಾವೇಶದಲ್ಲಿ ಹಾಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಆರ್ ಎಂ ಮಂಜುನಾಥ ಗೌಡ, ಮಾಜಿ ಜಿಲ್ಲಾಧ್ಯಕ್ಷ ಎಂ ಶ್ರೀಕಾಂತ್ ಸೇರಿದಂತೆ ಹಲವು ಮುಖಂಡರು ಸಾಮೂಹಿಕವಾಗಿ ಕಾಂಗ್ರೆಸ್ ಸೇರಲಿದ್ದು, ಶಿವಮೊಗ್ಗ ಅಷ್ಟೇ ಅಲ್ಲದೆ, ಅಕ್ಕಪಕ್ಕದ ಜಿಲ್ಲೆಗಳಲ್ಲೂ ಈ ಸಾಮೂಹಿಕ ವಲಸೆಯ ಪರಿಣಾಮಗಳು ಜೆಡಿಎಸ್ ಮೇಲೆ ಆಗಲಿವೆ. ಆ ಹಿನ್ನೆಲೆಯಲ್ಲಿ ಕಾರ್ಯಕ್ರಮವನ್ನು ರಾಜಕೀಯ ಧ್ರುವೀಕರಣದ ಮೆಗಾ ಈವೆಂಟ್ ಆಗಿ ಬಿಂಬಿಸುವ ಕುರಿತು ಗುರುವಾರದ ಭೇಟಿಯ ವೇಳೆ ಚರ್ಚೆ ನಡೆದಿದೆ ಎಂದು ಪಕ್ಷದ ಜಿಲ್ಲಾ ಮೂಲಗಳು ಹೇಳಿವೆ.
ಹಾಗೆ ನೋಡಿದರೆ ಮಧು ಬಂಗಾರಪ್ಪ ಕಾಂಗ್ರೆಸ್ ಸೇರ್ಪಡೆ ಎಂಬುದು ಹೊಸ ಸುದ್ದಿಯೇನಲ್ಲ. ಕಳೆದ ವಿಧಾನಸಭಾ ಚುನಾವಣೆಯ ವೇಳೆಯೇ ಅವರು ಕಾಂಗ್ರೆಸ್ ಕಡೆ ವಾಲಿದ್ದರು. ಆದರೆ, ಆ ವೇಳೆಗೆ ಮಾತುಕತೆಗಳಿಗೆ ಅವಕಾಶವಾಗದ ಕಾರಣಕ್ಕೆ ಅನಿವಾರ್ಯವಾಗಿ ಜೆಡಿಎಸ್ ನಿಂದಲೇ ಕಣಕ್ಕಿಳಿದಿದ್ದರು. ಆ ಬಳಿಕ ಅವರು ಸಮ್ಮಿಶ್ರ ಸರ್ಕಾರದಲ್ಲಿ ಸ್ಥಾನಮಾನದ ನಿರೀಕ್ಷೆಯಲ್ಲಿದ್ದರು. ಆಗಲೂ ಜೆಡಿಎಸ್ ಅವರನ್ನು ನಿರ್ಲಕ್ಷಿಸಿತ್ತು. ಹಾಗಾಗಿ ಕಳೆದ ಎರಡು ವರ್ಷದಿಂದ ಅವರು ಪಕ್ಷದಿಂದ ಅಂತರ ಕಾಯ್ದುಕೊಂಡೇ ಇದ್ದರು. ಕಳೆದ ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಬಹುತೇಕ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳಿಗೇ ಬೆಂಬಲಿಸುವ ಮೂಲಕ ತಮ್ಮ ಸೊರಬ ವಿಧಾನಸಭಾ ಕ್ಷೇತ್ರದಲ್ಲಿ ಆಡಳಿತರೂಢ ಬಿಜೆಪಿಗಿಂತ ಹೆಚ್ಚಿನ ಸಂಖ್ಯೆಯ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ಗೆಲ್ಲುವಂತೆ ನೋಡಿಕೊಂಡಿದ್ದರು.
ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಕಣಕ್ಕಿಳಿದಿದ್ದ ತಮ್ಮ ಸಹೋದರ ಕುಮಾರ್ ಬಂಗಾರಪ್ಪ ವಿರುದ್ಧ ಸೋಲು ಕಂಡಿರುವ ಮಧು ಬಂಗಾರಪ್ಪ ಅವರಿಗೆ ಮತ್ತೆ ರಾಜಕೀಯ ಬಲವರ್ಧನೆಗೆ ಕ್ಷೇತ್ರದಲ್ಲಿ ನೆಲೆ ಇರುವ ಕಾಂಗ್ರೆಸ್ ಆಸರೆ ಅನಿವಾರ್ಯವಾಗಿತ್ತು. ಜೊತೆಗೆ ಜೆಡಿಎಸ್ ನಾಯಕ ಹೆಚ್ ಡಿ ಕುಮಾರಸ್ವಾಮಿಯೊಂದಿಗೆ ಕಳೆದ ಕೆಲವು ವರ್ಷಗಳಿಂದ ಹಳಸಿದ ಅವರ ಬಾಂಧವ್ಯ ಅವರಿಗೆ ಅಲ್ಲಿ ಉಸಿರುಗಟ್ಟಿಸುವ ಸ್ಥಿತಿ ನಿರ್ಮಾಣ ಮಾಡಿತ್ತು.
ಈ ನಡುವೆ ಮಧು ಪಕ್ಷ ತೊರೆಯುವುದನ್ನು ತಡೆಯುವ ಯತ್ನವಾಗಿ ಜೆಡಿಎಸ್ ನಾಯಕರಾದ ಬಸರಾಜ ಹೊರಟ್ಟಿ, ಕೋನರೆಡ್ಡಿ, ಹೆಚ್ ಡಿ ರೇವಣ್ಣ ಮುಂತಾದ ನಾಯಕರು ಹಲವು ಬಾರಿ ಯತ್ನಿಸಿದ್ದರು. ಎರಡು ದಿನಗಳ ಹಿಂದೆ ಕೂಡ ರೇವಣ್ಣ ಮಧು ಅವರ ಆಪ್ತ ಹಿರಿಯ ನಾಯಕರೊಬ್ಬರ ಮೂಲಕ ಅವರಿಗೆ ಹೇಳಿಸಿ ಪಕ್ಷ ತೊರೆಯದಂತೆ ‘ಬುದ್ದಿವಾದ’ ಹೇಳಿಸುವ ವಿಫಲ ಯತ್ನವನ್ನೂ ಮಾಡಿದ್ದರು. ಆದರೆ, ಅಂತಹ ಯಾವ ಯತ್ನಗಳಿಗೂ ಸೊಪ್ಪು ಹಾಕದೆ ಮಧು ಪಕ್ಷ ತೊರೆಯುವ ತಮ್ಮ ನಿರ್ಧಾರವನ್ನು ಬದಲಿಸದೇ ಗುರುವಾರ ಕಾಂಗ್ರೆಸ್ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ ಅಧಿಕೃತ ಪಕ್ಷ ಸೇರ್ಪಡೆಯ ಮಾತುಕತೆ ನಡೆಸಿದ್ದಾರೆ.
ಹಾಗೆ ನೋಡಿದರೆ, ಹಿಂದಿನ ವಿಧಾನಸಭಾ ಅವಧಿಯಲ್ಲಿ ಶಿವಮೊಗ್ಗ ಜಿಲ್ಲೆಯ ಒಟ್ಟು ಏಳು ವಿಧಾನಸಭಾ ಕ್ಷೇತ್ರಗಳ ಪೈಕಿ ಮೂರು ಕಡೆ ಗೆಲವು ಕಂಡಿದ್ದ ಜೆಡಿಎಸ್, ಬಿಜೆಪಿಗಿಂತ ಹೆಚ್ಚು ಸ್ಥಾನ(ಬಿಜೆಪಿ 1 ಮತ್ತು ಕೆಜೆಪಿ 1) ಗಳಿಸಿ, ಜನತಾ ಪರಿವಾರದ ವೈಭವದ ದಿನಗಳ ಯಶಸ್ಸು ದಾಖಲಿಸಿತ್ತು. ಆದರೆ, ಕಳೆದ ಚುನಾವಣೆಯಲ್ಲಿ, ಭದ್ರಾವತಿ (ದಿವಂಗತ ಎಂ ಜೆ ಅಪ್ಪಾಜಿ), ಶಿವಮೊಗ್ಗ ಗ್ರಾಮಾಂತರ(ಶಾರದಾ ಪೂರ್ಯಾನಾಯ್ಕ) ಮತ್ತು ಸೊರಬ(ಮಧು ಬಂಗಾರಪ್ಪ) ಸೇರಿ ಮೂರೂ ಕಡೆ ಸೋಲು ಕಂಡಿತ್ತು. ಆ ಮೂಲಕ ಜಿಲ್ಲೆಯಲ್ಲಿ ಜೆಡಿಎಸ್ ಶೂನ್ಯ ಸಾಧನೆಯಾಗಿತ್ತು.
ಈ ನಡುವೆ ಕಳೆದ ವರ್ಷ ಕರೋನಾಕ್ಕೆ ಜೆಡಿಎಸ್ ಹಿರಿಯ ನಾಯಕ ಎಂ ಜೆ ಅಪ್ಪಾಜಿ ಬಲಿಯಾಗಿದ್ದರು. ಅವರ ಆ ಸಾವು ಭದ್ರಾವತಿ ಕ್ಷೇತ್ರದಲ್ಲಿ ಜೆಡಿಎಸ್ ಪಾಲಿಗೆ ಶೂನ್ಯ ಸ್ಥಿತಿ ನಿರ್ಮಾಣ ಮಾಡಿದೆ. ಇನ್ನು ಮಧು ಬಂಗಾರಪ್ಪ ಕಾಂಗ್ರೆಸ್ ಕೈ ಹಿಡಿಯಲಿದ್ದಾರೆ. ಅವರೊಂದಿಗೆ ಕಳೆದ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಪ್ರಬಲ ಪೈಪೋಟಿ ನೀಡಿದ್ದ ಹಾಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಆರ್ ಎಂ ಮಂಜುನಾಥ ಗೌಡ, ಶಿವಮೊಗ್ಗ ವಿಧಾನಸಭಾ ಕ್ಷೇತ್ರದಲ್ಲಿ ಈ ಹಿಂದೆ ಎರಡು ಬಾರಿ ಸ್ಪರ್ಧಿಸಿದ್ದ ಮಾಜಿ ಜಿಲ್ಲಾಧ್ಯಕ್ಷ ಹಾಗೂ ಜಿಲ್ಲೆಯಲ್ಲಿ ಪಕ್ಷದ ಪಾಲಿನ ಆಪತ್ಭಾಂಧವರಾಗಿರುವ ಎಂ ಶ್ರೀಕಾಂತ್ ಕೂಡ ಕಾಂಗ್ರೆಸ್ ಸೇರುವುದು ಬಹುತೇಕ ಖಚಿತವಾಗಿದೆ.
ಜೊತೆಗೆ ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕಿ ಶಾರದಾ ಪೂರ್ಯಾ ನಾಯ್ಕ ಕೂಡ ಪಕ್ಷದ ಬೆಳವಣಿಗೆಗಳಿಂದ ಬೇಸತ್ತಿದ್ದಾರೆ. ಮೈತ್ರಿ, ಒಳಮೈತ್ರಿಗಳ ವಿಷಯದಲ್ಲಿ ಪಕ್ಷದ ನಾಯಕರ ಅನುಕೂಲಸಿಂಧು ನಿರ್ಧಾರಗಳು ಶಿವಮೊಗ್ಗದಂತಹ ಬಿಜೆಪಿ ಪ್ರಾಬಲ್ಯದ ಪ್ರದೇಶದಲ್ಲಿ ತಮ್ಮನ್ನು ಸಂದಿಗ್ಧತೆಗೆ ತಳ್ಳುತ್ತಿದೆ. ಗ್ರಾಮಾಂತರ ಕ್ಷೇತ್ರದಲ್ಲಿ ಭವಿಷ್ಯದಲ್ಲಿ ಚುನಾವಣೆ ಎದುರಿಸಲು ಪಕ್ಷದ ರಾಜ್ಯಮಟ್ಟದ ಇಂತಹ ಡೋಲಾಯಮಾನ ಸ್ಥಿತಿ ದೊಡ್ಡ ಸವಾಲಾಗಲಿದೆ ಎಂಬ ಯೋಚನೆಯಲ್ಲಿ ಅವರು ಕಾಂಗ್ರೆಸ್ ಕಡೆ ಮುಖ ಮಾಡಿದ್ದಾರೆ. ಆದರೆ, ಕಾಂಗ್ರೆಸ್ ನಲ್ಲಿ ಮುಂದಿನ ಚುನಾವಣೆಗೆ ತಮಗೆ ಟಿಕೆಟ್ ಖಾತರಿ ಸಿಕ್ಕರೆ ಮಾತ್ರ ಮುಂದಿನ ನಿರ್ಧಾರ ಎಂಬ ನಿಲುವಿಗೆ ಬಂದಿದ್ದಾರೆ ಎಂದು ಪಕ್ಷದ ಸ್ಥಳೀಯ ಮೂಲಗಳು ಹೇಳುತ್ತಿವೆ.
ಅಂದರೆ, ಸದ್ಯದ ಪರಿಸ್ಥಿತಿಯಲ್ಲಿ ಮಧು ಬಂಗಾರಪ್ಪ ಅವರೊಂದಿಗೆ ಬಹುತೇಕ ಜಿಲ್ಲಾ ಜೆಡಿಎಸ್ನ ಹಿರಿಯ ನಾಯಕರೆಲ್ಲಾ ಸಾಮೂಹಿಕವಾಗಿ ಕಾಂಗ್ರೆಸ್ ಗೆ ವಲಸೆ ಹೋಗುವ ಸೂಚನೆಗಳಿವೆ. ಆ ನಾಯಕರ ಜೊತೆ ದೊಡ್ಡ ಪ್ರಮಾಣದ ಹಿಂಬಾಲಕರೂ ಹೋಗುವುದರಿಂದ ಸದ್ಯಕ್ಕಂತೂ ಜಿಲ್ಲೆಯಲ್ಲಿ ಕಾಂಗ್ರೆಸ್ಸಿಗೆ ಬಲ ಬರಲಿದೆ. ಆದರೆ, ಹಾಗೆ ವಲಸೆ ಬಂದವರು ಮತ್ತು ಮೂಲ ಕಾಂಗ್ರೆಸ್ಸಿಗರ ನಡುವಿನ ಹೊಂದಾಣಿಕೆಯನ್ನು ಕಾಂಗ್ರೆಸ್ ನಾಯಕರು ಎಷ್ಟರಮಟ್ಟಿಗೆ ನಿಭಾಯಿಸುತ್ತಾರೆ ಎಂಬುದರ ಮೇಲೆ ಪಕ್ಷದ ಬಲವರ್ಧನೆಯ ಭವಿಷ್ಯ ನಿಂತಿದೆ ಎಂಬುದು ತಳ್ಳಿಹಾಕಲಾಗದು.
ಸದ್ಯಕ್ಕಂತೂ ಸೊರಬದಲ್ಲಿ ಮಧು ಅವರಿಗೆ ಯಾವುದೇ ಪ್ರತಿಸ್ಪರ್ಧೆಯಾಗಲೀ, ಪ್ರತಿರೋಧವಾಗಲೀ ಇಲ್ಲ. ಏಕೆಂದರೆ, ಕಳೆದ ಚುನಾವಣೆಯಲ್ಲಿಯೇ ಆ ಪಕ್ಷ ಅಲ್ಲಿ ಸೂಕ್ತ ಅಭ್ಯರ್ಥಿಗಳ ಹುಡುಕಾಟಕ್ಕೆ ಪರದಾಡಿ ಕೊನೇ ಕ್ಷಣದಲ್ಲಿ ತಲ್ಲೂರು ರಾಜು ಎಂಬುವರನ್ನು ಕಣಕ್ಕಿಳಿಸಿತ್ತು. ಜೊತೆಗೆ ಕ್ಷೇತ್ರದಲ್ಲಿ ಮಧುಗೆ ಇರುವ ಜಾತಿ ಬಲ ಮತ್ತು ಜನಸಂಪರ್ಕ ಮತ್ತು ಬಂಗಾರಪ್ಪ ಅವರ ಪ್ರಭಾವ ಕಾಂಗ್ರೆಸ್ ಗೆ ಖಂಡಿತವಾಗಿಯೂ ದೊಡ್ಡ ಲಾಭ ತಂದುಕೊಡುವ ಸಾಧ್ಯತೆ ಹೆಚ್ಚಿದೆ. ಇನ್ನುಳಿದಂತೆ ಮಧು ಅವರ ಕಾಂಗ್ರೆಸ್ ಸೇರ್ಪಡೆ ಸೊರಬ ಮಾತ್ರವಲ್ಲದೆ ಅವರ ಸಮುದಾಯದ ಮತಗಳು ಹೆಚ್ಚಿರುವ ಸಾಗರ, ತೀರ್ಥಹಳ್ಳಿ ಮತ್ತು ಶಿಕಾರಿಪುರದಲ್ಲಿಯೂ ಕಾಂಗ್ರೆಸ್ ಗೆ ಸಾಕಷ್ಟು ಅನುಕೂಲವಾಗಲಿದೆ ಎಂದು ಹೇಳಲಾಗುತ್ತಿದೆ.
ಆದರೆ, ಇದೇ ಮಾತನ್ನು ತೀರ್ಥಹಳ್ಳಿ ಕ್ಷೇತ್ರದ ವಿಷಯದಲ್ಲಿ ಹೇಳಲಾಗದು. ಅಲ್ಲಿ ಕಳೆದ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿದ್ದ ಮಂಜುನಾಥ್ ಗೌಡ ಮತ್ತು ಕಾಂಗ್ರೆಸ್ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ನಡುವೆ ಈ ಹಿಂದೆ ಸಾಕಷ್ಟು ರಾಜಕೀಯ ಕೆಸರೆರಚಾಟ ನಡೆದಿತ್ತು. ಚುನಾವಣೆಯಲ್ಲೂ ಪರಸ್ಪರ ಇಬ್ಬರೂ ವೈಯಕ್ತಿಕ ನಿಂದನೆಯ ಮಟ್ಟಕ್ಕೆ ಇಳಿದಿದ್ದರು. ಆ ಬಳಿಕ ಪರಿಸ್ಥಿತಿ ಸುಧಾರಿಸಿದ್ದರೂ, ಮುಂದಿನ ದಿನಗಳಲ್ಲಿ ಇಬ್ಬರ ನಡುವಿನ ಬಾಂಧವ್ಯ ಎಷ್ಟರಮಟ್ಟಿಗೆ ಹೊಂದಿಕೆಯಾಗುತ್ತೆ ಎಂಬುದನ್ನು ಕಾದುನೋಡಬೇಕಿದೆ.