ರಾಜ್ಯದಲ್ಲಿ ವಿಧಾನಪರಿಷತ್ ಚುನಾವಣೆ ಕಾವು ಜೋರಾಗುತ್ತಿದ್ದು ರಾಜಕೀಯ ಪಕ್ಷಗಳ ನಾಯಕರು ಆರೋಪ ಪ್ರತ್ಯಾರೋಪಗಳ ಸುರಿಮಳೆ ಗೈಯುತ್ತಿದ್ದಾರೆ ಹೇಗಾದರು ಮಾಡಿ ತಮ್ಮ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲೇಬೇಕು ಎಂದು ನಾಯಕರು ತಂತ್ರಗಾರಿಕೆಯಲ್ಲಿ ತೊಡಗಿದ್ದಾರೆ. ಇದೀಗ ರಾಜ್ಯ ರಾಜಕೀಯದಲ್ಲಿ ಸುದ್ದಿಯೊಂದು ಭಾರೀ ಸಂಚಲನ ಸೃಷ್ಟಿಸಿದೆ.
ಆ ಸುದ್ದಿ ಏನೆಂದರೆ ಮೇಲ್ಮನೆ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ. ಕಳೆದ ಕೆಲವು ದಿನಗಳಿಂದ ರಾಜ್ಯ ರಾಜಕೀಯದಲ್ಲಿ ಈ ಸುದ್ದಿ ಚರ್ಚೆಯಲ್ಲಿದ್ದು ಇನ್ನಷ್ಟೆ ಅಧಿಕೃತ ಮಾಹಿತಿ ಹೊರಬೀಳಬೇಕಿದೆ. ಖುದ್ದು ಈ ವಿಚಾರವನ್ನ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಬಿ.ಎಸ್‌ಯಡಿಯೂರಪ್ಪನವರು ತಮ್ಮ ಪಕ್ಷಕ್ಕೆ ಬೆಂಬಲ ನೀಡುವಂತೆ ಕೇಳಿಕೊಂಡಿದ್ದಾರೆ ಎಂದು ಸುದ್ದಿಘೋಷ್ಠಿಯಲ್ಲಿ ತಿಳಿಸಿದ್ದರು.
ಇತ್ತೀಚಿಗೆ ದೆಹಲಿಯಲ್ಲಿ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಚಳಿಗಾಲದ ಅಧಿವೇಶನದ ಸಮಯದಲ್ಲಿ ಈ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದ್ದರು. ಭೇಟಿಯ ವೇಳೆ ತೆಗೆದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು.
ಆದರೆ, ಈಗ ಉದ್ಭವವಾಗಿರುವ ಪ್ರಶ್ನೆ ಏನೆಂದರೆ ಜೆಡಿಎಸ್‌ನೊಂದಿಗೆ ಬಿಜೆಪಿ ಮೈತ್ರಿ ಮಾಡಿಕೊಳ್ಳುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂದು. ಯಾಕೆಂದರೆ, ಈ ಹಿಂದೆ ಜೆಡಿಎಸ್‌ನೊಂದಿಗೆ ಮೈತ್ರಿ ಮಾಡಿಕೊಂಡಿದ್ದಾಗ ಬಿಜೆಪಿಗೆ ಸಿಹಿಯಾದ ಅನುಭವಕ್ಕಿಂತ ಕಹಿಯಾದ ಅನುಭವವೇ ಹೆಚ್ಚು. 2005ರಲ್ಲಿ ಕಾಂಗ್ರೆಸ್ –ಜೆಡಿಎಸ್ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದಾಗ ಅಲ್ಲಿ ಜೆಡಿಎಸ್ ಕಾಂಗ್ರೆಸ್‌ನೊಂದಿಗೆ 20ತಿಂಗಳ ಆಡಳಿತವನ್ನ ನಡೆಸಿತ್ತು. ಅಂದು ಮುಖ್ಯಮಂತ್ರಿ ಸ್ಥಾನದಲ್ಲಿ ದಿ|| ಧರಮ್ ಸಿಂಗ್, ಉಪಮುಖ್ಯಮಂತ್ರಿ ಸ್ಥಾನದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಇದ್ದರು. ಏಕೆಂದರೆ ಅಂದಿನ ಕಾಲದಲ್ಲಿ ಸಿದ್ದರಾಮಯ್ಯರವರಿಗೆ ಇದ್ದಂತಹ ಅಭಿಮಾನಿ ಬಳಗ ಜೆಡಿಎಸ್ ಪಕ್ಷಕ್ಕೆ ಇರಲಿಲ್ಲ ಸಿದ್ದರಾಮಯ್ಯನವರು ಇನ್ನು ಹೆಚ್ಚು ದಿನ ಜೆಡಿಎಸ್ ಪಕ್ಷದಲ್ಲಿ ಇದ್ದರೆ ತಮ್ಮ ಮಗ ಕುಮಾರಸ್ಮಾಮಿ ರಾಜಕೀಯವಾಗಿ ಬೆಳೆಯುವುದಿಲ್ಲ ಎಂದು ಅರಿತ ದೇವೇಗೌಡರು ಸಿದ್ದರಾಮಯ್ಯರವರನ್ನು ಪಕ್ಷ ವಿರೋಧಿ ಕೆಲಸ ಮಾಡುತ್ತಿದ್ದಾರೆ, ಪಕ್ಷ ವಿರೋಧಿ ಹೇಳಿಕೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಪಕ್ಷದಿಂದ ಉಚ್ಚಾಟನೆ ಮಾಡಿದ್ದರು.
ಒಂದು ವೇಳೆ ಅಂದಿನ ದಿನ ಸಿದ್ದರಾಮಯ್ಯನವರು ದೇವೇಗೌಡರ ನಡೆಗೆ ಬೇಸತ್ತು ತಮ್ಮ ಬೆಂಬಲಿಗ ಶಾಸಕರೊಂದಿಗೆ ರಾಜೀನಾಮೆ ನೀಡಿದ್ದರೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನವಾಗುತಿತ್ತು. ನಂತರದ ದಿನಗಳಲ್ಲಿ ಕಾಂಗ್ರೆಸ್‌ನಿಂದ ಅಂತರ ಕಾಯ್ದುಕೊಂಡ ದಳಪತಿಗಳು ಬಿಜೆಪಿ ಜೊತೆಗೆ ತಮ್ಮ ಸಖ್ಯವನ್ನ ಬೆಳಸಿಕೊಳ್ಳುತ್ತಾರೆ. ಅಂದಿನ ದಿನ ಆಗಿದ್ದ ಮಾತುಕತೆಯ ಪ್ರಕಾರ 20 ತಿಂಗಳು ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿ ಅವರ ಅಧಿಕಾರವಧಿ ಮುಗಿದ ನಂತರ ಇನ್ನುಳಿದ 20 ತಿಂಗಳು ಬಿ.ಎಸ್‌ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿಲಿದ್ದಾರೆ ಎಂದು ಮಾತುಕತೆ ಮೈತ್ರಿಯ ವೇಳೆ ನಡೆದಿತ್ತು.
ಅದರಂತೆಯೇ ಅವರ ಮಾತಿಗೆ ಒಪ್ಪಿಕೊಂಡ ಬಿ.ಎಸ್.ವೈ ಮೊದಲ 20ತಿಂಗಳು ಉಪಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು. ಹೆಚ್.ಡಿ.ಕೆಯವರ 20 ತಿಂಗಳ ಅಧಿಕಾರವಧಿ ಮುಗಿದ ನಂತರ ಮೈತ್ರಿಯ ವೇಳೆ ಮಾತು ಕೊಟ್ಟಂತೆ ನಡೆದುಕೊಳ್ಳಲಿಲ್ಲ. 20 ತಿಂಗಳ ಅಧಿಕಾರವಧಿಯಲ್ಲಿ ಮುಖ್ಯಮಂತ್ರಿಯಾಗಿ ಅನುಭವಿಸಬೇಕಾದ ಎಲ್ಲಾ ಸವಲತ್ತುಗಳನ್ನು ಅನುಭವಿಸಿದ ನಂತರ ತಾವು ಅನುಭವಿಸಿದ ಸೌಕರ್ಯಗಳನ್ನು ಬೇರೆಯವರಿಗೆ ಸಿಗಬಾರದು ಎಂಬ ದುರಾಸೆಯೊಂದಿಗೆ ರಾತ್ರೋ ರಾತ್ರಿ ರಾಜೀನಾಮೆ ನೀಡಿ ಸರ್ಕಾರವನ್ನ ವಜಾ ಮಾಡುವಂತೆ ರಾಜ್ಯಪಾಲರಿಗೆ ಮನವಿ ಸಲ್ಲಿಸಿದ್ದರು. ಅದರಂತೆಯೇ, ಅಂದಿನ ರಾಜ್ಯಪಾಲರಾಗಿದ್ದ ಟಿ.ಎನ್.ಚರ್ತುವೇದಿರವರು ರಾಜ್ಯ ಸರ್ಕಾರವನ್ನ ವಜಾ ಮಾಡಿದ್ದರು. ಮೊದಲನೇ ಭಾರೀ ಬಿಜೆಪಿಗೆ ಜಿಡಿಎಸ್‌ನಿಂದ ಆದ ಅತಿ ಕಹಿ ಅನುಭವ.
ನಂತರ 2008ರ ಚುನಾವಣೆ ಸಮಯದಲ್ಲಿ ಬಿ.ಯಡಿಯೂರಪ್ಪನವರು ತಮ್ಮಗೆ ಆದ ಅನ್ಯಾಯದ ಕುರಿತು ರಾಜ್ಯಾದ್ಯಂತ ಪ್ರವಾಸ ಮಾಡಿ ಮಠ ಮಂದಿರಗಳೆನ್ನೆಲ್ಲಾ ಸುತ್ತಿ ತಾವು ಅನುಭವಿಸಿದ ನೋವನ್ನು ಮತ್ತು ಹೆಚ್.ಡಿ.ಕುಮಾರಸ್ವಾಮಿಯವರು ಎಂತಹ ವಚನ ಭ್ರಷ್ಟ ಎಂಬುದನ್ನ ರಾಜ್ಯದ ಜನತೆಗೆ ಮನವರಿಕೆ ಮಾಡುವಲ್ಲಿ ಯಶಸ್ವಿಯಾಗಿ ದಕ್ಷಿಣ ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಬಿಜೆಪಿಯನ್ನು ಅಧಿಕಾರಕ್ಕೆ ತಂದ ಕೀರ್ತಿಗೆ ಪಾತ್ರರಾದರೂ ಮತ್ತು ಕುಮಾರಸ್ವಾಮಿಯವರು ಮತ್ತು ಜೆಡಿಎಸ್ ಪಕ್ಷದವರು ಎಂತಹ ವಚನಭ್ರಷ್ಟರು ಎಂಬುದನ್ನು ನಿರೂಪಿಸುವಲ್ಲಿ ಬಿ.ಎಸ್.ವೈ ಯಶಸ್ವಿಯಾದರೂ.
ಇದಾದ ನಂತರ 2011ರ ಸಮಯದಲ್ಲಿ ಬಿಜೆಪಿಯಲ್ಲಿ ಶುರುವಾದ ಆಂತರಿಕ ತಿಕ್ಕಾಟದಿಂದಾಗಿ ಮತ್ತು ಭೂ ಹಗರಣದಿಂದಾಗಿ ಜೈಲು ಪಾಲಾದ ಬಿಎಸ್‌ವೈ ತಮ್ಮ ಸ್ಥಾನದಿಂದ ಕೆಳಗಿಳಿಯಬೇಕಾಯಿತು ನಂತರದ ದಿನಗಳಲ್ಲಿ ಬಿಜೆಪಿಯಲ್ಲಿ ಆದ ಬದಲಾವಣೆಗಳು 2013ರ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ದಾರಿ ಮಾಡಿಕೊಟ್ಟಿತ್ತು.
2018ರ ಚುನಾವಣೆ ಸಮಯದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಜೆಡಿಎಸ್ ಬಿಜೆಪಿಯ ಬಿ ಟೀಂ ಎಂದು ಆರೋಪಿಸಿದ್ದರು. ಚುನಾವಣೆ ಎಲ್ಲ ಮುಗಿದು ಪಲಿತಾಂಶ ಹೊರ ಬಂದ ಮೇಲೆ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ಸಿಗದೇ ಇದ್ದಾಗ ʻಬಿ ಟೀಂʼ ಎಂದು ಆರೋಪಿಸಿದ ಕಾಂಗ್ರೆಸ್ ನಾಯಕರೇ ಜೆಡಿಎಸ್‌ನೊಂದಿಗೆ ಮೈತ್ರಿ ಮಾಡಿಕೊಂಡು ತಮ್ಮಗೆ ಹೆಚ್ಚಿನ ಸ್ಥಾನ ದೊರೆತ್ತಿದ್ದರು ಕುಮಾರಸ್ವಾಮಿಯವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸಿ ಚೆನ್ನಾಗಿ ಮೆರೆಸಿದ್ದರು. ಆದರೆ, ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಏರ್ಪಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಡಿ.ಕೆ.ಶಿವಕುಮಾರ್‌ರವರಿಗೆ ಹೈ ಕಮಾಂಡ್‌ನಿಂದ ಶಹಬಾಷ್‌ಗಿರಿ ದೊರೆತರೆ ಇತ್ತ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೊರಗಡೆ ಮೈತ್ರಿಯ ಬಗ್ಗೆ ಸಂತಸ ವ್ಯಕ್ತಪಡಿಸಿದ್ದರೆ ಒಳಗೊಳಗೆ ಮೈತ್ರಿಯ ವಿಚಾರದಲ್ಲಿ ಹೈಕಮಾಂಡ್ ಬಗ್ಗೆ ಕುದಿಯುತ್ತಿದ್ದರು.
ನಂತರದ ದಿನಗಳಲ್ಲಿ ಮುಖ್ಯಮಂತ್ರಿಯಾಗಿದ್ದಂತವರು ರಾಜ್ಯದ ಅಭಿವೃದ್ದಿ ಕಡೆ ಗಮನ ಹರಿಸದೆ ಬರಿ ಹಾಸನ, ರಾಮನಗರ, ಮಂಡ್ಯ ಜಿಲ್ಲೆಗಳ ಅಭಿವೃದ್ದಿ ಕಡೆಗೆ ಹೆಚ್ಚಿನ ಗಮನವನ್ನ ಹರಿಸಿದ್ದರು. ಅದು ಎಷ್ಟರ ಮಟ್ಟಿಗೆ ಎಂದರೆ ತಮ್ಮದೇ ಮೈತ್ರಿ ಪಕ್ಷದ ಶಾಸಕರಿಗು ಕೂಡ ಅನುದಾನ ಬಿಡುಗಡೆ ಮಾಡದೇ ಸತ್ತಾಯಿಸಿದ್ದರು. ಶಾಸಕರು ಮುಖ್ಯಮಂತ್ರಿಯನ್ನು ಭೇಟಿ ಮಾಡಲು ತಮ್ಮ ಸರ್ಕಾರಿ ಬಂಗಲೆ ಕಡೆ ಹೋದರೆ ಆ ವ್ಯಕ್ತಿ ಸರ್ಕಾರಿ ಬಂಗಲೆಯಲ್ಲಿದ್ದುಕೊಂಡು ಜನತಾ ದರ್ಶನ ನಡೆಸಿ ಜನರ ಕಷ್ಟಗಳನ್ನ ಆಲಿಸುವ ಬದಲು ಆ ವ್ಯಕ್ತಿ ಇದ್ದಂತಹುದು 7 ಸ್ಟಾರ್ ಹೋಟೆಲ್‌ನಲ್ಲಿ. ನಂತರದ ದಿನಗಳಲ್ಲಿ ಜೆಡಿಎಸ್ ಪಕ್ಷದ ಸಭೆ ಸಮಾರಂಭಗಳಲ್ಲಿ ಕಣ್ಣೀರು ಹಾಕುತ್ತಾ ತನ್ನನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ, ತನ್ನಗೆ ಕೊಡಬಾರದ ಕಷ್ಟಗಳನೆಲ್ಲಾ ಕೊಡುತ್ತಿದ್ದಾರೆ ಎಂದು ವೇದಿಕೆ ಮೇಲೆ ಕಣ್ಣೀರು ಹಾಕಿ ಕಾಂಗ್ರೆಸ್ ಮೇಲೆ ಗೂಬೆ ಹೊರಿಸುವ ಕೆಲಸ ಮಾಡಿ ತಾವು ಜನರ ಕಣ್ಣಿಗೆ ಒಳ್ಳೆಯವರಂತೆ ಬಿಂಬಿಸಿಕೊಳ್ಳಲು ಹೊರಟರು. ಆದರೆ, ಅದು ಯಾವುದೇ ಪ್ರಯೋಜನವನ್ನು ಕಾಣಲಿಲ್ಲ. ಏಕೆಂದರೆ ಜನರಿಗೆ ತಿಳಿದಿತ್ತು 38 ಸ್ಥಾನ ಗಳಿಸಿದವರಿಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಟ್ಟು 80 ಸ್ಥಾನ ಗೆದಿದ್ದ ಕಾಂಗ್ರೆಸ್ ಪಕ್ಷದವರು ಅಧಿಕಾರ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಯಾವುದೇ ಆರೋಪಗಳನ್ನು ಮಾಡಿರುವುದಿಲ್ಲ ಎಂದು.
ನಂತರದ ದಿನಗಳಲ್ಲಿ ಸಿದ್ದರಾಮಯ್ಯನವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಕಾಂಗ್ರೆಸ್ ಶಾಸಕರು ಮತ್ತು ಜೆಡಿಎಸ್ ಶಾಸಕರು ಕುಮಾರಸ್ವಾಮಿಯವರ ಆಡಳಿತ ವೈಖರಿಗೆ ಬೇಸತ್ತು(ಅಸಲಿಗೆ ನಡೆದದ್ದು ಆಪರೇಷನ್ ಕಮಲ) ತಮ್ಮ ಶಾಸಕ ಸ್ಥಾನಗಳಿಗೆ ರಾಜೀನಾಮೆ ನೀಡಿ ಸರ್ಕಾರವನ್ನೇ ಪತನ ಮಾಡಿದ್ದರು. ಆ ಸಮಯದಲ್ಲಿ ಅಂದಿನ ಮುಖ್ಯಮಂತ್ರಿ ಶ್ರೀಯುತ ಹೆಚ್.ಡಿ.ಕುಮಾರಸ್ವಾಮಿರವರು ರಾಜ್ಯದಲ್ಲಿದ್ದು ಅಸಮಾಧಾನಿತ ಶಾಸಕರ ಮನವೊಲಿಸುವ ಬದಲು ಅಮೆರಿಕಾಕೆ ಖಾಸಗಿ ಕಾರ್ಯಕ್ರಮ ಈ ಮೊದಲೇ ನಿಗದಿಗೊಂಡಿದ್ದೆ ಎಂದು ಹೇಳಿ ಹಾರಿದ್ದರು. ಸ್ವತಃ ಮೈತ್ರಿಯ ಬಗ್ಗೆ ಮೊದಮೊದಲು ಅಸಮಾಧಾನ ಹೊಂದಿದ್ದ ಸಿದ್ದರಾಮಯ್ಯನವರೇ ಸ್ವತಃ ಕುಮಾರಸ್ವಾಮಿಯವರಿಗೆ ಕರೆ ಮಾಡಿ ವಾಪಸ್ ಬರುವಂತೆ ಹೇಳಿದ್ದರು ಸಹ ಆ ವ್ಯಕ್ತಿ ಇದಕ್ಕೆ ಒಪ್ಪದೆ ಅಲ್ಲಿಯೇ ಕುಂತುಬಿಟ್ಟರು. ನಂತರ ಬಂದದ್ದು ಸರ್ಕಾರ ಪತನವಾಗುವುದಕ್ಕೆ ಕೇವಲ ಮೂರು ದಿನಗಳು ಬಾಕಿ ಇರುವ ಸಮಯದಲ್ಲಿ. ಈ ಸಮಯದಲ್ಲಿಶಾಸಕರ ಮನವನ್ನ ಎಷ್ಟರ ಮಟ್ಟಿಗೆ ಒಲೈಸಿಕೊಳ್ಳುವುದಕ್ಕೆ ಆಗುತ್ತದೆ ಎಂದು ನೀವೇ ಹೇಳಿ. ನಂತರದ ದಿನಗಳಲ್ಲಿ ಕಾಂಗ್ರೆಸ್-ಜೆಡಿಎಸ್‌ನವರು ನಾನೊಂದು ತೀರ ನೀನೊಂದು ತೀರ ಎಂಬಂತೆ ದೂರವಾಗಿದ್ದರು. ಆ ನಂತರ, ಕುಮಾರಸ್ವಾಮಿಯವರು ಸಿಕ್ಕ ಸಿಕ್ಕ ಕಡೆ ತಮ್ಮಗೆ ಮೈತ್ರಿ ಸರ್ಕಾರದಲ್ಲಿ ಆಡಳಿತ ನಡೆಸುವುದಕ್ಕೆ ಅಷ್ಟಾಗಿ ಆಸಕ್ತಿ ಇರಲಿಲ್ಲ ಎಂದು ಹೇಳುತ್ತಿದ್ದರು. ರಾಜೀನಾಮೆ ನೀಡಿ ಬಿಜೆಪಿ ಸೇರಿದ ಶಾಸಕರು ತಮ್ಮ ಜೀವ ಉಳಿಸಿದ ಜೀವಧಾತರು ಎಂದೆಲ್ಲಾ ಹೇಳಿಕೊಂಡು ತಿರುಗಿದ್ದರು ಇದು ಕಾಂಗ್ರೆಸ್ ನಾಯಕರ ಕಣ್ಣು ಕೆಂಪಾಗುವಂತೆ ಮಾಡಿತ್ತು. ಇದಕ್ಕೆ ಉತ್ತಮ ಉದಾಹರಣೆ ಎಂದರೆ 2021ರಲ್ಲಿ ರಾಜ್ಯ ಬಿಜೆಪಿ ಸರ್ಕಾರ ಮಂಡಿಸಿದ ಎಪಿಎಂಸಿ ಕಾಯ್ದೆಗೆ ವಿಧಾನಸಭೆಯಲ್ಲಿ ಬೆಂಬಲವನ್ನ ಸೂಚಿಸಿ ಹೊರಗಡೆ ಬಂದ ಮೇಲೆ ಇದು ಸಂಪೂರ್ಣ ರೈತ ವಿರೋಧಿ ಕಾಯ್ದೆ ಎಂದು ದೂಷಿಸಿದ್ದು.
ಮುಖ್ಯಮಂತ್ರಿಯಾಗಿದ್ದ ಆ ಒಂದೂವರೆ ವರ್ಷಗಳ ಕಾಲ ಮತ್ತೊಮ್ಮೆ ರಾಜ ವೈಭೋಗವನ್ನ ಅನುಭವಿಸಿ ಕಾಂಗ್ರೆಸ್‌ನವರ ಮೇಲೆ ಗೂಬೆಯನ್ನ ಕೂರಿಸಿ ಮತ್ತೊಮ್ಮೆ ತಾವು ವಿಶ್ವಾಸ ದ್ರೋಹಿ ಎಂದು ನಿರೂಪಿಸಿದ್ದರು. ಇದೀಗ ಕುಮಾರಸ್ವಾಮಿ ಮತ್ತು ಅವರ ಪಕ್ಷದವರು ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವುದಾಗಿ ಅನಧಿಕೃತವಾಗಿ ಘೋಷಿಸಿದ್ದಾರೆ. ಇದು ಮುಂಬರುವ 2023ರ ರಾಜ್ಯ ವಿಧಾನಸಭೆ ಚುನಾವಣೆಗೂ ಈ ಮೈತ್ರಿ ಮುಂದುವರೆಯಬಹುದು ಎಂದು ಹೇಳಲಾಗುತ್ತಿದೆ.
ಆದರೆ, ಬಿಜೆಪಿಯವರು ಇಲ್ಲಿ ಒಂದನ್ನು ಅರ್ಥ ಮಾಡಿಕೊಳ್ಳಬೇಕು ಜೆಡಿಎಸ್‌ನೊಂದಿಗೆ ಮೈತ್ರಿ ಮಾಡಿಕೊಂಡರೆ ಬಿಜೆಪಿಯವರು ತಮ್ಮಗೆ ಲಾಭವಾಗುತ್ತದೆ ಎಂದು ಭಾವಿಸಿದ್ದಾರೆ. ಆದರೆ, ಇಲ್ಲಿ ಬಿಜೆಪಿಯವರು ಒಂದನ್ನು ಅರ್ಥ ಮಾಡಿಕೊಳ್ಳಬೇಕು ಜೆಡಿಎಸ್‌ನೊಂದಿಗೆ ಮೈತ್ರಿ ಮಾಡಿಕೊಂಡರೆ ತಮ್ಮಗೆ ಲಾಭಕ್ಕಿಂತ ನಷ್ಟವೇ ಹೆಚ್ಚು ಎಂದು. ಅದಕ್ಕೆ ಉತ್ತಮ ಉದಾಹರಣೆ ಎಂದರೆ 2018ರಲ್ಲಿ ಬಿಎಸ್‌ವೈ ಮುಖ್ಯಮಂತ್ರಿಯಾಗಿ ಬಹುಮತ ಸಾಬೀತು ಪಡಿಸದೆ ರಾಜೀನಾಮೆ ನೀಡುವ ಸಮಯದಲ್ಲಿ ಸದನದಲ್ಲಿ ಆಡಿದ ಮಾತುಗಳೂ ಏನೆಂದರೆ, ಮುಂದೊಂದು ದಿನ ಅಪ್ಪ-ಮಕ್ಕಳು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಇಲ್ಲದಂತೆ ಮಾಡುತ್ತಾರೆ ಎಂದು ಹೇಳಿದ್ದರು. ಅದು ಲೋಕಸಭೆ ಚುನಾವಣೆ ಸಮಯದಲ್ಲಿ ನಿಜವಾಯಿತು ಕೂಡ. ಈಗ ಅದೇ ಮಾತನ್ನ ಕಾಂಗ್ರೆಸ್ ಪಕ್ಷದ ನಾಯಕರು ಆಡಿದರೆ ಮುಂದೊಂದು ದಿನ ಬಿಜೆಪಿಗೆ ಅದೇ ಗತಿಯಾದರು ಆಗಬಹುದು.
ರಾಜಕೀಯ ಏನು ನಿಂತ ನೀರಲ್ಲ ಹಿಂದೆ ಒಂದು ಪಕ್ಷದ ಜೊತೆ ಗುರುತಿಸಿಕೊಂಡಿದವರು ಇಂದಿನ ದಿನ ಬೇರೆ ಪಕ್ಷಗಳ ಜೊತೆ ಗುರುತಿಸಿಕೊಳ್ಳುತ್ತಾರೆ. ಈ ಅಘೋಷಿತ ಮೈತ್ರಿ ಹೀಗೆಯೇ ಮುಂದುವರೆಯುತ್ತದೆಯೋ ಅಥವಾ ಮತ್ತೊಮ್ಮೆ ಕುಮಾರಸ್ವಾಮಿಯವರು ತಾವು ವಚನ ಭ್ರಷ್ಟ ಎಂದು ನಿರೂಪಿಸುತ್ತಾರೋ ಎಂಬುದನ್ನು ಮುಂದಿನ ದಿನಗಳಲ್ಲಿ ರಾಜ್ಯದ ಮತ್ತು ದೇಶದ ಜನತೆ ಕಾದು ನೋಡಬೇಕಿದೆ.