ಫೋಟೊ 1: ತೆರೆದಿದೆ ಮನೆ ಓ ಬಾ ಅತಿಥಿ….
ಫೋಟೊ 2: ಕೈ ಹಿಡಿದು ನಡೆಸೆನ್ನನು…
ಫೋಟೊ 3: ಕೂಡಿ ಬಾಳೋಣ, ನಾವು ಎಂದೆಂದೂ ಸೇರಿ ನಲಿಯೋಣ…..
ಇಲ್ಲಿರುವ ಮೂರು ಫೋಟೊಗಳು ʼಅವಕಾಶವಾದಿತನʼ ಎಂಬ ವಿಭಾಗದಲ್ಲಿ ಈ ವರ್ಷದ ಪ್ರಥಮ ಬಹುಮಾನ ಪಡೆಯಲು ಯೋಗ್ಯವಾಗಿವೆ. ದೆಹಲಿಯ ಈ ಅಪೂರ್ವ ಮಿಲನದ ಪೀಠಿಕೆ ಕರ್ನಾಟಕದಲ್ಲಿ ನಾಟಕೀಯವಾಗಿಯೇ ಸಿದ್ಧವಾಗಿತ್ತು. ಅದೀಗ ದೆಹಲಿಯಲ್ಲಿ ಮೂರ್ತ ರೂಪ ಪಡೆದಿದೆ. ಇದು ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಮುಂದಿನ ದಿನಗಳಲ್ಲಿ ಮೈತ್ರಿ ಮಾಡಿಕೊಳ್ಳುವುದರ ಸಂಕೇತ. ʼಇದೊಂದು ಸೌಹಾರ್ದದ ಭೇಟಿʼ ಎಂಬ ತಥಾಕಥಿತ ಹೇಳಿಕೆ ಇದ್ದೇ ಇರುತ್ತದೆ. ಹಾಲಿ ಪ್ರದಾನಿಯ ಮುಖದಲ್ಲಿ ಅದೇನು ವಿಧೇಯತೆ, ಮಾಜಿ ಪ್ರಧಾನಿಗಳ ಮುಖದಲ್ಲಿ ಅರಳಿದೆ ಮಂದಸ್ಮಿತೆ.
ಸಂಸತ್ ಅಧಿವೇಶನದ ಎರಡನೇ ದಿನದಂದು ಸಂಸತ್ನಲ್ಲಿ ಪ್ರಧಾನಿ ಮೋದಿ ಮಾಜಿ ಪ್ರಧಾನಿ ದೇವೆಗೌಡರನ್ನು ಭೇಟಿಯಾಗಿದ್ದು ಸೌಹಾರ್ದ ಭೇಟಿಯೇ ಅಂದುಕೊಳ್ಳೋಣ. ಆದರೆ, ಕರ್ನಾಟಕದ ರಾಜಕೀಯ ಬೆಳವಣಿಗೆಯನ್ನು ಗಮನಿಸಿದರೆ, 2023ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಯನ್ನು ತಳ್ಳಿ ಹಾಕುವಂತಿಲ್ಲ ಎರಡೂ ಪಕ್ಷಗಳಿಗೂ ಅದು ಅನಿವಾರ್ಯವಾಗಲಿದೆ.
ಸಮ್ಮಿಶ್ರ ಸರ್ಕಾರ ಉರುಳಿದ ನಂತರ ಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರವನ್ನು ಟ್ವೀಟ್ಗಳಲ್ಲಿ ಎಷ್ಟೇ ಟೀಕಿಸಿದರೂ, ಕುಮಾರಸ್ವಾಮಿ ಈ ಸರ್ಕಾರಕ್ಕೆ ಹತ್ತಿರವಾಗಿದ್ದಾರೆ. ವಿವಾದಾತ್ಮಕ ಎಪಿಎಂಸಿ ಮಸೂದೆ ಅಂಗೀಕಾರವಾಗಲು ಮಣ್ಣಿನ ಮಕ್ಕಳ ಪಕ್ಷ ನೆರವಾಗಿತ್ತು. ಕುಮಾರಸ್ವಾಮಿ ಬಹಿರಂಗವಾಗಿಯೇ ಎಪಿಎಂಸಿ ಕಾಯ್ದೆ ರೈತರ ಪರವಿದೆ ಎಂದೆಲ್ಲ ಹೊಗಳಿದ್ದರು.
ಇತ್ತೀಚಿನ ಉಪ ಚುನಾವಣೆಗಳ ವಿಷಯಕ್ಕೆ ಬಂದರೆ ಜೆಡಿಎಸ್ ಇತ್ತರ ಕರ್ನಾಟಕದಲ್ಲಿ ಸಂಘಟನೆಯ ಬಲ ಇಲ್ಲದಿದ್ದರೂ ಮುಸ್ಲಿಂ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಕಾಂಗ್ರೆಸ್ಗೆ ಹಿನ್ನಡೆ ಮಾಡುವ, ಆ ಮೂಲಕ ಬಿಜೆಪಿ ಗೆಲುವಿಗೆ ನೆರವಾಗುವ ಉದ್ದೇಶ ಹೊಂದಿತ್ತು. ಬಸವಕಲ್ಯಾಣದಲ್ಲಿ ಒಂದು ಮಟ್ಟಿಗೆ ಅದು ಯಶಸ್ವಿಯಾಗಿತು. ಆದರೆ, ಹಾನಗಲ್ ಮತ್ತು ಸಿಂದಗಿಯಲ್ಲಿ ಅದರ ಮುಸ್ಲಿಂ ಅಭ್ಯರ್ಥಿಗಳು ಠೇವಣಿ ಕಳೆದುಕೊಂಡು ಹೀನಾಯ ಸೋಲು ಕಂಡರು. ಸಿಂದಗಿಯಲ್ಲಿ ಮಾಜಿ ಪ್ರಧಾನಿ ದೇವೆಗೌಡರು 15 ದಿನ ಠಿಕಾಣಿ ಹೂಡಿದರೂ ಅವರ ಅಭ್ಯರ್ಥಿಗೆ ಸಿಕ್ಕಿದ್ದು ಕೇವಲ 4 ಸಾವಿರ ಮತಗಳು ಮಾತ್ರ!
ಮಸ್ಕಿ ಮೀಸಲು ಕ್ಷೇತ್ರವಾಗಿದ್ದರಿಂದ ಅಲ್ಲಿ ಮುಸ್ಲಿಂ ಅಭ್ಯರ್ಥಿ ಹಾಕಲಿಲ್ಲವಷ್ಟೇ. ಈಗ ಎಂಎಲ್ಸಿ ಚುನಾವಣೆಯಲ್ಲಿ ಜೆಡಿಎಸ್ಗೆ ಮುಸ್ಲಿಂ ಅಭ್ಯರ್ಥಿಗಳು ಸಿಗಲೇ ಇಲ್ಲ!
ವಚನಭ್ರಷ್ಟ, ವಿಶ್ವಾಸದ್ರೋಹಿ!
2007ರ ವಿಧಾನಸಭಾ ಚುನಾವಣೆ ಫಲಿತಾಂಶದಲ್ಲಿ ಯಾವ ಪಕ್ಷಕ್ಕೂ ಬಹುಮತ ಬರಲಿಲ್ಲ. ಅತಿ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದ ಬಿಜೆಪಿ ಇತರ ಪಕ್ಷಗಳ ಶಾಸಕರ ಖರೀದಿಗೆ ಯತ್ನಿಸಿ ವಿಫಲವಾಗಿತು. ಆದರೂ ಭಂಡ ಧೈರ್ಯದಿಂದ ಯಡಿಯೂರಪ್ಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ವಿಶ್ವಾಸಮತದ ದಿನ ಆರಂಭದಲ್ಲಿಯೇ ರಾಜಿನಾಮೆ ನೀಡಿದ ಯಡಿಯೂರಪ್ಪ ಅಂದು ಭಾವುಕರಾಗಿ ಮಾತನಾಡುತ್ತ ಜೆಡಿಎಸ್ ಮಾತ್ತು ಕುಮಾರಸ್ವಾಮಿಯನ್ನು ದೂಷಿಸಿದರು. ನೇರವಾಗಿ ಡಿ.ಕೆ. ಶಿವಕುಮಾರ್ ಅವರನ್ನುಸಂಭೋಧಿಸಿ, ʼಶಿವಕುಮಾರ್, ಈ ಜೆಡಿಎಸ್ ನಂಬಬೇಡಿ. ಅವರು ನಿಮ್ಮ ಪಕ್ಷವನ್ನೇ ನಾಶ ಮಾಡುತ್ತಾರೆʼ ಎಂದಿದ್ದರು.
ಅದಾದ ನಂತರ ಕೆಂಗೇರಿ ಮೋರಿಯಲ್ಲಿ ಸಾಕಷ್ಟು ನೀರು ಹರಿದು ಹೋಗಿದೆ. ಆಪರೇಷನ್ ಕಮಲ ಎಂಬ ಖರೀದಿ ವ್ಯವಹಾರದ ಮೂಲಕ ಕಾಂಗ್ರೆಸ್, ಜೆಡಿಎಸ್ ಶಾಸಕರನ್ನು ಸೆಳೆದುಕೊಂಡ ಬಿಜೆಪಿಯು ಸರ್ಕಾರ ರಚಿಸಿತು.
20-20 ಸರ್ಕಾರದಲ್ಲಿ ಮೊದಲ 20 ತಿಂಗಳು ಸಿಎಂ ಆಗಿದ್ದ ಕುಮಾರಸ್ವಾಮಿ ನಂತರದಲ್ಲಿ ಯಡಿಯೂರಪ್ಪನವರಿಗೆ ಅಧಿಕಾರ ಬಿಡದೇ ಹೋದಾಗ, ಸರ್ಕಾರ ಪತನವಾಗಿತು. ಆದರೆ ರಾಜ್ಯಾದ್ಯಂತ ಸುತ್ತಿದ ಯಡಿಯೂರಪ್ಪ ಕುಮಾರಸ್ವಾಮಿಯವರನ್ನು ವಚನ ಭ್ರಷ್ಟ, ವಿಶ್ವಾಸದ್ರೋಹಿ ಎಂದೆಲ್ಲ ಕರೆಯುತ್ತ ಅನುಕಂಪವನ್ನು ಗಿಟ್ಟಿಸಿ ನಂತರದ ಚುನಾವಣೆಯಲ್ಲಿ ಅಧಿಕಾರಕ್ಕೆ ಬಂದರು.
2019ರಲ್ಲಿ ತಮ್ಮ ಸರ್ಕಾರವನ್ನು ಬಿಜೆಪಿ ಕೆಡವಿದಾಗ ಕುಮಾರಸ್ವಾಮಿ ಕೂಡ ಸದನದಲ್ಲಿಯೇ ಯಡಿಯೂರಪ್ಪನವರ ಅನೈತಿಕ ಮಾರ್ಗದ ಕುರಿತು ಟೀಕೆ ಮಾಡಿದ್ದರು.
ಹೀಗೆ ಪರಸ್ಪರ ಬೈದಾಡಿಕೊಂಡವರು ಮತ್ತೆ ಒಂದಾದರೂ ಆಶ್ಚರ್ಯವಿಲ್ಲ. ಸ್ವತಃ ಮೋದಿಯವರು ಜೆಡಿಎಸ್ ಪಕ್ಷವನ್ನು ಚುನಾವಣಾ ಪ್ರಚಾರಗಳಲ್ಲಿ ಹೀನಾಯವಾಗಿ ಟೀಕಿಸಿದ್ದರು. ರಾಜಕೀಯದಲ್ಲಿ ಯಾರೂ ಶಾಶ್ವತ ಶತ್ರುಗಳಲ್ಲ, ಶಾಶ್ವತ ಮಿತ್ರರಲ್ಲ ಎಂಬ ಹಳಸಲು ಮಾತನ್ನು ತೇಲಿ ಬಿಟ್ಟು ಇಂತಹ ಮೈತ್ರಿಗಳಿಗೆ ಮಾನ್ಯತೆ ಕೊಡುತ್ತಿದ್ದೇವೆ. ಮಂಗಳವಾರದ ಅಪೂರ್ವ ಸಂಗಮದ ಚಿತ್ರಗಳು ಮಾತ್ರ ಜನರಲ್ಲಿ ಕುತೂಹಲ ಮೂಡಿಸಿವೆ.