ʼಪ್ರತಿಧ್ವನಿʼ ಈ ಮೊದಲು ಬರೆದಂತೆ ಹಾಲಿ ಎಂಎಲ್ಸಿ ಬಸವರಾಜ ಪಾಟೀಲ್ ಇಟಗಿಯವರ ನಿರಾಸಕ್ತಿಯ ಕಾರಣಕ್ಕೆ ಕಾಂಗ್ರೆಸ್, ಕುಷ್ಟಗಿ ಶಾಸಕ ಅಮರೇಗೌಡ ಬಯ್ಯಾಪುರ ಅವರ ಅಣ್ಣನ ಮಗ ಶರಣೇಗೌಡ ಪಾಟೀಲ್ ಅವರಿಗೆ ಟಿಕೆಟ್ ನೀಡಿದ್ದು, ಅವರು ಭರದಿಂದ ಪ್ರಚಾರ ನಡೆಸಿದ್ದಾರೆ. ಬಿಜೆಪಿ ಅಭ್ಯರ್ಥಿಗಾಗಿ ಪರದಾಡುತ್ತಿದೆ ಎಂದೂ ʼಪ್ರತಿಧ್ವನಿʼ ಬರೆದಿತ್ತು.
ಈಗ ಬಿಜೆಪಿ ದೂರದ ಬೆಳಗಾವಿಯಿಂದ ಅಭ್ಯರ್ಥಿಯನ್ನು ಆಮದು ಮಾಡಿಕೊಂಡಿದೆ. ಶುಗರ್ ಫ್ಯಾಕ್ಟರಿ ಮಾಲಿಕ ವಿಶ್ವನಾಥ್ ಬನಹಟ್ಟಿ ಈಗ ಬಿಜೆಪಿ ಅಭ್ಯರ್ಥಿ. ಕಾಂಗ್ರೆಸ್ ಅಭ್ಯರ್ಥಿ ರೆಡ್ಡಿ ಲಿಂಗಾಯತರಾದರೆ, ಬಿಜೆಪಿ ಅಭ್ಯರ್ಥಿ ಕುರುಬ ಸಮುದಾಯದವರು. ಜಾತಿಯೇನೂ ಈ ಚುನಾವಣೆಯಲ್ಲಿ ಮಹತ್ವದ ಪಾತ್ರ ವಹಿಸಲಾರದು.
ಹಾಗಂತ ಕೇವಲ ಹಣದಿಂದಲೇ ಚುನಾವಣೆಯನ್ನು ಗೆಲ್ಲಲಾಗದು. ಚುನಾವಣಾ ತಂತ್ರಗಳು, ಒಳ ಒಪ್ಪಂದಗಳು ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಬೆಂಬಲಿಗ ಸದಸ್ಯರು ಎಷ್ಟಿದ್ದಾರೆ ಎಂಬುದು ಇಲ್ಲಿ ಮುಖ್ಯ.
ಇಲ್ಲಿ ಬಿಜೆಪಿ ಸೋಲಲ್ಲೇಬೇಕು ಎಂದು ಪಣ ತೊಟ್ಟಂತಿದೆ. ಇನ್ನೊಂದು ಕಡೆ ಎಲ್ಲ ಪಕ್ಷದವರೊಂದಿಗೆ ಆತ್ಮೀಯ ಸಂಬಂಧ ಹೊಂದಿರುವ ಮತ್ತು ರಾಯಚೂರು-ಕೊಪ್ಪಳ ಎರಡೂ ಜಿಲ್ಲೆಗಳಲ್ಲೂ ಸಾಕಷ್ಟು ಪ್ರಭಾವ ಹೊಂದಿರುವ ಕಾಂಗ್ರೆಸ್ನ ಶಾಸಕ ಅಮರೇಗೌಡ ಬಯ್ಯಾಪುರ ಅವರು ತಮ್ಮ ಅಣ್ಣನ ಮಗ ಶರಣೇಗೌಡರನ್ನು ಮೇಲ್ಮನೆಗೆ ಕರೆದೊಯ್ಯುವುದು ನಿಶ್ಚಿತ ಎಂಬ ವಾತಾವರಣವಿದೆ.
ಕ್ಷೇತ್ರಕ್ಕೆ ಅಪರಿಚಿತರಾದ ವಿಶ್ವನಾಥ್ ಬನಹಟ್ಟಿಯವರಿಗೆ ಬಿಜೆಪಿ ಟಿಕೆಟ್ ಸಿಗಲು ಯಾರು ಕಾರಣ? ವಿಶ್ವನಾಥ್ ಹೆಸರು ಸೂಚಿಸಿದ್ದು ದೇವದುರ್ಗದ ಶಾಸಕ ಬಿಜೆಪಿಯ ಶಿವನಗೌಡ ನಾಯ್ಕ. ಕಳೆದ ಸಲದ ಎಂಎಲ್ಸಿ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಶಿವನಗೌಡರೂ ಕಾರಣ ಎನ್ನಲಾಗಿದೆ. ಬಿಜೆಪಿ ಅಭ್ಯರ್ಥಿಯಾಗಿದ್ದ ಉದ್ಯಮಿ ಟಿ.ವಿ ಚಂದ್ರಶೇಖರ್ ನೀಡಿದ ದುಡ್ಡನ್ನು ಗ್ರಾಪಂ ಸದಸ್ಯರಿಗೆ ಶಿವನಗೌಡರು ಹಂಚಲಿಲ್ಲ ಎಂಬ ಆರೋಪಗಳಿವೆ. ಆಗ ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದ ಬಸವರಾಜ ಪಾಟೀಲ ಇಟಗಿ ಕೂಡ ದೇವದುರ್ಗದವರೇ ಆಗಿದ್ದು, ಅವರು ಸೋತರೆ ಮುಂದೆ ಎಂಎಲ್ಎ ಚುನಾವಣೆಯಲ್ಲಿ ತನಗೇ ತೊಂದರೆ ಎಂದು ಶಿವನಗೌಡ ಆ ರೀತಿ ಆಟ ಆಡಿದ್ದರು.
ಕಾಂಗ್ರೆಸ್ಗೆ ಬಿಜೆಪಿ, ಜೆಡಿಎಸ್ ನಾಯಕರ ಬೆಂಬಲ!
ಮೊದಲೇ ಹೇಳಿದಂತೆ ಅಮರೇಗೌಡ ಬಯ್ಯಾಪುರ ಅವರಿಗೆ ಎಲ್ಲ ಪಕ್ಷಗಳಲ್ಲೂ ಮಿತ್ರರಿದ್ದಾರೆ. ಹೀಗಾಗಿ ಬಿಜೆಪಿ ಮತ್ತು ಜೆಡಿಎಸ್ ನಾಯಕರೂ ತೆರೆಮರೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ನೆರವಾಗುತ್ತಿದ್ದಾರೆ. ಯಲಬುರ್ಗದ ಬಿಜೆಪಿ ಶಾಸಕ ಮತ್ತು ಸಚಿವ ಹಾಲಪ್ಪ ಆಚಾರ್ ಕೂಡ ರೆಡ್ಡಿ ಲಿಂಗಾಯತ. ಅವರೂ ಕೂಡ ಬಿಜೆಪಿ ಗೆಲುವಿಗೆ ಶ್ರಮ ಹಾಕುತ್ತಿಲ್ಲ. ಕೊಪ್ಪಳ ಸಂಸದ ಬಿಜೆಪಿಯ ಕರಡಿ ಸಂಗಣ್ಣ ಕೂಡ ಅಮರೇಗೌಡರ ಸ್ನೇಹದ ಕಾರಣಕ್ಕೆ ಬಿಜೆಪಿ ಪ್ರಚಾರದಲ್ಲಿ ಅಷ್ಟಾಗಿ ಆಸಕ್ತಿ ತೋರಿಸಿಲ್ಲ.
ಸಿಂಧನೂರಿನ ಜೆಡಿಎಸ್ ಶಾಸಕ ವೆಂಕಟರಾವ್ ನಾಡಗೌಡ ಕೂಡ ರೆಡ್ಡಿ ಲಿಂಗಾಯತರೇ. ಅವರ ಪಕ್ಷದ ಅಭ್ಯರ್ಥಿ ಇಲ್ಲದ್ದರಿಂದ ಅವರೂ ಪರೋಕ್ಷವಾಗಿ ಕಾಂಗ್ರೆಸ್ಗೆ ನೆರವಾಗುತ್ತಿದ್ದಾರೆ. ಮಾನ್ವಿಯ ಜೆಡಿಎಸ್ ಶಾಸಕ ರಾಜಾ ವೆಂಕಟಪ್ಪ ನಾಯ್ಕ ಕೂಡ ಒಳಗೊಳಗೇ ಕಾಂಗ್ರೆಸ್ಗೆ ನೆರವಾಗುತ್ತಿದ್ದಾರೆ.
ಇದೆಲ್ಲದರ ಜೊತೆಗೆ ಬಯ್ಯಾಪುರ ಕುಟುಂಬ ಧಾರಾಳವಾಗಿ ಖರ್ಚು ಮಾಡುತ್ತಿದೆ. ಬಿಜೆಪಿ ಅಭ್ಯರ್ಥಿ ವಿಶ್ವನಾಥ್ ಕೂಡ ಹಣದ ಚೀಲ ಕಟ್ಟಿಕೊಂಡೇ ಬಂದಿದ್ದಾರೆ. ಆದರೆ ಅವರು ಹೊರಗಿನವರು ಎಂಬ ಭಾವನೆಯಿದೆ ಮತ್ತು ಬಿಜೆಪಿಯ ನಾಯಕರೇ ಅವರ ಬೆಂಬಲಕ್ಕೆ ಇಲ್ಲ. ಹೀಗಾಗಿ ಇಲ್ಲಿ ಕಾಂಗ್ರೆಸ್ ಗೆದ್ದಂತೆಯೇ!