ಬೆಂಗಳೂರು : ಮೇ.26 : ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಚಿವ ಸಂಪುಟ ರಚನೆಗೆ ಕಾಂಗ್ರೆಸ್ ಹೈಕಮಾಂಡ್ ದೆಹಲಿಯ ವಾರ್ ರೂಮ್ನಲ್ಲಿ ಭಾರೀ ಕಸರತ್ತು ನಡೆದಿತ್ತು. ಸಿದ್ದು ಮತ್ತು ಡಿಕೆಶಿ (DK Shivakumar) ನಡುವೆ ಒಮ್ಮತದ ನಿರ್ಧಾರ ಮೂಡದಿದ್ದರೂ ಸಂಪುಟ ವಿಸ್ತರಣೆ ವಿಚಾರ ಕಾಂಗ್ರೆಸ್ ಹೈಕಮಾಂಡ್ಗೆ ಭಾರೀ ತಲೆನೋವಾಗಿತ್ತು. ೨ನೇ ಸಂಪುಟ ವಿಸ್ತರಣೆಗಾಗಿ ಸದ್ಯಕ್ಕೆ ಸಚಿವರ ಪಟ್ಟಿಯೊಂದು (Cabinet Expansion) ಅಂತಿಮಗೊಂಡಿದೆ.
ನೂತನ ಸಚಿವರ ಪ್ರಮಾಣವಚನ ಮೇ 28ರಂದು ಭಾನುವಾರ ನೆರವೇರಲಿದೆ ಎಂದು ತಿಳಿದುಬಂದಿದೆ. ಈ ನಡುವೆ ನೂತನ ಸಚಿವರ ಪಟ್ಟಿ ಬಿಡುಗಡೆಯಾಗಿದ್ದು. ಕೆಲವರಿಗೆ ಸಚಿವ ಸ್ಥಾನ ಕೈತಪ್ಪಿದ್ದು, ಇನ್ನು ಕೆಲವರಿಗೆ ಸಚಿವ ಸ್ಥಾನ ಸಿಕ್ಕಿದೆ. ಗಮನಾರ್ಹವೆಂದರೆ ಅದರಲ್ಲಿ ಅಂತಿಮ ಕ್ಷಣದಲ್ಲಿ ಕಾಂಗ್ರೆಸ್ ಸೇರಿ, ಚುನಾವಣೆಯಲ್ಲಿ ಸೋತಿರುವ ಜಗದೀಶ್ ಶೆಟ್ಟರ್ ಅವರ ಹೆಸರು ಕಾಣಿಸಿಕೊಂಡಿಲ್ಲ. ಆದರೆ ಜಗದೀಶ್ ಶೆಟ್ಟರ್ ಅವರು ಹೊಸ ಸಂಪುಟ ಸೇರಲು ಶತಾಯಗತಾಯ ಪ್ರಯುತ್ನಿಸಿದ್ದರು. ಮಾಜಿ ಸಿಎಂ ಜಗದೀಶ ಶೆಟ್ಟರ್ ಗೆ ಸಚಿವ ಸ್ಥಾನಮಾನ ಬಹುತೇಕ ಫಿಕ್ಸ್ ಅಂದುಕೊಂಡಿದ್ದರು. ಶೆಟ್ಟರ್ ಗೆ ಸ್ಥಾನ ಮಾನ ನೀಡುವ ಜೊತೆಗೆ ಕೈ ಪಡೆ ಒಂದು ಪ್ರಮುಖ ಸಂದೇಶ ನೀಡೋಕೆ ಮುಂದಾಗಿತ್ತು ಎನ್ನಲಾಗಿತ್ತು. ಅದಕ್ಕಾಗಿ 12 ದಿನಗಳಿಂದ ಶೆಟ್ಟರ್ ಬೆಂಗಳೂರಲ್ಲಿ ಬೀಡು ಬಿಟ್ಟಿದ್ದರು. ಆದರೆ ಶೆಟ್ಟರ್ ಸಂಪುಟ ಪ್ರವೇಶಕ್ಕೆ ಸದ್ಯಕ್ಕೆ ಬ್ರೇಕ್ ಬಿದ್ದಿದೆ.