ಹಾನಗಲ್ ಮತ್ತು ಸಿಂಧಗಿ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ಘೋಷಣೆಯಾಗುತ್ತಲೇ ರಾಜ್ಯದಲ್ಲಿ ಐಟಿ ದಾಳಿಗಳು ಚುರುಕಾಗಿವೆ. ಒಂದೇ ವ್ಯತ್ಯಾಸವೆಂದರೆ; ಈ ಬಾರಿ ಪ್ರತಿಪಕ್ಷ ನಾಯಕರು, ಅಭ್ಯರ್ಥಿಗಳು ಮತ್ತು ಅವರ ಆಪ್ತರ ಬದಲಿಗೆ, ಆಡಳಿತ ಪಕ್ಷದ ಪ್ರಭಾವಿ ನಾಯಕರ ಆಪ್ತರ ಮೇಲೆಯೇ ಭರ್ಜರಿ ದಾಳಿ ನಡೆದಿದೆ ಮತ್ತು ಭಾರೀ ಪ್ರಮಾಣದ ದಾಖಲೆಪತ್ರಗಳನ್ನು ವಶಕ್ಕೆ ಪಡೆಯಲಾಗಿದೆ!
ಈ ಕಾರಣಕ್ಕಾಗಿಯೇ ಅದೊಂದು ಇತ್ತೀಚಿನ ವರ್ಷಗಳಲ್ಲಿ ಸಾಮಾನ್ಯವಾಗಿರುವ ಮಾಮೂಲಿ ‘ಐಟಿ ಮೋರ್ಚಾ’ ದಾಳಿಯಂತಾಗದೆ, ರಾಜಕೀಯ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿದೆ. ಅದರಲ್ಲೂ ಪ್ರಮುಖವಾಗಿ ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತದ ಕುರಿತು ಸ್ವಪಕ್ಷೀಯರ ಬಂಡಾಯದ ಹಿನ್ನೆಲೆಯಲ್ಲಿ ಮೊನ್ನೆ ಮೊನ್ನೆ ತಾನೆ ಮುಖ್ಯಮಂತ್ರಿ ಸ್ಥಾನದಿಂದ ಪದಚ್ಯುತಗೊಂಡಿರುವ ಬಿ ಎಸ್ ಯಡಿಯೂರಪ್ಪ ಅವರ ದೀರ್ಘಾವಧಿಯ ಆಪ್ತ ಸಹಾಯಕ ಹಾಗೂ ಹಲವು ಮಂದಿ ಅತ್ಯಾಪ್ತ ಗುತ್ತಿಗೆದಾರರ ಮೇಲೆಯೇ ಈ ದಾಳಿ ನಡೆದಿದ್ದು, ಎರಡು ದಿನಗಳ ದಾಳಿಯ ಬಳಿಕವೂ ಮುಂದಿನ ದಿನಗಳಲ್ಲಿ ಈ ದಾಳಿ ಇನ್ನಷ್ಟು ವಿಸ್ತರಿಸಲಿದೆ.
ಯಡಿಯೂರಪ್ಪ ಅವರ ಎರಡು ವರ್ಷದ ಆಡಳಿತದಲ್ಲಿ ಬೃಹತ್ ಮತ್ತು ಸಣ್ಣ ನೀರಾವರಿ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಡಿ ನಿರ್ವಹಿಸಿರುವ ಕಾಮಗಾರಿಗಳ ಗುತ್ತಿಗೆದಾರರು ಮತ್ತು ಅಂತಹ ಗುತ್ತಿಗೆದಾರರ ಮಧ್ಯವರ್ತಿಯಾಗಿದ್ದ ಬಿಎಸ್ ವೈ ಆಪ್ತ ಸಹಾಯಕ ಉಮೇಶ್ ಅವರನ್ನೇ ಗುರಿಯಾಗಿಸಿಕೊಂಡು ಈ ದಾಳಿಗಳು ಮುಂದುವರಿದಿವೆ. ಹಾಗಾಗಿ, ಇದೊಂದು ಐಟಿ ದಾಳಿ ಮಾತ್ರವೇ ಆಗಿರದೆ, ರಾಜಕೀಯ ಅಸ್ತ್ರವೆಂದೇ ವಿಶ್ಲೇಷಿಸಲಾಗುತ್ತಿದೆ.
ಅದರಲ್ಲೂ ಹಾನಗಲ್ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆಯ ವಿಷಯದಲ್ಲಿ ಬಿ ಎಸ್ ಯಡಿಯೂರಪ್ಪ ಮತ್ತು ಪಕ್ಷದ ನಾಯಕರ ನಡುವೆ ಉಂಟಾದ ವೈಮನಸ್ಯ ಮತ್ತು ಅದೇ ಹೊತ್ತಿಗೆ ತಂದೆ ಬಿಎಸ್ ವೈ ಅಧಿಕಾರದಿಂದ ಇಳಿದರೂ ಸರ್ಕಾರದ ಆಯಕಟ್ಟಿನ ಕಚೇರಿ-ಇಲಾಖೆಗಳಲ್ಲಿ ಮುಂದುವರಿದಿರುವ ಪುತ್ರ ವಿಜಯೇಂದ್ರ ಪಾರುಪಥ್ಯದ ವಿಷಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ವಿಜಯೇಂದ್ರ ನಡುವೆ ನಡೆದ ಮಾತಿನ ಚಕಮಕಿಯ ಬೆನ್ನಲ್ಲೇ ಈ ದಾಳಿ ನಡೆದಿರುವುದು ಗಮನಾರ್ಹ.
ಯಡಿಯೂರಪ್ಪ ಅಧಿಕಾರವಧಿಯಲ್ಲಿ ವಿಜಯೇಂದ್ರ ಬಲಗೈಬಂಟನಾಗಿ ನೀರಾವರಿ ಇಲಾಖೆ ಸೇರಿದಂತೆ ರಾಜ್ಯ ಸರ್ಕಾರದ ಪ್ರಮುಖ ಟೆಂಡರ್, ಉನ್ನತಾಧಿಕಾರಿಗಳ ವರ್ಗಾವಣೆಯಂತಹ ‘ಭರ್ಜರಿ ವ್ಯವಹಾರ’ಗಳನ್ನು ನಿರ್ವಹಿಸುತ್ತಿದ್ದ, ಸಿಎಂ ಮತ್ತು ವಿಜಯೇಂದ್ರ ನಡುವಿನ ಕೊಂಡಿಯಾಗಿ ಮಂಜೂರಾತಿಗಳ ಮಾಂತ್ರಿಕನಾಗಿ ಕೆಲಸ ಮಾಡುತ್ತಿದ್ದ ಉಮೇಶ್ ಮತ್ತು ಆತನಿಂದ ಅನುಕೂಲ ಪಡೆದ ಬಹುತೇಕ ಆಂಧ್ರ ಮೂಲದ ಗುತ್ತಿಗೆದಾರರನ್ನೇ ಈ ದಾಳಿಯಲ್ಲಿ ಟಾರ್ಗೆಟ್ ಮಾಡಿರುವುದು ಕೂಡ ಸ್ಪಷ್ಟವಾಗಿದೆ.

ಹಾನಗಲ್ ಚುನಾವಣೆಗೆ ತಾವೇ ಕಣಕ್ಕಿಳಿಯಬೇಕು. ಆ ಮೂಲಕ ಚುನಾವಣಾ ರಾಜಕಾರಣದ ಯಾತ್ರೆಗೆ ಚಾಲನೆ ಪಡೆದುಕೊಳ್ಳಬೇಕು ಎಂಬುದು ವಿಜಯೇಂದ್ರ ಯೋಜನೆಯಾಗಿತ್ತು. ಬಿ ಎಸ್ ಯಡಿಯೂರಪ್ಪ ಕೂಡ, ತಮ್ಮನ್ನು ಪಕ್ಷ ಸಂಪೂರ್ಣ ಬದಿಗೆ ಸರಿಸುವ ಮುನ್ನ ಪುತ್ರ ವಿಜಯೇಂದ್ರಗೆ ಪಕ್ಷದಲ್ಲಿ ಅಧಿಕೃತ ಸ್ಥಾನಮಾನ, ಶಾಸನಬದ್ಧ ಅಧಿಕಾರದ ಅವಕಾಶ ಕೊಡಿಸುವ ಯೋಚನೆ ಇತ್ತು. ಆ ಕಾರಣದಿಂದಲೇ ಸಿ ಎಂ ಉದಾಸಿ ನಿಧನದ ಬೆನ್ನಲ್ಲೇ ಹಾನಗಲ್ ಚುನಾವಣೆಯ ಅಭ್ಯರ್ಥಿ ಆಯ್ಕೆಯ ವಿಷಯದಲ್ಲಿ ಭಾರೀ ಪ್ರಯತ್ನಗಳು ನಡೆದಿದ್ದವು. ಆದರೆ, ಪಕ್ಷದ ಹೈಕಮಾಂಡ್ ಅದಕ್ಕೆ ಗ್ರೀನ್ ಸಿಗ್ನಲ್ ನೀಡಲಿಲ್ಲ. ಕೊನೆಗೆ ತಮ್ಮ ಕುಟುಂಬದ ಆಪ್ತರಾಗಿರುವ ಶಿವಕುಮಾರ್ ಉದಾಸಿಯವರ ಪತ್ನಿಯನ್ನೇ ಮಾವನ ನಿಧನದಿಂದ ತೆರವಾದ ಸ್ಥಾನಕ್ಕೆ ಕಣಕ್ಕಿಳಿಸುವ ಮೂಲಕ ಪಕ್ಷದಲ್ಲಿ ಮತ್ತು ಹಾನಗಲ್ ಕ್ಷೇತ್ರದ ಮೇಲಿನ ಹಿಡಿತ ಕೈತಪ್ಪದಂತೆ ನೋಡಿಕೊಳ್ಳುವ ಯತ್ನವನ್ನೂ ಮಾಡಿದರು. ಆದರೆ, ಯಡಿಯೂರಪ್ಪರ ಈ ಲೆಕ್ಕಾಚಾರವನ್ನು ಅರಿತ, ಹೈಕಮಾಂಡ್ ಆ ಯತ್ನಗಳಿಗೂ ಬ್ರೇಕ್ ಹಾಕಿ ಆರ್ ಎಸ್ ಎಸ್ ನಿಷ್ಠ ಶಿವರಾಜ್ ಸಜ್ಜನರ್ ಅವರಿಗೆ ಟಿಕೆಟ್ ಘೋಷಿಸಿತು.
ಆ ಮೂಲಕ ಪಕ್ಷದ ಮೇಲಿನ ಬಿಎಸ್ ವೈ ಹಿಡಿತವನ್ನು ಹಂತಹಂತವಾಗಿ ಕಳಚುವ ಆರ್ ಎಸ್ ಎಸ್ ತಂತ್ರಗಾರಿಕೆಗೆ ಪೂರಕವಾಗಿ ದೆಹಲಿಯ ವರಿಷ್ಠರು ನಿರ್ಧಾರ ಕೈಗೊಳುತ್ತಿರುವುದು ಜಗಜ್ಜಾಹೀರಾಗಿತ್ತು. ಅದರಲ್ಲೂ ಮುಖ್ಯವಾಗಿ ವಿಜಯೇಂದ್ರ ವಿಷಯದಲ್ಲಿ ಸಂಘದ ಕೆಲವರು ಹಠಕ್ಕೆ ಬಿದ್ಧಂತೆ ಅವರಿಗೆ ಕಡಿವಾಣ ಹಾಕುತ್ತಿರುವುದು ಈ ಅಭ್ಯರ್ಥಿ ಆಯ್ಕೆಯ ವಿಷಯದಲ್ಲಿ ಮತ್ತೊಮ್ಮೆ ಖಚಿತವಾಗಿತ್ತು. ಇದೀಗ ಐಟಿ ದಾಳಿಯ ಹಿಂದೆಯೂ ಆರ್ ಎಸ್ ಎಸ್ ಪ್ರಭಾವಿಗಳ ಕೈವಾಡವೇ ಇದೆ. ಅವರ ಆಣತಿಯಂತೆಯೇ, ವಿಜಯೇಂದ್ರ ಮತ್ತು ಬಿಎಸ್ ವೈ ಮುಂದಿನ ನಡೆಗಳಿಗೆ ಕಡಿವಾಣ ಹಾಕುವ ಮತ್ತು ಎಚ್ಚರಿಕೆಯ ಸಂದೇಶ ರವಾನಿಸುವ ಉದ್ದೇಶದಿಂದಲೇ ಈ ದಾಳಿ ನಡೆದಿದೆ ಎಂಬುದು ಸದ್ಯ ರಾಜಕೀಯ ಪಡಸಾಲೆಯ ಮಾತು.

ಅಂದರೆ, ಬಿಎಸ್ ವೈ ಅಧಿಕಾರವಧಿಯ ಭ್ರಷ್ಟಾಚಾರ ಹಗರಣಗಳ ಕುರಿತು ದಾಖಲೆ ಸಹಿತ ಮಾಹಿತಿ ಇಟ್ಟುಕೊಂಡು, ಅವರ ಮುಂದಿನ ನಡೆಗಳಿಗೆ ಮೂಗುದಾರ ಹಾಕುವುದು ಆರ್ ಎಸ್ ಎಸ್ ತಂತ್ರಗಾರಿಕೆ. ಸಿಎಂ ಆಗಿ ಮೊದಲ ಅವಧಿಯ ಸಾಲು ಸಾಲು ಹಗರಣಗಳಲ್ಲಿ ಈಗಲೂ ನ್ಯಾಯಾಲಯದಲ್ಲಿ ಪ್ರಕರಣ ಎದುರಿಸುತ್ತಿದ್ದರೂ, ಆ ಪ್ರಕರಣಗಳು ಬಹುತೇಕ ಯಡಿಯೂರಪ್ಪ ಪರವಾಗಿಯೇ ತಿರುವು ಪಡೆದುಕೊಂಡಿವೆ. ಹಾಗಾಗಿ, ಪಕ್ಷ ತೊರೆದು ಹೊಸ ಪಕ್ಷ ಕಟ್ಟುವ ನಿಟ್ಟಿನಲ್ಲಿ ತೆರೆಮರೆಯ ಪ್ರಯತ್ನಗಳನ್ನು ನಡೆಸಿರುವ ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರಿಗೆ ಬ್ರೇಕ್ ಹಾಕಲು ಬಿಜೆಪಿ ಮತ್ತು ಆರ್ ಎಸ್ ಎಸ್ ನಾಯಕರಿಗೆ ಈಗ ಉಳಿದಿರುವುದು ಎರಡನೆಯ ಅವಧಿಯ ಹಗರಣಗಳನ್ನು ಕೆದಕುವುದು ಮತ್ತು ದಾಖಲೆಪತ್ರ ಸಹಿತ ಮಾಹಿತಿ ಇಟ್ಟುಕೊಂಡು ಮಣಿಸುವುದು!
ಹಾಗಾಗಿ ಈಗ ನಡೆಯುತ್ತಿರುವ ದಾಳಿ ಆಯಕಟ್ಟಿನ ಸ್ಥಾನದಲ್ಲಿರುವ ಬಿಎಸ್ ವೈ ಮತ್ತು ವಿಜಯೇಂದ್ರ ಆಪ್ತ ಉಮೇಶ್ ಮತ್ತು ಆತನ ಜಾಲದಲ್ಲಿದ್ದ ಗುತ್ತಿಗೆದಾರರ ಮೇಲೆಯೇ ಆಗಿದ್ದರೂ, ಅದರ ಅಂತಿಮ ಗುರಿ ಮಾತ್ರ ಅವರಾರೂ ಅಲ್ಲ. ಅಂತಿಮ ಗುರಿ ಬಿಎಸ್ ವೈ ಮತ್ತು ವಿಜಯೇಂದ್ರ ಹಾಗೂ ಅವರು ಭವಿಷ್ಯದಲ್ಲಿ ಹುಟ್ಟುಹಾಕಲು ಯೋಜಿಸಿರುವ ಹೊಸ ರಾಜಕೀಯ ವೇದಿಕೆ!

ಆ ಹಿನ್ನೆಲೆಯಲ್ಲಿ ನೋಡಿದರೆ, ಬಿಜೆಪಿಯ ಪಾಲಿಗೆ ಈವರೆಗೆ ಪ್ರತಿಪಕ್ಷಗಳು ಮತ್ತು ತಮ್ಮ ಟೀಕಾಕಾರರ ಮೇಲೆ ಪ್ರಯೋಗಿಸುವ ಅಸ್ತ್ರವಾಗಿದ್ದ ಈ ಐಟಿ ಮತ್ತು ಇಡಿ ಎಂಬ ತನಿಖಾ ವ್ಯವಸ್ಥೆಗಳು ಇದೀಗ, ಸ್ವಪಕ್ಷೀಯರನ್ನು ಹದ್ದುಬಸ್ತಿನಲ್ಲಿಡುವ ಅಸ್ತ್ರಗಳಾಗಿಯೂ ಬಳಕೆಯಾಗತೊಡಗಿವೆ. ಆದರೆ, ಇಂತಹ ದಾಳಿಗಳಿಂದ ಆರ್ಥಿಕ ಸಂಪನ್ಮೂಲ ಕಡಿತ ಮತ್ತು ಅಕ್ರಮಗಳ ಕುರಿತ ಮೊಕದ್ದಮೆಗಳ ಭೀತಿ ಹುಟ್ಟುಹಾಕಿ, ಯಡಿಯೂರಪ್ಪ ಅವರಂಥ ನಾಯಕರನ್ನು ಕಟ್ಟಿಹಾಕುವಲ್ಲಿ ಎಷ್ಟರಮಟ್ಟಿಗೆ ಪಕ್ಷದ ಹೈಕಮಾಂಡ್ ಮತ್ತು ‘ಸಂಘ’ ಯಶಸ್ವಿಯಾಗುತ್ತದೆ? ಅಥವಾ ಇಂತಹ ಹದ್ದಬಸ್ತಿನಲ್ಲಿಡುವ ಷಡ್ಯಂತ್ರಗಳೇ ತಿರುಗುಬಾಣವಾಗುತ್ತವೆಯೇ? ಎಂಬುದನ್ನು ಕಾದುನೋಡಬೇಕಿದೆ. ಹಾಗಂತ ಅದಕ್ಕಾಗಿ ಹೆಚ್ಚು ಸಮಯ ಕಾಯಬೇಕಿಲ್ಲ; ಹಾನಗಲ್ ಚುನಾವಣೆಯೇ ಆ ಪ್ರಶ್ನೆಗಳಿಗೆ ಉತ್ತರ ನೀಡಲಿದೆ ಎಂಬುದು ಕೂಡ ನಿಜ!