ಮೈಸೂರು ನಗರದ ಅಭಿವೃದ್ದಿ ವಿಚಾರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಕ್ರೆಡಿಟ್ ಪಾಲಿಟಿಕ್ಸ್ ತಾರಕಕ್ಕೇರಿದೆ. ಕಾಂಗ್ರೆಸ್ ಹಿರಿಯ ಮುಖಂಡ ಡಾ. ಎಚ್.ಸಿ.ಮಹದೇವಪ್ಪ ಅವರು, ಐಟಿ ಸೆಲ್ಗಳಲ್ಲಿ ಫೋಟೋಶಾಪ್ ಮೂಲಕ ಅಭಿವೃದ್ಧಿಯ ಪರ್ವವನ್ನೇ ಹರಿಸಿದ್ದೀರಿ ಎಂದು ಸಂಸದ ಪ್ರತಾಪ್ ಸಿಂಹಗೆ ಟಾಂಗ್ ನೀಡಿದ್ದಾರೆ.
ಈ ಕುರಿತು ಪ್ರತಿಕ್ರಿಸಿರುವ ಡಾ. ಎಚ್.ಸಿ.ಮಹದೇವಪ್ಪ ಅವರು, “ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿದ್ದ ಸಂದರ್ಭದಲ್ಲಿ ಕರ್ನಾಟಕದ ಉದ್ದಕ್ಕೂ ಮೂಲಸೌಕರ್ಯ ಅಭಿವೃದ್ಧಿಗೆ ಶ್ರಮಿಸಿದ್ದೀರ ಸರ್, ಎಂದು ಗೌರವದಿಂದ ಸನ್ಮಾನ ಮಾಡಿದ್ದರು. ಕೆಲಸ ಮಾಡಿದ ಒಬ್ಬರನ್ನು ಗೌರವಿಸುವ ನಿಟ್ಟಿನಲ್ಲಿ ಇದು ಇತ್ತೀಚಿನ ರಾಜಕಾರಣದಲ್ಲಿ ಪಕ್ಷಾತೀತವಾಗಿ ನಾವು ರೂಢಿಸಿಕೊಳ್ಳಬೇಕಾದ ಆರೋಗ್ಯಕರ ಪ್ರಜಾಪ್ರಭುತ್ವದ ನಡೆ”ಎಂದು ಮಹದೇವಪ್ಪ ಅಭಿಪ್ರಾಯ ಪಟ್ಟಿದ್ದಾರೆ.
“ಇದು ಸಂಸದ ಪ್ರತಾಪ್ ಸಿಂಹ ಅವರಿಗೆ ತಿಳಿಯದೇ ಹೋದರೆ ಅದು ಅವರ ಸಮಸ್ಯೆಯೇ ವಿನಃ ನಮ್ಮದಲ್ಲ. ಅಭಿವೃದ್ಧಿ ಮಾಡಲು ಯೋಗ್ಯತೆ ಇಲ್ಲದ ಬಿಜೆಪಿಗರು ತಮ್ಮ ಕಳಪೆ ಐಟಿ ಸೆಲ್ ಗಳಲ್ಲಿ ಫೋಟೋಶಾಪ್ ಮೂಲಕ ಅಭಿವೃದ್ಧಿಯ ಪರ್ವವನ್ನೇ ಹರಿಸಿದ್ದಾರೆ”ಎಂದು ಮಹದೇವಪ್ಪ ಲೇವಡಿ ಮಾಡಿದ್ದಾರೆ.
“ಇವರು ಯಾವ ಮಟ್ಟಕ್ಕೆ ಇಳಿಯುತ್ತಾರೆ ಎಂದರೆ ಅಲ್ಲೆಲ್ಲೋ ಫ್ರಾನ್ಸ್, ಅಮೆರಿಕಾ, ಸ್ವಿಟ್ಜರ್ಲೆಂಡ್ ನಂತಹ ದೇಶದಲ್ಲಿ ಅಭಿವೃದ್ಧಿ ಮಾಡಿದ ರಸ್ತೆಗಳ ಫೋಟೋವನ್ನು ಬಳಸಿಕೊಂಡು ನೋಡಿ ಇದೇ ಉತ್ತರ ಪ್ರದೇಶದ ರಸ್ತೆ, ಇದೇ ಗುಜರಾತಿನ ಅಭಿವೃದ್ಧಿ, ಎಂದೆಲ್ಲಾ ಸುಳ್ಳು ಹಬ್ಬಿಸುತ್ತಾರೆ. ಪಾಪ ನಮ್ಮ ಜನರು ಅಲ್ಲಿಗೆಲ್ಲಾ ಹೋಗಿ ಪರೀಕ್ಷೆ ಮಾಡುವುದಿಲ್ಲ ಅಲ್ಲವೇ?” ಎಂದು ಮಹದೇವಪ್ಪ ವ್ಯಂಗ್ಯವಾಡಿದರು.
“ಇವರು ಆಡಿದ್ದೇ ಆಟ, ಹೂಡಿದ್ದೇ ಲಗ್ಗಿ ಎಂಬಂತಾಗಿದೆ ಇವರ ನಕಲಿ ಅಭಿವೃದ್ಧಿಯ ಕಥೆ. ಮೊನ್ನೆ ಪ್ರಧಾನಿಗಳು ಬಂದು ಹೋದ ಮೇಲೆ ಜನರು ಬರಿಗೈಯಲ್ಲೇ ರಸ್ತೆಯ ಡಾಂಬರ್ ಅನ್ನು ಕಿತ್ತ ಸಂಗತಿಯು ಮಾಧ್ಯಮದಲ್ಲೇ ಪ್ರಸಾರವಾಯಿತು. ಇದು ಇವರು ಎಂತಹ ನಕಲಿ ಅಭಿವೃದ್ಧಿ ಶೂರರು ಎಂಬುದನ್ನು ಸಾರಿ ಹೇಳುತ್ತದೆ” ಎಂದು ಮಹದೇವಪ್ಪ ಕಿಡಿಕಾರಿದರು.
ಮಾನ್ಯ ಸಂಸದರಾದ ಪ್ರತಾಪ್ ಸಿಂಹ ಅವರು ಒಂದೆಡೆ siddaramaiah ಸರ್ಕಾರ ಏನು ಮಾಡಿದೆ ಎಂಬ ಪ್ರಶ್ನೆಯನ್ನು ಕೇಳುತ್ತಾರೆ ಇನ್ನೊಂದೆಡೆ ಅವರೇ ಅದಕ್ಕೆ ಉತ್ತರಿಸುತ್ತಾರೆ. ಬಹುಶಃ ಇವರೊಂತರ ಉಭಯವಾಸಿ ಎನಿಸುತ್ತದೆ ಎಂದು ಟೀಕಿಸಿದ್ದಾರೆ.