ತಮಿಳುನಾಡಿನ ಕೊಯಂಬತ್ತೂರಿನಲ್ಲಿ ಆದಿಯೋಗಿ ಮೂರ್ತಿ ಪ್ರತಿಷ್ಠಾಪಿಸಿ, ಶಿವಾರಾಧಕರ ನೆಚ್ಚಿನ ತಾಣ ಸೃಷ್ಟಿಸಿರುವುದು ಇಶಾ ಫೌಂಡೇಷನ್. ISHA ಫೌಂಡೇಷನ್ ಸ್ಥಾಪಕರಾದ ಸದ್ಗುರು ಜಗ್ಗಿ ವಾಸುದೇವ್, ಸ್ವಯಂಸೇವಕರನ್ನು ಬಳಸಿಕೊಂಡು ಯೋಗಾ ಕೇಂದ್ರಗಳನ್ನು ಮುನ್ನಡೆಸುತ್ತಿದ್ದಾರೆ. ಇಡೀ ವಿಶ್ವಾದ್ಯಂತ ಸೇವ್ ಸಾಯಿಲ್ ಅನ್ನೋ ಅಭಿಯಾನ ನಡೆಸಿರುವ ಸದ್ಗುರು ಜಗ್ಗಿ ವಾಸುದೇವ್, ಇದೀಗ ತಮಿಳುನಾಡಿನ ಬಳಿಕ ಕರ್ನಾಟಕದಲ್ಲೂ ಆದಿಯೋಗಿ ಮೂರ್ತಿ ಸ್ಥಾಪನೆ ಮಾಡುವ ಚಿಕ್ಕಬಳ್ಳಾಪುರದ ನಂದಿಗ್ರಾಮದ ಬಳಿ ಬೃಹತ್ ಪ್ರವಾಸಿ ಕೇಂದ್ರ ಸ್ಥಾಪನೆ ಮಾಡಲಾಗ್ತಿದೆ. ಇದೇ ಭಾನುವಾರ ಈ ಬೃಹತ್ ಕೇಂದ್ರ ಉದ್ಘಾಟನೆಗೂ ತಯಾರಿ ನಡೆಸಿತ್ತು. ಇದೀಗ ಕರ್ನಾಟಕ ಹೈಕೋರ್ಟ್ ತಡೆ ನೀಡಿದೆ.

ವಿಶ್ವದ ಅತ್ಯಂತ ಎತ್ತರದ ಆದಿಯೋಗಿಗೆ ಸಂಕಷ್ಟ..!
ಜನವರಿ 15ರ ಮಕರ ಸಂಕ್ರಮಣದ ದಿನ ವಿಶ್ವದ ಅತ್ಯಂತ ಎತ್ತರದ ಆದಿಯೋಗಿ ಮೂರ್ತಿಯನ್ನು ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಉದ್ಘಾಟನೆ ಮಾಡುವುದಕ್ಕೆ ಕಾರ್ಯಕ್ರಮ ನಿಗದಿಯಾಗಿತ್ತು. ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೂಡ ಕಾರ್ಯಕ್ರಮದಲ್ಲಿ ಹಾಜರು ಇರುವವರಿದ್ದರು. ಗಿನ್ನೀಸ್ ವರ್ಲ್ಡ್ ರೆಕಾರ್ಡ್ ಪ್ರಕಾರ 112 ಅಡಿ ಎತ್ತರದ ಅತಿ ಎತ್ತರದ ಶಿಲ್ಪವಾಗಿರುವ ಆದಿಯೋಗಿ ಮೂರ್ತಿ ಚಿಕ್ಕಬಳ್ಳಾಪುರ ರಸ್ತೆಯ ನಂದಿಗ್ರಾಮದ ಬಳಿಕ ಸದ್ಗುರು ಸನ್ನಿಧಿಯಲ್ಲಿ ನಿರ್ಮಾಣ ಆಗಿದೆ. ಕಳೆದ 21 ದಿನಗಳಿಂದ ಈಗಾಗಲೇ ರಥಯಾತ್ರೆ ಕೈಗೊಂಡಿರುವ ಇಶಾ ಫೌಂಡೇಷನ್ ಕಾರ್ಯಕರ್ತರುರು, ಸುತ್ತಮುತ್ತಲಿನ ಜನರನ್ನು ಕಾರ್ಯಕ್ರಮಕ್ಕೆ ಬರುವಂತೆ ಆಹ್ವಾನ ಕೊಡುತ್ತಿದ್ದಾರೆ. ಸಾವಿರಾರು ಜನರನ್ನು ಸೇರಿಸಿ ಕಾರ್ಯಕ್ರಮ ಮಾಡುವ ಯೋಜನೆಗೆ ತಡೆ ಬಿದ್ದಿದೆ.
ಕರ್ನಾಟಕ ಹೈಕೋರ್ಟ್ ತಡೆ ನೀಡಲು ಕಾರಣ ಏನು..?
ಆದಿಯೋಗಿ ಮೂರ್ತಿ ಅನಾವರಣ ಆಗ್ತಿದ್ದ ಹಾಗೆ 14 ನಿಮಿಷಗಳ ಕಾಲ ದಿವ್ಯದರ್ಶನ ನೀಡುವುದಕ್ಕೆ ಸಕಲ ತಯಾರಿಯೂ ನಡೆದಿತ್ತು. ವಿಶೇಷವಾಗಿ ಶಬ್ಧ ಹಾಗು ಬೆಳಕಿನ ಮೂಲಕ ಜನತೆಯನ್ನು ಚಕಿತರನ್ನಾಗಿಸುವ ಕೆಲಸ ನಡೆಯುತ್ತಿತ್ತು. ಆದರೆ ಇದೀಗ ಕರ್ನಾಟಕ ಹೈಕೋರ್ಟ್ ವಿಭಾಗೀಯ ಪೀಠ ಕಾಮಗಾರಿ ಹಾಗು ಅನಾವರಣ ಕಾರ್ಯಕ್ರಮ ನಡೆಸುವುದಕ್ಕೆ ತಡೆಯಾಜ್ಞೆ ನೀಡಿದೆ. ಅಷ್ಟು ಮಾತ್ರವಲ್ಲದೆ ಕೇಂದ್ರ ಸರ್ಕಾರ, ಕರ್ನಾಟಕ ಸರ್ಕಾರ, ಅರಣ್ಯ ಇಲಾಖೆ ಕಾರ್ಯದರ್ಶಿ, ಯೋಗ ಪೀಠ ಮತ್ತು ಉಳಿದ 14 ಜನರಿಗೂ ಹೈಕೋರ್ಟ್ ನೋಟಿಸ್ ವಿತರಣೆ ಮಾಡಿದೆ. ಸದ್ಗುರು ಜಗ್ಗಿ ವಾಸುದೇವ್ ನೇತೃತ್ವದಲ್ಲಿ ನಡೆಯುತ್ತಿರುವ ಕಾಮಗಾರಿಯನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಲ್ತಿ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.
ಅರಣ್ಯ ಹಾಗು ನದಿ ಮೂಲಗಳಿಗೆ ಧಕ್ಕೆ ಆರೋಪ..!
ಇಶಾ ಫೌಂಡೇಷನ್ ಮೂಲಕ ನಿರ್ಮಾಣ ಆಗುತ್ತಿರುವ ಆದಿಯೋಗಿ ಮೂರ್ತಿಯನ್ನು ವಿರೋಧಿಸಿ ಕೇತಪ್ಪ ಎಸ್ ಹಾಗು ಇತರರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆ ಮಾಡಿದ್ದರು. ಇಶಾ ಫೌಂಡೇಷನ್ ಕಾಮಗಾರಿ ನಡೆಸುವ ಉದ್ದೇಶದಿಂದ ಪರಿಸರ ಹಾಳು ಮಾಡಿದೆ. ನೈಸರ್ಗಿಕ ನೀರಿನ ಮೂಲವನ್ನು ನಾಶ ಮಾಡಿದೆ. ಇಶಾ ಫೌಂಡೇಷನ್ ದುಷ್ಕೃತ್ಯದಿಂದ ಜೀವಿಗಳು, ಪಶುಗಳು, ಕಾಡುಪ್ರಾಣಿಗಳಿಗೆ ಹಾನಿ ಆಗುತ್ತಿದೆ ಎಂದು ದೂರಲಾಗಿತ್ತು. ಇದೀಗ ಕರ್ನಾಟಕ ಹೈಕೋರ್ಟ್ನ ವಿಭಾಗೀಯ ಪೀಠ ತಡೆಯಾಜ್ಞೆ ನೀಡಿದೆ. ಇದೀಗ ಇಶಾ ಫೌಂಡೇಷನ್ ಸುಪ್ರೀಂಕೋರ್ಟ್ ಮೊರೆ ಹೋಗುವ ಸಾಧ್ಯತೆಗಳಿವೆ. ಒಂದು ವೇಳೆ ಕಾರ್ಯಕ್ರಮ ಉದ್ಘಾಟನಾ ಕಾರ್ಯಕ್ರಮಕ್ಕೆ ಸುಪ್ರೀಂಕೋರ್ಟ್ ಅನುಮತಿ ಕೊಟ್ಟರೂ ಮುಂದಿನ ದಿನಗಳಲ್ಲಿ ಇಶಾ ಫೌಂಡೇಷನ್ಗೆ ಕಾನೂನು ಸಂಕಷ್ಟ ಗ್ಯಾರಂಟಿ.

ತಮಿಳುನಾಡಿನಲ್ಲೂ ಇಶಾ ಫೌಂಡೇಷನ್ ವಿವಾದ..!
ತಮಿಳುನಾಡಿನ ಕೊಯಮತ್ತೂರಿನ ಆದಿಯೋಗಿ ಮೂರ್ತಿ ಸ್ಥಾಪನೆಯಲ್ಲೂ ಅರಣ್ಯ ಕಾಯ್ದೆ ಉಲ್ಲಂಘನೆ ಮಾಡಲಾಗಿದೆ ಎನ್ನುವ ಆರೋಪ ಕೇಳಿ ಬಂದಿತ್ತು. ಈ ಬಗ್ಗೆ ಇಶಾ ಫೌಂಡೇಷನ್ ಸಂಸ್ಥಾಪಕರಾದ ಸದ್ಗುರು ಜಗ್ಗಿ ವಾಸುದೇವ್ ಅವರನ್ನು ಬಹಿರಂಗ ಸಭೆಯಲ್ಲಿ ಪ್ರಶ್ನಿಸಲಾಗಿತ್ತು. ಈ ವಿಚಾರ ಕೇಳುತ್ತಿದ್ದ ಹಾಗೆ ಕುಪಿತರಾಗಿದ್ದ ಸದ್ಗುರು ಜಗ್ಗಿ ವಾಸುದೇವ್, ನಾನು ಕಾನೂನು ಪ್ರಕಾರವೇ ಎಲ್ಲ ಕೆಲಸವನ್ನೂ ಮಾಡಿದ್ದೇವೆ ಎಂದು ಸಮರ್ಥನೆ ಮಾಡಿದ್ದರು. ಇದೀಗ ಕರ್ನಾಟಕದಲ್ಲೂ ಅದೇ ರೀತಿಯ ವಿವಾದ ಸೃಷ್ಟಿಯಾಗಿದೆ. ನಂದಿಬೆಟ್ಟ ಬೆಂಗಳೂರಿನ ಸುತ್ತಮುತ್ತಲ ಹಲವಾರು ನದಿಮೂಲಗಳಿಗೆ ಕೇಂದ್ರ ಸ್ಥಾನವಾಗಿದ್ದು, ಬೆಟ್ಟದ ತಟದಲ್ಲೇ ಅಭಿವೃದ್ಧಿ ಕಾಮಗಾರಿ ನಡೆಸಲಾಗ್ತಿದೆ. ಮುಂದಿನ ದಿನಗಳಲ್ಲಿ ಜಲಮೂಲಗಳಿಗೆ ಹಾನಿಯಾದರೂ ಅಚ್ಚರಿ ಏನಿಲ್ಲ.
-ಕೃಷ್ಣಮಣಿ