ದೇಶದಲ್ಲಿ ಮತ್ತೆ ನೋಟು ನಿಷೇಧಗೊಳ್ಳುತ್ತದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ AGM ಬಿ ಮಹೇಶ್ ಹೇಳಿರುವುದನ್ನು ಉಲ್ಲೇಖಿಸಿ ಎಂದು ಕೆಲವು ಸುದ್ದಿ ಸಂಸ್ಥೆಗಳು ತಪ್ಪು ಮಾಹಿತಿಯುಳ್ಳ ವರದಿ ಮಾಡಿದ್ದವು. ಈ ವದಂತಿಯು ಸುಳ್ಳೆಂದು ತಿಳಿದು ಬಂದಿದ್ದು, ಆರ್ಬಿಐ ನೋಟು ನಿಷೇಧದ ಕುರಿತು ಯಾವುದೇ ಅಧಿಕೃತ ಹೇಳಿಕೆಯನ್ನೂ ನೀಡಿಲ್ಲ. ಕಳೆದ ಎರಡು ಮೂರು ದಿನಗಳಿಂದ ಆರ್ಬಿಐ ಹಳೆಯ 100, 10 ಹಾಗೂ 5 ರುಪಾಯಿಗಳ ನೋಟನ್ನು ನಿಷೇಧಿಸುತ್ತದೆ ಎಂದು ಕೆಲವು ಸುದ್ದಿ ಸಂಸ್ಥೆಗಳು ವರದಿ ಮಾಡಿದ್ದವು.
2016 ರ ನೋಟು ರದ್ಧತಿಯಿಂದ ಇನ್ನೂ ಚೇತರಿಸಿಕೊಳ್ಳದ ಆರ್ಥಿಕ ವಲಯ, ಮತ್ತೆ ನೋಟು ರದ್ಧತಿಯ ವದಂತಿಗೆ ಬೆಚ್ಚಿಬಿದ್ದಿತ್ತು. ಇದೀಗ ಸ್ವತಃ ಆರ್ಬಿಐಯಿಂದ ಇಂತಹ ಯಾವುದೇ ಹೇಳಿಕೆ ಹೊರಬಂದಿಲ್ಲ ಎನ್ನುವುದು ಸ್ಪಷ್ಟವಾದ ಹಿನ್ನೆಲೆಯಲ್ಲಿ ಆರ್ಥಿಕ ವಲಯದಲ್ಲಿ ಮೂಡಿದ್ದ ಆತಂಕ ದೂರವಾಗಿದೆ.
ಸದ್ಯ, ಆರ್ಬಿಐ ನೋಟು ರದ್ದತಿಯ ಕುರಿತು ಯಾವುದೇ ಘೋಷಣೆ ನಡೆಸಿಲ್ಲ ಎಂದು ಪ್ರೆಸ್ ಇನ್ಫಾರ್ಮೇಶನ್ ಬ್ಯೂರೋ (PIB) ಸ್ಪಷ್ಟಪಡಿಸಿದೆ. ಜನವರಿ 21 ರಂದು ಆರ್ಬಿಐ DLCMC (District-Level Currency Management Committee) ಸಭೆಯಲ್ಲಿ ಮಾಡಿದ ಭಾಷಣವೇ ಇಷ್ಟೆಲ್ಲಾ ವದಂತಿಗೆ ಕಾರಣವಾಗಿದೆಯೆಂದು ಒಪ್ ಇಂಡಿಯಾ ವರದಿ ಮಾಡಿದೆ. ಕ್ರಮೇಣ 100, 10, 5 ರ ಮುಖಬೆಲೆಯ ಹಳೆಯ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯಲಾಗುವುದು ಎಂದು ಅವರು ತಿಳಿಸಿರುವುದನ್ನೇ ತಪ್ಪಾಗಿ ಅರ್ಥೈಸಲಾಗಿ ವರದಿ ಮಾಡಲಾಗಿದೆಯೆಂದು ಒಪ್ ಇಂಡಿಯಾ ವರದಿ ತಿಳಿಸಿದೆ.