ಮಧ್ಯಪ್ರಾಚ್ಯದಲ್ಲಿ ಮತ್ತೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದ್ದು, ಇಸ್ರೇಲ್ ನಡೆಸಿದ ದಾಳಿಗೆ ಪ್ರತಿಕ್ರಿಯೆಯಾಗಿ ಇರಾನ್ ಹರ್ಮುಜ್ ಜಲಸಂಧಿಯನ್ನು ಮತ್ತೊಮ್ಮೆ ಬಂದ್ ಮಾಡಿರುವುದಾಗಿ ವರದಿಯಾಗಿದೆ. ಇಸ್ರೇಲ್‌ನ ಕ್ರಮವು ಕದನ ವಿರಾಮ ಒಪ್ಪಂದದ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಆರೋಪಿಸಿರುವ ಇರಾನ್, ಈ ಹಿನ್ನೆಲೆಯಲ್ಲಿ ಕಠಿಣ ನಿರ್ಧಾರ ಕೈಗೊಂಡಿದೆ.ಅಮೆರಿಕದ ಮಧ್ಯಸ್ಥಿಕೆಯಲ್ಲಿ ಜಾರಿಯಲ್ಲಿದ್ದ ಒಪ್ಪಂದವನ್ನು ಉಲ್ಲಂಘಿಸಿ ಲೆಬನಾನ್‌ನಲ್ಲಿ ಇಸ್ರೇಲ್ ದಾಳಿ ನಡೆಸಿದೆ ಎಂದು ಆರೋಪಿಸಿರುವ ಇರಾನ್, ಈ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿದೆ. ಜೊತೆಗೆ ವಿವಿಧ ದೇಶಗಳಲ್ಲಿ ಸ್ಥಗಿತಗೊಂಡಿರುವ ತನ್ನ ಆಸ್ತಿಗಳನ್ನು ಗಲ್ಫ್ ರಾಷ್ಟ್ರಗಳಿಗೆ ಪರಿಹಾರವಾಗಿ ನೀಡುವ ಯಾವುದೇ ಅಂತರರಾಷ್ಟ್ರೀಯ ಪ್ರಯತ್ನವನ್ನು ಸಹಿಸುವುದಿಲ್ಲ ಎಂದು ಕೂಡ ಎಚ್ಚರಿಕೆ ನೀಡಿದೆ.

ಹರ್ಮುಜ್ ಜಲಸಂಧಿ ಜಾಗತಿಕ ತೈಲ ಸಾಗಣೆಯ ಪ್ರಮುಖ ಮಾರ್ಗವಾಗಿರುವುದರಿಂದ, ಅದರ ಬಂದ್ ನಿರ್ಧಾರವು ವಿಶ್ವ ತೈಲ ಮಾರುಕಟ್ಟೆ ಮತ್ತು ಅಂತರರಾಷ್ಟ್ರೀಯ ವ್ಯಾಪಾರದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಇದರಿಂದ ಮಧ್ಯಪ್ರಾಚ್ಯದಲ್ಲಿ ಮತ್ತೊಮ್ಮೆ ಸಂಘರ್ಷದ ವಾತಾವರಣ ನಿರ್ಮಾಣವಾಗುವ ಆತಂಕ ವ್ಯಕ್ತವಾಗಿದೆ.
ಈ ನಡುವೆ, ಜಿನೀವಾದಲ್ಲಿ ನಡೆಯಬೇಕಿದ್ದ ಇರಾನ್–ಅಮೆರಿಕ ಮಾತುಕತೆ ಕೊನೆಯ ಕ್ಷಣದಲ್ಲಿ ರದ್ದುಗೊಂಡಿದೆ. ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಸಭೆಯಲ್ಲಿ ಭಾಗವಹಿಸದ ನಿರ್ಧಾರ ಕೈಗೊಂಡ ಹಿನ್ನೆಲೆಯಲ್ಲಿ ಮಾತುಕತೆ ಮುಂದೂಡಲ್ಪಟ್ಟಿದೆ ಎಂದು ತಿಳಿದುಬಂದಿದೆ. ಲೆಬನಾನ್‌ನಲ್ಲಿ ನಡೆಯುತ್ತಿರುವ ನಿರಂತರ ದಾಳಿಗಳು ಪರಿಸ್ಥಿತಿಯನ್ನು ಇನ್ನಷ್ಟು ಸಂಕೀರ್ಣಗೊಳಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಇಸ್ರೇಲ್ ಮತ್ತು ಅಮೆರಿಕ ನಡುವೆಯೂ ಈ ಬೆಳವಣಿಗೆ ಕುರಿತು ಭಿನ್ನಾಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಲೆಬನಾನ್ ಮೇಲಿನ ದಾಳಿಯನ್ನು ತಕ್ಷಣ ನಿಲ್ಲಿಸುವಂತೆ ಫ್ರಾನ್ಸ್ ಸೇರಿದಂತೆ ಹಲವು ರಾಷ್ಟ್ರಗಳು ಆಗ್ರಹಿಸಿವೆ. ಇದೇ ವೇಳೆ, “ಇಸ್ರೇಲ್‌ಗೆ ಒದಗಿಸಲಾಗುತ್ತಿರುವ ಶಸ್ತ್ರಾಸ್ತ್ರಗಳ ಬಹುಪಾಲು ಅಮೆರಿಕದ ತೆರಿಗೆದಾರರ ಹಣದಿಂದ ಬರುತ್ತಿದೆ” ಎಂಬ ಅಮೆರಿಕದ ಉಪಾಧ್ಯಕ್ಷರ ಹೇಳಿಕೆ ಚರ್ಚೆಗೆ ಕಾರಣವಾಗಿದೆ.ಹರ್ಮುಜ್ ಜಲಸಂಧಿ ಬಂದ್ ಹಾಗೂ ಲೆಬನಾನ್‌ನಲ್ಲಿನ ಸಂಘರ್ಷದ ಬೆಳವಣಿಗೆಗಳು ಮಧ್ಯಪ್ರಾಚ್ಯದ ರಾಜಕೀಯ ಮತ್ತು ಭದ್ರತಾ ಪರಿಸ್ಥಿತಿಯನ್ನು ಮತ್ತಷ್ಟು ಗಂಭೀರಗೊಳಿಸುವ ಸಾಧ್ಯತೆ ಇದೆ.






